ADVERTISEMENT

ಸಂಪಾದಕೀಯ: ಲೋಕಾಯುಕ್ತದ ಬಲವರ್ಧನೆ; ದಿಟ್ಟ ಕ್ರಮಗಳು ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 19:30 IST
Last Updated 12 ಸೆಪ್ಟೆಂಬರ್ 2022, 19:30 IST
   

ರಾಜ್ಯ ಸರ್ಕಾರದಲ್ಲಿನ ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಲೋಕಾಯುಕ್ತ ಸಂಸ್ಥೆಯು ದೇಶದ ಅತ್ಯುತ್ತಮ ತನಿಖಾ ಸಂಸ್ಥೆಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿತ್ತು. ಆದರೆ, 2013ರಿಂದ 2015ರ ನಡುವಿನ ಅವಧಿಯಲ್ಲಿ ಲೋಕಾಯುಕ್ತ ಕಚೇರಿಯ ಒಳಗಡೆಯೇ ನಡೆದ ಚಟುವಟಿಕೆಗಳು ಸಂಸ್ಥೆಯ ಘನತೆಗೆ ಮಸಿ ಬಳಿದಿದ್ದವು. ಆ ಸಂದರ್ಭವನ್ನು ಬಳಸಿಕೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಲೋಕಾಯುಕ್ತ ಪೊಲೀಸ್‌ ವಿಭಾಗದ ಅಧಿಕಾರ ಮೊಟಕುಗೊಳಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ದಾಖಲಾಗುವ ಪ್ರಕರಣಗಳ ತನಿಖೆಗೆ ಪ್ರತ್ಯೇಕವಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿ 2016ರಲ್ಲಿ ಆದೇಶಗಳನ್ನು ಹೊರಡಿಸಿತು. ಈ ಐತಿಹಾಸಿಕ ಪ್ರಮಾದದಿಂದಾಗಿ ಲೋಕಾಯುಕ್ತವು ಹಲ್ಲು ಕಿತ್ತ ಹಾವಿನಂತಾಗಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದೂರು ಸ್ವೀಕರಿಸಿ, ಎಫ್‌ಐಆರ್‌ ದಾಖಲಿಸುವ, ತನಿಖೆ ನಡೆಸುವ ಮತ್ತು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ಅಧಿಕಾರವನ್ನು ಮುಖ್ಯಮಂತ್ರಿ ಅಧೀನದಲ್ಲಿದ್ದ ಎಸಿಬಿಗೆ ನೀಡಲಾಗಿತ್ತು. ತಾನು ಅಧಿಕಾರಕ್ಕೆ ಬಂದಲ್ಲಿಎಸಿಬಿಯನ್ನು 24 ಗಂಟೆಗಳೊಳಗೆ ರದ್ದು ಮಾಡಿ, ಲೋಕಾಯುಕ್ತ ಪೊಲೀಸ್‌ ವಿಭಾಗವನ್ನು ಬಲವರ್ಧನೆ ಮಾಡುವುದಾಗಿ ಬಿಜೆಪಿಯು 2018ರ ಚುನಾವಣಾ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಜೆಡಿಎಸ್‌ ಕೂಡ ಚುನಾವಣಾ ಪ್ರಚಾರದಲ್ಲಿ ಇದೇ ಮಾತು ಹೇಳಿತ್ತು. 14 ತಿಂಗಳ ಕಾಲ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಜೆಡಿಎಸ್‌ ಹಾಗೂ ನಂತರ ಮೂರು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಈ ವಾಗ್ದಾನವನ್ನು ಮರೆತೇಬಿಟ್ಟಿದ್ದವು. ಎಸಿಬಿ ರಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ದ್ವಿಸದಸ್ಯ ಪೀಠವು ಎಸಿಬಿ ರಚನೆಯ ಆದೇಶವನ್ನು ರದ್ದುಗೊಳಿಸಿ, ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಮೊದಲಿನ ಅಧಿಕಾರ ಮರುಸ್ಥಾಪಿಸಿ ಈಚೆಗೆ ಆದೇಶಿಸಿದೆ. ಹೈಕೋರ್ಟ್‌ ತೀರ್ಪಿನ ಪಾಲನೆಗೆ 29 ದಿನಗಳ ಸಮಯ ತೆಗೆದುಕೊಂಡ ರಾಜ್ಯ ಸರ್ಕಾರವು ಎಸಿಬಿಯಲ್ಲಿನ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹಸ್ತಾಂತರಿಸುವ ಮತ್ತು ಲೋಕಾಯುಕ್ತ ಪೊಲೀಸ್‌ ಕಚೇರಿಗಳಿಗೆ ಹಿಂದಿನಂತೆಯೇ ಪೊಲೀಸ್‌ ಠಾಣೆಗಳ ಸ್ಥಾನಮಾನ ನೀಡುವ ಆದೇಶವನ್ನು ಈ ತಿಂಗಳ 9ರಂದು ಹೊರಡಿಸಿದೆ. ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿಯೇ ಲೋಕಾಯುಕ್ತದ ಬಲವರ್ಧನೆಯ ಪ್ರಕ್ರಿಯೆ ಆರಂಭವಾಗಿದೆ. ಇದು, ಬಹುಜನರ ಅಪೇಕ್ಷೆ ಆಗಿತ್ತು.

ಲೋಕಾಯುಕ್ತ ಪೊಲೀಸ್‌ ವಿಭಾಗವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವ ಕೆಲಸವನ್ನು ಪುನಃ ಆರಂಭಿಸಿದೆ. ಈಗ ಲೋಕಾಯುಕ್ತ ಪೊಲೀಸ್‌ ವಿಭಾಗವನ್ನು ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಯ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ದಕ್ಷ ಮತ್ತು ಲೋಪಗಳಿಲ್ಲದ ತನಿಖಾ ಸಂಸ್ಥೆಯನ್ನಾಗಿ ರೂಪಿಸುವ ಸವಾಲು ಲೋಕಾಯುಕ್ತರು ಹಾಗೂ ಸರ್ಕಾರದ ಎದುರಿಗೆ ಇದೆ. ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ‘ಕಳಂಕಿತರು’ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಪೊಲೀಸ್‌ ಅಧಿಕಾರಿಗಳ ಪೂರ್ವಾಪರ ಪರಿಶೀಲಿಸಿ, ಸಂಸ್ಥೆಯ ಮುಖ್ಯಸ್ಥರ ಸಮ್ಮತಿ ಪಡೆದ ಬಳಿಕವಷ್ಟೇ ಈ ವಿಭಾಗಕ್ಕೆ ಅಧಿಕಾರಿಗಳನ್ನು ನಿಯೋಜಿಸುವ ಪದ್ಧತಿಯನ್ನು ಅನುಸರಿಸಬೇಕು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ತನಿಖೆಯಲ್ಲಿ ಅನುಸರಿಸಬೇಕಾದ ವಿಧಾನ ಕುರಿತು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಈವರೆಗೂ ಒಂದು ಕೈಪಿಡಿ ಇಲ್ಲ. ಐಪಿಎಸ್‌ ಅಧಿಕಾರಿಯಾಗಿದ್ದ ಕೆ. ಮಧುಕರ ಶೆಟ್ಟಿ ಅವರು ಸಲ್ಲಿಸಿದ್ದ ಕೈಪಿಡಿಯ ಕರಡು ಸರ್ಕಾರದಲ್ಲೇ ದೂಳು ತಿನ್ನುತ್ತಿದೆ. ಲೋಕಾಯುಕ್ತ ಪೊಲೀಸ್‌ ವಿಭಾಗವು ಲೋಪಕ್ಕೆ ಅವಕಾಶಗಳಿಲ್ಲದ ತನಿಖಾ ವಿಧಾನ ಅಳವಡಿಸಿಕೊಳ್ಳುವುದಕ್ಕೆ ಪೂರಕವಾಗಿ ಸರ್ಕಾರವು ಕೈಪಿಡಿಗೆ ಅನುಮೋದನೆ ನೀಡಿ, ಅನುಷ್ಠಾನಕ್ಕೆ ತರಬೇಕು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು, ಕರ್ತವ್ಯಲೋಪ, ಅಧಿಕಾರ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸುವುದಕ್ಕೂ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿರುವ ನಿಯಮಗಳನ್ನು ಕೈಬಿಡಬೇಕು. ತನಿಖೆ ಪೂರ್ಣಗೊಂಡ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅಭಿಯೋಜನಾ ಮಂಜೂರಾತಿ ನೀಡದೆ ವಿಳಂಬ ಧೋರಣೆ ಅನುಸರಿಸುವುದನ್ನು ಕೈಬಿಟ್ಟು, ಕಾಲಮಿತಿಯೊಳಗೆ ಅನುಮತಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ಲೋಕಾಯುಕ್ತ ಪೊಲೀಸ್‌ ವಿಭಾಗವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು ಮತ್ತು ಬಂಧನಕ್ಕೊಳಗಾದ ಅಧಿಕಾರಿಗಳನ್ನು ಅದೇ ಹುದ್ದೆಗಳಲ್ಲಿ ಮುಂದುವರಿಸುವ ಕೆಟ್ಟ ಚಾಳಿಗೆ ಸರ್ಕಾರ ವಿದಾಯ ಹೇಳಬೇಕು. ಸಂಸ್ಥೆಯ ಘನತೆಗೆ ಚ್ಯುತಿ ಬಾರದಂತೆ ನಿಷ್ಪಕ್ಷಪಾತವಾಗಿ ಹಾಗೂ ವೃತ್ತಿಪರವಾಗಿ ಪ್ರಕರಣಗಳ ತನಿಖೆ ನಡೆಸುವುದು ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಹೊಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT