ADVERTISEMENT

ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ

ಜಾತ್ಯತೀತ ಜನತಾದಳ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ವಿಫಲವಾದುದರ ಬಗ್ಗೆ ಆತ್ಮವಿಮರ್ಶೆಗೆ ಇದು ಸಕಾಲ.

ಸಂಪಾದಕೀಯ
Published 26 ನವೆಂಬರ್ 2025, 23:32 IST
Last Updated 26 ನವೆಂಬರ್ 2025, 23:32 IST
<div class="paragraphs"><p>ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ</p></div>

ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ

   

ಕರ್ನಾಟಕದ ಅಸ್ಮಿತೆ, ಸ್ಥಳೀಯ ಹಕ್ಕುಗಳಿಗೆ ಆದ್ಯತೆ ಹಾಗೂ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಬದ್ಧತೆಯೊಂದಿಗೆ ತನ್ನ ಆರಂಭಿಕ ದಿನಗಳಲ್ಲಿ ಭರವಸೆಯ ಹೊನ್ನಕಿರಣಗಳನ್ನು ಜೆಡಿಎಸ್‌ (ಜನತಾದಳ ಜಾತ್ಯತೀತ) ಮೂಡಿಸಿತ್ತು. ಒಂದು ಪ್ರಾದೇಶಿಕ ಪಕ್ಷದ ಚರಿತ್ರೆಯೊಳಗೆ ಮಹತ್ತು ಎನಿಸಿರುವ 25 ವಸಂತಗಳನ್ನು ಜೆಡಿಎಸ್‌ ಪೂರೈಸಿದೆ. ಒಂದು ಕಾಲದಲ್ಲಿ ಹೆಮ್ಮರವಾಗಿ ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬೆಳೆಸಿಕೊಂಡಿದ್ದ ಕಾಂಗ್ರೆಸ್‌ಗೆ ಸಡ್ಡುಹೊಡೆದಂತೆ ಒಡಮೂಡಿದ ಜನತಾ ಪರಿವಾರ ನಂತರ ದೇಶವನ್ನೇ ಆಳಿದ್ದು ಇತಿಹಾಸ. 1977ರಿಂದ ಸತತವಾಗಿ ವಿಘಟನೆಯ ಮಹಾಹೊಡೆತಕ್ಕೆ ಸಿಕ್ಕಿ ಜನತಾ ಪರಿವಾರ ಛಿದ್ರಗೊಂಡಿತು. ‘ಜನತಾ’ ಹೆಸರನ್ನೇ ಉಳಿಸಿಕೊಂಡು, ಆಯಾ ರಾಜ್ಯಗಳ ನೇತಾರರ ಪಕ್ಷವಾಗಿ ಸೀಮಿತ ಪರಿಧಿಯೊಳಗೆ ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ನೋಡಿದರೆ ಜನತಾ ಪಕ್ಷ, ಸಮಾಜವಾದಿ ಜನತಾದಳ, ಜನತಾದಳ, ಜನತಾದಳ ಸಂಯುಕ್ತ, ಜನತಾದಳ ಜಾತ್ಯತೀತ, ಅಖಿಲ ಭಾರತ ಪ್ರಗತಿಪರ ಜನತಾದಳ, ಹೀಗೆ ವಿದಳಗಳಾಗಿ ವಿಭಜನೆಗೊಳ್ಳುತ್ತಲೇ ಸಾಗಿ ಬಂದಿದೆ. ‌1999ರಲ್ಲಿ ಸ್ಥಾಪನೆಯಾದ ಜೆಡಿಎಸ್‌, 2000 ಇಸವಿಯ ನವೆಂಬರ್‌ 24ರಂದು ಅಧಿಕೃತವಾಗಿ ನೋಂದಣಿಯಾಯಿತು. ಬೆಳ್ಳಿಹಬ್ಬದ ಸಡಗರದಲ್ಲಿರುವ ಈ ಪಕ್ಷ 25 ವರ್ಷಗಳಲ್ಲಿ ವಸಂತವನ್ನೇನೂ ಕಂಡಿಲ್ಲ. 2004ರಲ್ಲಿ ಎನ್‌. ಧರಂಸಿಂಗ್‌ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಆಗ ಜೆಡಿಎಸ್‌ ಮುಂದಾಳಾಗಿದ್ದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಬಳಿಕ ಎರಡು ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ದಕ್ಕಿತೇ ಹೊರತು, ಸ್ವಂತ ಬಲದ ಮೇಲೆ ಅಧಿಕಾರ ರಚಿಸುವ ಜನಾದೇಶ ಸಿಗಲಿಲ್ಲ. ಬೇಲಿಯ ಮೇಲೆ ಕುಳಿತು ಫಸಲು ತೆಗೆಯುವ ಅಭ್ಯಾಸಕ್ಕೆ ಒಗ್ಗಿಕೊಂಡ ನಾಯಕರು, ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಅಗತ್ಯವಾದ ಕಾರ್ಯತಂತ್ರ ಹೆಣೆಯಲಿಲ್ಲ. ಎರಡನೇ ಹಂತದ ನಾಯಕತ್ವವನ್ನು ಬೆಳೆಸುವ ಗೋಜಿಗೂ ಹೋಗಲಿಲ್ಲ. ಇಂತಹ ಹೊತ್ತಿನೊಳಗೆ, ಬೆಳ್ಳಿಹಬ್ಬದ ಆಚರಣೆ ಎಂಬುದು ಪಕ್ಷ ನಡೆದು ಬಂದ ಹಾದಿಯ ಆತ್ಮಾವಲೋಕನ, ಭವಿಷ್ಯದಲ್ಲಿ ಪಕ್ಷದ ಪುನರುತ್ಥಾನದ ಹೊಸ ದಾರಿಗಳ ಅನ್ವೇಷಣೆಗೆ ವೇದಿಕೆ ಆಗಬೇಕಿತ್ತು. ಆದರೆ, ದೇವೇಗೌಡ, ಕುಮಾರಸ್ವಾಮಿಯವರ ಹೊಗಳಿಕೆ, ಅನ್ಯ ಪಕ್ಷಕ್ಕೆ ಹಾರಿ ನೆಲೆ ಕಂಡುಕೊಂಡವರ ಹೀಗಳಿಕೆಗಷ್ಟೇ ಸೀಮಿತವಾಗಿಬಿಟ್ಟಿತು.

ಕಾಂಗ್ರೆಸ್‌ನ ದಬ್ಬಾಳಿಕೆಗೆ ಎದುರಾಗಿ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಸಂಕಲ್ಪ
ದಿಂದ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳು ಈಗಲೂ ಅನೇಕ ರಾಜ್ಯಗಳಲ್ಲಿ ಪ್ರಬಲವಾಗಿಯೇ ಇವೆ. ದಶಕದ ಈಚೆಗೆ ಕಾಂಗ್ರೆಸ್‌ ಸ್ಥಾನವನ್ನು ಆಕ್ರಮಿಸಿಕೊಂಡ ಬಿಜೆಪಿಗೆ ಸವಾಲು ಒಡ್ಡುವಂತೆ ಕೆಲವು ರಾಜ್ಯಗಳ ರಾಜಕೀಯ ಪಕ್ಷಗಳು ತಮ್ಮ ಬಲವನ್ನು ಕ್ರೋಡೀಕರಿಸಿಕೊಂಡು ಅಧಿಕಾರ
ನಡೆಸುತ್ತಿವೆ. ಅಧಿಕಾರಕ್ಕಾಗಿ ಯಾವುದೇ ಪಕ್ಷದ ಜತೆಗಾದರೂ ಹೊಂದಾಣಿಕೆ ಮಾಡಿ
ಕೊಳ್ಳುವ ಪ್ರವೃತ್ತಿಯನ್ನು ಅನೇಕ ಪ್ರಾದೇಶಿಕ ಪಕ್ಷಗಳು ಮಾಡಿಕೊಂಡೇ ಬಂದಿವೆ. ಜೆಡಿಎಸ್‌
ಕೂಡ ಇದಕ್ಕೆ ಭಿನ್ನವಲ್ಲ. ಅಧಿಕಾರಕ್ಕಾಗಿ ಯಾವುದೇ ಪಕ್ಷದ ಜತೆಗೆ ಹೋಗುವ ಅವಕಾಶ
ವಾದಿತನವೇ ಜೆಡಿಎಸ್‌ಗೆ ಮುಳುವಾಗಿದೆ. ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಾಗ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಎಲ್ಲ ಸಾಮರ್ಥ್ಯ ತೋರಿಸಿದ್ದ ಜೆಡಿಎಸ್‌ ಈಗ, ರಾಷ್ಟ್ರೀಯ ಪಕ್ಷಗಳನ್ನೇ ತನ್ನ ಅಧಿಕಾರಕ್ಕೆ ಊರುಗೋಲಾಗಿ ಮಾಡಿಕೊಂಡಿದೆ; ಕುಟುಂಬ ರಾಜಕಾರಣವನ್ನೇ ಹೊದ್ದುಕೊಂಡು ಕುಳಿತಿದೆ ಹಾಗೂ ಅದು ಅಂತಿಮ ಅನಿವಾರ್ಯ ಸ್ಥಿತಿ ಎಂದು ಪಕ್ಷದ ವರಿಷ್ಠರು ಈಗಲೂ ಪ್ರತಿಪಾದಿಸುವುದುಂಟು. 

ADVERTISEMENT

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ, ಅದರಲ್ಲಿ ಗೆದ್ದವರು ಕಡಿಮೆ. ನಿಜಲಿಂಗಪ್ಪ, ದೇವರಾಜ ಅರಸು, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಯಡಿಯೂರಪ್ಪ, ರೈತ ಸಂಘಟನೆ ನೇತಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಂತಹ ಪ್ರಭಾವಿಗಳೂ ಪ್ರಾದೇಶಿಕ ಪಕ್ಷ ಕಟ್ಟುವ ಯತ್ನ ಮಾಡಿ ಸೋತಿದ್ದಾರೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಬಿಪಿಜೆಡಿ ಕಟ್ಟಿ, ಅದನ್ನು ಮಧ್ಯದಲ್ಲೇ ಕೈಬಿಟ್ಟವರು. ಹಾಗೆಂದು, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ನೆಲೆ ಇಲ್ಲ ಎಂದರ್ಥವಲ್ಲ. ರಾಜ್ಯದ ಜನರ ಭಾವನೆ, ನಾಡು–ನುಡಿ ಕುರಿತ ನೈಜ ಕಳಕಳಿ, ಸಂಘಟನೆಯ ಚಾಣಾಕ್ಷ ತಂತ್ರಗಾರಿಕೆ ಅನುಸರಿಸಿದರೆ ಯಶಸ್ಸು ಈಗಲೂ ಇದೆ. ರಾಷ್ಟ್ರೀಯ ಪಕ್ಷಗಳು ರಾಜ್ಯಗಳನ್ನು ತಮ್ಮ ಸಾಮಂತರಂತೆ, ರಾಜ್ಯದ ಘಟಕವನ್ನು ಅಡಿಯಾಳಂತೆ ಭಾವಿಸಿ ‘ಬುಲಾವ್‌’ ಪದ್ಧತಿಯನ್ನು ಚಾಲ್ತಿಯಲ್ಲಿಟ್ಟುಕೊಂಡೇ ಬಂದಿವೆ. ಪ್ರಾದೇಶಿಕ ಪಕ್ಷ ಬಲಿಷ್ಠವಾಗಿದ್ದರೆ ನಾಡು–ನಾಡವರ ಹಿತ ಕಾಪಾಡುವಲ್ಲಿ ಬದ್ಧತೆ ತೋರಲು ಸಾಧ್ಯ. ಜೆಡಿಎಸ್‌ಗೆ ಇಂತಹ ಅವಕಾಶದ ಬಾಗಿಲು ಈಗಲೂ ತೆರೆದಿದೆ. ತನ್ನ ಚಿಹ್ನೆಯಾದ ತೆನೆಯ ಕಾಳುಗಳನ್ನು ರಾಜ್ಯದಾದ್ಯಂತ ಹೊಲ–ಗದ್ದೆಗಳಲ್ಲಿ ಉದುರಿಸಿ, ಬೆಳೆವಂತೆ ಮಾಡಿದರಷ್ಟೇ ಅದಕ್ಕೆ ಭವಿಷ್ಯ ಇದೆ. ಇದರ ಜತೆಗೆ, ಕುಟುಂಬ ರಾಜಕಾರಣದ ಪೊರೆ ಕಳಚಿ, ಜೆಡಿಎಸ್‌ನ ವೈಶಿಷ್ಟ್ಯಗಳಾದ ಪ್ರಾದೇಶಿಕತೆ, ಕರ್ನಾಟಕದ ಅಸ್ಮಿತೆ, ಜಾತ್ಯತೀತತೆಯ ಗರಿಗಳನ್ನು ಮತ್ತೆ ಮುಡಿಗೇರಿಸಿ, ಆತ್ಮದ ನುಡಿಗಾನವಾಗಿ ಮಾಡಿಕೊಂಡಾಗಷ್ಟೇ ಹೊಸ ದಾರಿಗಳು ತೆರೆದು ಬೆಳಕಿನ ರೇಖೆಗಳು ಚಿಮ್ಮಿ ಬಂದಾವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.