ADVERTISEMENT

ಹೊಸ ಜಿಲ್ಲೆ: ರಾಜಕೀಯ ಬಿಡಿ ಆಡಳಿತದ ಅಗತ್ಯ ಗಮನಿಸಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:00 IST
Last Updated 15 ಅಕ್ಟೋಬರ್ 2019, 20:00 IST
   

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ವಿಜಯನಗರದ ಹೆಸರಿನಲ್ಲಿ ಹೊಸ ಜಿಲ್ಲೆಯನ್ನು ರಚಿಸಬೇಕು ಎಂಬ ಕೂಗು ತಿಂಗಳ ಹಿಂದೆ ಎದ್ದ ಬೆನ್ನಲ್ಲೇ ಈಗ ಇನ್ನಷ್ಟು ಹೊಸ ಜಿಲ್ಲೆಗಳ ರಚನೆಗೆ ಒತ್ತಾಯ ಕೇಳಿಬಂದಿದೆ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರೇ ವಿರೋಧ ವ್ಯಕ್ತಪಡಿಸಿದ್ದು, ಅದೀಗ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ವಿಜಯನಗರ ಮತ್ತು ಶಿಕಾರಿಪುರವನ್ನು ಹೊಸ ಜಿಲ್ಲಾ ಕೇಂದ್ರಗಳಾಗಿ ಹೆಸರಿಸಲು ಉತ್ಸುಕವಾಗಿದೆ ಎಂಬ ಮಾತು ಇದೆ.

ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ, ಸ್ವಕ್ಷೇತ್ರವಾದ ಶಿಕಾರಿಪುರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬುದು ಯಡಿಯೂರಪ್ಪನವರ ಆಕಾಂಕ್ಷೆ ಎನ್ನಲಾಗಿದೆ. ಶಿಕಾರಿಪುರ ಜಿಲ್ಲೆ ರಚನೆಗೆ ಬಹಿರಂಗವಾಗಿ ವಿರೋಧ ವ್ಯಕ್ತವಾಗಿಲ್ಲ. ಆದರೆ, ಬೆಳಗಾವಿ ಜಿಲ್ಲೆಯ ವಿಭಜನೆಯ ಪ್ರಸ್ತಾವಕ್ಕೆ ಈ ಹಿಂದೆಯೇ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲೇ ಅತ್ಯಂತ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ವಿಭಜಿಸಿ ಹೊಸ ಜಿಲ್ಲೆಯೊಂದನ್ನು ಮಾಡುವುದು ಸುಲಲಿತ ಆಡಳಿತ ಮತ್ತು ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು ಎನ್ನುವ ವಿಷಯದಲ್ಲಿ ಎರಡು ಮಾತಿಲ್ಲ.ಎರಡು ದಶಕಗಳಿಂದಲೂ ಈ ಬೇಡಿಕೆ ಇದ್ದೇ ಇದೆ.

ಗಡಿಭಾಗದ ಅತಿದೂರದ ಹಳ್ಳಿಯಿಂದ ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಲು ಅಲ್ಲಿಯ ಜನರು ಸುಮಾರು 150 ಕಿ.ಮೀ ಕ್ರಮಿಸಬೇಕಾಗುತ್ತದೆ ಎನ್ನುವುದು ನಿಜಕ್ಕೂ ಶೋಚನೀಯ ಸಂಗತಿಯೇ. ಆದರೆ, ಬೆಳಗಾವಿಯನ್ನು ವಿಭಜಿಸಿ ಮಾಡುವ ಹೊಸ ಜಿಲ್ಲೆಗೆ ಕೇಂದ್ರ ಯಾವುದಾಗಿರಬೇಕು ಎನ್ನುವ ಬಗ್ಗೆ ಒಮ್ಮತ ಇಲ್ಲ. ಚಿಕ್ಕೋಡಿಯನ್ನು ಕೇಂದ್ರವಾಗಿ ಇರಿಸಿಕೊಂಡು ಹೊಸ ಜಿಲ್ಲೆ ರಚಿಸಲು ಹೊರಟರೆ, ಗೋಕಾಕನ್ನು ಜಿಲ್ಲಾ ಕೇಂದ್ರವಾಗಿಸಿಕೊಂಡು ಮತ್ತೊಂದು ಪ್ರತ್ಯೇಕ ಜಿಲ್ಲೆ ಬೇಕು ಎಂಬ ಕೂಗು ಏಳತೊಡಗುತ್ತದೆ. ಚಿಕ್ಕೋಡಿ ಜಿಲ್ಲೆ ರಚಿಸಬೇಕೆಂದು ಹುಂಡೇಕರ್‌ ಸಮಿತಿ ಶಿಫಾರಸು ಮಾಡಿತ್ತು. ಗದ್ದಿಗೌಡರ ಸಮಿತಿ ಕೂಡ ಜಿಲ್ಲೆಯ ವಿಭಜನೆಗೆ ಶಿಫಾರಸು ಮಾಡಿತ್ತು. ಜೆ.ಎಚ್‌. ಪಟೇಲ್‌ ಆಡಳಿತದ ಅವಧಿಯಲ್ಲಿ ಜಿಲ್ಲೆಯ ವಿಭಜನೆಯ ನಿರ್ಧಾರ ಆಗಿತ್ತಾದರೂ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಆ ಕನಸು ಸಾಕಾರವಾಗಲಿಲ್ಲ. ಗಡಿ ವಿವಾದ ಇತ್ಯರ್ಥ ಆಗುವವರೆಗೆ ಜಿಲ್ಲೆಯ ವಿಭಜನೆ ಬೇಡ ಎಂದು ಅಲ್ಲಿನ ಭಾಷಾ ಸಂಘಟನೆಗಳು ಪಟ್ಟು ಹಿಡಿದಿವೆ.

ADVERTISEMENT

ಹೊಸ ಜಿಲ್ಲೆಗಳ ರಚನೆಗೆ ಸರ್ಕಾರ ಉತ್ಸುಕತೆ ತೋರುತ್ತಿದ್ದಂತೆಯೇ ಬೇರೆಡೆಯಿಂದಲೂ ಜಿಲ್ಲೆಗಳ ವಿಭಜನೆಯ ಕೂಗು ಎದ್ದಿದೆ. ತುಮಕೂರು ಜಿಲ್ಲೆಯನ್ನು ವಿಭಜಿಸಿ, ಮಧುಗಿರಿಯನ್ನು ಕೇಂದ್ರವಾಗಿಟ್ಟು ಹೊಸ ಜಿಲ್ಲೆಯನ್ನು ರಚಿಸಬೇಕೆಂದು ಶಾಸಕ ಜಿ.ಪರಮೇಶ್ವರ ಒತ್ತಾಯಿಸಿದ್ದಾರೆ. ಅತ್ತ ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರನ್ನು ಹೊಸ ಜಿಲ್ಲೆ ಮಾಡಿ ಅದಕ್ಕೆ ದೇವರಾಜ ಅರಸು ಜಿಲ್ಲೆಯೆಂದು ನಾಮಕರಣ ಮಾಡುವಂತೆ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್‌ ಆಗ್ರಹಿಸಿದ್ದಾರೆ. ಮೈಸೂರು ಜಿಲ್ಲೆ ವಿಭಜನೆಯ ಬೇಡಿಕೆಗೆ ಅದಾಗಲೇ ತೀವ್ರ ವಿರೋಧವೂ ವ್ಯಕ್ತವಾಗಿದೆ.

ರಾಜ್ಯದ ಇನ್ನೊಂದು ದೊಡ್ಡ ಜಿಲ್ಲೆಯಾದ ಉತ್ತರ ಕನ್ನಡವನ್ನು ವಿಭಜಿಸಿ ಹೊಸ ಜಿಲ್ಲೆ ಮಾಡಬೇಕು ಎಂಬ ಅರ್ಹ ಒತ್ತಾಯ ಹಿಂದಿನಿಂದಲೂ ಇದೆ. ಸಣ್ಣ ಜಿಲ್ಲೆಗಳಿದ್ದರೆ ಆಡಳಿತ ಹೆಚ್ಚು ಚುರುಕಾಗಿ, ಅಭಿವೃದ್ಧಿ ಯೋಜನೆಗಳ ಲಾಭ ಎಲ್ಲರಿಗೂ ಸುಲಭವಾಗಿ ತಲುಪುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜಕೀಯ ಕಾರಣಗಳಿಗಾಗಿ ಅಥವಾ ಬಲಾಢ್ಯ ರಾಜಕೀಯ ಕುಟುಂಬಗಳ ಲಾಭ–ನಷ್ಟಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಹೊಸ ಜಿಲ್ಲೆಯ ಪ್ರಸ್ತಾವಕ್ಕೆ ಒಪ್ಪುವುದು ಅಥವಾ ಅದನ್ನು ವಿರೋಧಿಸುವುದು ಸರ್ವಥಾ ಸರಿಯಲ್ಲ. ಹೊಸ ಜಿಲ್ಲೆಗಳನ್ನು ರಚಿಸುವುದಕ್ಕೆ ಮುನ್ನ, ಆ ಪ್ರಸ್ತಾವಕ್ಕೆ ಸಂಬಂಧಿಸಿದ ಸಾಧಕ– ಬಾಧಕಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕಾಗುತ್ತದೆ. ರಾಜಕೀಯ ಪಕ್ಷ ಅಥವಾ ವ್ಯಕ್ತಿ ನೆಲೆಯ ಲಾಭ– ನಷ್ಟಗಳ ಲೆಕ್ಕಾಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.