ADVERTISEMENT

ಸಂಪಾದಕೀಯ | ಮಾನವ ಅಭಿವೃದ್ಧಿ ಸೂಚ್ಯಂಕ; ಸ್ಥಾನ ಉತ್ತಮಪಡಿಸಿಕೊಂಡ ಭಾರತ

ಸಂಪಾದಕೀಯ
Published 13 ಮೇ 2025, 0:30 IST
Last Updated 13 ಮೇ 2025, 0:30 IST
   
ಭಾರತ ಸಾಧಿಸಬೇಕಿರುವುದು ಇನ್ನೂ ಬಹಳಷ್ಟಿದೆ ಎಂಬುದನ್ನು ಕೂಡ ಸೂಚ್ಯಂಕವು ಹೇಳುತ್ತಿರುವುದು ಗಮನಾರ್ಹವಾಗಿದೆ

ಹೊಸದಾಗಿ ಬಿಡುಗಡೆ ಆಗಿರುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್‌ಡಿಐ) ಭಾರತದ ಸ್ಥಾನವು ತುಸು ಉತ್ತಮ ಹಂತಕ್ಕೆ ಬಂದಿದೆ. ಆದರೆ ಭಾರತವು ಸಾಧಿಸಬೇಕಿರುವುದು ಇನ್ನೂ ಬಹಳಷ್ಟಿದೆ ಎಂಬುದನ್ನು ಕೂಡ ಸೂಚ್ಯಂಕವು ಹೇಳುತ್ತಿದೆ. 2022ರಲ್ಲಿ 133ನೇ ಸ್ಥಾನ ಪಡೆದಿದ್ದ ಭಾರತವು ಈ ಬಾರಿ 130ನೇ ಸ್ಥಾನಕ್ಕೆ ಬಂದಿದೆ. ಒಟ್ಟು 193 ದೇಶಗಳ ಸಾಧನೆಯನ್ನು ಪರಿಶೀಲಿಸಿ ಈ ಸ್ಥಾನ ನೀಡಲಾಗಿದೆ. ಭಾರತದ ಸ್ಥಾನ ಸುಧಾರಿಸಿರುವುದು ನಿಜವಾದರೂ ಅದು ಬಹಳ ಕೆಳಗಿನ ಸ್ಥಾನ ಪಡೆದಿದೆ ಎಂಬುದು ವಾಸ್ತವ. ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2023ರಲ್ಲಿ ಮೌಲ್ಯವನ್ನು ತುಸುಮಟ್ಟಿಗೆ ಹೆಚ್ಚಿಸಿಕೊಂಡಿದೆ.

ಕೋವಿಡ್ ಸಾಂಕ್ರಾಮಿಕವು ತೀವ್ರವಾಗಿದ್ದ ವರ್ಷಗಳಲ್ಲಿ ದೇಶದ ಅಭಿವೃದ್ಧಿಯು ಒಂದಿಷ್ಟು ಹಿಂದಕ್ಕೆ ಹೋಯಿತು, ಅದೇ ರೀತಿಯಲ್ಲಿ ವಿಶ್ವದ ಇತರ ರಾಷ್ಟ್ರಗಳ ಬೆಳವಣಿಗೆ ಕೂಡ ಹಿಂದೆ ಉಳಿಯಿತು. ಹೀಗಿದ್ದರೂ ಭಾರತದ ಸಾಧನೆಯು ಶ್ಲಾಘನೀಯ ಎಂಬುದು ನಿಜ. ದೀರ್ಘಾಯಸ್ಸು ಮತ್ತು ಆರೋಗ್ಯ, ಮಾಹಿತಿಯ ಲಭ್ಯತೆ ಮತ್ತು ಉತ್ತಮ ಜೀವನಮಟ್ಟದಂತಹ ಮಾನದಂಡಗಳಲ್ಲಿ ಭಾರತವು ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದೆ. 1990ರಲ್ಲಿ ಭಾರತದಲ್ಲಿ ಸರಾಸರಿ ಜೀವಿತಾವಧಿಯು 56.6 ವರ್ಷಗಳು ಇದ್ದಿದ್ದು 2023ರಲ್ಲಿ 72 ವರ್ಷಗಳಿಗೆ ಹೆಚ್ಚಳ ಆಗಿದೆ. ಇದೇ ಅವಧಿಯಲ್ಲಿ ಭಾರತದ ಮಕ್ಕಳು ಶಾಲೆಯಲ್ಲಿ ಕಳೆಯುವ ಅವಧಿಯು 8.2 ವರ್ಷಗಳಿಂದ 13 ವರ್ಷಗಳಿಗೆ ಹೆಚ್ಚಳ ಕಂಡಿದೆ. 1990ರಲ್ಲಿ 2,167 ಡಾಲರ್‌ನಷ್ಟು ಇದ್ದ ಭಾರತೀಯರ ತಲಾವಾರು ವರಮಾನವು 2023ರಲ್ಲಿ 9,046 ಡಾಲರ್‌ಗೆ ಏರಿಕೆ ಆಗಿದೆ. ಇದು ಸಾಧ್ಯವಾಗಿದ್ದರ ಹಿಂದೆ ನರೇಗಾ, ಶಿಕ್ಷಣ ಹಕ್ಕು ಕಾಯ್ದೆಯ ಪಾಲು ಇದೆ.

ಆದರೆ ಇತರ ಹಲವು ಕ್ಷೇತ್ರಗಳಲ್ಲಿ ಭಾರತವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ತೀರಾ ಎದ್ದು ಕಾಣುವಂತೆ ಇರುವ ಆದಾಯ ಅಸಮಾನತೆಯು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದ ಸ್ಥಾನವನ್ನು ಶೇಕಡ 30ರಷ್ಟು ಕಡಿಮೆ ಮಾಡಿದೆ. ಆರೋಗ್ಯ ಮತ್ತು ಶಿಕ್ಷಣದಲ್ಲಿನ ಅಸಮಾನತೆಯು ಕಡಿಮೆ ಆಗಿದೆ. ಆದರೆ ಲಿಂಗ ಆಧಾರಿತ ಅಸಮಾನತೆ ಮತ್ತು ಆದಾಯದಲ್ಲಿನ ಅಸಮಾನತೆಯು ಬಹಳ ತೀವ್ರ ಸ್ವರೂಪದಲ್ಲಿದೆ. ಕಾರ್ಮಿಕ ಮತ್ತು ಉದ್ಯೋಗ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಹೆಚ್ಚಾಗಿದೆಯಾದರೂ ಅಲ್ಲಿ ದೊಡ್ಡ ಮಟ್ಟದ ಸುಧಾರಣೆ ಆಗಿಲ್ಲ.

ADVERTISEMENT

ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೂಡ ಕಡಿಮೆ ಇದೆ. ರಾಜಕೀಯದಲ್ಲಿ ಮಹಿಳೆಯರ ಭಾಗೀದಾರಿಕೆಯನ್ನು ಹೆಚ್ಚು ಮಾಡುವ ಉದ್ದೇಶದ ಸಂವಿಧಾನ ತಿದ್ದುಪಡಿಯು ಇನ್ನಷ್ಟೇ ಜಾರಿಗೆ ಬರಬೇಕಿದೆ. ನಮ್ಮ ದೇಶದ ನೆರೆಹೊರೆಯ ಕೆಲವು ದೇಶಗಳು ಕೂಡ ಇದೇ ಬಗೆಯ ಲೋಪಗಳನ್ನು, ಕೊರತೆಗಳನ್ನು ಹೊಂದಿವೆ. ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಸಾಧನೆ ಕಳಪೆಯಾಗಿದೆ. ಆದರೆ ಚೀನಾ ಮತ್ತು ಶ್ರೀಲಂಕಾ ಹೆಚ್ಚು ಉತ್ತಮವಾದ ಸಾಧನೆ ತೋರಿವೆ. ಈ ಎರಡು ದೇಶಗಳು ಸೂಚ್ಯಂಕದಲ್ಲಿ ಉತ್ತಮ ಸ್ಥಾನ ಪಡೆದಿವೆ.

ಕೋವಿಡ್ ಸಾಂಕ್ರಾಮಿಕ ಕಾಡಿದ್ದರಿಂದಾಗಿ ಮತ್ತು ವಿಶ್ವದ ಹಲವೆಡೆ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರುವ ಕಾರಣದಿಂದಾಗಿ ಮಾನವ ಅಭಿವೃದ್ಧಿಯ ವೇಗವು 35 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ವರದಿಯು ಹೇಳುತ್ತಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ವಾರ್ಷಿಕ ಬೆಳವಣಿಗೆ ಪ್ರಮಾಣವು 1990ರ ನಂತರದಲ್ಲಿ 2023ರಲ್ಲಿ ಅತ್ಯಂತ ಕಡಿಮೆ ಇತ್ತು. ಆದರೆ ಕೃತಕ ಬುದ್ಧಿಮತ್ತೆಯ ಬಳಕೆಯು ಮನುಕುಲದ ಅಭಿವೃದ್ಧಿಗೆ ಇಂಬು ಕೊಡಲಿದೆ ಎಂಬ ಆಶಾಭಾವನೆಯು ವ್ಯಾಪಕವಾಗಿರುವುದನ್ನು ಈ ವರದಿ ದಾಖಲಿಸಿದೆ. ಕೃತಕ ಬುದ್ಧಿಮತ್ತೆಯ ಬಳಕೆಯು ಉತ್ಪಾದಕತೆಯನ್ನು ಹೆಚ್ಚು ಮಾಡುತ್ತದೆ, ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ, ಶಿಕ್ಷಣ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶಕ್ಕೆ ನೆರವಾಗುತ್ತದೆ ಎಂಬ ನಿರೀಕ್ಷೆ ಇದೆ‌.

ಕೃತಕ ಬುದ್ಧಿಮತ್ತೆ ಕ್ಷೇತ್ರದ ಸಂಶೋಧಕರ ಪೈಕಿ ಶೇಕಡ 20ರಷ್ಟು ಮಂದಿಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿದೆ ಎಂದು ಕೂಡ ವರದಿಯು ಉಲ್ಲೇಖ ಮಾಡಿದೆ. ಕೃಷಿ, ಆರೋಗ್ಯ ಸೇವೆ, ಸಾರ್ವಜನಿಕರಿಗೆ ಇತರ ಅಗತ್ಯ ಸೇವೆಗಳನ್ನು ಒದಗಿಸುವ ಕ್ಷೇತ್ರಗಳಲ್ಲಿ ಭಾರತವು ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳಬೇಕಿದೆ. ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಗೆ ನೀತಿ ನಿರೂಪಕರಿಂದ ಬೆಂಬಲ ಸಿಗಬೇಕಿದೆ, ಕೃತಕ ಬುದ್ಧಿಮತ್ತೆಯಿಂದಾಗಿಯೇ ಅಸಮಾನತೆ ಸೃಷ್ಟಿ ಆಗದಂತೆ ನೋಡಿಕೊಳ್ಳುವ ಕೆಲಸವೂ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.