ADVERTISEMENT

ಸಂಪಾದಕೀಯ | ನಿಯಂತ್ರಣಕ್ಕೆ ಬಂದ ಹಣದುಬ್ಬರ; ಪ್ರಗತಿಗೆ ಒತ್ತು ನೀಡಲು ಸಕಾಲ

ಸಂಪಾದಕೀಯ
Published 17 ಮೇ 2025, 0:30 IST
Last Updated 17 ಮೇ 2025, 0:30 IST
   
ಹಣದುಬ್ಬರ ಇಳಿಕೆಯು ಆರ್‌ಬಿಐನ ಆರ್ಥಿಕ ನೀತಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು. ಇದು ಪ್ರಗತಿಗೆ ವೇಗ ತುಂಬುವ ನಿರೀಕ್ಷೆಯನ್ನು ಹುಟ್ಟಿಸಿದೆ

ಸಗಟು ಮತ್ತು ಚಿಲ್ಲರೆ ಹಣದುಬ್ಬರ ದರ ಇಳಿಕೆಯ ಹಾದಿಯಲ್ಲಿರುವುದು ಸ್ವಾಗತಾರ್ಹ ಬೆಳವಣಿಗೆ. ಕೆಲವು ತಿಂಗಳಿಂದ ಇದ್ದ ಈ ಪ್ರವೃತ್ತಿ ಏಪ್ರಿಲ್‌ ತಿಂಗಳಲ್ಲಿಯೂ ಮುಂದುವರಿದಿದೆ. ಸಗಟು ದರ ಸೂಚ್ಯಂಕ ಆಧಾರದಲ್ಲಿ ಲೆಕ್ಕ ಹಾಕಲಾಗುವ ಸಗಟು ಹಣದುಬ್ಬರ ದರವು ಕಳೆದ ತಿಂಗಳು ಅತ್ಯಲ್ಪ ಅಂದರೆ, ಶೇಕಡ 0.9ರಷ್ಟು ಇತ್ತು. ಇದು, 14 ತಿಂಗಳಲ್ಲಿಯೇ ಅತ್ಯಂತ ಕಡಿಮೆ ದರ. ಸಗಟು ಹಣದುಬ್ಬರ ದರವು  ಎರಡು ವರ್ಷಗಳಿಂದಲೂ ಕಡಿಮೆ ಪ್ರಮಾಣದಲ್ಲಿಯೇ ಇದೆ ಅಥವಾ ಕೆಲವೊಮ್ಮೆ ಋಣಾತ್ಮಕ ಮಟ್ಟಕ್ಕೆ ಹೋದದ್ದೂ ಉಂಟು. ಹಾಗಾಗಿ, ಕಳೆದ ತಿಂಗಳ ದರವು ಆಶ್ಚರ್ಯಕರವೇನೂ ಅಲ್ಲ. ಚಿಲ್ಲರೆ ಹಣದುಬ್ಬರವು ಗ್ರಾಹಕರು, ನೀತಿ ನಿರೂಪಕರಿಗೆ ಹೆಚ್ಚು ಮುಖ್ಯವಾದುದು.  ಏಪ್ರಿಲ್‌ನಲ್ಲಿ ಈ ದರ ಶೇ 3.2ರಷ್ಟು ಇತ್ತು. ಆರು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ದರ. ಈ ದರ ಮಾರ್ಚ್‌ ತಿಂಗಳಲ್ಲಿ
ಶೇ 3.3ರಷ್ಟು ಇತ್ತು. 

ಕಳೆದ ಕೆಲವು ವಾರಗಳಲ್ಲಿ ತರಕಾರಿ ದರಗಳಲ್ಲಿ ಆಗಿರುವ ಕುಸಿತವು ಹಣದುಬ್ಬರ ದರ ಇಳಿಕೆಗೆ ಮುಖ್ಯ ಕಾರಣ. ತರಕಾರಿ ದರ ಶೇ 11ರಷ್ಟು ಕುಸಿದರೆ, ಧಾನ್ಯಗಳ ದರಗಳಲ್ಲಿ ಶೇ 5ರಷ್ಟು ಕುಸಿತವಾಗಿದೆ. ಈ ಎರಡಕ್ಕೂ ಆಹಾರ ಪದಾರ್ಥಗಳಲ್ಲಿ ಪ್ರಮುಖ ಸ್ಥಾನವಿದೆ. ಹವಾಮಾನ ಮತ್ತು ಇತರ ಅಂಶಗಳಿಂದಾಗಿ ತರಕಾರಿ ಮತ್ತು ಧಾನ್ಯಗಳ ಪೂರೈಕೆ ಸಮೃದ್ಧವಾಗಿತ್ತು. ಪೂರೈಕೆ ಉತ್ತಮವಾಗಿದ್ದ ಕಾರಣಕ್ಕೆ ದರಗಳು ಕುಸಿದು ಹಣದುಬ್ಬರ ಇಳಿಕೆಯಾಗಲು ನೆರವಾಗಿದೆ. ಸರ್ಕಾರ ಕೈಗೊಂಡ ಕೆಲವು ಕ್ರಮಗಳು ಕೂಡ ಹಣದುಬ್ಬರ ಇಳಿಕೆಗೆ ಸಹಾಯ ಮಾಡಿವೆ. ಸರ್ಕಾರವು ಮೀಸಲು ದಾಸ್ತಾನನ್ನು ಹೆಚ್ಚಿಸಿದೆ, ಮಾರುಕಟ್ಟೆಗೂ ಸರಕುಗಳನ್ನು ಪೂರೈಸಲಾಗಿದೆ. ಜೊತೆಗೆ, ಆಮದು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ದರಗಳು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದವು.

ಹಾಗಾಗಿ, ದರ ಕುಸಿತದ ಪ್ರಮಾಣವು ಹೆಚ್ಚು ಇರುವಂತೆ ಕಾಣಿಸುತ್ತಿದೆ. ಕಳೆದ ಕೆಲವು ತಿಂಗಳಲ್ಲಿ ವ್ಯವಸ್ಥೆಯಲ್ಲಿ ನಗದು ಹರಿವು ಕಡಿಮೆ ಇತ್ತು. ಅದು ಕೂಡ ಹಣದುಬ್ಬರ ಕುಸಿತಕ್ಕೆ ಕಾರಣವಾಗಿರಬಹುದು. ಹಣದುಬ್ಬರವು ಇನ್ನಷ್ಟು ಇಳಿಕೆಯಾಗಿ ಈ ವರ್ಷದಲ್ಲಿ ಸರಾಸರಿ ಶೇ 3.5ರಷ್ಟು ದಾಖಲಾಗಬಹುದು ಎಂಬ ಅಂದಾಜು ಇದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಸರಾಸರಿ ದರವು ಶೇ 6ರ ಆಸುಪಾಸಿನಲ್ಲಿಯೇ ಇತ್ತು. ಕಚ್ಚಾ ತೈಲ ದರವು ಇಳಿಕೆಯಾಗಬಹುದು ಮತ್ತು ವಾಡಿಕೆಗಿಂತ ಉತ್ತಮ ಮುಂಗಾರು ಮಳೆಯಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಬಹುದು ಎಂಬುದು ಈ ನಿರೀಕ್ಷೆಗೆ ಕಾರಣ.

ADVERTISEMENT

ಈ ವರ್ಷದ ಆರಂಭದಿಂದಲೇ ಹಣದುಬ್ಬರವು ಇಳಿಕೆಯ ಹಾದಿಯಲ್ಲಿ ಇತ್ತು. ಬೆಲೆ ಏರಿಕೆಯ ಬಿಸಿಗೆ ತತ್ತರಿಸಿದ್ದ ಗ್ರಾಹಕರನ್ನು ಇದು ತುಸು ನಿರಾಳಗೊಳಿಸಿತ್ತು. ಈಗಿನ ಹಣದುಬ್ಬರ ಇಳಿಕೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ನೀತಿಯ ಮೇಲೆ ಪರಿಣಾಮ ಬೀರಲಿದೆ. ಹಣದುಬ್ಬರವು ನಿಯಂತ್ರಣದಲ್ಲಿರುವಾಗ, ಪ್ರಗತಿಗೆ ವೇಗ ತುಂಬಲು ಆರ್ಥಿಕ ನೀತಿಯಲ್ಲಿ ಆರ್‌ಬಿಐ ಬದಲಾವಣೆಗಳನ್ನು ತರಬಹುದು.

ರೆಪೊ ದರವನ್ನು ಶೇ 0.25ರಷ್ಟು ಕಡಿತ ಮಾಡಲು ಏ‍ಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ಆರ್‌ಬಿಐ ನಿರ್ಧರಿಸಿದೆ. ಜೂನ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆ‍ಪೊ ದರ ಇನ್ನಷ್ಟು ಕಡಿತವಾಗುವುದು ಈಗ ಬಹುತೇಕ ಖಚಿತ. ಮುಂದಿನ ತಿಂಗಳು ಮತ್ತು ಆಗಸ್ಟ್‌ನಲ್ಲಿ ನಡೆಯಲಿರುವ ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಶೇ 0.50ರಷ್ಟು ಇಳಿಸಬಹುದು ಎಂಬ ನಿರೀಕ್ಷೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.