ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಹಸಿರು ಹಾಗೂ ನೇರಳೆ ಮಾರ್ಗಗಳೊಂದಿಗೆ ‘ಹಳದಿ ಮಾರ್ಗ’ದ ಸೇರ್ಪಡೆಯೊಂದಿಗೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆಶಾಕಿರಣದಂತಿರುವ ‘ನಮ್ಮ ಮೆಟ್ರೊ’ ಮತ್ತಷ್ಟು ಬಲಗೊಂಡಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೃದಯ ಭಾಗವಾಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ‘ನಮ್ಮ ಮೆಟ್ರೊ ಹಳದಿ ಮಾರ್ಗ’ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 2017ರಲ್ಲಿ ಆರಂಭವಾದ ಈ ಮಾರ್ಗದ ನಿರ್ಮಾಣ 2021ರಲ್ಲಿಯೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಕೊರೊನಾ ಸಾಂಕ್ರಾಮಿಕ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಿರ್ಮಾಣ ಕಾರ್ಯ ಸಾಕಷ್ಟು ವಿಳಂಬವಾಯಿತು. ಕೊನೆಗೂ, ಸ್ವಾತಂತ್ರ್ಯ ದಿನಾಚರಣೆಯ ತಿಂಗಳಲ್ಲಿ ‘ಹಳದಿ ಮಾರ್ಗ’ಕ್ಕೂ ಸ್ವಾತಂತ್ರ್ಯ ದೊರೆತಿದೆ. 19.15 ಕಿ.ಮೀ. ಉದ್ದದ ಹಳದಿ ಮಾರ್ಗದ ಕಾರ್ಯಾಚರಣೆ ತಡವಾಗಿಯಾದರೂ ಆರಂಭವಾಗಿರುವುದು, ಸಾವಿರಾರು ಪ್ರಯಾಣಿಕರ ದೈನಿಕವನ್ನು ಸ್ವಲ್ಪ ಮಟ್ಟಿಗಾದರೂ ಸಹನೀಯಗೊಳಿಸಲಿದೆ. ಇದರೊಂದಿಗೆ, ಇದುವರೆಗೆ 76.97 ಕಿ.ಮೀ. ಇದ್ದ ನಮ್ಮ ಮೆಟ್ರೊ ಜಾಲ, 96 ಕಿ.ಮೀ.ಗೆ ವಿಸ್ತರಣೆಗೊಂಡಂತಾಗಿದೆ.
‘ಹಳದಿ ಮಾರ್ಗ’ದಲ್ಲಿ ಮೆಟ್ರೊ ರೈಲುಗಳ ಸಂಚಾರ ಆರಂಭಗೊಂಡಿದ್ದರೂ, ಪೂರ್ಣ ಪ್ರಮಾಣದ ಕಾರ್ಯಾಚರಣೆಗಾಗಿ 2026ರ ಮಾರ್ಚ್‌ವರೆಗೂ ಕಾಯಬೇಕಾಗಿದೆ. ಹೊಸ ಮಾರ್ಗದಲ್ಲಿ ಸಂಚಾರಕ್ಕಾಗಿ 15 ರೈಲುಗಳು ಬೇಕಾಗಿದ್ದು, ಸದ್ಯಕ್ಕೆ 3 ರೈಲುಗಳಷ್ಟೇ ಲಭ್ಯವಿವೆ. ಪ್ರಸ್ತುತ, ಪ್ರತಿ ದಿನ 25ರಿಂದ 40 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದ್ದು, ಪೂರ್ಣ ಪ್ರಮಾಣದ ಕಾರ್ಯಾಚರಣೆ ಶುರುವಾದ ನಂತರ ಲಕ್ಷಾಂತರ ನಾಗರಿಕರು ‘ಹಳದಿ ಮಾರ್ಗ’ದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ತಂತ್ರಜ್ಞಾನದ ದೃಷ್ಟಿಯಿಂದಲೂ ‘ಹಳದಿ ಮಾರ್ಗ’ ವಿಶಿಷ್ಟವಾದುದು. ಪ್ರಸ್ತುತ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸುತ್ತಿರುವ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಚಾಲಕಸಹಿತ ರೈಲುಗಳು ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚರಿಸುವ, ‘ಸಂವಹನ ಆಧಾರಿತ ರೈಲು ನಿಯಂತ್ರಣ ತಂತ್ರಜ್ಞಾನ’ ಲಭ್ಯವಿದೆ. ಆರಂಭದಲ್ಲಿ ಚಾಲಕಸಹಿತ ರೈಲುಗಳು ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಚಾಲಕರಹಿತ ರೈಲುಗಳು ಹಳದಿ ಮಾರ್ಗದಲ್ಲಿ ಸಂಚರಿಸಲಿವೆ.
ಹಳದಿ ಮಾರ್ಗದ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೊ ಯೋಜನೆಯಲ್ಲಿ ರಾಜ್ಯದ ಹಕ್ಕಿನ ಪ್ರಸ್ತಾಪ ಮಾಡಿದ್ದಾರೆ; ಆ ಪ್ರಸ್ತಾಪ ಸರಿಯಾಗಿಯೂ ಇದೆ. ‘ನಮ್ಮ ಮೆಟ್ರೊ’ದ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಈವರೆಗೆ ₹25,379 ಕೋಟಿ ಭರಿಸಿದ್ದರೆ, ಕೇಂದ್ರ ಸರ್ಕಾರ ವೆಚ್ಚ ಮಾಡಿರುವುದು ₹7,468.86 ಕೋಟಿ ಮಾತ್ರ. ಹಾಗಾಗಿ, ಸಹಜವಾಗಿಯೇ ‘ನಮ್ಮ ಮೆಟ್ರೊ’ದ ಯಶಸ್ಸಿನ ಮುಖ್ಯ ಪಾಲು ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಆದರೆ, ಈವರೆಗೆ ಮೆಟ್ರೊ ಯೋಜನೆಗಳ ಅನುಷ್ಠಾನದಲ್ಲಿ ತಮ್ಮ ಪಾತ್ರವೇ ಮುಖ್ಯವಾದುದೆಂದು ಸಾಬೀತುಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಆಗಾಗ ಸ್ಪರ್ಧೆ ನಡೆದಿದೆ. ಈಗ ಪ್ರಧಾನಿ ಅವರ ಸಮ್ಮುಖದಲ್ಲೇ ಮೆಟ್ರೊ ಯೋಜನೆ ಸಾಕಾರಗೊಳ್ಳುವಲ್ಲಿ ರಾಜ್ಯದ ಪಾಲು ಮಹತ್ವದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಅವರ ಮಾತಿನಂತೆ ಮೆಟ್ರೊ ಯೋಜನೆಯ ಯಶಸ್ಸಿನ ಕೀರ್ತಿಯ ಅಗ್ರಪಾಲು ರಾಜ್ಯ ಸರ್ಕಾರಕ್ಕೆ ನ್ಯಾಯಯುತವಾಗಿ ಸಲ್ಲುವುದೆಂದು ಒಪ್ಪಿಕೊಳ್ಳುತ್ತಲೇ, ಮೆಟ್ರೊ ಸೇವೆಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನೂ ನೆನಪಿಸಬೇಕಾಗಿದೆ. ಕಳೆದ ಫೆಬ್ರುವರಿಯಲ್ಲಿ ಮೆಟ್ರೊ ಪ್ರಯಾಣ ದರ ಒಮ್ಮಿಂದೊಮ್ಮೆಗೇ ದುಬಾರಿಯಾದಾಗ, ಸಾರ್ವಜನಿಕ ಪ್ರತಿರೋಧ ದೊಡ್ಡ ಮಟ್ಟದಲ್ಲಿ ಎದುರಾಗಿತ್ತು. ಪ್ರಯಾಣ ದರ ಏರಿಕೆಯ ಜವಾಬ್ದಾರಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಸ್ಪರ ವರ್ಗಾಯಿಸುವ ಮೂಲಕ ಪ್ರಯಾಣಿಕರ ಹಿತ ನಿರ್ಲಕ್ಷ್ಯಕ್ಕೊಳಗಾಗಿತ್ತು. ಪ್ರಯಾಣಿಕರ ಹಿತಾಸಕ್ತಿ ಕಾಪಾಡುವ ಹೊಣೆಗಾರಿಕೆಯ ಬಗ್ಗೆ ಜಾಣತನ ಪ್ರದರ್ಶಿಸಿದ್ದ ರಾಜ್ಯ ಸರ್ಕಾರ, ಈಗ ಹಕ್ಕಿನ ಬಗ್ಗೆ ಮಾತನಾಡುತ್ತಿದೆ. ಮೆಟ್ರೊದ ಹೊಸ ಮಾರ್ಗಗಳನ್ನು ಆರಂಭಿಸಿದ ಮಾತ್ರಕ್ಕೆ ಜನಪರ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಮೆಟ್ರೊ ಪ್ರಯಾಣ ದರ ಜನಸಾಮಾನ್ಯರಿಗೆ ಭಾರವೆನ್ನಿಸದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಪ್ರಯಾಣ ದರ ದುಬಾರಿಯೆನ್ನಿಸಿ, ದೊಡ್ಡ ಸಂಖ್ಯೆಯ ಪ್ರಯಾಣಿಕರು ಮೆಟ್ರೊದಿಂದ ದೂರವೇ ಉಳಿಯುವಂತಾದರೆ, ಸಾರ್ವಜನಿಕ ಸಾರಿಗೆಯ ಉದ್ದೇಶವೇ ಹಾಳಾಗುತ್ತದೆ. ಮೆಟ್ರೊ ಯೋಜನೆಗಳನ್ನು ಲಾಭದ ದೃಷ್ಟಿಯಿಂದ ನೋಡದೆ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರ ನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.