ಸಂಪಾದಕೀಯ: ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ ಬಳಕೆ ನಿಷೇಧ ಸ್ವಾಗತಾರ್ಹ
ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದಕ್ಕೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ನಿಷೇಧವನ್ನು ವಿಧಿಸಿರುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಸಕಾಲಿಕ ಕ್ರಮ. ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದಾಗ 52 ಕಡೆಗಳಲ್ಲಿ ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿಯನ್ನು ಬೇಯಿಸುತ್ತಿದ್ದುದು ಪತ್ತೆಯಾದ ಬೆನ್ನಹಿಂದೆಯೇ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸಮಾಜದಲ್ಲಿ ಪ್ಲಾಸ್ಟಿಕ್ ಒಂದು ಅವಿಭಾಜ್ಯ ಅಂಗ ಎನ್ನುವಂತೆ ಅದು ನಮ್ಮನ್ನು ಆವರಿಸಿಬಿಟ್ಟಿದೆ. ನಮ್ಮ ಅಗತ್ಯತೆಗಳಿಗೆ ತಕ್ಕಂತೆ ಪ್ಲಾಸ್ಟಿಕ್ ಹೊಂದಾಣಿಕೆಯಾಗುತ್ತ ಹೋಗುವುದರಿಂದ ಮತ್ತು ಒದಗಿ ಬರುವುದರಿಂದ ಅದರ ಬಳಕೆಯಿಂದಾಗುವ ಸಾಧಕ–ಬಾಧಕಗಳ ಕುರಿತು ತಲೆ ಕೆಡಿಸಿಕೊಳ್ಳದೆ ಎಗ್ಗಿಲ್ಲದಂತೆ ಉಪಯೋಗ ಮಾಡುತ್ತಾ ಹೊರಟಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಊಟದ ತಟ್ಟೆವರೆಗೂ ನಾವು ಅದನ್ನು ಬಿಟ್ಟುಕೊಂಡಿದ್ದೇವೆ. ಪ್ಲಾಸ್ಟಿಕ್ ಒಂದು ವೇಳೆ ಬಿಸಿಗೆ ತೆರೆದುಕೊಂಡರೆ ವಿಷಕಾರಿ ಅಂಶಗಳನ್ನು ಬಿಡುಗಡೆ ಮಾಡುತ್ತಾ ಹೋಗುತ್ತದೆ. ಅಂತಹ ವಾತಾವರಣದಲ್ಲಿ ಅದು ಬಿಡುಗಡೆ ಮಾಡುವ ವಿಷಕಾರಿ ಧಾತುಗಳು ಮತ್ತು ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಆಹಾರದೊಟ್ಟಿಗೆ ಬೆರೆಯುತ್ತವೆ. ಹಾಗೆ ಕಲುಷಿತಗೊಂಡ ಆಹಾರ ಸೇವಿಸಿದವರ ದೇಹದಲ್ಲಿ ಕ್ಯಾನ್ಸರ್ ವೃದ್ಧಿಯಾಗುವ ಅಪಾಯ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೆ, ಅವರ ಮಾತು ಯಾರ ಕಿವಿಗೂ ಹೋಗುತ್ತಿಲ್ಲ. ಇಡ್ಲಿ, ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ ಅತ್ಯಂತ ಜನಪ್ರಿಯ ತಿಂಡಿ. ಲಾಗಾಯ್ತಿನಿಂದಲೂ ಹೋಟೆಲ್‌ಗಳಲ್ಲಿ ಇಡ್ಲಿಯನ್ನು ಬಟ್ಟೆಯ ಮೇಲೆಯೇ ಬೇಯಿಸುವ ರೂಢಿಯಿದೆ. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಹಾಳೆ ಹಾಕಿ ಬೇಯಿಸುವ, ತಿನ್ನಲು ಕೊಡುವಾಗ ತಟ್ಟೆಯ ಮೇಲೆ ಅಂತಹದ್ದೇ ಹಾಳೆಯನ್ನು ಹರಡಿ ತಿಂಡಿ ಹಾಕಿಕೊಡುವ ಪ್ರವೃತ್ತಿ ಬೆಳೆದಿದೆ. ‘ಪ್ಲಾಸ್ಟಿಕ್ ಹಾಳೆಯ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ (ಕ್ಯಾನ್ಸರ್‌ಕಾರಕ) ಅಂಶ ಸೇರ್ಪಡೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. ‘ಫುಡ್ ಗ್ರೇಡ್ ಹೊಂದಿಲ್ಲದ ಪ್ಲಾಸ್ಟಿಕ್ ಅನ್ನು ಹೆಚ್ಚಿನ ಶಾಖಕ್ಕೆ ಒಡ್ಡಿದಾಗ ಬಿಸ್ಫೆನಾಲ್ ‘ಎ’ (ಬಿಪಿಎ) ಮತ್ತು ಥಾಲೇಟ್‌ನಂತಹ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಯ ಬಳಕೆಗೆ ಅವಕಾಶವಿಲ್ಲ’ ಎಂದು ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸಹ ಸ್ಪಷ್ಟಪಡಿಸಿದೆ.
ಆರೋಗ್ಯ ಕಾಯ್ದುಕೊಳ್ಳುವಲ್ಲಿ ಎಲ್ಲರಿಗೆ, ಅದರಲ್ಲೂ ಅನಾರೋಗ್ಯಪೀಡಿತರಿಗೆ ಇಡ್ಲಿ ಅತ್ಯಂತ ‘ಸುರಕ್ಷಿತ’ ತಿಂಡಿ ಎಂದೇ ಜನಜನಿತ. ಅಂತಹ ತಿಂಡಿಯನ್ನೇ ಅನಾರೋಗ್ಯಕರ ಎಂದು ಸಂಶಯಿಸುವ ರೀತಿಯಲ್ಲಿ ಅದನ್ನು ತಯಾರಿಸುತ್ತಿರುವುದು ಕಳವಳಕಾರಿ. ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸುತ್ತಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಫ್‌ಎಸ್‌ಎಸ್‌ಎಐ, ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಈಗಾಗಲೇ ನಿರ್ದೇಶನ ನೀಡಿದೆ. ರಾಜ್ಯ ಆರೋಗ್ಯ ಸಚಿವರು ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಸಚಿವರು ಮತ್ತು ಅಧಿಕಾರಿಗಳ ಹೇಳಿಕೆ ಕೇವಲ ಬಾಯಿ ಉಪಚಾರದ ಮಾತಾಗದೆ ಕೃತಿಗೆ ಇಳಿಯಬೇಕು. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಪ್ಲಾಸ್ಟಿಕ್ ಹಾಳೆಯನ್ನು ಬಳಸಿ ಇಡ್ಲಿ ತಯಾರಿಸುವ ‘ಅನಾರೋಗ್ಯಕಾರಿ’ ವಿಧಾನದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಜನರೂ ಅಷ್ಟೆ. ಪ್ಲಾಸ್ಟಿಕ್‌ನಿಂದ ಎಷ್ಟೆಲ್ಲ ಅನಾಹುತ ಆಗುತ್ತದೆ ಎನ್ನುವುದು ಗೊತ್ತಿದ್ದರೂ ಕುರುಡಾಗಿ ಅದರ ಬೆನ್ನುಬೀಳುವ ಪ್ರವೃತ್ತಿಯನ್ನು ಬಿಡಬೇಕು. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ತಟ್ಟೆ–ಲೋಟಗಳದ್ದೇ ರಾಜ್ಯಭಾರವಾಗಿದೆ. ಅವುಗಳ ಬಳಕೆಯನ್ನು ಸಂಪೂರ್ಣವಾಗಿ ತಗ್ಗಿಸಬೇಕು. ಹೋಟೆಲ್‌ಗಳಿಂದ ಬಿಸಿ ಪದಾರ್ಥಗಳನ್ನು ಏಕಬಳಕೆಯ ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿಸಿಕೊಂಡು ಬರುವ ಬದಲು, ತಿಂಡಿ ತರಲು ಮನೆಯಿಂದಲೇ ಪಾತ್ರೆಗಳನ್ನು ಒಯ್ಯಬೇಕು. ವರ್ತಮಾನದಲ್ಲಿ ಹೆಚ್ಚು ಆರಾಮವನ್ನು ಕಳಪೆ ಪ್ಲಾಸ್ಟಿಕ್‌ನ ಸೌಲಭ್ಯಗಳು ನೀಡಿದರೂ ಭವಿಷ್ಯದಲ್ಲಿ ಗಂಡಾಂತರಕ್ಕೆ ದಾರಿ ತೆರೆಯಬಹುದು ಎಂಬ ಅರಿವನ್ನು ಸದಾ ಹೊಂದಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.