
In defense of the federal compact
ಒಕ್ಕೂಟ ವ್ಯವಸ್ಥೆಯು ತನ್ನ ಆಶಯಗಳಿಂದ ದೂರವಾಗುತ್ತಿದೆ ಎನ್ನುವ ಅಸಮಾಧಾನ–ಆತಂಕದ ಸಂದರ್ಭದಲ್ಲಿ, ಸುಮಾರು ನಾಲ್ಕು ದಶಕಗಳ ಹಿಂದೆ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ಆಯೋಗ ನೀಡಿದ ಶಿಫಾರಸುಗಳಿಗೆ ವಿಶೇಷ ಮಹತ್ವವಿದೆ. 1988ರಲ್ಲಿ ವರದಿ ಸಲ್ಲಿಸಿದ್ದ ಆಯೋಗ, ಸಹಕಾರಿ ಒಕ್ಕೂಟ ವ್ಯವಸ್ಥೆಯ ತಾತ್ತ್ವಿಕತೆಯನ್ನು ಪ್ರತಿಪಾದಿಸಿತ್ತು. ಆ ವರದಿಯ ಶಿಫಾರಸುಗಳು ನಾಲ್ಕು ದಶಕಗಳ ನಂತರವೂ ಅನುಷ್ಠಾನಗೊಳ್ಳದೆ, ಒತ್ತಾಯಪೂರ್ವಕ ಕೇಂದ್ರೀಕೃತ ಆಡಳಿತದತ್ತ ದೇಶ ಸಾಗುತ್ತಿದೆ ಎನ್ನುವ ಆತಂಕ ದಟ್ಟವಾಗುತ್ತಿದೆ. ಈ ಕಳವಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ನಡೆದ ದಕ್ಷಿಣ ಭಾರತ ಸಮಾಜವಾದಿಗಳ ಸಮ್ಮೇಳನದಲ್ಲಿ ವ್ಯಕ್ತಪಡಿಸಿದ್ದಾರೆ. ‘ಅಪಾಯಕಾರಿ ಬದಲಾವಣೆ’ಯ ಬಗ್ಗೆ ಅವರು ವ್ಯಕ್ತಪಡಿಸಿರುವ ತೀವ್ರ ಆತಂಕ, ಅಧಿಕಾರದ ಅಸಮತೋಲನದ ಬಗ್ಗೆ ಗಂಭೀರವಾದ ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುವಂತಹದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಸಂವಹನ ಮತ್ತು ಸಮಾಲೋಚನೆಯ ಸಂಬಂಧ ಸವಕಳಿಯಾಗುತ್ತಿರುವ ಆತಂಕ ಸಿದ್ದರಾಮಯ್ಯನವರ ಟೀಕೆ ಟಿಪ್ಪಣಿಯ ಕೇಂದ್ರದಲ್ಲಿದೆ. ಜನಸಂಖ್ಯಾ ನಿಯಂತ್ರಣದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಯಶಸ್ವಿಯಾಗಿವೆ; ಆದರೆ, ಈ ಗುರಿಸಾಧನೆಯು ಅನುಕೂಲ ಆಗುವುದರ ಬದಲು, ಅವುಗಳ ರಾಜಕೀಯ ಧ್ವನಿಯನ್ನು ಕ್ಷೀಣಗೊಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಆರ್ಥಿಕ ಅಸಮಾನತೆಯೂ ಸೇರಿಕೊಂಡಿದೆ. ತೆರಿಗೆಯ ರೂಪದಲ್ಲಿ ಕರ್ನಾಟಕದಿಂದ ಕೇಂದ್ರಕ್ಕೆ ಸಂದಾಯವಾಗುತ್ತಿರುವ ಪ್ರತಿ ರೂಪಾಯಿಯಲ್ಲಿ, 13 ಪೈಸೆಯಷ್ಟೇ ರಾಜ್ಯಕ್ಕೆ ದೊರೆಯುತ್ತಿದೆ. ಅಗತ್ಯ ಇರುವಷ್ಟು ಅನುದಾನ ಇಲ್ಲದಿರು
ವುದು, ನಮ್ಯತೆಯ ಸಮಸ್ಯೆ ಮತ್ತು ಸಮಾಲೋಚನೆಯ ಕೊರತೆಯ ನಡುವೆಯೂ ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯಗಳು ಅನುಷ್ಠಾನಕ್ಕೆತರಬೇಕೆಂದು ನಿರೀಕ್ಷಿಸಲಾಗುತ್ತಿದೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಧೋರಣೆ, ಒಕ್ಕೂಟ ತತ್ತ್ವವನ್ನು ಮತ್ತು ಸಂವಿಧಾನದಲ್ಲಿನ ಸಮಾಜವಾದಿ ಚೈತನ್ಯವನ್ನು ಉಲ್ಲಂಘಿಸುವಂತಹದ್ದಾಗಿದೆ.
ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರದ ಸಮಾಲೋಚನೆ ಕೊರತೆಯ ನೇರ ಪರಿಣಾಮವನ್ನು ಕೃಷಿ ವಲಯಕ್ಕೆ ಸಂಬಂಧಿಸಿದ ಇತ್ತೀಚಿನ ತೀರ್ಮಾನಗಳಲ್ಲಿ ಗಮನಿಸಬಹುದು. ದೇಶದಲ್ಲಿ ಉತ್ಪನ್ನಗಳ ಲಭ್ಯತೆ ಸಾಕಷ್ಟು ಇರುವಾಗಲೂ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಕೇಂದ್ರದ ಏಕಪಕ್ಷೀಯ ವಾಣಿಜ್ಯನೀತಿಗಳು ಕೃಷಿ ಆರ್ಥಿಕತೆಯನ್ನು ಮತ್ತೆ ಮತ್ತೆ ಗಾಸಿಗೊಳಿಸಿವೆ. ಮೆಕ್ಕೆಜೋಳದ ಆಮದಿನಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಕುಸಿತಗೊಂಡರೆ, ಬೇಳೆಕಾಳುಗಳ ಸುಂಕರಹಿತ ಆಮದು ರೈತರ ಸುಗ್ಗಿ ಸಂಭ್ರಮವನ್ನು ಹಾಳುಮಾಡಿತು. ಅಗ್ಗದ ಮೆಣಸಿನ ಆಮದಿನಿಂದ ಪಶ್ಚಿಮಘಟ್ಟ ಪ್ರದೇಶಗಳ ರೈತರು ಸಂಕಷ್ಟ ಎದುರಿಸುವಂತಾಯಿತು. ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ತೆಗೆದುಕೊಂಡ ಈ ನಿರ್ಧಾರಗಳು ಗ್ರಾಮೀಣ ಆರ್ಥಿಕತೆಗೆ ಬಲವಾದ ಪೆಟ್ಟು ನೀಡಿದವು. ಈ ಬಿಕ್ಕಟ್ಟನ್ನು ನಿಭಾಯಿಸಲು ರಾಜ್ಯಗಳು ತಮ್ಮ ಸೀಮಿತ ಹಣಕಾಸಿನ ಸಾಧನಗಳೊಂದಿಗೆ ಪರದಾಡಬೇಕಾದ ಸನ್ನಿವೇಶ ಸೃಷ್ಟಿಯಾಯಿತು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಣ ಬಿಕ್ಕಟ್ಟುಗಳನ್ನು ಊಹಿಸಿ, ಅವುಗಳಿಗೆ ಪರಿಹಾರ ರೂಪದಲ್ಲಿ ನೀಡಲಾಗಿದ್ದ 247 ಶಿಫಾರಸುಗಳು ಸರ್ಕಾರಿಯಾ ಆಯೋಗದ ವರದಿಯಲ್ಲಿದ್ದವು. ಸಂವಾದ ಮತ್ತು ಸಮಾಲೋಚನೆಗೆ ಅನುಕೂಲವಾಗುವಂತೆ ಪ್ರಧಾನಿ ಅಧ್ಯಕ್ಷತೆಯಲ್ಲಿ ಶಾಶ್ವತ ಅಂತರರಾಜ್ಯ ಮಂಡಳಿಯನ್ನು ಸ್ಥಾಪಿಸುವ ಶಿಫಾರಸೂ ವರದಿಯಲ್ಲಿತ್ತು. ಈ ಮಂಡಳಿ 1990ರಲ್ಲಿ ರೂಪುಗೊಂಡಿತಾದರೂ, ಅದನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ವರ್ಷಕ್ಕೆ ಕನಿಷ್ಠ ಮೂರು ಬಾರಿ ಸಭೆ ನಡೆಸುವುದು ಕಡ್ಡಾಯವಾಗಿದ್ದರೂ, ಮಂಡಳಿಯ ಪೂರ್ಣ ಪ್ರಮಾಣದ ಸಭೆ ಕೊನೆಯದಾಗಿ ನಡೆದದ್ದು 2016ರಲ್ಲಿ. ಈ ಸಾಂವಿಧಾನಿಕ ವೇದಿಕೆಯ ನಿಷ್ಕ್ರಿಯತೆಯಿಂದಾಗಿ, ನೀತಿನಿರೂಪಣೆ ಮತ್ತು ಒಕ್ಕೂಟ ಸಮತೋಲನದಲ್ಲಿನ ಬಿಕ್ಕಟ್ಟುಗಳು ಪರಿಹಾರವಾಗದೆ ಉಳಿದಿವೆ. ಈ ಸಮಸ್ಯೆಗಳನ್ನು, ಬಿಜೆಪಿಯ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿನ ರಾಜ್ಯಪಾಲರ ಅಸಹಕಾರವು ಇನ್ನಷ್ಟು ತೀವ್ರಗೊಳಿಸುತ್ತಿದೆ. ಸಾಂವಿಧಾನಿಕ ಸೇತುವೆಗಳಾಗಿ ಕಾರ್ಯ ನಿರ್ವಹಿಸಬೇಕಾದ ಲೋಕಭವನಗಳು ರಾಜಕೀಯ ತಡೆಗಳಾಗಿ ಕಾಣಿಸಿಕೊಳ್ಳುತ್ತಿವೆ. ಸಹಕಾರ ಒಕ್ಕೂಟವು ಘೋಷಣೆಯಷ್ಟೇ ಆಗಿರದೆ, ಸುರಕ್ಷತಾ ಕವಚವಾಗಿದೆ. ಇದು, ಪ್ರಾದೇಶಿಕ ಆಶೋತ್ತರಗಳ ಅತಿಕ್ರಮಣಕ್ಕೆ ಅವಕಾಶ ಕಲ್ಪಿಸದಿರುವುದರ ಜೊತೆಗೆ, ಅವುಗಳ ಈಡೇರಿಕೆಗೆ ಸಂವಿಧಾನದ ಚೌಕಟ್ಟಿನಲ್ಲಿ ಸಮಾಲೋಚಿಸಲು ಅವಕಾಶ ಕಲ್ಪಿಸುತ್ತದೆ. ‘ಅಂತರರಾಜ್ಯ ಮಂಡಳಿ’ಯಂಥ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ, ನೈಜ ‘ಟೀಮ್ ಇಂಡಿಯಾ’ ವಿಧಾನವನ್ನು ಅಳವಡಿಸಿಕೊಳ್ಳುವುದು ಸದ್ಯದ ತುರ್ತು. ಆದೇಶಗಳನ್ನು ನೀಡುವುದರ ಬದಲಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ, ಸಂವಿಧಾನದಲ್ಲಿ ಅಂತರ್ಗತವಾದ ಒಕ್ಕೂಟ ತತ್ತ್ವವನ್ನು ಕೇಂದ್ರ ಸರ್ಕಾರ ಬಲಪಡಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.