ಭಾರತದಲ್ಲಿ ಹ್ಯೂಮನ್ ಮೆಟಾನ್ಯುಮೋ ವೈರಸ್ (ಎಚ್‌ಎಂಪಿವಿ) ಸೋಂಕಿನ ಮೊದಲ ಪ್ರಕರಣಗಳು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಪತ್ತೆಯಾಗಿವೆ. ಇದು, ಕೋವಿಡ್ ಸಾಂಕ್ರಾಮಿಕ ಕಾಲದ ಕಹಿಘಟನೆಗಳು ಮತ್ತೆ ನೆನಪಾಗುವಂತೆ ಮಾಡಿರಬಹುದು. ಎಚ್‌ಎಂಪಿವಿ ಮತ್ತು ಅದೇ ರೀತಿಯ ಇತರ ವೈರಾಣುಗಳಿಂದ ಚೀನಾದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ
ಗಳು ಕಾಣಿಸಿಕೊಂಡಿವೆ.
ಚೀನಾದಲ್ಲಿ ಜನರು ಮಾಸ್ಕ್ ಧರಿಸಿ ಆಸ್ಪತ್ರೆಗಳಲ್ಲಿ ಇರುವ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋವಿಡ್ ಸಾಂಕ್ರಾಮಿಕ ಸೃಷ್ಟಿಸಿದ ಅನಾಹುತಗಳಿಂದಾಗಿ ಸಾಂಕ್ರಾಮಿಕದಂತೆ ಗೋಚರಿಸುವ ಯಾವುದರ ಬಗ್ಗೆಯೂ ಜನ ಆತಂಕಗೊಳ್ಳುವುದು ಸಹಜವೇ ಆಗಿದೆ.
ಎಚ್‌ಎಂಪಿವಿ ಸೋಂಕಿನ ಕುರಿತು ಭಾರತವೂ ಸೇರಿ ಜಗತ್ತಿನ ವಿವಿಧ ಭಾಗಗಳಲ್ಲಿ ಚರ್ಚೆ ಆರಂಭವಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ವೈರಸ್ ಕುರಿತು ಜನ ಆತಂಕಗೊಳ್ಳುವ ಅಗತ್ಯವೇ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಇದು ಹೊಸ ವೈರಸ್ ಅಲ್ಲ. ಬಹಳ ಹಿಂದಿನಿಂದಲೂ ನಮ್ಮ ದೇಶದಲ್ಲಿ ಈ ವೈರಸ್ ಇತ್ತು ಮತ್ತು ಮೊದಲ ಬಾರಿಗೆ 2001ರಲ್ಲಿ ಇದನ್ನು ಪತ್ತೆ ಮಾಡಲಾಗಿತ್ತು. ಈ ವೈರಾಣುವಿನ ಗುಣ ಲಕ್ಷಣಗಳು ಕೂಡ ತಿಳಿದಿವೆ. ಈ ಸೋಂಕು ಹೆಚ್ಚಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮತ್ತು ವೃದ್ಧರಲ್ಲಿ ಕೂಡ ಕಾಣಿಸಿಕೊಳ್ಳಬಹುದು.
ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯದ ಮೇಲಿನ ನಿಗಾದ ಭಾಗವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿಯತವಾಗಿ ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆಯ ಸಂದರ್ಭದಲ್ಲಿ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಎಚ್‌ಎಂಪಿವಿ ಸೋಂಕಿನ ಮೂರು ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯದಲ್ಲಿ ಭಾರಿ ಏರಿಕೆ ಕಂಡುಬಂದಿಲ್ಲ ಮತ್ತು ಅಂತಹ ಸನ್ನಿವೇಶ ಎದುರಾದರೂ ಅದನ್ನು ನಿಭಾಯಿಸಲು ಸಜ್ಜಾಗಿದ್ದೇವೆ ಎಂದು ಐಸಿಎಂಆರ್ ಹೇಳಿದೆ. ಉಸಿರಾಟದ ತೊಂದರೆಗಳು ಮತ್ತು ಋತುಮಾನಕ್ಕೆ ಅನುಸಾರವಾಗಿ ಕಂಡುಬರುವ ವೈರಾಣು ಸೋಂಕು ಸಮಸ್ಯೆಗಳ ಮೇಲೆ ನಿಯತವಾಗಿ ಕಣ್ಗಾವಲು ಇರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಎಚ್‌ಎಂಪಿವಿ ಸೋಂಕಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆಗೆ ಸಂಪರ್ಕದಲ್ಲಿ ಇದ್ದೇವೆ ಎಂದೂ ತಿಳಿಸಿದ್ದಾರೆ. ದೇಶದಲ್ಲಿ ಈಗ ಪತ್ತೆಯಾಗಿರುವುದು ಎಚ್‌ಎಂಪಿವಿ ಸೋಂಕಿನ ಮೊದಲ ಪ್ರಕರಣಗಳು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಈ ವೈರಾಣು ದೇಶದಲ್ಲಿ ಈ ಮೊದಲೇ ಪತ್ತೆಯಾಗಿತ್ತು ಎಂದೂ ತಜ್ಞರು ಹೇಳಿದ್ದಾರೆ. ಈಗ ಸೋಂಕು ಪತ್ತೆಯಾಗಿರುವ ಮಕ್ಕಳು ಮತ್ತು ಅವರ ಕುಟುಂಬದವರು ವಿದೇಶ ಪ್ರಯಾಣ ಮಾಡಿರುವ ಹಿನ್ನೆಲೆಯನ್ನೂ ಹೊಂದಿಲ್ಲ. ‘ಇದೊಂದು ಗಂಭೀರ ಆರೋಗ್ಯ ಸಮಸ್ಯೆಯೇ ಮತ್ತು ಪಿಸಿಆರ್ ಪರೀಕ್ಷೆ ಅಗತ್ಯವಿದೆಯೇ ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಾಮಾನ್ಯ ನೆಗಡಿಗೆ ಕಾರಣವಾಗುವ ಇತರ ಯಾವುದೇ ವೈರಾಣುವಿನ ರೀತಿಯಲ್ಲಿಯೇ ಎಚ್‌ಎಂಪಿವಿ ಕೂಡ ಇದೆ ಎಂದು ತಜ್ಞರು ವಿವರಿಸಿದ್ದಾರೆ. ಇದು ಸಣ್ಣ ಮಕ್ಕಳು ಹಾಗೂ ವೃದ್ಧರಲ್ಲಿ ಜ್ವರ ಮತ್ತು ನೆಗಡಿಯಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಇಂತಹ ಸೋಂಕುಗಳು ಸಾಮಾನ್ಯ. ವಿಶ್ವ ಆರೋಗ್ಯ ಸಂಸ್ಥೆಯು ಈಗ ಪತ್ತೆಯಾಗಿರುವ ಸೋಂಕಿಗೆ ಸಂಬಂಧಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ ಅಥವಾ ಯಾವುದೇ ಸಲಹೆಯನ್ನೂ ಕೊಟ್ಟಿಲ್ಲ.
ತನ್ನ ಪ್ರಜೆಗಳು ಮತ್ತು ದೇಶಕ್ಕೆ ಬರುವ ವಿದೇಶಿಯರ ಆರೋಗ್ಯ ರಕ್ಷಣೆಗೆ ಬದ್ಧ ಎಂಬ ಭರವಸೆಯನ್ನು ಚೀನಾ ದೇಶ ಕೊಟ್ಟಿದೆ. ಆದರೆ, ಈ ವಿಚಾರದಲ್ಲಿ ಚೀನಾದ ಹೇಳಿಕೆಗಳ ಬಗ್ಗೆ ಜಗತ್ತಿನ ಇತರ ದೇಶಗಳಿಗೆ ಅಪನಂಬಿಕೆ ಇದೆ. ಎಚ್ಚರ ತಪ್ಪಬಾರದು ಎಂಬ ಪಾಠವನ್ನು ಕೋವಿಡ್ ಸಾಂಕ್ರಾಮಿಕವು ಇಡೀ ಜಗತ್ತಿಗೆ ಕಲಿಸಿಕೊಟ್ಟಿದೆ. ಭಾರತದಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಬೇಕಿದೆ. ಮಾಸ್ಕ್ ಧರಿಸುವುದು ಮತ್ತು ಆಗಾಗ ಕೈತೊಳೆದುಕೊಳ್ಳುವುದು ಒಳ್ಳೆಯದು. ಕೋವಿಡ್ ಇರಲಿ ಇಲ್ಲದಿರಲಿ, ಎಚ್‌ಎಂಪಿವಿ ಅಥವಾ ಇನ್ನಾವುದೇ ವೈರಾಣು ಇರಲಿ ಇಂತಹ ಅಭ್ಯಾಸಗಳು ಇದ್ದರೆ ಸೋಂಕಿನಿಂದ ರಕ್ಷಣೆ ಪಡೆಯುವುದು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.