ADVERTISEMENT

Editorial| ಮಣಿಪುರ: ಬಿರೇನ್‌ ರಾಜೀನಾಮೆ; ಸಂಘರ್ಷ ಶಮನಕ್ಕೆ ಬೇಕಿದೆ ದೃಢ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 19:48 IST
Last Updated 10 ಫೆಬ್ರುವರಿ 2025, 19:48 IST
.
.   

ಎಂಟು ವರ್ಷಗಳಿಂದ ಮಣಿಪುರ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಎನ್‌. ಬಿರೇನ್‌ ಸಿಂಗ್‌ ಅವರು ಭಾನುವಾರ ಸ್ಥಾನ ತೊರೆದಿದ್ದಾರೆ. ದೀರ್ಘಕಾಲದಿಂದ ಮುಖ್ಯಮಂತ್ರಿ ಆಗಿದ್ದರೂ ರಾಜ್ಯದೊಳಗೆ ಉದ್ಭವಿಸಿರುವ ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವುದರಲ್ಲಿ ವಿಫಲರಾದದ್ದಷ್ಟೇ ಅಲ್ಲದೆ, ಸಂಘರ್ಷ ಉಲ್ಬಣಿಸಲು ಕಾರಣರಾಗಿದ್ದಕ್ಕಾಗಿ ಬಿರೇನ್‌ ಸಿಂಗ್‌ ಅವರು 2023ರ ಮೇ ತಿಂಗಳಿನಿಂದ ಈಚೆಗೆ ಹೆಚ್ಚಾಗಿ ಚರ್ಚೆಯ ಕೇಂದ್ರಬಿಂದುವಾಗಿದ್ದರು. ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಆಗ್ರಹವೂ ಬಲವಾಗಿತ್ತು. ಆದರೂ ವಿರೋಧದ ಮಧ್ಯೆಯೇ ಎರಡು ವರ್ಷ ಮುಂದುವರಿದಿದ್ದರು. ಸೋಮವಾರ ಆರಂಭವಾಗಬೇಕಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿತ್ತು. ಇದೇ ಕಾರಣಕ್ಕಾಗಿ ಒಂದು ದಿನ ಮುಂಚಿತವಾಗಿ ಬಿರೇನ್‌ ಸಿಂಗ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಣಿಪುರದಲ್ಲಿ ಎರಡು ವರ್ಷಗಳಿಂದ ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಮತ್ತು ಕುಕಿ ಈ ಎರಡೂ ಸಮುದಾಯಗಳ ಜನರ ವಿಶ್ವಾಸವನ್ನೂ ಬಿರೇನ್‌ ಕಳೆದುಕೊಂಡಿದ್ದರು. ಆಡಳಿತಾರೂಢ ಬಿಜೆಪಿಯಲ್ಲೇ ಮುಖ್ಯಮಂತ್ರಿ ವಿರುದ್ಧ ಅಪಸ್ವರ ಎದ್ದಿದ್ದು, ತನ್ನದೇ ಪಕ್ಷದ ಹಲವು ಶಾಸಕರಿಂದ ಅವರು ವಿರೋಧ ಎದುರಿಸುತ್ತಿದ್ದರು. ಒಂದು ಅಂದಾಜಿನ ಪ್ರಕಾರ, 60 ಸದಸ್ಯಬಲದ ವಿಧಾನಸಭೆಯಲ್ಲಿ 21 ಮಂದಿ ಶಾಸಕರಷ್ಟೇ ಬಿರೇನ್‌ ಅವರನ್ನು ಬೆಂಬಲಿಸುತ್ತಿದ್ದರು.

ಮಣಿಪುರದಲ್ಲಿ ನಡೆದಿರುವ ಜನಾಂಗೀಯ ಸಂಘರ್ಷದಲ್ಲಿ ಬಿರೇನ್‌ ಸಿಂಗ್‌ ಪಾತ್ರವೂ ಇದೆ ಎಂಬುದನ್ನು ಸಾಬೀತುಪಡಿಸುವಂತಹದ್ದು ಎನ್ನಲಾದ ಆಡಿಯೊ ರೆಕಾರ್ಡಿಂಗ್‌ ತುಣುಕೊಂದು ಇತ್ತೀಚೆಗೆ ಬಹಿರಂಗವಾಗಿತ್ತು. ಅದರ ಬೆನ್ನಲ್ಲೇ ಬಿರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಕರಣವು ಈಗ ಸುಪ್ರೀಂ ಕೋರ್ಟ್‌ ಮುಂದಿದೆ. ತನ್ನ ಮುಂದೆ ಬೇರೆ ಯಾವುದೇ ಆಯ್ಕೆಗಳು ಇಲ್ಲದ ಕಾರಣದಿಂದ ಬಿರೇನ್‌ ಸಿಂಗ್‌ ಅವರು ರಾಜೀನಾಮೆ ನೀಡಿದ್ದಾರೆ ಎಂಬುದು ಸ್ಪಷ್ಟ. ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ವೇಳೆ ತಮಗೆ ಹಿನ್ನಡೆ ಆಗಬಹುದಾದ ಸಾಧ್ಯತೆಯಿಂದ ತಪ್ಪಿಸಿಕೊಳ್ಳಲು
ಅಥವಾ ಜನಾಂಗೀಯ ಸಂಘರ್ಷದಲ್ಲಿ ಹಸ್ತಕ್ಷೇಪ ನಡೆಸಿರುವ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿ, ತಪ್ಪಿತಸ್ಥ ಎಂಬ ಹಣೆಪಟ್ಟಿ ಕಟ್ಟಿಕೊಳ್ಳು ವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ. ದೀರ್ಘಕಾಲದಿಂದ ತಮ್ಮನ್ನು ಬೆಂಬಲಿಸಿಕೊಂಡು ಬಂದಿದ್ದ ಬಿಜೆಪಿಯ ವರಿಷ್ಠರ  ಬೆಂಬಲವನ್ನು ಈಗ ಕಳೆದುಕೊಂಡಿರುವುದೂ ರಾಜೀನಾಮೆಗೆ
ಕಾರಣವಾಗಿರಬಹುದು. ಬಿರೇನ್‌ ಅವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾಗದ ಸ್ಥಿತಿಯನ್ನು ತಲುಪಿರುವ ಹಂತದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸುವ ನಿರ್ಧಾರವನ್ನು ಬಿಜೆಪಿ ನಾಯಕತ್ವವು ತೆಗೆದುಕೊಂಡಿದೆ ಎಂಬುದು ಗಮನಾರ್ಹವಾದುದು. ಬಿಜೆಪಿಯು ಈ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದರೆ ಮಣಿಪುರ ದಲ್ಲಿನ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ. ನಾಯಕತ್ವ ಬದಲಾವಣೆಯಿಂದ ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅವಕಾಶ ಸೃಷ್ಟಿಯಾಗಿದೆ.

ಬಿರೇನ್‌ ಸಿಂಗ್‌ ಪದತ್ಯಾಗದ ನಂತರದಲ್ಲಿ ಆಡಳಿತ ವ್ಯವಸ್ಥೆಯನ್ನು ಪುನರ್‌ ರಚಿಸುವಲ್ಲಿ ದೊಡ್ಡ ಸವಾಲುಗಳಿವೆ. ಮೈತೇಯಿ ಮತ್ತು ಕುಕಿ ಸಮುದಾಯಗಳು ಪರಸ್ಪರ ಸಂಪರ್ಕವನ್ನೇ ಕಡಿದುಕೊಂಡಿವೆ ಮತ್ತು ಮಾನಸಿಕವಾಗಿಯೂ ವಿಭಜನೆಯಾಗಿವೆ. ಇದರ ಪರಿಣಾಮವಾಗಿ ಮಣಿಪುರದಲ್ಲಿ ಜನಾಂಗೀಯ ಧ್ರುವೀಕರಣ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಅಲ್ಲಿನ ಪೊಲೀಸರು ಮೈತೇಯಿ ಸಮುದಾಯದ ಹಿಡಿತಕ್ಕೆ ಸಿಲುಕಿದ್ದು, ಅವರ ಪರವಾಗಿ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಕುಕಿ ಸಮುದಾಯದ ಜನರು ಪ್ರತ್ಯೇಕ ರಾಜ್ಯ ಅಥವಾ ಸ್ವಾಯತ್ತ ಪ್ರಾದೇಶಿಕ ಸ್ಥಾನಮಾನದ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಮೈತೇಯಿ ಸಮುದಾಯವು ರಾಜ್ಯ ವಿಭಜನೆಯ ಬೇಡಿಕೆಯ ವಿರುದ್ಧವಾಗಿದೆ. ಎಲ್ಲ ಭಾಗೀದಾರರ ಮಧ್ಯೆ ವಿಶ್ವಾಸದ ಕೊರತೆಯು ದಟ್ಟವಾಗಿದೆ. ಪರಿಸ್ಥಿತಿಯನ್ನು ಸುಧಾರಿಸಿ, ಅಭಿವೃದ್ಧಿ ಹಾದಿಗೆ ರಾಜ್ಯವನ್ನು ಮರಳಿ ತರಬೇಕಾದರೆ ಈ ಎಲ್ಲ ಸಮಸ್ಯೆಗಳನ್ನೂ ಪರಿಶೀಲಿಸಿ, ಪರಿಹಾರ ಒದಗಿಸಬೇಕಿದೆ. ಬಿರೇನ್‌ ಸಿಂಗ್‌ ಪದತ್ಯಾಗವು ಒಂದು ಸಕಾರಾತ್ಮಕ ಹೆಜ್ಜೆ ಆಗಿದ್ದರೂ ಈ ದಿಸೆಯಲ್ಲಿ ಇನ್ನೂ ಬಹಳಷ್ಟು ಕೆಲಸ ಆಗಬೇಕಿದೆ. ಕೇಂದ್ರ ಸರ್ಕಾರದ ಕಡೆಯಿಂದಲೇ ಆ ಕೆಲಸ ಮೊದಲು
ಆರಂಭವಾಗಬೇಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.