ADVERTISEMENT

ಸಂಪಾದಕೀಯ | ಮಾದಕ ವಸ್ತು ಜಾಲ ಮಟ್ಟಹಾಕಿ; ಸಮಾಜದ ಆರೋಗ್ಯ ಕಾಪಾಡಿ

ಸಂಪಾದಕೀಯ
Published 10 ಡಿಸೆಂಬರ್ 2025, 22:08 IST
Last Updated 10 ಡಿಸೆಂಬರ್ 2025, 22:08 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟಹಾಕಲು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರೂ ದಿನದಿಂದ ದಿನಕ್ಕೆ ಈ ಜಾಲ ವಿಸ್ತರಣೆಯಾಗುತ್ತಿರುವುದು ಕಳವಳಕಾರಿ. ನಮ್ಮ ಯುವಜನರು ದೊಡ್ಡ ಸಂಖ್ಯೆಯಲ್ಲಿ ಮಾದಕ ವಸ್ತುಗಳ ದಾಸರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ರೀತಿಯ ವ್ಯಸನವು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಹಾದಿಯಲ್ಲಿ ಒಂದು ಬಹುದೊಡ್ಡ ಅಡ್ಡಿ. ಗೃಹ ಇಲಾಖೆಯೇ ನೀಡುವ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟವು ಸಾವಿರಾರು ಕೋಟಿ ರೂಪಾಯಿಯ ದಂಧೆ. ಬೆಂಗಳೂರು ನಗರವೊಂದರಲ್ಲೇ ಈ ವರ್ಷ ₹162 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟದ ಕುರಿತು ಗೋಪ್ಯವಾಗಿ ಮಾಹಿತಿ ಕಲೆಹಾಕಲು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ವಿಶೇಷ ವ್ಯವಸ್ಥೆ ಇದೆ. ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ಅಪರಾಧ ನಿಗ್ರಹಕ್ಕಾಗಿ ಪೊಲೀಸ್ ಠಾಣೆಗಳನ್ನೂ ಸ್ಥಾಪಿಸಲಾಗಿದೆ. ಮಾದಕ ವಸ್ತುಗಳ ಮಾರಾಟದ ಕುರಿತು ಮಾಹಿತಿ ನೀಡಲು ಸಹಾಯವಾಣಿಯನ್ನೂ ಸ್ಥಾಪಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ನಿಲ್ಲುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಯುವಜನರನ್ನು ಈ ವ್ಯಸನ ತನ್ನತ್ತ ಸೆಳೆಯುತ್ತಲೇ ಇದೆ. 18ರಿಂದ 35 ವರ್ಷದೊಳಗಿನವರು ಹೆಚ್ಚಾಗಿ ವ್ಯಸನಿಗಳಾಗುತ್ತಿದ್ದಾರೆ. ‘ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾದವರು ಹಣಕ್ಕಾಗಿ ಅಪರಾಧ ಕೃತ್ಯಗಳಿಗೂ ಇಳಿಯುತ್ತಿದ್ದಾರೆ. ಹಣ ಹೊಂದಿಸಿಕೊಳ್ಳಲು ಕಳವು, ವಂಚನೆಯ ಜೊತೆಗೆ ಗಲಾಟೆ ಮಾಡಿ ಹಣ ಕೀಳುವ ಮಟ್ಟಕ್ಕೂ ಇಳಿಯುತ್ತಿದ್ದಾರೆ’ ಎಂದೂ ಪೊಲೀಸರು ಹೇಳುತ್ತಾರೆ. ‘ಅಮಲಿನ ಲೋಕ’ವು ಸಮಾಜದ ಮೇಲೆ ಬೀರುವ ದುಷ್ಪರಿಣಾಮ ಊಹೆಗೆ ನಿಲುಕದ್ದು. 

ಔಷಧ ಮಳಿಗೆಗಳಲ್ಲಿ, ಪಿ.ಜಿ., ಬೇಕರಿ, ಬೀಡಾ ಅಂಗಡಿ, ಎಳನೀರು ಅಂಗಡಿಗಳಲ್ಲಿಯೂ ಮಾದಕ ದ್ರವ್ಯ ಸಿಗುತ್ತಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಬಿಕರಿಯಾಗುತ್ತಿದೆ. ಶಾಲಾ– ಕಾಲೇಜುಗಳ ಸರಹದ್ದಿನಲ್ಲಿ ಮಾದಕ ವಸ್ತು ಮಾರಾಟದ ಜಾಲ ಸಕ್ರಿಯವಾಗಿದೆ ಎಂಬುದು ಈಗ ಗುಟ್ಟಿನ ಸಂಗತಿಯಾಗಿ ಏನೂ ಉಳಿದಿಲ್ಲ. ಮುಂಬೈ, ಗೋವಾ, ಕೊಚ್ಚಿ, ತಿರುವನಂತಪುರ, ಸಿಕಂದರಾಬಾದ್ ಮುಂತಾದ ಕಡೆಗಳಿಂದ ಬೆಂಗಳೂರಿಗೆ ಮಾದಕ ವಸ್ತುಗಳು ಬರುತ್ತವೆ ಎಂಬ ಗುಮಾನಿ ಇದೆ. ವಿದೇಶಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಬೆಳಕಿಗೆ ಬಂದಿವೆ. ಮಾದಕ ವಸ್ತುಗಳ ಸಾಗಣೆಗೆ ಪೆಡ್ಲರ್‌ಗಳು ಹೊಸ ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ಮೈಸೂರು ಮತ್ತು ಕರಾವಳಿ ಪ್ರದೇಶಗಳಲ್ಲಿ ಈ ದಂಧೆ ವ್ಯಾಪಕವಾಗಿದೆ ಎಂಬ ಮಾಹಿತಿ ಇದೆ. ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕೆಯ ಕಾರ್ಖಾನೆಯೇ ಇದ್ದುದು ಇತ್ತೀಚೆಗೆ ಬಯಲಾಗಿತ್ತು. ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿರುವ ಪೆಡ್ಲರ್‌ಗಳಿಗೆ ಪೊಲೀಸರ ನಂಟಿದ್ದು, ಈ ಕಾರಣದಿಂದಲೇ ಜಾಲವನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ‘ಡ್ರಗ್ಸ್‌ ಮುಕ್ತ ಕರ್ನಾಟಕ’ ಎಂಬ ಧ್ಯೇಯದ ಕುರಿತು ಮಾತನಾಡುತ್ತಿರುವ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ನೈಜ ಕಳಕಳಿಯಿದ್ದರೆ ಇಂತಹ ಜಾಲವನ್ನು ಪತ್ತೆ ಹಚ್ಚಿ, ಮಟ್ಟಹಾಕುವ ಕೆಲಸವನ್ನು ಮೊದಲು ಮಾಡಬೇಕು. ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಮಾದಕ ವಸ್ತು ಪೂರೈಕೆ ಸರಪಳಿಯನ್ನು ತುಂಡರಿಸಬೇಕು. ಈ ಜಾಲವನ್ನು ತಡೆಯುವುದು ಕೇವಲ ಪೊಲೀಸರ ಕೆಲಸವಲ್ಲ; ಸಮಾಜ ಕೂಡ ಕೈಜೋಡಿಸಬೇಕು. ಪೋಷಕರು ತಮ್ಮ ಮಕ್ಕಳು ಈ ಜಾಲದಲ್ಲಿ ಬೀಳದಂತೆ ಗಮನ ನೀಡಬೇಕು. ಆರೋಗ್ಯಪೂರ್ಣ ಸಮಾಜದ ನಿರ್ಮಾಣವು ಸರ್ಕಾರದ್ದು ಮಾತ್ರವಲ್ಲ, ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.