ADVERTISEMENT

ಸಂಪಾದಕೀಯ: ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ;ಮುಕ್ತ ಮನಸ್ಸಿನ ಚರ್ಚೆ ಅಗತ್ಯ

ಸಂಪಾದಕೀಯ
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
   
ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಗೆರೆ ಎಳೆದಂತೆ ಗುರ್ತಿಸುವುದು ಸಾಧ್ಯವಿಲ್ಲ. ಹಾಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸಲಹೆ, ವ್ಯಾಖ್ಯಾನಗಳನ್ನು ವ್ಯಾಪಕ ಚರ್ಚೆಗೆ ಒಳಪಡಿಸಬೇಕಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುತ್ತಿರುವ ವಿಭಜಕ ಪ್ರವೃತ್ತಿಯನ್ನು ಹತ್ತಿಕ್ಕುವ ಅಗತ್ಯವನ್ನು ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ; ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವುದನ್ನು ಪರಿಗಣಿಸುವುದಾಗಿಯೂ ಹೇಳಿದೆ. ಸಮುದಾಯಗಳ ನಡುವೆ ದ್ವೇಷ ಹಾಗೂ ವಿಭಜಕ ಭಾವನೆಯನ್ನು ಉತ್ತೇಜಿಸುವುದಕ್ಕೆ ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯಕ್ಕೆ ವಿಶೇಷ ಮಹತ್ವವಿದೆ.

ಹಿಂದೂ ದೇವತೆಗೆ ಸಂಬಂಧಿಸಿದಂತೆ ‘ಎಕ್ಸ್‌’ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಂಚಿಕೊಂಡಿದ್ದ ಕ್ಕಾಗಿ ಹಲವು ರಾಜ್ಯಗಳಲ್ಲಿ ಪ್ರಕರಣ ಎದುರಿಸುತ್ತಿರುವ ವಜಾಹತ್‌ ಖಾನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ವಿಭಾಗೀಯ ನ್ಯಾಯಪೀಠ, ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳನ್ನು ಪ್ರಸ್ತಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ಬಗ್ಗೆ ರಚಿಸಿದ್ದ ವ್ಯಂಗ್ಯಚಿತ್ರ ಹಂಚಿಕೊಂಡಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುತ್ತಿರುವ ಇಂದೋರ್‌ನ ವ್ಯಂಗ್ಯಚಿತ್ರಕಾರ ಹೇಮಂತ್‌ ಮಾಳವೀಯ ಅವರ ಜಾಮೀನು ಅರ್ಜಿ ವಿಚಾರಣೆಯ ಪ್ರಕರಣದಲ್ಲಿ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಆಗಿದೆ ಎಂದೂ ಸುಪ್ರೀಂ ಕೋರ್ಟ್‌ ಗುರ್ತಿಸಿದೆ.

ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ನಾಗರಿಕರಿಗೆ ನೆನಪು ಮಾಡುವಂತಿವೆ. ಸಂವಿಧಾನದ 19 (2)ನೇ ವಿಧಿಯ ಅಡಿಯಲ್ಲಿ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ನಿರ್ಬಂಧಗಳನ್ನು ನೆನಪಿಸಿರುವ ಸುಪ್ರೀಂ ಕೋರ್ಟ್‌, ಆ ನಿರ್ಬಂಧಗಳು ಸರಿಯಾಗಿಯೇ ಇವೆ ಎಂದು ಹೇಳಿದೆ.

ADVERTISEMENT

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ನಾಗರಿಕರು ಅರಿತುಕೊಳ್ಳ ಬೇಕು ಹಾಗೂ ಸ್ವಯಂ ನಿಯಂತ್ರಣ ಪಾಲಿಸಬೇಕು ಎಂದು ನ್ಯಾಯಪೀಠ ಹೇಳಿರುವುದು ಸರಿಯಾಗಿದೆ. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದ್ದರೂ, ನಮ್ಮ ಮಾತು ಉಂಟು ಮಾಡಬಹುದಾದ ಸಾಮಾಜಿಕ ಪರಿಣಾಮದ ಬಗ್ಗೆ ಯೋಚಿಸಲು ನ್ಯಾಯಪೀಠದ ಅಭಿಪ್ರಾಯಗಳು ನಮ್ಮನ್ನು ಒತ್ತಾಯಿಸುವಂತಿವೆ.

ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ರಚಿಸುವ ಚಿಂತನೆಯ ಜೊತೆಗೇ, ಸೆನ್ಸಾರ್‌ಶಿಪ್‌ ಬಗ್ಗೆ ತಾನು ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ವ್ಯಕ್ತಿತ್ವದ ಘನತೆ, ಭಾತೃತ್ವ ಭಾವನೆ ಹಾಗೂ ಜಾತ್ಯತೀತ ಮನೋಭಾವದ ಅಗತ್ಯವನ್ನು ಒತ್ತಿಹೇಳಿದೆ. ಸುಪ್ರೀಂ ಕೋರ್ಟ್‌ನ ಸಲಹೆ ರೂಪದ ಅಭಿಪ್ರಾಯ, ಎಲ್ಲರ ಒಳಿತನ್ನು ಬಯಸುವ ಭಾರತೀಯ ಸಮಾಜದ ವಿವೇಕದ ಮೇಲೆ ಕವಿದಿರುವ ದೂಳನ್ನು ಸ್ವಚ್ಛಪಡಿಸಲು ನೀಡಿರುವ ಎಚ್ಚರಿಕೆಯ ಸೂಚನೆಯಂತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೌಲ್ಯದ ರೂಪದಲ್ಲಿ ನೋಡಬೇಕೆನ್ನುವ ಸುಪ್ರೀಂ ಕೋರ್ಟ್ ಅಭಿಪ್ರಾಯ ಸರಿಯಾದುದಾದರೂ, ಸಮಕಾಲೀನ ರಾಜಕಾರಣದಲ್ಲಿ ಅನುಕೂಲಕ್ಕೆ ತಕ್ಕಂತೆ ಮೌಲ್ಯಗಳೂ ಬದಲಾಗುತ್ತಿರುವುದನ್ನು ಮರೆಯಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಗೆರೆ ಎಳೆದಂತೆ ಗುರ್ತಿಸುವುದು ಸಾಧ್ಯವಿಲ್ಲ. ಈ ಬಿಕ್ಕಟ್ಟು, ಸೃಜನಶೀಲ ಕಲೆಗಳ ಅಭಿವ್ಯಕ್ತಿಯ ಸಂದರ್ಭದಲ್ಲಿ ಮತ್ತೂ ಸೂಕ್ಷ್ಮವಾಗುತ್ತದೆ ಹಾಗೂ ಸೃಜನಶೀಲ ಸಾಧ್ಯತೆಗಳನ್ನು ಮೊಟಕುಗೊಳಿಸುವ ಸಾಧ್ಯತೆಗೆ ಆಸ್ಪದ ಕಲ್ಪಿಸಲೂಬಹುದು. ಸೃಜನಶೀಲ ಅಭಿವ್ಯಕ್ತಿಯನ್ನು ಕೂದಲು ಸೀಳಿದಂತೆ ನೋಡಲು ಒತ್ತಾಯಿಸುವುದು, ಟೀಕೆ ಟಿಪ್ಪಣಿಗಳನ್ನು ಸಹಿಸದ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಕಲೆಯ ಬಗ್ಗೆ ಅಸಹನೆ ಹೊಂದಲು ಕಾರಣವಾಗಬಹುದು.

ಹಾಗೆ ನೋಡಿದರೆ, ಬಹಳಷ್ಟು ಸಂದರ್ಭಗಳಲ್ಲಿ ಜನ ಪ್ರತಿನಿಧಿಗಳೇ ನಾಲಿಗೆ ಸಡಿಲಬಿಟ್ಟು ಮಾತನಾಡುವುದಿದೆ ಹಾಗೂ ಆ ಮಾತುಗಳನ್ನು ಹಣ, ಅಧಿಕಾರ ಹಾಗೂ ಜಾತಿ ಬಲದ ಜೊತೆಗೆ, ಸಂವಿಧಾನದತ್ತವಾದ ವಿಶೇಷ ರಕ್ಷಣಾ ಕವಚವನ್ನೂ ಬಳಸಿ ಅರಗಿಸಿಕೊಳ್ಳುತ್ತಾರೆ. ಈ ಯಾವ ರಕ್ಷಣಾ ಕವಚಗಳೂ ಇಲ್ಲದ ಜನಸಾಮಾನ್ಯರು, ಕಲಾವಿದರು ಹಾಗೂ ಪತ್ರಕರ್ತರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ರಕ್ಷಿಸುವ ಹೊಣೆಗಾರಿಕೆ ನಿರ್ವಹಿಸಬೇಕಾಗುತ್ತದೆ.

ಸಮಾಜದಲ್ಲಿ ಕಾಣಿಸುತ್ತಿರುವ ಒಡಕು ಹಾಗೂ ದ್ವೇಷ ಮನೋಭಾವದ ಪ್ರವೃತ್ತಿಗೆ ಸಾಮಾಜಿಕ ಮಾಧ್ಯಮ ಕನ್ನಡಿಯಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವ ಪಡೆಯೊಂದು ಸಕ್ರಿಯವಾಗಿದ್ದು, ಆ ಪಡೆಯನ್ನು ರಾಜಕಾರಣಿಗಳೇ ಪೋಷಿಸುತ್ತಿದ್ದಾರೆ. ಈ ವಿರೋಧಾಭಾಸದ ಕಾರಣದಿಂದಲೇ, ಅಭಿವ್ಯಕ್ತಿ ಸ್ವಾತಂತ್ರ್ಯದ ಸಲಹೆ, ವ್ಯಾಖ್ಯಾನಗಳನ್ನು ಸಹಾನುಭೂತಿಯಿಂದ ನೋಡಬೇಕಾಗಿದೆ ಹಾಗೂ ವ್ಯಾಪಕ ಚರ್ಚೆಗೆ ಒಳಪಡಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.