ADVERTISEMENT

ಸಂಪಾದಕೀಯ | ಗಾಳಿಯ ಮಾಲಿನ್ಯ ತಡೆಗೆ ತುರ್ತು ಕ್ರಮ ಅಗತ್ಯ

ಸಂಪಾದಕೀಯ
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
   

ಸ್ವಿಟ್ಜರ್‌ಲೆಂಡ್‌ನ ‘ಐಕ್ಯುಏರ್‌’ ಸಂಸ್ಥೆಯು ವಿಶ್ವ ಗಾಳಿ ಗುಣಮಟ್ಟ ವರದಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಭಾರತಕ್ಕೆ ಈ ವರದಿಯು ನೀಡಿರುವ ಸಂದೇಶವು ಅಹಿತಕರವೇ ಆಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಇರುವ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲಿವೆ ಎಂದು
ವರದಿ ಹೇಳಿದೆ.

ಪ್ರತಿ ಘನ ಮೀಟರ್‌ ವಾಯುಪ್ರದೇಶದಲ್ಲಿ 2.5 ಮೈಕ್ರೊ ಮೀಟರ್‌ ಅಥವಾ ಅದಕ್ಕಿಂತ ಚಿಕ್ಕ ದೂಳಿನ ಕಣಗಳ ಪ್ರಮಾಣವು ಐದು ಮೈಕ್ರೊ ಗ್ರಾಂಗಿಂತ ಕಡಿಮೆ ಇರಬೇಕು ಎಂಬ ಮಾನದಂಡವನ್ನು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿದೆ. ಆದರೆ, ಭಾರತದ ಮೂರನೇ ಒಂದರಷ್ಟು ನಗರಗಳಲ್ಲಿ ಈ ಪ್ರಮಾಣವು ಇದರ 10 ಪಟ್ಟಿಗಿಂತಲೂ ಹೆಚ್ಚು ಇದೆ. ಭಾರತವು ಜಗತ್ತಿನಲ್ಲಿ ಐದನೇ ಅತಿ ಹೆಚ್ಚು ಮಲಿನಗೊಂಡ ದೇಶವಾಗಿದೆ. ದೆಹಲಿಯು ಸತತ ಆರನೇ ವರ್ಷವೂ ಅತಿ ಹೆಚ್ಚು ಮಾಲಿನ್ಯವಿರುವ ರಾಜಧಾನಿ ಎಂಬ ಹೆಸರು ಪಡೆದುಕೊಂಡಿದೆ.

ಗಾಳಿಯ ಮಾಲಿನ್ಯವು ನಗರಕ್ಕೆ ಸೀಮಿತವಾದ ವಿಚಾರವಾಗಿ ಉಳಿದಿಲ್ಲ. ಮೇಘಾಲಯದ ಬಿರ್ನಿಹಾಟ್‌ ಪಟ್ಟಣದ ಗಾಳಿಯು ಭಾರತದಲ್ಲಿಯೇ ಅತಿ ಹೆಚ್ಚು ಮಾಲಿನ್ಯವನ್ನು ಹೊಂದಿದೆ. ಪಂಜಾಬ್‌ನ ಮುಲ್ಲಾಂಪುರ ಪಟ್ಟಣ ಕೂಡ ಹೆಚ್ಚು ಮಾಲಿನ್ಯ ಹೊಂದಿದೆ. ದೇಶದ ಒಟ್ಟಾರೆ ವಾಯುಮಾಲಿನ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. ಭಾರತವು ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿದೆ. ಆದರೆ, ಇದು ಭಾರಿ ಸಮಾಧಾನಪಟ್ಟು ಕೊಳ್ಳುವಂತಹ ಸುಧಾರಣೆ ಏನಲ್ಲ.

ADVERTISEMENT

ಗಾಳಿಯ ಮಾಲಿನ್ಯ ಭಾರತದಲ್ಲಿ ಜನರ ಆರೋಗ್ಯಕ್ಕೆ ಗಂಭೀರವಾದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಜನರ ನಿರೀಕ್ಷಿತ ಜೀವಿತಾವಧಿಯಲ್ಲಿ 5.2 ವರ್ಷ ಕಡಿತವಾಗುತ್ತದೆ. 2009ರಿಂದ 2019ರ ನಡುವೆ ಪ್ರತಿವರ್ಷ 15 ಲಕ್ಷ ಜನರು ಗಾಳಿಯ ಮಾಲಿನ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಈಗ
ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಸಾವಷ್ಟೇ ಅಲ್ಲದೆ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ವಾಯುಮಾಲಿನ್ಯವು ಕಾರಣವಾಗುತ್ತದೆ.

ಜನಸಾಂದ್ರತೆ ಹೆಚ್ಚಾಗಿರುವ ಕಾರಣ ಬೇರೆ ದೇಶಗಳಿಗಿಂತ ನಮ್ಮ ದೇಶದಲ್ಲಿ ಗಾಳಿಯ ಮಾಲಿನ್ಯವು ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತದೆ. ಆರ್ಥಿಕವಾಗಿ ಬಹುದೊಡ್ಡ ಮೊತ್ತ ವೆಚ್ಚವಾಗಲು ಕಾರಣವಾಗುತ್ತದೆ.
ಉತ್ಪಾದಕತೆಯೂ ಕುಂಠಿತವಾಗುತ್ತದೆ. ಗಾಳಿಯ ಮಾಲಿನ್ಯದ ಕುರಿತಾಗಿ ನಮಗೆ ದೊರೆತಿರುವ ಚಿತ್ರಣವು ಸಮಗ್ರವಲ್ಲ. ಮಾಲಿನ್ಯ ಸ್ಥಿತಿಯು ಇನ್ನೂ ಕೆಟ್ಟದಾಗಿ ಇರಬಹುದು. ಏಕೆಂದರೆ, ದೇಶದ ಬಹುಭಾಗವು ಗಾಳಿಯ ಗುಣಮಟ್ಟ ನಿಗಾ ವ್ಯವಸ್ಥೆಯನ್ನು ಹೊಂದಿಲ್ಲ. 

ಕೈಗಾರಿಕೆಗಳು ಮತ್ತು ವಾಹನಗಳು ಉಗುಳುವ ಹೊಗೆ, ಕಟ್ಟಡ ನಿರ್ಮಾಣ ಕಾಮಗಾರಿಯಿಂದ ಉಂಟಾಗುವ ದೂಳು ಹಾಗೂ ಆಯಾ ಕಾಲಕ್ಕೆ ಕೃಷಿ ತ್ಯಾಜ್ಯಕ್ಕೆ ಹಾಕುವ ಬೆಂಕಿಯು ಗಾಳಿಯ ಮಾಲಿನ್ಯದ ಮುಖ್ಯ ಕಾರಣಗಳು. ‘ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ’ವೊಂದು ಅಸ್ತಿತ್ವದಲ್ಲಿ ಇದೆ. ಆದರೆ, ಅನುಷ್ಠಾನ ಬಹಳ ಕಳಪೆಯಾಗಿದೆ. ದೆಹಲಿಯಂತಹ ನಗರಗಳು ಚಳಿಗಾಲದಲ್ಲಿ ಗಾಳಿಯ ಮಾಲಿನ್ಯದಿಂದ ತತ್ತರಿಸಿದಾಗ ಬಿಟ್ಟರೆ ಬೇರೆ ಸಂದರ್ಭಗಳಲ್ಲಿ ಗಾಳಿಯ ಮಾಲಿನ್ಯವು ಗಂಭೀರವಾದ ಸಮಸ್ಯೆ ಎಂದೇ ಪರಿಗಣಿತವಾಗಿಲ್ಲ. ನೀತಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಸರ್ಕಾರಗಳು ಮತ್ತು ವಿವಿಧ ಸಂಸ್ಥೆಗಳು ಸಾಮಾನ್ಯವಾಗಿ ಪರಸ್ಪರ ದೂಷಿಸುತ್ತಾ ಇರುತ್ತವೆ.

ಗಾಳಿಯ ಮಾಲಿನ್ಯ ತಡೆಗಟ್ಟಲು ಅತ್ಯಗತ್ಯವಾದ ಕ್ರಮಗಳನ್ನೂ ಕೈಗೊಳ್ಳಲಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಂತೂ ವ್ಯಾಪಕವಾಗಿದೆ. ಕಠಿಣವಾದ ನಿಯಂತ್ರಣ ಕ್ರಮಗಳನ್ನು ಯೋಜಿಸಿ, ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಶುದ್ಧ ಇಂಧನದತ್ತ ವರ್ಗಾವಣೆಗೊಳ್ಳುವುದಕ್ಕೆ ಮತ್ತು ಮಾಲಿನ್ಯ ತಡೆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಉತ್ತೇಜನ ನೀಡಬೇಕಿದೆ. ಒಂದು ಕಾಲದಲ್ಲಿ ಅತ್ಯಂತ ಮಲಿನ ನಗರವಾಗಿದ್ದ ಬೀಜಿಂಗ್‌, ಈಗ ಶುದ್ಧ ನಗರವಾಗಿ ಪರಿವರ್ತನೆಯಾಗಿದೆ. ಈ ನಗರವನ್ನು ನೋಡಿ ನಾವೂ ಪಾಠ ಕಲಿಯಬೇಕಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.