ADVERTISEMENT

ಸಂಪಾದಕೀಯ| ಕೇಂದ್ರ ಬಜೆಟ್‌: ಆರ್ಥಿಕ ಪುನಶ್ಚೇತನದ ನಿರೀಕ್ಷೆ ಹುಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:59 IST
Last Updated 1 ಫೆಬ್ರುವರಿ 2020, 19:59 IST
   

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ 2020–21ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡಪತ್ರ ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಆರೋಗ್ಯ, ನೀರು– ನೈರ್ಮಲ್ಯ ಹಾಗೂ ಶಿಕ್ಷಣ ಕ್ಷೇತ್ರದತ್ತ ಗಮನ ಕೇಂದ್ರೀಕರಿಸಿದೆ. ‘ಕೃಷಿ, ಕ್ಷೇಮ ಮತ್ತು ಶಿಕ್ಷಣ’ ಎಂಬ ಮೂರು ಹೊಸ ಮಂತ್ರಗಳನ್ನು ಪಠಿಸಿದೆ.

ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಒಟ್ಟು ₹ 2.83 ಲಕ್ಷ ಕೋಟಿ ವೆಚ್ಚ ಮಾಡಲು ನಿರ್ಧರಿಸಿದ್ದು, ಅದರಲ್ಲಿ ₹ 1.2 ಲಕ್ಷ ಕೋಟಿ ಕೃಷಿ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ₹ 15 ಲಕ್ಷ ಕೋಟಿ ಸಾಲದ ಲಭ್ಯತೆ ಹಾಗೂ ನೀರಾವರಿಗೆ ಆದ್ಯತೆ ನೀಡುವ ಮೂಲಕ 2022ರಲ್ಲಿ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಮುಂಗಡಪತ್ರ ಹೊಂದಿದೆ.

ಆರೋಗ್ಯ ಕ್ಷೇತ್ರಕ್ಕೆ ₹ 69 ಸಾವಿರ ಕೋಟಿ ನಿಗದಿ, ಶಿಕ್ಷಣ ಕ್ಷೇತ್ರಕ್ಕೆ ₹ 99,300 ಕೋಟಿ, ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯಡಿ 5 ವರ್ಷಗಳಲ್ಲಿ ₹ 11 ಲಕ್ಷ ಕೋಟಿ ಖರ್ಚು– ಹೀಗೆ ಮುಂಗಡಪತ್ರದ ಉದ್ದಕ್ಕೂ ಭರಪೂರ ಹೂಡಿಕೆಯ ಆಕರ್ಷಕ ನಕ್ಷೆಯನ್ನು ಚಿತ್ರಿಸಲಾಗಿದೆ. ಸತತ ಆರು ವರ್ಷಗಳಿಂದ ಕುಸಿಯುತ್ತಿರುವ ಆರ್ಥಿಕತೆಯ ವೃದ್ಧಿದರವನ್ನು ಶೇ 6ರಿಂದ 6.5ಕ್ಕೆ ಏರಿಸುವ ಅಂದಾಜು ಪ್ರಾಯೋಗಿಕವಾಗಿಯೇ ಇದೆ.

ADVERTISEMENT

ಈ ನಿಟ್ಟಿನಲ್ಲಿ ಲಭ್ಯವಿರುವ ಎಲ್ಲ ಆದಾಯ ಮೂಲಗಳನ್ನೂ ತಡಕಾಡುವ ಪ್ರಯತ್ನಗಳನ್ನು ಹಣಕಾಸು ಸಚಿವರು ಮಾಡಿದ್ದಾರೆ. ಷೇರುಪೇಟೆಯ ಮೂಲಕ ಎಲ್‌ಐಸಿಯ ಷೇರುವಿಕ್ರಯ ನಡೆಸುವುದರಿಂದ ಸಂಪನ್ಮೂಲದ ಹರಿವು ಹೆಚ್ಚಬಹುದು. ಬ್ಯಾಂಕ್‌ ಠೇವಣಿಯ ವಿಮಾ ಭದ್ರತೆಯ ಮಿತಿಯನ್ನು ₹ 5 ಲಕ್ಷಕ್ಕೆ ಏರಿಸಿರುವುದು ಬ್ಯಾಂಕಿಂಗ್‌ ಕ್ಷೇತ್ರದ ಬಗ್ಗೆ ಗ್ರಾಹಕರ ವಿಶ್ವಾಸ ಹೆಚ್ಚಿಸಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ನೇರ ವಿದೇಶಿ ಹೂಡಿಕೆ ಮತ್ತು ಬಾಹ್ಯ ವಾಣಿಜ್ಯ ಸಾಲ ಎತ್ತುವ ಕ್ರಮಗಳು ಎಷ್ಟರಮಟ್ಟಿಗೆ ಸರ್ಕಾರಕ್ಕೆ ನೆರವಾಗುತ್ತವೆ ಎನ್ನುವುದನ್ನು ಈಗಲೇ ಹೇಳಲಾಗದು. ಕರ್ನಾಟಕದ ಮಟ್ಟಿಗೆ, ಬೆಂಗಳೂರು ಉಪನಗರ ರೈಲು ಯೋಜನೆಗೆ ₹ 18,600 ಕೋಟಿ ನಿಗದಿ ಮಾಡಿರುವುದು ಸ್ವಾಗತಾರ್ಹ.

ಜನರು ಪೇಟೆಯಲ್ಲಿ ಹೆಚ್ಚು ಹಣ ಖರ್ಚು ಮಾಡುವಂತೆ ಪ್ರೋತ್ಸಾಹಿಸಲು ಆದಾಯ ತೆರಿಗೆ ವಿನಾಯ್ತಿಯ ವಿವಿಧ ಹಂತಗಳನ್ನು ಏರಿಸಲಾಗಿದೆ. ಆದರೆ, ಆದಾಯ ತೆರಿಗೆಯ ಈ ಹೊಸ ನೀತಿಗೆ ಸಮ್ಮತಿಸುವವರು, ಈಗ ಇರುವ 70ಕ್ಕೂ ಹೆಚ್ಚು ರಿಯಾಯ್ತಿಗಳನ್ನು ಕಳೆದುಕೊಳ್ಳಲಿದ್ದಾರೆ. ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಇದು ಆಕರ್ಷಕ ಎನ್ನಿಸಬಹುದಾದರೂ, ಈಗಾಗಲೇ ಆದಾಯ ತೆರಿಗೆ ಉಳಿಸಲು ಸಾಕಷ್ಟು ಉಳಿತಾಯ ಮಾಡಿರುವ ಮಧ್ಯಮವರ್ಗದ ಜನ ಈ ಸುಧಾರಣೆ ಒಪ್ಪಿಕೊಳ್ಳುವುದು ಕಷ್ಟ.

ಅಬಕಾರಿ ಸುಂಕದ ಹೆಚ್ಚಳದಿಂದಾಗಿ ಹಣದುಬ್ಬರ ಇನ್ನಷ್ಟು ಹೆಚ್ಚುವುದು ಖಚಿತ. ಹೀಗಾದರೆ ಸರ್ಕಾರ ಅಂದುಕೊಂಡಂತೆ ಜನರ ಹಣದ ಹರಿವು ಹೆಚ್ಚುವುದಿಲ್ಲ. ಸರ್ಕಾರ ಖರ್ಚು ಮಾಡುವ ಹಣವೂ ಎಲ್ಲಿಂದ ಬರುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಅಲ್ಲಿಂದಿಲ್ಲಿಗೆ ತೇಪೆ ಹಚ್ಚಿದಂತೆ ಕಾಣುವ ಮುಂಗಡಪತ್ರದಲ್ಲಿ ನಷ್ಟದಲ್ಲಿರುವ ರೈಲ್ವೆ, ಟೆಲಿಕಾಂ, ಅಟೊಮೊಬೈಲ್‌, ನಿರ್ಮಾಣ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳ ಪುನಶ್ಚೇತನಕ್ಕೆ ಕೈಗೊಂಡ ಕ್ರಮಗಳೂ ಸ್ಪಷ್ಟವಿಲ್ಲ.

ವಿತ್ತೀಯ ಕೊರತೆಯನ್ನು ಶೇ 3.5ಕ್ಕೆ ಮಿತಿಗೊಳಿಸುವ ಸರ್ಕಾರದ ಯತ್ನ ಫಲ ಕೊಡಬೇಕೆಂದರೆ, ಅಂದುಕೊಂಡಿರುವ ಹೂಡಿಕೆ ನಿರೀಕ್ಷಿತ ಅವಧಿಯಲ್ಲೇ ಕೈಗೂಡಬೇಕು. ಹಿಂದಿನ ಆರ್ಥಿಕ ವರ್ಷದಲ್ಲಿ ನಿಗದಿತ ಯೋಜನಾ ವೆಚ್ಚ ಶೇ 30ರಷ್ಟು ಕಡಿತಗೊಂಡಿರುವ ಉದಾಹರಣೆ ಕಣ್ಣಮುಂದೆಯೇ ಇರುವಾಗ, ಈ ಹೊಸ ಮುಂಗಡಪತ್ರದ ಭರವಸೆಗಳೂ ಕಾಗದದ ಮೇಲಿನ ಆಕರ್ಷಕ ಚಿತ್ರಗಳಾಗಿಯಷ್ಟೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.