ADVERTISEMENT

ದನಗಳ ಮೂಕವೇದನೆ ತಟ್ಟಲಿಲ್ಲವೇ? ನೆಪ ಹೇಳದೆ ಗೋಶಾಲೆ ಪ್ರಾರಂಭಿಸಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 20:28 IST
Last Updated 28 ಜನವರಿ 2019, 20:28 IST
   

ರಾಜ್ಯದ ನೂರು ತಾಲ್ಲೂಕುಗಳಲ್ಲಿ ತೀವ್ರ ಬರ ಆವರಿಸಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ಕಂದಾಯ ಇಲಾಖೆ ಇನ್ನೂ ಸಭೆಗಳನ್ನು ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ. ಜಾನುವಾರುಗಳು ನೀರು, ಮೇವಿಲ್ಲದೆ ಅನುಭವಿಸುತ್ತಿರುವ ಮೂಕವೇದನೆ ಯಾವ ಅಧಿಕಾರಿಯನ್ನೂ ತಟ್ಟಿಲ್ಲ. ಇಲ್ಲದಿದ್ದರೆ ಅವುಗಳ ಸಂಕಟ ನೋಡಿದ ಯಾರೂ ಇಷ್ಟು ದಿನ ಗೋಶಾಲೆಗಳನ್ನು ತೆರೆಯದೇ ಇರುತ್ತಿರಲಿಲ್ಲ. ಬರದ ಛಾಯೆ ಬೇಗನೆ ಆವರಿಸಿದ್ದರಿಂದ ಮಾರ್ಚ್‌–ಏಪ್ರಿಲ್‌ವರೆಗೆ ಕಾಯದೆ, ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆಗಳನ್ನು ಶುರುಮಾಡುವಂತೆ ಸರ್ಕಾರದ ಆದೇಶವೇ ಇದೆ. ಹೀಗಿದ್ದೂ ಬರಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು ಕೈಕಟ್ಟಿಕೊಂಡು ಸುಮ್ಮನೆ ಕುಳಿತಿರುವುದು ಕುಚೋದ್ಯ. ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಗೋಶಾಲೆ ಆರಂಭಿಸಿದ್ದನ್ನು ಬಿಟ್ಟರೆ ರಾಜ್ಯದ ಬೇರೆಲ್ಲಿಯೂ ಜಾನುವಾರುಗಳಿಗೆ ಆಶ್ರಯ ನೀಡುವಂತಹ ಕೆಲಸ ಆಗಿಲ್ಲ. ಸರ್ಕಾರಿ ಆಡಳಿತ ಯಂತ್ರ ಎಷ್ಟೊಂದು ಜಡ್ಡುಗಟ್ಟಿದೆ ಎನ್ನುವುದಕ್ಕೆ ಅಧಿಕಾರಿಗಳ ಈ ತಾತ್ಸಾರ ಮನೋಭಾವವೇ ಜ್ವಲಂತ ಸಾಕ್ಷಿ. ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಕಡೆಗೆ ಹೋದರೆ ಕಣ್ಣು ಬಿಡಲಾಗದಂತಹ ರಣಬಿಸಿಲಿನ ನಡುವೆ ದನ–ಕರುಗಳು ದೈನ್ಯದಿಂದ ಮೇಲೆ–ಕೆಳಗೆ ನೋಡುತ್ತಾ ಸಂಕಟ ಅನುಭವಿಸುತ್ತಿರುವ ಕರುಣಾಜನಕ ನೋಟಗಳೇ ರಾಚುತ್ತವೆ. ನೀರು–ಮೇವಿಲ್ಲದೆ ಕಟ್ಟಿಹಾಕಿದ ಗೂಟದ ಸುತ್ತ ಗಿರಕಿ ಹೊಡೆಯುವ ಅವುಗಳ ಸ್ಥಿತಿ ನೆನಪಿಸಿಕೊಂಡರೆ ಮೈ ಜುಮ್‌ ಎನ್ನುತ್ತದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ತಿಂಡಿ–ಊಟದ ವ್ಯವಸ್ಥೆಯನ್ನೂ ಮಾಡಿಕೊಂಡು ಸಭೆ ನಡೆಸುವವರಿಗೆ ಮೂಕಪ್ರಾಣಿಗಳ ನೋವು ಹೇಗೆ ಅರ್ಥವಾಗಬೇಕು?

ಮೇವಿನ ವ್ಯವಸ್ಥೆ ಮಾಡಲಾಗದ ರೈತರು ಪುಡಿಗಾಸಿಗೆ ದನಗಳನ್ನು ಮಾರಾಟ ಮಾಡುತ್ತಿದ್ದಾರೆ. ಬರದ ಈ ವಿಷಮ ಸ್ಥಿತಿಯಲ್ಲಿ ಮಾರಿದ ಜಾನುವಾರುಗಳನ್ನು ಉತ್ತಮ ಮಳೆ ಸುರಿದು ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತೆ ಅಷ್ಟೇ ಸುಲಭವಾಗಿ ಖರೀದಿ ಮಾಡಲಾಗದು. ಗೋಶಾಲೆಗಳನ್ನು ಆರಂಭಿಸಿದರೆ ಅವುಗಳಿಗೆ ತಕ್ಷಣ ಮೇವು–ನೀರಿನ ವ್ಯವಸ್ಥೆ ಆಗುವುದಲ್ಲದೆ ರೈತರ ನೆರವಿಗೂ ಧಾವಿಸಿದಂತಾಗುತ್ತದೆ. ಆದರೆ, ನಾಡಿನ ಅನ್ನದಾತರು ಎಂತಹ ದುರ್ದೈವಿಗಳೆಂದರೆ, ನೆರವಿಗೆ ಧಾವಿಸಬೇಕಾದ ಆಡಳಿತ ಯಂತ್ರ ನಿದ್ರೆಗೆ ಜಾರಿದ್ದರೆ, ಅದನ್ನು ಬಡಿದೆಬ್ಬಿಸಬೇಕಾದ ಶಾಸಕರು ಸ್ವಹಿತ ಸಾಧನೆಯಲ್ಲಿ ಮುಳುಗೇಳುತ್ತಿದ್ದಾರೆ. ಶಾಸಕರನ್ನು ಪರಸ್ಪರ ಸೆಳೆದುಕೊಳ್ಳುವ ಅಡ್ಡ ಕಸುಬಿಗೆ ಇಳಿದಿರುವ ಆಡಳಿತ ಹಾಗೂ ವಿರೋಧ ಪಕ್ಷಗಳು, ಜನ ತಮ್ಮನ್ನು ಆರಿಸಿ ಕಳುಹಿಸಿದ್ದೇಕೆ ಎನ್ನುವುದನ್ನೇ ಮರೆತುಬಿಟ್ಟಿವೆ. ಆದ್ದರಿಂದ ಖಜಾನೆಯಲ್ಲಿ ಹಣವಿದ್ದರೂ ತೊಂದರೆಗೆ ಒಳಗಾದವರ ಕಣ್ಣೀರು ಒರೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮಾಡಲಾಗದ ಕೆಲಸವನ್ನು ಕೆಲವು ಖಾಸಗಿ ವ್ಯಕ್ತಿಗಳು ಮಾಡುತ್ತಿದ್ದಾರೆ. ಕಲಬುರ್ಗಿ, ಬೀದರ್‌ನಂತಹ ಪ್ರದೇಶಗಳಲ್ಲಿ ಕೊಳವೆಬಾವಿಗಳ ಸೌಲಭ್ಯವುಳ್ಳ ರೈತರು, ಹೊಲದ ಗಡಿಯಲ್ಲಿ ಕೆರೆ ನಿರ್ಮಿಸಿ ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಮೇವಿನ ಕೊರತೆ ಎಲ್ಲೆಡೆ ಎದ್ದು ಕಾಣುತ್ತಿದೆ.

ಪ್ರತಿದಿನ ಬೆಳಗಾದರೆ ಸಾಕು, ರೈತರದ್ದೇ ಜಪ ಮಾಡುವ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು, ಆ ಸಮುದಾಯಕ್ಕೆ ತಾವು ಬಗೆದ ವಂಚನೆ ಕುರಿತು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬರ ಪರಿಹಾರ ಕಾರ್ಯಗಳು ಚುರುಕುಗೊಳ್ಳುವಂತೆ ನೋಡಿಕೊಳ್ಳುವ ಮೂಲಕ ಅಧಿಕಾರದ ಲಾಲಸೆ ತಮ್ಮಲ್ಲಿನ ಮಾನವೀಯತೆಯನ್ನು ಸಂಪೂರ್ಣವಾಗಿ ಬತ್ತಿಸಿಲ್ಲ ಎಂಬುದನ್ನು ನಿರೂಪಿಸಬೇಕು. ಅಧಿಕಾರಿಗಳೂ ಅಷ್ಟೇ. ತಾವು ಸಂಬಳ ಪಡೆಯುತ್ತಿರುವುದು ಜನಸೇವೆಗಾಗಿ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.