ADVERTISEMENT

ಸಂಪಾದಕೀಯ | ದತ್ತಾಂಶ ರಕ್ಷಣೆಗೆ ಕರಡು ನಿಯಮ: ಕೆಲವು ಕಳವಳಗಳಿಗೆ ಸ್ಪಂದನ ಬೇಕಿದೆ

ಸಂಪಾದಕೀಯ
Published 9 ಜನವರಿ 2025, 23:30 IST
Last Updated 9 ಜನವರಿ 2025, 23:30 IST
   

‘ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ನಿಯಮ– 2025’ರ ಬಗ್ಗೆ ಸಾರ್ವಜನಿಕ ಸಮಾಲೋಚನೆ, ಚರ್ಚೆಗೆ ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ದೇಶದಲ್ಲಿ ದತ್ತಾಂಶ ರಕ್ಷಣೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಒಂದು ಹೆಜ್ಜೆ ಮುಂದಕ್ಕೆ ಇರಿಸಿದಂತಾಗಿದೆ. ವೈಯಕ್ತಿಕ ದತ್ತಾಂಶಗಳನ್ನು ರಕ್ಷಿಸಬೇಕು ಎಂಬ ಆಲೋಚನೆಗೆ ದೇಶದಲ್ಲಿ ದೀರ್ಘ ಇತಿಹಾಸ ಇದೆ. 2017ರಲ್ಲಿ ಸುಪ್ರೀಂ ಕೋರ್ಟ್‌, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಘೋಷಿಸಿತು. ಇದಾದ ನಂತರದಲ್ಲಿ ದತ್ತಾಂಶ ರಕ್ಷಣೆ ಕುರಿತ ಆಲೋಚನೆಗಳು ಹಲವು ಹಂತಗಳನ್ನು ದಾಟಿ ಬಂದಿವೆ.

ನ್ಯಾಯಮೂರ್ತಿ ಶ್ರೀಕೃಷ್ಣ ಸಮಿತಿಯು ಸಿದ್ಧಪಡಿಸಿದ ಕರಡು ಮಸೂದೆಯು ತಜ್ಞರ ಗಮನವನ್ನು ಸೆಳೆಯಿತು. ಆದರೆ ಹಲವು ವರ್ಷಗಳ ಕಾಲ ಮೌನ ತಳೆದ ಸರ್ಕಾರವು ಕಳೆದ ವರ್ಷ ಕಾಯ್ದೆಯನ್ನು ರೂಪಿಸಿದೆ. ಈಗ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿರುವ ಕರಡು ನಿಯಮಗಳು ಅಂತಿಮಗೊಂಡ ನಂತರದಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಭೂಮಿಕೆ ಸಜ್ಜಾದಂತೆ ಆಗುತ್ತದೆ. ದತ್ತಾಂಶ ರಕ್ಷಣಾ ಮಂಡಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಇರುವ ಕೆಲವು ಅಂಶಗಳು, ಅವುಗಳು ಅಧಿಸೂಚನೆಯಲ್ಲಿ ಪ್ರಕಟವಾದ ನಂತರ ಜಾರಿಗೆ ಬರಲಿವೆ. ನಿಯಮಗಳಲ್ಲಿನ ಇನ್ನುಳಿದ ಅಂಶಗಳು ನಂತರದಲ್ಲಿ ಜಾರಿಗೆ ಬರಲಿವೆ. ಅವು ಯಾವಾಗಿನಿಂದ ಅನುಷ್ಠಾನಕ್ಕೆ ಬರುತ್ತವೆ ಎಂಬುದನ್ನು ನಿಯಮಗಳು ಅಂತಿಮವಾದಾಗ ಅದರಲ್ಲಿ ಉಲ್ಲೇಖಿಸಲಾಗುತ್ತದೆ.

ವೈಯಕ್ತಿಕ ಡಿಜಿಟಲ್ ಬಳಕೆದಾರರಿಗೆ, ಅಂದರೆ ದತ್ತಾಂಶದ ಮೇಲೆ ಒಡೆತನ ಹೊಂದಿರುವವರಿಗೆ, ತಮ್ಮ ವೈಯಕ್ತಿಕ ದತ್ತಾಂಶಗಳ ಮೇಲೆ ಈಗ ಚಾಲ್ತಿಯಲ್ಲಿ ಇರುವುದಕ್ಕಿಂತ ಹೆಚ್ಚಿನ ನಿಯಂತ್ರಣವನ್ನು
ಕಲ್ಪಿಸುವುದು ನಿಯಮಗಳ ಉದ್ದೇಶ. ಡಿಜಿಟಲ್ ಯುಗವು ಭಾರಿ ಪ್ರಮಾಣದ ಖಾಸಗಿ ದತ್ತಾಂಶವನ್ನು ಸಾರ್ವಜನಿಕಗೊಳಿಸುವ ಕೆಲಸ ಮಾಡಿದೆ. ಇದರ ಪರಿಣಾಮವಾಗಿ ವ್ಯಕ್ತಿಗಳು ಶೋಷಣೆಗೆ ತುತ್ತಾಗುವ ಸಾಧ್ಯತೆ ಇದೆ. ದತ್ತಾಂಶದ ಬಳಕೆ ವಿಚಾರವಾಗಿ ಕೆಲವು ಮೂಲಭೂತ ನಿಯಮಗಳನ್ನು ಈಗ ಜಾರಿಗೆ ತರಲಾಗಿದೆ. ದತ್ತಾಂಶ ಬಳಕೆಗೂ ಮೊದಲು ಸಂಬಂಧಪಟ್ಟ ವ್ಯಕ್ತಿಯ ಅನುಮತಿ ಪಡೆಯುವುದು ಆ ನಿಯಮಗಳಲ್ಲಿ ಒಂದು. ವೈಯಕ್ತಿಕವಾದ ದತ್ತಾಂಶಗಳ ಸಂಗ್ರಹ ಮತ್ತು ಅವುಗಳ ಬಳಕೆಗೆ ಮೊದಲು ಆ ದತ್ತಾಂಶಗಳ ಮಾಲೀಕರಿಂದ ಸ್ಪಷ್ಟವಾದ ಅನುಮತಿ ಪಡೆದುಕೊಳ್ಳಬೇಕು, ದತ್ತಾಂಶವನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಅವರಿಗೆ ಹೇಳಬೇಕು.

ADVERTISEMENT

ತಮ್ಮಿಂದ ಸಂಗ್ರಹಿಸುವ ದತ್ತಾಂಶವನ್ನು ಅಳಿಸಿಹಾಕುವಂತೆ ಕೇಳುವ ಅಧಿಕಾರವು ಅವರಿಗೆ ಇರಬೇಕು, ದತ್ತಾಂಶವನ್ನು ಅನಿರ್ದಿಷ್ಟ ಅವಧಿಗೆ ಇರಿಸಿಕೊಳ್ಳುವಂತಿಲ್ಲ. ಮಕ್ಕಳು ಹಾಗೂ ಅಂಗವಿಕಲರಿಗೆ ಸಂಬಂಧಿಸಿದ ದತ್ತಾಂಶಗಳ ವಿಚಾರವಾಗಿ ನಿಯಮಗಳು ಇನ್ನಷ್ಟು ಬಿಗಿಯಾಗಿವೆ. ಇವೆಲ್ಲವೂ ಚೆನ್ನಾಗಿಯೇ ಇವೆಯಾದರೂ ಕಾಯ್ದೆಯು ಕೆಲವು ಲೋಪದೋಷಗಳನ್ನು ಹೊಂದಿದೆ. ಭಾರತದಲ್ಲಿ ದತ್ತಾಂಶ ರಕ್ಷಣಾ ಮಂಡಳಿಯನ್ನು ಸ್ವತಂತ್ರ ಸಂಸ್ಥೆಯನ್ನಾಗಿ ರಚಿಸುವ ಪ್ರಸ್ತಾವ ನಿಯಮಗಳಲ್ಲಿ ಇದೆ. ಆದರೆ, ಈ ಮಂಡಳಿಯ ಸ್ವರೂಪ ಹಾಗೂ ಅದಕ್ಕೆ ಇರುವ ಅಧಿಕಾರಗಳು ಕಳವಳಕ್ಕೆ ಕಾರಣವಾಗಿವೆ. ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯು ಈ ಮಂಡಳಿಗೆ ಸದಸ್ಯರನ್ನು ನೇಮಕ ಮಾಡುತ್ತದೆ, ಅವರ ಸೇವಾ ಷರತ್ತುಗಳನ್ನು ಸರ್ಕಾರ ತೀರ್ಮಾನಿಸುತ್ತದೆ. ಈ ಮಂಡಳಿಯು ಯಾವುದೇ ನಿಯಂತ್ರಣ ಅಧಿಕಾರ ಹೊಂದಿರುವುದಿಲ್ಲ. ಇದರಿಂದಾಗಿ ಮಂಡಳಿಯ ಅಧಿಕಾರವು ಬಹಳ ಸೀಮಿತವಾಗುತ್ತದೆ.

ಕಾನೂನಿನ ಅಡಿಯಲ್ಲಿ ಸರ್ಕಾರ ಹಾಗೂ ಸರ್ಕಾರದ ಕೆಲವು ಏಜೆನ್ಸಿಗಳಿಗೆ ಬಹಳ ವ್ಯಾಪಕವಾದ ವಿನಾಯಿತಿಗಳನ್ನು ನೀಡಲಾಗಿದೆ. ಇದರ ಪರಿಣಾಮವಾಗಿ, ನಾಗರಿಕರ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆಯೊಂದು ರೂಪುಗೊಳ್ಳಬಹುದು, ಖಾಸಗಿತನದ ಹರಣ ಆಗಬಹುದು. ಈ ಏಜೆನ್ಸಿಗಳು ಯಾವ ಉದ್ದೇಶಗಳಿಗೆ ವೈಯಕ್ತಿಕ ದತ್ತಾಂಶವನ್ನು ಸಂಗ್ರಹಿಸಬಹುದು, ಅವುಗಳನ್ನು ಬಳಸಬಹುದು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ.

ಸರ್ಕಾರವು ದತ್ತಾಂಶ ನಿರ್ವಾಹಕರಿಂದ ಲಿಖಿತ ಸಮರ್ಥನೆಗಳು ಇಲ್ಲದೆಯೂ ದತ್ತಾಂಶವನ್ನು ಪಡೆಯಬಹುದು. ಇದು ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಬಹುದು. ದತ್ತಾಂಶದ ಬಳಕೆಯಲ್ಲಿ ನಿಯಮಗಳ ಉಲ್ಲಂಘನೆ ಆದಲ್ಲಿ ಅದರ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗೆ ಮಾಹಿತಿ ನೀಡುವ ವಿಚಾರದಲ್ಲಿ ಕಾಲಮಿತಿ ಇಲ್ಲ, ಜನರ ದೂರು‌ಗಳನ್ನು ಪರಿಹರಿಸಲು ಕೂಡ ಕಾಲಮಿತಿ ಇಲ್ಲ. ನಿಯಮಗಳನ್ನು ಅಂತಿಮಗೊಳಿಸುವಾಗ ಈ ವಿಷಯಗಳ ಬಗ್ಗೆ ಗಮನ ನೀಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.