ADVERTISEMENT

ಸಂಪಾದಕೀಯ | ಜನಗಣತಿಗೆ ಸಮಯ ನಿಗದಿ; ಜಾತಿ ಜನಗಣತಿ ಮೇಲೆ ಗಮನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 22:50 IST
Last Updated 9 ಜೂನ್ 2025, 22:50 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಮುಂಬರುವ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಜನಗಣತಿ ನಡೆಯಲಿದೆ. ಇದು, 2026ರ ಅಕ್ಟೋಬರ್‌ ಒಂದರ ಒಳಗೆ ಪೂರ್ಣಗೊಳ್ಳಲಿದೆ. ಎರಡನೆಯ ಹಂತದ ಜನಗಣತಿಯು ದೇಶದ ಇತರ ಭಾಗಗಳಲ್ಲಿ ನಡೆಯಲಿದ್ದು, 2027ರ ಮಾರ್ಚ್‌ 1ರ ಒಳಗೆ ಕೊನೆಗೊಳ್ಳಲಿದೆ. ದಶವಾರ್ಷಿಕ ಜನಗಣತಿಯು 2021ರಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕೆ ಅದನ್ನು ಮುಂದೂಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ಮತ್ತೆ ಮುಂದಕ್ಕೆ ಹಾಕಿದ್ದು ಏಕೆ ಎಂಬ ಬಗ್ಗೆ ವಿವರಣೆ ಸಿಕ್ಕಿಲ್ಲ. ಈಗ ಕೇಂದ್ರ ಸರ್ಕಾರ ಮಾಡಿರುವ ಘೋಷಣೆಯನ್ನು ಸ್ವಾಗತಿಸಬೇಕಿದೆ. ಏಕೆಂದರೆ ಈ ಪ್ರಕ್ರಿಯೆಯು ದೇಶಕ್ಕೆ ಹಲವು ಆಯಾಮಗಳಲ್ಲಿ ಬಹಳ ಮುಖ್ಯವಾಗುತ್ತದೆ. ಈ ಜನಗಣತಿಯು 16 ವರ್ಷಗಳ ಅಂತರದ ನಂತರ ನಡೆಯಲಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಜಾತಿ ಜನಗಣತಿಯೂ ಜನಗಣತಿಯ ಜೊತೆ ನಡೆಯಲಿದೆ. ದೇಶದಲ್ಲಿ ಕಡೆಯ ಬಾರಿಗೆ ಜಾತಿ ಜನಗಣತಿ ನಡೆದಿದ್ದು 1931ರಲ್ಲಿ. ಹೀಗಾಗಿ ಈ ಬಾರಿ ಜಾತಿ ವಿವರ ಸಂಗ್ರಹಿಸಲಿರುವುದು ಮಹತ್ವ ಪಡೆದುಕೊಳ್ಳುತ್ತದೆ. ಇದೇ ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ಸಾಧನಗಳನ್ನು ಬಳಸಿ ನಡೆಸಲಾಗುತ್ತದೆ. ಅಂದರೆ ದತ್ತಾಂಶ ಸಂಗ್ರಹ ಇನ್ನಷ್ಟು ವೇಗವಾಗಿ ನಡೆಯುತ್ತದೆ, ಬೇಕಾದ ಮಾಹಿತಿಯನ್ನು ಪಡೆಯುವುದು ಸುಲಭವಾಗುತ್ತದೆ.

ದೇಶದ ಜನಸಂಖ್ಯೆಯ ಸ್ವರೂಪ, ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಬಹಳ ಬೇಗವಾಗಿ ಬದಲಾವಣೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಜನಗಣತಿಯ ಅಂಕಿ–ಅಂಶಗಳು ಬಹಳ ಮುಖ್ಯವಾಗುತ್ತವೆ. 2011ರಲ್ಲಿ ದೇಶದ ಜನಸಂಖ್ಯೆಯು 121 ಕೋಟಿ ಆಗಿತ್ತು. ಈಗ ಅದು ಶೇಕಡ 18ರಿಂದ ಶೇ 20ರವರೆಗೆ ಹೆಚ್ಚಳ ಆಗಿರಬಹುದು. ಅಂದರೆ ಈಗ ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿದೆ. 1.8 ಲಕ್ಷ ಕೋಟಿ ಡಾಲರ್‌ ಆಗಿದ್ದ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಗಾತ್ರ 2027ರ ವೇಳೆಗೆ
5 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ದೇಶದಲ್ಲಿ ಜನನ ಪ್ರಮಾಣ ಕಡಿಮೆ ಆಗಿರಬಹುದು. ಆದರೆ ಇದು ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ಪ್ರಮಾಣದಲ್ಲಿ ಇದ್ದಿರುವ ಸಾಧ್ಯತೆ ಇಲ್ಲ. ದೇಶದಲ್ಲಿ ನಗರೀಕರಣವು ಬಹಳ ವೇಗವಾಗಿ ಆಗುತ್ತಿದೆ. ಹೀಗಾಗಿ, ಜನಸಂಖ್ಯೆಯ ವಿವರಗಳು ನೀತಿ ನಿರೂಪಣೆಗೆ ಮತ್ತು ನಿರ್ದಿಷ್ಟ ವರ್ಗಗಳನ್ನು ಗುರಿಯಾಗಿಸಿಕೊಂಡ ಯೋಜನೆಗಳಿಗೆ ಮಹತ್ವದ್ದಾಗುತ್ತವೆ. ಖಾಸಗಿ ವಲಯಕ್ಕೆ ಕೂಡ ತನ್ನ ಯೋಜನೆಗಳನ್ನು ಇನ್ನಷ್ಟು ನಿಖರವಾಗಿಸಲು ಜನಸಂಖ್ಯೆಯ ದತ್ತಾಂಶವು ಮುಖ್ಯವಾಗುತ್ತದೆ. ದತ್ತಾಂಶವು ನಿಖರವಾಗಿ ಇರಬೇಕು ಎಂದಾದರೆ ದತ್ತಾಂಶ ಸಂಗ್ರಹವು ದಕ್ಷವಾಗಿರಬೇಕು, ಪಾರದರ್ಶಕವಾಗಿ ಇರಬೇಕು.

ADVERTISEMENT

ಈ ಬಾರಿಯ ಜನಗಣತಿಯ ಬಹಳ ಪ್ರಮುಖವಾದ ಅಂಶ ಜಾತಿ ಕುರಿತ ಮಾಹಿತಿ ಸಂಗ್ರಹ. ಜಾತಿ ಜನಗಣತಿ ಆಗಬೇಕು ಎಂದು ಪ್ರಮುಖ ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದವು, ಕೇಂದ್ರ ಸರ್ಕಾರವು ಆ ಒತ್ತಾಯವನ್ನು ಮತ್ತೆ ಮತ್ತೆ ತಳ್ಳಿಹಾಕುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರವು ಈ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಇಲ್ಲಿ ಹಲವು ರಾಜಕೀಯ ಹಿತಾಸಕ್ತಿಗಳೂ ಅಡಗಿವೆ. ಜಾತಿಗಳ ಕುರಿತಾಗಿ ಹೊಸದಾಗಿ ಸಿಗುವ ಅಂಕಿ–ಅಂಶಗಳನ್ನು ಆಧರಿಸಿ ತೀವ್ರವಾದ ರಾಜಕೀಯ ಬದಲಾವಣೆಗಳು ಆಗಬಹುದು. ಜನಗಣತಿಯ ಮೂಲಕ ಸಿಗುವ ದತ್ತಾಂಶವನ್ನು ಆಧರಿಸಿ ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಬಹುದು. ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಆದಲ್ಲಿ ತಮಗೆ ಅನ್ಯಾಯ ಆಗುತ್ತದೆ ಎಂಬ ಆತಂಕವನ್ನು, ಜನಸಂಖ್ಯೆಯ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿರುವ ರಾಜ್ಯಗಳು ಈಗಾಗಲೇ ವ್ಯಕ್ತಪಡಿಸಿವೆ. ಈ ಆತಂಕಕ್ಕೆ ಸ್ಪಂದಿಸುವ ಕೆಲಸ ಆಗಬೇಕಿದೆ. ಈ ಜನಗಣತಿಯ ನಂತರದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆ ಇರುವ ಕಾರಣಕ್ಕೆ, ಜನಗಣತಿ ಪ್ರಕ್ರಿಯೆಯು ಮಹಿಳೆಯರ ಪ್ರಾತಿನಿಧ್ಯದ ಮೇಲೆಯೂ ಪರಿಣಾಮ ಬೀರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.