ADVERTISEMENT

ಸಂಪಾದಕೀಯ | ಬಿಹಾರದ ಕಳ್ಳಬಟ್ಟಿ ದುರಂತ ಸರ್ಕಾರದ ವೈಫಲ್ಯದ ದ್ಯೋತಕ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 22:15 IST
Last Updated 20 ಡಿಸೆಂಬರ್ 2022, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಹಾರದಲ್ಲಿ ಕಳ್ಳಬಟ್ಟಿ ಕುಡಿದು 70ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಕಳ್ಳಬಟ್ಟಿ ಕುಡಿದ ಇನ್ನೂ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ, ಸಾವಿನ ಸಂಖ್ಯೆಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಿಹಾರದ ಸಾರಣ್‌ ಜಿಲ್ಲೆಯ ಛಪರಾ ಈ ಕಳ್ಳಬಟ್ಟಿ ದುರಂತದ ಕೇಂದ್ರಬಿಂದು. ಇದುವರೆಗೆ ಹೆಚ್ಚಿನ ಜನ ಪ್ರಾಣ ಕಳೆದುಕೊಂಡಿರುವುದು ಇಲ್ಲೇ. ನೆರೆಯ ಸಿವಾನ್ ಜಿಲ್ಲೆ ಮಾತ್ರವೇ ಅಲ್ಲದೆ ದೂರದ ಬೆಗೂಸರಾಯ್ ಜಿಲ್ಲೆಯಲ್ಲಿಯೂ ಕಳ್ಳಬಟ್ಟಿ ಕುಡಿದು ಜನ ಪ್ರಾಣ ಕಳೆದುಕೊಂಡ ಪ್ರಕರಣಗಳು ವರದಿಯಾಗಿವೆ. ಈ ಕಳ್ಳಬಟ್ಟಿ ಸಿದ್ಧವಾಗಿದ್ದು ಎಲ್ಲಿ ಎಂಬುದರ ತನಿಖೆಯನ್ನು ಬಿಹಾರ ಸರ್ಕಾರವು ಚುರುಕಾಗಿ ನಡೆಸಬೇಕು.

ಆಗ ಮಾತ್ರ ಇದು ಇನ್ನಷ್ಟು ಕಡೆಗಳಿಗೆ ಸರಬರಾಜು ಆಗುವುದನ್ನು ತಡೆಯಬಹುದು. ರಾಜ್ಯದಲ್ಲಿ
ವ್ಯಾಪಕವಾಗಿರುವ ಮದ್ಯ ಸೇವನೆ ಹಾಗೂ ಬಡತನವನ್ನು ನಿವಾರಿಸುವಲ್ಲಿ ಸರ್ಕಾರ ಅನುಸರಿಸುತ್ತಿರುವ ಕ್ರಮಗಳು ವಿಫಲವಾಗಿವೆ ಎಂಬುದನ್ನು ಈ ದುರಂತವು ಇನ್ನೊಮ್ಮೆ ಸ್ಪಷ್ಟಪಡಿಸಿದೆ. ಬಿಹಾರದ ಸಂಯುಕ್ತ ಜನತಾದಳ (ಜೆಡಿಯು) ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮದ್ಯ ತಯಾರಿಕೆ ಹಾಗೂ ಮಾರಾಟವನ್ನು 2016ರಲ್ಲಿ ನಿಷೇಧಿಸಿತು. ಆದರೆ ನಿಷೇಧವು ತನ್ನ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿದೆ ಎಂಬುದು ಕೆಲವು ಸಮಯದಿಂದ ಸ್ಪಷ್ಟವಾಗುತ್ತಿದೆ. ಮದ್ಯವನ್ನು ಇತರ ರಾಜ್ಯಗಳಿಂದ ತರಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಕಳ್ಳಬಟ್ಟಿ ತಯಾರಿಸಿ ಅದನ್ನು ಬಡವರಿಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸಿದ ಕ್ರಮವು ಸಮಸ್ಯೆಯು ಬೇರೊಂದು ರೂಪ ಪಡೆಯಲು ಕಾರಣವಾಯಿತು.

ಅಲ್ಲಿ ಈಗ ಅಗ್ಗದ ಹಾಗೂ ವಿಷಕಾರಿ ರಾಸಾಯನಿಕ ಬಳಸಿ ಮದ್ಯವನ್ನು ಅಕ್ರಮವಾಗಿ ತಯಾರಿಸಲಾಗುತ್ತಿದೆ. ಈಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಕಳ್ಳಬಟ್ಟಿ ದುರಂತದ ಹಲವು ಪ್ರಕರಣಗಳು ವರದಿಯಾಗಿವೆ. ಮದ್ಯ ನಿಷೇಧ ಜಾರಿಯಲ್ಲಿರುವ ಗುಜರಾತ್‌ನಲ್ಲಿಯೂ ಇದೇ ಸಮಸ್ಯೆ ಇದೆ. ಅಲ್ಲಿ ಜುಲೈನಲ್ಲಿ ಕಳ್ಳಬಟ್ಟಿ ಸೇವಿಸಿ 40ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.

ADVERTISEMENT

ಮದ್ಯ ಮಾರಾಟ ನಿಷೇಧದ ಉದ್ದೇಶವು ಜಗತ್ತಿನ ಯಾವುದೇ ಪ್ರದೇಶದಲ್ಲೂ ಈಡೇರಿದ ನಿದರ್ಶನ ಇಲ್ಲ. ಆದರೆ ಇದನ್ನು ಒಪ್ಪಿಕೊಳ್ಳದಿರುವ ಮೂಲಕ ಹಾಗೂ ಮದ್ಯ ನಿಷೇಧದ ನೀತಿಯನ್ನು ಪುನರ್‌ ಪರಿಶೀಲಿಸಲು ಮುಂದಾಗದೆ ಇರುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ. ಈಗ ಆಗಿರುವ ದುರಂತಕ್ಕೆ ಪ್ರತಿಕ್ರಿಯೆಯಾಗಿ ನಿತೀಶ್ ಕುಮಾರ್ ಅವರು, ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗದು ಎಂದು ಪ್ರಕಟಿಸಿದ್ದಾರೆ.

ತಮ್ಮ ತಪ್ಪು ನೀತಿಯಿಂದಾಗಿ ಸಂಕಟ ಅನುಭವಿಸುತ್ತಿರುವವರಿಗೆ ಅವರು ಏಕೆ ಶಿಕ್ಷೆ ವಿಧಿಸುತ್ತಿದ್ದಾರೆ? ಮೃತರು ಬಡವರು. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳು, ತಮ್ಮ ಜೀವನಾಧಾರವನ್ನೂ ಕಳೆದುಕೊಂಡಿವೆ. ಅವರಿಗೆ ಪರಿಹಾರ ಘೋಷಿಸುವ ಬದಲು ಮುಖ್ಯಮಂತ್ರಿ, ಆ ಕುಟುಂಬಗಳ ಸಂಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದಾರೆ.

ಬಿಹಾರ ಮತ್ತು ಗುಜರಾತ್ ಮಾತ್ರವೇ ಅಲ್ಲದೆ ಮದ್ಯ ನಿಷೇಧವು ಮಿಜೋರಾಂ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳಲ್ಲಿಯೂ ಜಾರಿಯಲ್ಲಿ ಇದೆ. ಚುನಾವಣಾ ರಾಜಕೀಯವು ಇಂತಹ ಕ್ರಮಗಳಿಗೆ ಒತ್ತಾಸೆಯಾಗಿ ನಿಲ್ಲುತ್ತದೆ. ರಾಜಕಾರಣಿಗಳು ಮಹಿಳೆಯರ ಮತ ಗಳಿಸಲು ಮದ್ಯ ನಿಷೇಧದ ಭರವಸೆ ನೀಡುತ್ತಾರೆ. ನಿಷೇಧ ಜಾರಿಗೆ ಬಂದ ಆರಂಭದಲ್ಲಿ ಬಿಹಾರದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ವರದಿಯಾದವು. ಆದರೆ, ಅಕ್ರಮ ಮದ್ಯ ಸುಲಭವಾಗಿ ಲಭ್ಯವಾಗಿದ್ದು, ಈ ಪ್ರಯೋಜನವನ್ನು ಸೀಮಿತಗೊಳಿಸಿತು. ಅಕ್ರಮವಾಗಿ ಮದ್ಯ ತಯಾರಿಸುವವರ ಜೊತೆಪೊಲೀಸರು ಶಾಮೀಲಾದ ಕಾರಣದಿಂದಾಗಿ, ಇಂತಹ ಮದ್ಯದ ತಯಾರಿಕೆ ಹಾಗೂ ಮಾರಾಟವು ಹೆಚ್ಚಾಯಿತು. ಜನ ಇವುಗಳನ್ನು ಸೇವಿಸಿ ಪ್ರಾಣ ಕಳೆದುಕೊಳ್ಳುವಂತೆ ಆಯಿತು.

ಮದ್ಯಕ್ಕೆ ಜನ ದಾಸರಾಗುವುದು ಒಂದು ದೊಡ್ಡ ಸಮಸ್ಯೆ ಎಂಬುದು ನಿಜ. ಆದರೆ, ಮದ್ಯ ನಿಷೇಧವು ರೋಗದ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುವುದಕ್ಕೆ ಸಮ; ಅದು ರೋಗಕ್ಕೆ ಕಾರಣವಾಗುವ ಅಂಶಕ್ಕೆ ಚಿಕಿತ್ಸೆ ನೀಡುವುದಿಲ್ಲ. ಅಕ್ರಮ ಮದ್ಯ ಸೇವನೆಯು ಜನರ ಜೀವ ಕಸಿಯುತ್ತಿದೆ, ವಿನಾಶಗಳನ್ನು ತಂದಿಡುತ್ತಿದೆ. ಇದು ಕೊನೆಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.