ADVERTISEMENT

ಥಾಯ್ಲೆಂಡ್: ಮಕ್ಕಳ ರಕ್ಷಣೆ ಕಾರ್ಮೋಡದ ನಡುವಿನ ಬೆಳ್ಳಿರೇಖೆ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 19:30 IST
Last Updated 11 ಜುಲೈ 2018, 19:30 IST
   

ಎಲ್ಲ ಕಡೆಗಳಿಂದಲೂ ಋಣಾತ್ಮಕ ಸುದ್ದಿಗಳೇ ಹೆಚ್ಚು ವರದಿಯಾಗುತ್ತಿರುವ ಸಂದರ್ಭದಲ್ಲಿ ಥಾಯ್ಲೆಂಡ್‌ನ ಗುಹೆಯಲ್ಲಿ ಸಿಕ್ಕಿಬಿದ್ದಿದ್ದ 13 ಮಂದಿಯನ್ನು ರಕ್ಷಿಸಿರುವ ಕಾರ್ಯಾಚರಣೆ ಕಾರ್ಮೋಡಗಳ ನಡುವಿನ ಬೆಳ್ಳಿಗೆರೆಯಂತಿದೆ. ವಿಶ್ವದ ಗಮನಸೆಳೆದಿದ್ದ ಈ ಸಾಹಸಮಯ ಕಾರ್ಯಾಚರಣೆ ಸುಖಾಂತ್ಯಗೊಂಡಿದೆ ಹಾಗೂ ಮೆಚ್ಚುಗೆಗೆ ಅರ್ಹವಾಗಿದೆ. ಫುಟ್‌ಬಾಲ್‌ ಆಟದ ತರಬೇತಿಯ ನಂತರ 11ರಿಂದ 16 ವರ್ಷದೊಳಗಿನ 12 ಬಾಲಕರು ಹಾಗೂ ಅವರ 25 ವರ್ಷದ ತರಬೇತುದಾರ, ಥಾಮ್ ಲುವಾಂಗ್ ಎನ್ನುವ ಗುಹೆಯನ್ನು ಜೂನ್ 23ರಂದು ಪ್ರವೇಶಿಸಿದ್ದರು. ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಬಾಲಕರೆಲ್ಲ ಗುಹೆಯೊಳಗೆ ಸಿಕ್ಕಿಕೊಂಡಿದ್ದರು. ಅವರು ಗುಹೆಯಲ್ಲಿ ಇರುವುದನ್ನು ಪತ್ತೆ ಹಚ್ಚಲಿಕ್ಕೆ 10 ದಿನಗಳು ಬೇಕಾದವು. ಮಕ್ಕಳನ್ನು ಪತ್ತೆಹಚ್ಚಿದ ನಂತರ ಅವರನ್ನು ರಕ್ಷಿಸಲು ನಡೆದ ಕಾರ್ಯಾಚರಣೆಯಲ್ಲಿ ಥಾಯ್ಲೆಂಡ್‌ ಜೊತೆಗೆ ಇಡೀ ವಿಶ್ವ ಸ್ಪಂದಿಸಿದ್ದು ವಿಶೇಷವಾಗಿತ್ತು. ಪ್ರತಿಕೂಲ ಹವಾಮಾನದ ನಡುವೆ ಕಾರ್ಯಾಚರಣೆ ನಡೆಸುವುದು ರಕ್ಷಣಾ ತಂಡಕ್ಕೆ ಸುಲಭವಾಗಿರಲಿಲ್ಲ. ಆಳವಾದ ಕಂದಕಗಳಿದ್ದ ಗುಹೆಯನ್ನು ಮಳೆ ಆವರಿಸುತ್ತಿದ್ದುದು ಹಾಗೂ ಆಮ್ಲಜನಕದ ಪ್ರಮಾಣ ಕುಸಿಯುತ್ತಿದ್ದುದು ರಕ್ಷಣಾಪಡೆಗೆ ಸವಾಲಾಗಿ ಪರಿಣಮಿಸಿತ್ತು. ಬಾಲಕರಲ್ಲಿ ಯಾರೊಬ್ಬರಿಗೂ ನೀರಿನಾಳದಲ್ಲಿ ಈಜುವುದು ತಿಳಿದಿರಲಿಲ್ಲ. ಅವರಿಗೆ ಆಳ ನೀರಿನಲ್ಲಿ ಈಜುವ ಹಾಗೂ ಆಮ್ಲಜನಕದ ಸಿಲಿಂಡರ್ ಬಳಸುವ ತರಬೇತಿ ನೀಡಿದ ನಂತರ ಹೊರಗೆ ಕರೆತರಲಾಗಿದೆ. ಮೂರು ಹಂತಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೊದಲ ಎರಡು ಹಂತಗಳಲ್ಲಿ ತಲಾ ನಾಲ್ವರನ್ನು ಹಾಗೂ ಕೊನೆಯ ದಿನ ಐವರನ್ನು ರಕ್ಷಿಸಲಾಗಿದೆ. ಈ ಸಂತಸದ ನಡುವೆಯೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಸ್ವಯಂ ಸೇವಕರೊಬ್ಬರು ಮೃತರಾಗಿದ್ದಾರೆ. ಈಗ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಗಮನ ನೀಡುವ ಸಮಯ. 18 ದಿನಗಳನ್ನು ಕತ್ತಲಲ್ಲಿ ಕಳೆದು ಹಾಗೂ ಕಲುಷಿತ ನೀರನ್ನು ಕುಡಿದು ಮಕ್ಕಳು ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ. ಅವರಿಗೆ ಸೂಕ್ತ ಸಾಂತ್ವನ–ಚಿಕಿತ್ಸೆ ದೊರೆಯಬೇಕಿದೆ.

ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಕ್ಷಣಾಪಡೆ ಪ್ರದರ್ಶಿಸಿದ ಅಸಾಧಾರಣ ಶಿಸ್ತು ಮತ್ತು ಧೈರ್ಯ ಶ್ಲಾಘನೀಯವಾದುದು. ನೂರಕ್ಕೂ ಹೆಚ್ಚು ಜನರ ಈ ತಂಡಕ್ಕೆ ಸರ್ಕಾರ ಹಾಗೂ ಸಾರ್ವಜನಿಕರು ನೀಡಿದ ಬೆಂಬಲವೂ ಗಮನಾರ್ಹ. ಮಕ್ಕಳ ಪೋಷಕರು ಆತಂಕದ ನಡುವೆಯೂ ಸಂಯಮ ಕಳೆದುಕೊಳ್ಳಲಿಲ್ಲ. ತಮ್ಮ ಹಾಜರಿಯಿಂದ ಅಡಚಣೆ ಉಂಟಾಗಬಹುದೆನ್ನುವ ಕಾರಣಕ್ಕಾಗಿ ಕಾರ್ಯಾಚರಣೆ ನಡೆದ ಸ್ಥಳದಿಂದ ಥಾಯ್ಲೆಂಡ್‌ನ ಪ್ರಧಾನಿ ದೂರವುಳಿದಿದ್ದರು. ಸ್ಥಳೀಯ ಗವರ್ನರ್‌ ಹೊರತಾಗಿ ಉಳಿದವರಾರೂ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮೂಗು ತೂರಿಸಲಿಲ್ಲ. ವಿಐಪಿಗಳ ಗೈರುಹಾಜರಿಯಲ್ಲಿ ನಡೆದ ಕಾರ್ಯಾಚರಣೆಗೆ ಆಡಳಿತಾರೂಢ ಪಕ್ಷ ಅಗತ್ಯವಿದ್ದ ಎಲ್ಲ ನೆರವನ್ನು ಒದಗಿಸಿದರೆ, ವಿರೋಧ ಪಕ್ಷಗಳು ತಮ್ಮ ಬಿಗುಮಾನ ತೊರೆದು ಗೊಣಗಾಟವನ್ನೂ ಮರೆತು ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸಿದವು. ರಕ್ಷಣಾತಂಡದ ಸ್ಥೈರ್ಯದ ಜೊತೆಗೆ, ಗುಹೆಯೊಳಗೆ ಸಿಲುಕಿದ್ದ ಮಕ್ಕಳಿಗೆ ಧೈರ್ಯ ತುಂಬಿರುವ ತರಬೇತುದಾರ ಕೂಡ ಶ್ಲಾಘನೆಗೆ ಅರ್ಹ. ಇವೆಲ್ಲ ಧನಾತ್ಮಕ ಅಂಶಗಳ ಕಾರಣದಿಂದಲೇ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಿಕ್ಕಟ್ಟು ತಲೆದೋರಿದಾಗ ದೇಶ, ಧರ್ಮ, ಬಣ್ಣ ಸೇರಿದಂತೆ ಎಲ್ಲ ವೈರುಧ್ಯ–ವೈಮನಸ್ಸುಗಳನ್ನು ಮರೆತು ಮಿಡಿಯುವ ಮನುಷ್ಯನ ಅಂತರಂಗದ ಚೆಲುವನ್ನು ಥಾಯ್ಲೆಂಡ್‌ನ ಘಟನೆ ಜಗತ್ತಿನೆದುರು ಮತ್ತೊಮ್ಮೆ ಅನಾವರಣಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT