ADVERTISEMENT

ಸೌಹಾರ್ದದ ಹೊಸ ಶಕೆಗೆ ಕರ್ತಾರ್‌ಪುರ ಮುನ್ನುಡಿಯಾಗಲಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:47 IST
Last Updated 12 ನವೆಂಬರ್ 2019, 19:47 IST
Edit 13.11.19
Edit 13.11.19   

ಸಿಖ್‌ ಧರ್ಮ ಸ್ಥಾಪಕ ಗುರುನಾನಕ್‌ ಅವರು ಕೊನೆಯ ದಿನಗಳನ್ನು ಕಳೆದ ಕರ್ತಾರ್‌ಪುರವು ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಡೆದ ದೇಶ ವಿಭಜನೆಯಿಂದಾಗಿ ಪಾಕಿಸ್ತಾನದ ಭೂಪ್ರದೇಶವಾಯಿತು. ಸಿಖ್‌ ಧರ್ಮದ ಅನುಯಾಯಿಗಳು ಗಡಿರೇಖೆಯ ಎರಡೂ ಭಾಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿಯೇ ಇದ್ದರು. ಪಾಕಿಸ್ತಾನಕ್ಕೆ ಸೇರಿದ ಪ್ರದೇಶದಲ್ಲಿ ಇದ್ದ ಸಿಖ್ಖರಲ್ಲಿ ಹಲವರು ಭಾರತದ ಪಂಜಾಬ್‌ಗೆ ಬಂದು ನೆಲೆ ಕಂಡುಕೊಂಡರು.

ಈ ಸಮುದಾಯಕ್ಕೆ ಧಾರ್ಮಿಕವಾಗಿ ಅತ್ಯಂತ ಮಹತ್ವದ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರವು ಭಾರತದ ಗಡಿಯಿಂದ ಕೆಲವೇ ಕಿಲೊ ಮೀಟರ್‌ ದೂರದಲ್ಲಿದೆ. ಅದರ ದರ್ಶನದ ಅವಕಾಶ ಬೈನಾಕ್ಯುಲರ್‌ ಮೂಲಕ ಮಾತ್ರವೇ ಇತ್ತು. ಆದರೆ, ಗುರುನಾನಕರ 550ನೇ ಜನ್ಮದಿನದ ಹೊತ್ತಿನಲ್ಲಿ ಸಿಖ್ಖರ ಬಹುಕಾಲದ ಕನಸೊಂದು ಈಡೇರಿದೆ. ಕರ್ತಾರ್‌ಪುರ ಗುರುದ್ವಾರಕ್ಕೆ ಹೋಗಲು ಭಾರತ ಮತ್ತು ಪಾಕಿಸ್ತಾನ ಹೆದ್ದಾರಿಯೊಂದನ್ನು ನಿರ್ಮಿಸಿವೆ.

ಭಾರತದ ಕಡೆಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಕಡೆಯಿಂದ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌, ಹೆದ್ದಾರಿಯನ್ನು ಶನಿವಾರ ಉದ್ಘಾಟಿಸಿದ್ದಾರೆ. ಸಿಖ್ಖರಿಗೆ ಬೇಕಿದ್ದ ಅತ್ಯಂತ ಭಾವನಾತ್ಮಕ ಅವಕಾಶವೊಂದನ್ನು ಭೌತಿಕ ಗಡಿರೇಖೆಯು ಈವರೆಗೆ ನಿರಾಕರಿಸಿತ್ತು. ಈಗ, ಕರ್ತಾರ್‌ಪುರ ಕಾರಿಡಾರ್‌ ಅದನ್ನು ಮರಳಿ ನೀಡಿದೆ. ಭಾರತದ ಬಹುಕಾಲದ ಬೇಡಿಕೆಗೆ ಮೊದಲಿಗೆ ಸ್ಪಂದಿಸಿದವರು ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ. ಬಳಿಕ, ಎರಡೂ ದೇಶಗಳು ಒಂದು ವರ್ಷದ ಅಲ್ಪ ಅವಧಿಯಲ್ಲಿ ಈ ಕಾರಿಡಾರ್‌ ನಿರ್ಮಾಣವನ್ನು ಪೂರ್ಣಗೊಳಿಸಿದವು. ಭಾರತ–ಪಾಕಿಸ್ತಾನ ನಡುವಣ ಸಂಬಂಧದಲ್ಲಿನ ಕಹಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಕಾರಿಡಾರ್ ನಿರ್ಮಾಣವು ಪವಾಡವೇ ಸರಿ.

ADVERTISEMENT

ಗಡಿಯಾಚೆಗಿನ ಜನರ ಹೃದಯಗಳನ್ನುಈ ಕಾರಿಡಾರ್‌ ಬೆಸೆಯಲಿ ಎಂದು ಮೋದಿ ಮತ್ತು ಇಮ್ರಾನ್‌ ಆಶಿಸಿರುವುದು ಈಗಿನ ಬಿಕ್ಕಟ್ಟಿನಲ್ಲಿ
ಕಾಣಿಸಿಕೊಂಡಿರುವ ಬೆಳ್ಳಿಕಿರಣ ಎಂದೇ ಭಾವಿಸಬಹುದು. ‘ಕರ್ತಾರ್‌ಪುರದ ವಿಚಾರದಲ್ಲಿ ಭಾರತದ ಭಾವನೆಗಳನ್ನು ಇಮ್ರಾನ್‌ ಅರ್ಥ ಮಾಡಿಕೊಂಡು ಗೌರವಿಸಿದ್ದಾರೆ, ಅದರಂತೆ ಕೆಲಸ ಮಾಡಿ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ’ ಎಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋದಿ ಹೊಗಳಿದರು. ‘ನಾವು ಗಡಿಗಳನ್ನಷ್ಟೇ ತೆರೆದಿಲ್ಲ, ಸಿಖ್‌ ಸಮುದಾಯಕ್ಕೆ ನಮ್ಮ ಹೃದಯಗಳನ್ನೇ ತೆರೆದಿದ್ದೇವೆ’ ಎಂದು ಇಮ್ರಾನ್‌ ಹೇಳಿದರು. ಆದರೆ, ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದತಿ ವಿಚಾರವನ್ನೂ ಅವರು ಪ್ರಸ್ತಾಪಿಸಿದರು. ಎರಡೂ ದೇಶಗಳ ನಡುವೆ ಕಾಶ್ಮೀರ ವಿಚಾರವು ಎತ್ತರದ ಗೋಡೆಯಂತೆ ನಿಂತಿದೆ.

ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಪ್ರತ್ಯೇಕಿಸಿದ್ದ ಬರ್ಲಿನ್‌ ಗೋಡೆ ಕಳಚಿಬಿದ್ದ ದಿನವೇ (ನವೆಂಬರ್‌ 9) ಕಾರಿಡಾರ್‌ ಉದ್ಘಾಟನೆಯಾಗಿರುವುದು ಕಾಕತಾಳೀಯ ಆಗಿರಬಹುದು. ಪಾಕಿಸ್ತಾನ ಮೂಲದ ಉಗ್ರರು ಕಾಶ್ಮೀರದಲ್ಲಿ ನಡೆಸಿದ ಕ್ರೂರ ಕೃತ್ಯಗಳು ಮತ್ತು ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ನಿರ್ದಿಷ್ಟ ದಾಳಿ, ಬಾಲಾಕೋಟ್‌ ಮೇಲೆ ವಾಯುಪಡೆ ದಾಳಿ ಮತ್ತು ತೀರಾ ಇತ್ತೀಚೆಗೆ ಕಾಶ್ಮೀರದ ವಿಶೇಷಾಧಿಕಾರ ರದ್ದತಿಯು ಎರಡೂ ದೇಶಗಳ ನಡುವೆ ಸೌಹಾರ್ದ ಮಾತುಕತೆಯ ಬಾಗಿಲನ್ನು ಸದ್ಯಕ್ಕೆ ಮುಚ್ಚಿಹಾಕಿದಂತೆ ಕಾಣಿಸುತ್ತಿದೆ. ಆಕ್ರೋಶ ಮತ್ತು ವೀರಾವೇಶದ ಮಾತುಗಳನ್ನು ಉಭಯ ದೇಶಗಳ ನಾಯಕರು ಆಡಿದ್ದಾರೆ.

ಕರ್ತಾರ್‌ಪುರ ಕಾರಿಡಾರ್‌ ಬಗ್ಗೆಯೂ ಶಂಕೆಯ ಮಾತುಗಳು ಕೇಳಿ ಬಂದಿದ್ದವು. ಕಾರಿಡಾರ್‌ಗೆ ಸಂಬಂಧಿಸಿ ಪಾಕಿಸ್ತಾನ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಇದ್ದ ಖಲಿಸ್ತಾನ್‌ ಪ್ರತ್ಯೇಕತಾವಾದಿಗಳ ಚಿತ್ರ ಈ ಅನುಮಾನದ ಎಳೆಗೆ ಪುಷ್ಟಿಯನ್ನೂ ಕೊಟ್ಟಿತು. ಖಲಿಸ್ತಾನ್‌ ಪ್ರತ್ಯೇಕತಾವಾದವನ್ನು ಪುನಶ್ಚೇತನಗೊಳಿಸುವುದಕ್ಕಾಗಿಯೇ ಪಾಕಿಸ್ತಾನವು ಇಷ್ಟೊಂದು ವೇಗವಾಗಿ ಕಾರಿಡಾರ್‌ ನಿರ್ಮಿಸಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಈ ವಿಡಿಯೊ ಬಿಡುಗಡೆ ಆಗುವುದಕ್ಕೂ ಮುನ್ನ ಹೇಳಿದ್ದರು. ಇದರ ಮಧ್ಯೆ, ಎರಡೂ
ದೇಶಗಳ ನಡುವೆ ಸ್ನೇಹದ ನುಡಿಗಳು ಸಹ ಕೇಳಿಬರುತ್ತಿರುವುದು ಆಶಾದಾಯಕ. ಕುತಂತ್ರ, ಅಪನಂಬಿಕೆಯ ಕರಿಛಾಯೆಯು ಆಶಾವಾದವನ್ನು ಕೆಡಿಸದಂತೆ ಎರಡೂ ದೇಶಗಳು ನೋಡಿಕೊಳ್ಳುವುದು ಅಗತ್ಯ. ಅಪನಂಬಿಕೆ ನೇಪಥ್ಯಕ್ಕೆ ಸರಿದು, ಹೃದಯಗಳನ್ನು ಬೆಸೆಯುವ ಯೋಚನೆಯೇ ಮುನ್ನೆಲೆಗೆ ಬರಲಿ. ನೆರೆಹೊರೆಯನ್ನು ಬದಲಿಸಲಾಗದು ಎಂಬುದನ್ನು ಎರಡೂ ದೇಶಗಳ ನಾಯಕರು ಮನಗಾಣಲಿ. ಸೌಹಾರ್ದದ ಹೊಸತೊಂದು ಶಕೆಗೆ ಕರ್ತಾರ್‌ಪುರ ಕಾರಿಡಾರ್‌ ಮುನ್ನುಡಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.