ADVERTISEMENT

ಸಂಪಾದಕೀಯ | ಶ್ರಮಿಕ ವರ್ಗಕ್ಕೆ ಪರಿಹಾರವಾಗಿ ಪ್ಯಾಕೇಜ್‌ ಘೋಷಣೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:28 IST
Last Updated 7 ಮೇ 2020, 20:28 IST
.
.   

ಕೋವಿಡ್‌–19 ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದೆ ಮನೆಯಲ್ಲಿದ್ದು ಸಂಕಷ್ಟಕ್ಕೀಡಾಗಿರುವ ಶ್ರಮಿಕ ವರ್ಗಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರವು ₹1,610 ಕೋಟಿ ಮೊತ್ತದ ಪ್ಯಾಕೇಜ್ ಪ್ರಕಟಿಸಿದೆ. ಅಸಂಘಟಿತ ವಲಯದ ಕಾರ್ಮಿಕರು, ನೇಕಾರರು, ಅಗಸ, ಕ್ಷೌರಿಕ ವೃತ್ತಿಯವರಿಗೆ ಈ ಪ್ಯಾಕೇಜ್‌ ನೆರವಾಗಲಿದೆ.

ಪ್ರತಿದಿನದ ದುಡಿಮೆಯಿಂದಲೇ ಸಂಸಾರ ಸಾಗಿಸುತ್ತಿದ್ದ ಈ ಶ್ರಮಿಕರು ಲಾಕ್‌ಡೌನ್‌ನಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿ ದಿನದ ಊಟಕ್ಕೂ ತತ್ವಾರವಾಗಿರುವುದನ್ನು ಸರ್ಕಾರ ಸರಿಯಾಗಿಯೇ ಗುರುತಿಸಿದೆ. ಅಗಸ ವೃತ್ತಿ ಮಾಡುವ 60 ಸಾವಿರ ಮಂದಿಗೆ, ಕ್ಷೌರಿಕ ವೃತ್ತಿ ಮಾಡುವ 2.30 ಲಕ್ಷ ಜನರಿಗೆ ಹಾಗೂ 7.75 ಲಕ್ಷ ಮಂದಿ ಆಟೊ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ ₹5 ಸಾವಿರದ ಒಂದು ಬಾರಿಯ ಪರಿಹಾರ ಮೊತ್ತ ಈ ಪ್ಯಾಕೇಜ್‌ನಲ್ಲಿ ಅಡಕವಾಗಿದೆ. ಹಾಗೆಯೇ ಹೂವು ಬೆಳೆಗಾರರ ಮತ್ತು ಕಟ್ಟಡ ಕಾರ್ಮಿಕರ ದುಃಸ್ಥಿತಿಯನ್ನೂ ಸರ್ಕಾರ ಗಮನಿಸಿರುವುದು ಸ್ವಾಗತಾರ್ಹ.

11,687 ಹೆಕ್ಟೇರ್‌ ಪ್ರದೇಶದಲ್ಲಿ ಈ ಸಲ ಹೂವು ಬೆಳೆಯಲಾಗಿದ್ದು, ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಇಲ್ಲದೆ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಹೆಕ್ಟೇರ್‌ಗೆ ಗರಿಷ್ಠ ₹25 ಸಾವಿರದಂತೆ ಪರಿಹಾರ ಘೋಷಿಸಿರುವುದು ಇವರ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು. ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪರಿಹಾರವಾಗಿ ತಲಾ ₹3,000 ನೀಡುವುದಾಗಿ ಈಗಾಗಲೇ ಘೋಷಿಸಲಾಗಿತ್ತು. ಅದರ ಜತೆಗೆ, ಇನ್ನೂ ₹2,000 ನೀಡುವುದಾಗಿ ಸರ್ಕಾರ ಈಗ ಹೇಳಿದೆ.

ADVERTISEMENT

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಎರಡು ತಿಂಗಳ ವಿದ್ಯುತ್‌ ಶುಲ್ಕದ ಫಿಕ್ಸೆಡ್‌ ಚಾರ್ಜ್‌ ಮನ್ನಾ ಮತ್ತು ನೇಕಾರರಿಗೆ ಈ ಹಿಂದೆಯೇ ಘೋಷಿಸಿದ್ದ ಸಾಲ ಮನ್ನಾ ಪ್ಯಾಕೇಜ್‌ನಲ್ಲಿ ನೀಡಬೇಕಿರುವ ₹ 80 ಕೋಟಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವುದಾಗಿಯೂ ಸರ್ಕಾರ ಹೇಳಿದೆ. ಉದ್ಯಮ, ಸಾರಿಗೆ, ರಿಯಲ್‌ ಎಸ್ಟೇಟ್ ವಹಿವಾಟು‌ ಎಲ್ಲವೂ ಬಂದ್‌ ಆಗಿ, ಸ್ವತಃ ರಾಜ್ಯ ಸರ್ಕಾರವೂ ಬಹುದೊಡ್ಡ ವರಮಾನ ಖೋತಾ ಅನುಭವಿಸುತ್ತಿರುವ ಈ ಹೊತ್ತಲ್ಲಿ ತೀವ್ರ ಸಂಕಷ್ಟಕ್ಕೊಳಗಾದ ಶ್ರಮಿಕ ವರ್ಗವನ್ನು ಗುರುತಿಸಿ, ಸರ್ಕಾರ ಪರಿಹಾರ ಘೋಷಿಸಿರುವುದು ಮೆಚ್ಚಬೇಕಾದ ಸಂಗತಿ.

ಇತ್ತೀಚಿನ ದಶಕಗಳಲ್ಲಿಯೇ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ದೇಶ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಿಂದ ದೇಶವನ್ನು ಮೇಲಕ್ಕೆ ಎತ್ತಬೇಕು ಎಂದಾದರೆ ಜನರ ಕೈಗೆ ಖರ್ಚಿಗೆ ಕಾಸು ಸಿಗುವಂತೆ ಆಗಬೇಕು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಜನರ ಕೈಗೆ ದುಡ್ಡು ಸಿಕ್ಕರೂ, ಲಾಕ್‌ಡೌನ್‌ ಪರಿಸ್ಥಿತಿ ತಿಳಿಗೊಳ್ಳದೆ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭ ಆಗುವುದಿಲ್ಲ. ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಘೋಷಿಸುವ ಪರಿಹಾರಗಳು ಸಾಮಾನ್ಯವಾಗಿಪೂರ್ಣಪ್ರಮಾಣದಲ್ಲಿ ಸಂತ್ರಸ್ತರಿಗೆ ತಲುಪುವುದಿಲ್ಲ ಎನ್ನುವ ದೂರು ಹಿಂದೆಯೂ ಇತ್ತು, ಈಗಲೂ ಇದೆ.

ಸರ್ಕಾರ ಈ ಬಗ್ಗೆ ಸೂಕ್ತ ಗಮನಹರಿಸಿ, ಈ ಪರಿಹಾರ ಮೊತ್ತ ಸಂತ್ರಸ್ತರಿಗೆ ಶೀಘ್ರ ತಲುಪುವಂತೆ ನೋಡಿಕೊಳ್ಳಬೇಕು. ಆರ್ಥಿಕ ದುಃಸ್ಥಿತಿ ಎಲ್ಲರನ್ನೂ ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ, ತಾಂತ್ರಿಕ ಸಂಗತಿಗಳತ್ತ ಹೆಚ್ಚಿನ ಗಮನ ಕೊಡದೆ ಎಲ್ಲ ಅರ್ಹರಿಗೂ ಪರಿಹಾರ ಕ್ಷಿಪ್ರವಾಗಿ ಸಿಗುವಂತೆ ಅಧಿಕಾರಿಗಳೂ ಕಾರ್ಯನಿರ್ವಹಿಸಬೇಕು. ಆಸ್ತಿ ನೋಂದಣಿ ಮತ್ತು ವಾಹನಗಳ ನೋಂದಣಿ ಶುಲ್ಕ ಹಾಗೂ ಅಬಕಾರಿ ಸುಂಕವಷ್ಟೇ ಈಗ ಸರ್ಕಾರದ ಆದಾಯದ ಮುಖ್ಯ ಮೂಲ. ಲಾಕ್‌ಡೌನ್‌ನಿಂದಈ ಕ್ಷೇತ್ರಗಳು ತೀವ್ರ ಕುಸಿತ ಕಂಡಿವೆ.

ಮದ್ಯದಂಗಡಿಗಳನ್ನು ಇತ್ತೀಚೆಗಷ್ಟೇ ತೆರೆದಿರುವುದರಿಂದ ಸರ್ಕಾರಕ್ಕೆ ಸ್ವಲ್ಪ ವರಮಾನ ಬಂದಿದೆಯಾದರೂ ಅದು ‘ಕಾಸಿನ ಮಜ್ಜಿಗೆ’ ಎನ್ನುವುದರಲ್ಲಿ ಸಂಶಯವಿಲ್ಲ. ಇಷ್ಟೆಲ್ಲ ಹೊರೆಗಳ ಮಧ್ಯೆಯೂ ಜನರ ನೋವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿರುವುದನ್ನು ಗಮನಿಸಿ, ಕೇಂದ್ರ ಸರ್ಕಾರ ಶೀಘ್ರವೇ ರಾಜ್ಯದ ನೆರವಿಗೆ ಬರಬೇಕಾಗಿದೆ. ರಾಜ್ಯದ ಸಂಸದರು ತಮ್ಮ ಜಡತ್ವವನ್ನು ಕೊಡವಿಕೊಂಡು, ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.