ADVERTISEMENT

Editorial | ಆರ್‌ಟಿಐ ಕಾಯ್ದೆಯ ಬಲವರ್ಧನೆ; ತುರ್ತಾಗಿ ಆಗಬೇಕಾದ ಕೆಲಸ

ಸಂಪಾದಕೀಯ
Published 15 ಜನವರಿ 2025, 0:30 IST
Last Updated 15 ಜನವರಿ 2025, 0:30 IST
   
ನಾಗರಿಕರಿಗೆ ಇರುವ ಮಾಹಿತಿ ಪಡೆಯುವ ಹಕ್ಕನ್ನು ಕಾನೂನುಬದ್ಧವಾಗಿ ರಕ್ಷಿಸಿ, ಸರಿಯಾಗಿ ಅನುಷ್ಠಾನಕ್ಕೆ ತಂದರೆ ಮಾತ್ರ ಅದಕ್ಕೆ ಅರ್ಥ ಬರುತ್ತದೆ

ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಲ್ಲಿನ ಆಯುಕ್ತರ ಹುದ್ದೆಗಳನ್ನು ಸಕಾಲಕ್ಕೆ ಭರ್ತಿ ಮಾಡದೇ ಇರುವುದರಿಂದ ಮಾಹಿತಿ ಹಕ್ಕು ಕಾಯ್ದೆಯು ದೇಶದಲ್ಲಿ ಬಲ ಕಳೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಾಹಿತಿ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಕಠಿಣ ನಿರ್ದೇಶನವು ಒಂದಷ್ಟು ಆಶಾಭಾವ ಮೂಡಿಸಿದೆ. ಮಾಹಿತಿ ಆಯುಕ್ತರ ನೇಮಕಾತಿಯ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ಇಂತಹ ಸಂಸ್ಥೆಗಳನ್ನು ಮುನ್ನಡೆಸಲು ಜನರೇ ಇಲ್ಲವೆಂದಾದರೆ ಅವುಗಳನ್ನು ಸ್ಥಾಪಿಸುವುದರಿಂದ ಏನು ಪ್ರಯೋಜನವಾಗುತ್ತದೆ ಎಂದು ಪ್ರಶ್ನಿಸಿದೆ.

ಕೇಂದ್ರ ಮಾಹಿತಿ ಆಯೋಗದಲ್ಲಿ (ಸಿಐಸಿ) ಮಾಹಿತಿ ಆಯುಕ್ತರ ಎಂಟು ಹುದ್ದೆಗಳು ಖಾಲಿ ಇವೆ ಎಂಬುದನ್ನೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ವಿವಿಧ ಇಲಾಖೆಗಳಿಂದ ಮಾಹಿತಿ ಕೋರಿರುವ ಅರ್ಜಿಗಳಿಗೆ ಸಂಬಂಧಿಸಿದ 23,000 ಮೇಲ್ಮನವಿಗಳು ಸಿಐಸಿಯಲ್ಲಿ ಬಾಕಿ ಇವೆ. ಕೆಲವು ರಾಜ್ಯಗಳಲ್ಲಿ ಮಾಹಿತಿ ಆಯೋಗಗಳು ನಿಷ್ಕ್ರಿಯವಾಗಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಆಯೋಗಗಳು ಮಾಹಿತಿ ಹಕ್ಕು ಕಾಯ್ದೆಯಡಿ ಮೇಲ್ಮನವಿಗಳನ್ನೇ ಸ್ವೀಕರಿಸುತ್ತಿಲ್ಲ. ಕರ್ನಾಟಕ ರಾಜ್ಯ ಮಾಹಿತಿ ಆಯೋಗದಲ್ಲಿ ಮುಖ್ಯ ಆಯುಕ್ತರೂ ಸೇರಿದಂತೆ ಮಾಹಿತಿ ಆಯುಕ್ತರ ಹತ್ತು ಹುದ್ದೆಗಳಿವೆ. ಇಲ್ಲಿ ಮುಖ್ಯ ಮಾಹಿತಿ ಆಯುಕ್ತರೇ ಇಲ್ಲ.

ಅಲ್ಲದೆ, ಮಾಹಿತಿ ಆಯುಕ್ತರ ಆರು ಹುದ್ದೆಗಳು ದೀರ್ಘ ಕಾಲದಿಂದ ಖಾಲಿ ಉಳಿದಿವೆ. ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ಆಯ್ಕೆ ಸಮಿತಿಯು ಪರಿಶೀಲನೆಯನ್ನು ಪೂರ್ಣಗೊಳಿಸಿ ಶಿಫಾರಸುಗಳನ್ನು ಸಲ್ಲಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಿ ಎರಡು ವಾರಗಳೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಕೇಂದ್ರ ಮಾಹಿತಿ ಆಯೋಗದಲ್ಲಿ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವಂತೆಯೂ ನ್ಯಾಯಾಲಯ ಸೂಚಿಸಿದೆ.

ADVERTISEMENT

ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಿರ್ಧಾರ ಹಾಗೂ ಕ್ರಿಯೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಬೇಡಿಕೆ ಸಲ್ಲಿಸಿ, ಪಡೆದುಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮನಮೋಹನ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ರೂಪಿಸಿ, ಜಾರಿಗೊಳಿಸಿತ್ತು. ಕಾಯ್ದೆಯು ಈಗ 20 ವರ್ಷಗಳನ್ನು ಪೂರೈಸುವ ಹಾದಿಯಲ್ಲಿದೆ. ದೇಶದ ನಾಗರಿಕರಿಗೆ ಶಕ್ತಿ ತುಂಬುವ ಮಹತ್ತರವಾದ ಉದ್ದೇಶದೊಂದಿಗೆ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಈ ಕಾಯ್ದೆಯನ್ನು ದುರ್ಬಲಗೊಳಿಸುತ್ತಿವೆ ಹಾಗೂ ಮಾಹಿತಿ ಆಯೋಗಗಳ ಅಸ್ತಿತ್ವವನ್ನೇ ನಗಣ್ಯಗೊಳಿಸುತ್ತಿವೆ.

ಇದರಿಂದಾಗಿ ಮಾಹಿತಿ ಹಕ್ಕು ಕಾಯ್ದೆಯು ಬಲ ಕಳೆದುಕೊಂಡಿದೆ. ಮಾಹಿತಿ ಆಯೋಗಗಳಲ್ಲಿ ತೆರವಾದ ಮಾಹಿತಿ ಆಯುಕ್ತರ ಹುದ್ದೆಗಳನ್ನು ಸಕಾಲಕ್ಕೆ ಭರ್ತಿ ಮಾಡುತ್ತಿಲ್ಲ. ಮಾಹಿತಿ ಕೋರಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂದರ್ಭಗಳಲ್ಲಿ ನಿಗದಿತ ಅವಧಿಯೊಳಗೆ ಪ್ರತಿಕ್ರಿಯಿಸುತ್ತಿಲ್ಲ, ಕೆಲವೊಮ್ಮೆ ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ. ಕಾಲಮಿತಿಯೊಳಗೆ ಮಾಹಿತಿ ಒದಗಿಸದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಲವೆಡೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರ ಮೇಲೆ ಹಲ್ಲೆ ನಡೆಸಿರುವ ಮತ್ತು ಅವರಿಗೆ ಅಪಾಯ ಉಂಟುಮಾಡಿರುವ ಪ್ರಕರಣಗಳೂ ನಡೆದಿವೆ.

ಮಾಹಿತಿ ಹಕ್ಕು ಕಾಯ್ದೆಯನ್ನು ನಿರಂತರವಾಗಿ ಬಳಸಿಕೊಂಡು ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದ ಕಾರ್ಯಕರ್ತರ ಕೊಲೆಗಳೂ ಆಗಿವೆ. ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳು ಜನರಿಗೆ ಲಭ್ಯವಾಗುವುದನ್ನು ತಡೆಯಲು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರ ಪಟ್ಟಭದ್ರ ಹಿತಾಸಕ್ತಿಯುಳ್ಳ ವ್ಯಕ್ತಿಗಳ ಅಪವಿತ್ರ ಮೈತ್ರಿಯು ಕೆಲಸ ಮಾಡುತ್ತಲೇ ಇರುತ್ತದೆ. ಇಂತಹ ಪ್ರಯತ್ನಗಳಿಗೆ ತಡೆಯೊಡ್ಡುವ ಕೆಲಸವನ್ನು ಸರ್ಕಾರಗಳು ಪ್ರಾಮಾಣಿಕವಾಗಿ ಮಾಡುತ್ತಿಲ್ಲ.  ಹೀಗೆ ಹಲವು ಆಯಾಮಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸಲಾಗುತ್ತಿದೆ.

ಮಾಹಿತಿ ಹಕ್ಕು ಕಾಯ್ದೆಯು ಜನರ ಕೈಗೆ ಲಭಿಸಿದ ಬಹುದೊಡ್ಡ ಅಸ್ತ್ರ ಎಂಬುದನ್ನು ಈ ಕಾಯ್ದೆ ಅನುಷ್ಠಾನಕ್ಕೆ ಬಂದ ಬಳಿಕ ಸರ್ಕಾರಗಳು ಅರ್ಥ ಮಾಡಿಕೊಂಡವು. ಜಾರಿಯಾದ ಕೆಲವೇ ವರ್ಷಗಳಲ್ಲಿ ಈ ಕಾಯ್ದೆಯಡಿ ಮಾಹಿತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಹೊಸ ನಿರ್ಬಂಧಗಳನ್ನು ವಿಧಿಸಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯನ್ನೇ ಕುಗ್ಗಿಸುವ ಪ್ರಯತ್ನಗಳು ಆರಂಭವಾದವು. ಕೇಂದ್ರ ಮಾಹಿತಿ ಆಯುಕ್ತರ ಅಧಿಕಾರದ ಅವಧಿ ಮತ್ತು ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತಂದು, ಆಯೋಗದ ಸ್ವಾಯತ್ತತೆಯನ್ನು ಕಿತ್ತುಕೊಳ್ಳಲಾಯಿತು. ಅದೇ ಹಾದಿಯಲ್ಲಿ ರಾಜ್ಯ ಮಾಹಿತಿ ಆಯೋಗಗಳ ಸ್ವಾಯತ್ತತೆಗೂ ಕಡಿವಾಣ ಹಾಕಲಾಯಿತು. ಸಮಾಜದ ಎಲ್ಲ ಕ್ಷೇತ್ರಗಳ ಪರಿಣತರನ್ನೂ ಮಾಹಿತಿ ಆಯುಕ್ತರನ್ನಾಗಿ ನೇಮಿಸಬೇಕು ಎಂಬ ಬೇಡಿಕೆ ಆರಂಭದಿಂದಲೂ ಇದೆ.

ಸುಪ್ರೀಂ ಕೋರ್ಟ್‌ ಕೂಡ ಕೆಲವು ವರ್ಷಗಳ ಹಿಂದೆಯೇ ಈ ಮಾತನ್ನು ಹೇಳಿತ್ತು. ಆದರೆ, ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಸರ್ಕಾರ ಯಾವಾಗಲೂ ಅಧಿಕಾರಿಶಾಹಿಗೇ ಮಣೆ ಹಾಕುತ್ತಿದೆ. ಮಾಹಿತಿ ಆಯೋಗ ಮತ್ತು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಯಾವುದೇ ಬಗೆಯ ಪ್ರಯತ್ನವನ್ನು ಮುಂದುವರಿಸಲು ನ್ಯಾಯಾಲಯವು ಸರ್ಕಾರಗಳಿಗೆ ಅವಕಾಶ ನೀಡಬಾರದು. ಪಾರದರ್ಶಕತೆಯು ಪ್ರಜಾಪ್ರಭುತ್ವದಲ್ಲಿ ಆಡಳಿತ ವ್ಯವಸ್ಥೆಯ ಮೂಲಮಂತ್ರ ಆಗಬೇಕು. ನಾಗರಿಕರಿಗೆ ಇರುವ ಮಾಹಿತಿ ಪಡೆಯುವ ಹಕ್ಕನ್ನು ಕಾನೂನುಬದ್ಧವಾಗಿ ರಕ್ಷಿಸಿ, ಸರಿಯಾಗಿ ಅನುಷ್ಠಾನಕ್ಕೆ ತಂದರೆ ಮಾತ್ರ ಅದಕ್ಕೆ ಅರ್ಥ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.