ADVERTISEMENT

ಕೊಪ್ಪಳ: ಕೈಗಾರಿಕೆಗಳಿಂದ ಮಾಲಿನ್ಯ ಹೆಚ್ಚಳ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ

ಸಂಪಾದಕೀಯ
Published 16 ಮಾರ್ಚ್ 2025, 23:30 IST
Last Updated 16 ಮಾರ್ಚ್ 2025, 23:30 IST
   

ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಅಲ್ಲಿನ ಕೈಗಾರಿಕೆಗಳು ಹೊರಬಿಡುತ್ತಿರುವ ದೂಳು ಮತ್ತು ಮಾಲಿನ್ಯಕಾರಕ ಗಾಳಿಯಿಂದ ರೋಸಿಹೋಗಿದ್ದಾರೆ. ಹಲವು ದಿನಗಳಿಂದ ಅವರು ಸಂಘಟಿತರಾಗಿ ಕೈಗಾರಿಕೆಗಳ ವಿರುದ್ಧ ನಡೆಸುತ್ತಿರುವ ಹೋರಾಟವು ಕೊಪ್ಪಳ ತಾಲ್ಲೂಕಿನಲ್ಲಿ ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ತೀವ್ರತೆಯನ್ನು ತೆರೆದಿಟ್ಟಿದೆ.


ಕೊಪ್ಪಳ ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲೇ ಒಟ್ಟು 202 ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳಿವೆ. ಅವುಗಳಲ್ಲಿ 40ಕ್ಕೂ ಹೆಚ್ಚು ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕೈಗಾರಿಕೆಗಳು. ಈ ವ್ಯಾಪ್ತಿಯಲ್ಲಿನ 33 ಕೈಗಾರಿಕೆಗಳು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವರದಿ ನೀಡಿದೆ. ಅವುಗಳಲ್ಲಿ 22 ಕೈಗಾರಿಕೆಗಳಿಂದ ಭಾರಿ ಪ್ರಮಾಣದ
ಮಾಲಿನ್ಯವಾಗುತ್ತಿದೆ ಎಂಬುದು ವರದಿಯಲ್ಲಿದೆ.

ಕೈಗಾರಿಕೆಗಳಿಂದ ಆಗುತ್ತಿರುವ ಈ ಮಾಲಿನ್ಯವು ಅಲ್ಲಿನ ಜನರ ಆರೋಗ್ಯ, ಜೀವನೋಪಾಯ ಮತ್ತು ಪರಿಸರದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಬರೀ ಒಂದು ಕಿ.ಮೀ. ದೂರದಲ್ಲಿ ಒಂದು ಸಾವಿರ ಎಕರೆ ಜಮೀನನ್ನು ಬಳಸಿಕೊಂಡು ಉಕ್ಕು ಮತ್ತು ವಿದ್ಯುತ್‌ ಉತ್ಪಾದನಾ ಕಾರ್ಖಾನೆಯನ್ನು ವಿಸ್ತರಿಸಲು ಬಲ್ಡೋಟಾ ಸಮೂಹವು ಮುಂದಾಗಿದೆ. ಜನರ ವಿರೋಧಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೈಗಾರಿಕೆ ವಿಸ್ತರಣಾ ಕಾಮಗಾರಿಗೆ ತಾತ್ಕಾಲಿಕ ತಡೆ ವಿಧಿಸಿದ್ದಾರೆ. ಇದರಿಂದ ಜನರಿಗೆ ತಾತ್ಕಾಲಿಕ ಪರಿಹಾರವಷ್ಟೇ ಸಿಕ್ಕಿದೆ.

ADVERTISEMENT

ಉಕ್ಕು, ಸಿಮೆಂಟ್‌, ರಸಗೊಬ್ಬರ ಮತ್ತು ಕೈಗಾರಿಕಾ ಅನಿಲಗಳನ್ನು ಉತ್ಪಾದಿಸುವ ಕಾರ್ಖಾನೆಗಳ ಪೈಕಿ ಕೆಲವು ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೇ ನೇರವಾಗಿ ಹೊರಬಿಡುತ್ತಿರುವ ಆರೋಪಗಳಿವೆ. ಇದರಿಂದಾಗಿ ಅಲ್ಲಿನ ರೈತರ ಫಲವತ್ತಾದ ಜಮೀನುಗಳು ಬರಡಾಗಿ ಪರಿವರ್ತನೆಯಾಗುತ್ತಿವೆ.

ಕೈಗಾರಿಕೆಗಳಿಂದ ಹೆಚ್ಚುತ್ತಿರುವ ಮಾಲಿನ್ಯವು ಕೃಷಿಯನ್ನು ಅಸ್ಥಿರಗೊಳಿಸುತ್ತಿದೆ. ಬೆಳೆ ಹಾನಿಯಾದ ಜಮೀನುಗಳ ಮಾಲೀಕರಿಗೆ ಪರಿಹಾರ ಒದಗಿಸುವುದಾಗಿ ಕಾರ್ಖಾನೆಯವರು ಹೇಳುತ್ತಿದ್ದಾರೆ. ಆದರೆ, ಆ ಮೊತ್ತ ತೀರಾ ಕಡಿಮೆ. ಅದು ನ್ಯಾಯಯುತವಾಗಿಲ್ಲ ಎಂಬುದು ರೈತರ ಆಕ್ಷೇಪ. ಕೈಗಾರಿಕೆಗಳು ಇರುವ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ನೀರು ಹಾಗೂ ಗಾಳಿಯಲ್ಲಿ ವಿಷಕಾರಿ ಅಂಶಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ಉಸಿರಾಟದ ತೊಂದರೆ, ಚರ್ಮರೋಗ ಸೇರಿದಂತೆ ಹಲವು ಬಗೆಯ ಅನಾರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.


ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯ ಜೊತೆ ಇನ್ನೆರಡು ಬೃಹತ್‌ ಕೈಗಾರಿಕೆಗಳ ಆರಂಭಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಉದ್ದೇಶಿತ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಗುರುತಿಸಿರುವ ಪ್ರದೇಶಗಳು ಜನವಸತಿಗಳಿಗೆ ಸಮೀಪದಲ್ಲೇ ಇವೆ. 

ಕೊಪ್ಪಳದಲ್ಲಿನ ಕೈಗಾರಿಕೆಗಳ ಮಾಲೀಕರು ಮಾಲಿನ್ಯ ತಡೆಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೈಗಾರಿಕಾ ತ್ಯಾಜ್ಯ ಮತ್ತು ಹಾರುಬೂದಿಯ ಸಂಸ್ಕರಣೆಗೆ ಹೆಚ್ಚು ವಿದ್ಯುತ್‌ ಅಗತ್ಯವಿರುವುದರಿಂದ ಸಂಸ್ಕರಿಸದೇ ಅವುಗಳನ್ನು ವಾತಾವರಣಕ್ಕೆ ಬಿಡಲಾಗುತ್ತಿದೆ. ಇದು ಜನರ ಅರಿವಿಗೆ ಬಾರದೇ ಇರಲಿ ಎಂಬ ಕಾರಣಕ್ಕೆ ರಾತ್ರಿ ವೇಳೆಯಲ್ಲೇ ಹೆಚ್ಚಿನ ಉತ್ಪಾದನಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ
ಎನ್ನುವ ದೂರುಗಳಿವೆ.

ಹಾರುಬೂದಿ ನೇರವಾಗಿ ಶ್ವಾಸಕೋಶವನ್ನು ಸೇರುತ್ತಿರುವುದರಿಂದ ಶಾಲಾ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಸಿರಾಟದ ತೊಂದರೆಗಳು ವರದಿಯಾಗುತ್ತಿವೆ. ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಸಲ್ಲಿಕೆಯಾಗುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗಾರಿಕೆಗಳಿಗೆ ನೋಟಿಸ್‌ ಜಾರಿಗೊಳಿಸುವುದರ ಹೊರತಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಈಗ ಕೊಪ್ಪಳದಲ್ಲಿ ಉಂಟಾಗಿರುವ ಪರಿಸ್ಥಿತಿಯು ಆಡಳಿತದ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯ ವಿಷಯದಲ್ಲಿ ಜನರು ಆಡಳಿತ ವ್ಯವಸ್ಥೆಯ ಮೇಲೆ ಇರಿಸಿರುವ ನಂಬಿಕೆಗೆ ದ್ರೋಹ ಬಗೆಯುವಂತಹದ್ದು. ಮಾಲಿನ್ಯ ನಿಯಂತ್ರಣ ಮಂಡಳಿಯು ಈ ವಿಷಯದಲ್ಲಿ ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳ ಪ್ರಭಾವಕ್ಕೆ ಮಣಿಯದೇ ಬಿಗಿಯಾದ ನಿಲುವು ತಳೆಯಬೇಕು. ಜನರ ಆರೋಗ್ಯ, ಜೀವನೋಪಾಯ ಮತ್ತು ಪರಿಸರ ರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಿ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ಪ್ರಗತಿ ಆಗಬೇಕಾದರೆ ಕೈಗಾರಿಕೆಗಳ ಅಭಿವೃದ್ಧಿಯೂ ಅಗತ್ಯ. ಆದರೆ, ಅದಕ್ಕಾಗಿ ಜನರ ಜೀವ ಮತ್ತು ಪರಿಸರವನ್ನು ಬಲಿ ಕೊಡಬೇಕಿಲ್ಲ. ಜನರ ಆರೋಗ್ಯ ಮತ್ತು ಜೀವನೋಪಾಯವನ್ನೂ ರಕ್ಷಿಸಿಕೊಂಡು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವಂತಹ ಸಮತೋಲಿತ ಪ್ರಯತ್ನ ಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.