ಇಲ್ಲಿ, ನ್ಯಾಯಾಂಗದ ಮೇಲೆ ಜನರು ಇರಿಸಿರುವ ವಿಶ್ವಾಸಕ್ಕೆ ಸಂಬಂಧಿಸಿದ ಪ್ರಶ್ನೆ ಇದೆ
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಕರೆನ್ಸಿ ನೋಟುಗಳ ಕಂತೆಗಳು ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ ಎನ್ನಲಾದ ವರದಿಗಳು ನ್ಯಾಯಮೂರ್ತಿ ಯಂತಹ ಉನ್ನತ ಸ್ಥಾನಗಳಲ್ಲಿ ಇರುವವರ ನಡತೆ ಕುರಿತು ಪ್ರಶ್ನೆಗಳನ್ನು ಮೂಡಿಸಿವೆ. ಈ ಪ್ರಕರಣವು ದೇಶದ ಎಲ್ಲೆಡೆ ಚರ್ಚೆಗೆ ವಸ್ತುವಾಗಿದೆ. ನ್ಯಾಯಮೂರ್ತಿ ವರ್ಮಾ ಅವರು ಹಣಕಾಸಿನ ವಿಚಾರವಾಗಿ ತಪ್ಪು ಮಾಡಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಆದರೆ, ಸುಟ್ಟ ನೋಟುಗಳ ಕಂತೆ ಪತ್ತೆಯಾದ ನಂತರದಲ್ಲಿ ಆಂತರಿಕ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ‘ಆಳವಾದ ತನಿಖೆ’ಯ ಅಗತ್ಯವಿದೆ ಎಂದು ವರದಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಆಂತರಿಕ ವಿಚಾರಣೆಗೆ ಮೂವರು ನ್ಯಾಯಮೂರ್ತಿ ಗಳ ಸಮಿತಿಯೊಂದನ್ನು ರಚಿಸಿದ್ದಾರೆ. ನ್ಯಾಯಮೂರ್ತಿ ಉಪಾಧ್ಯಾಯ ಅವರು ನಡೆಸಿದ ವಿಚಾರಣೆಯ ವರದಿಯನ್ನು ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್ ಮೂಲಕ ಬಹಿರಂಗಪಡಿಸಿದೆ. ಸುಪ್ರೀಂ ಕೋರ್ಟ್‌ನ ಈ ಕ್ರಮವು ಮೆಚ್ಚುಗೆಗೆ ಅರ್ಹವಾಗಿದೆ.
ಸದ್ಯಕ್ಕೆ ನ್ಯಾಯಮೂರ್ತಿ ವರ್ಮಾ ಅವರಿಗೆ ನ್ಯಾಯಾಂಗದ ಯಾವುದೇ ಕೆಲಸ ವಹಿಸಬಾರದು ಎಂದು ಸಿಜೆಐ ಖನ್ನಾ ಅವರು ಸೂಚಿಸಿದ್ದಾರೆ. ನ್ಯಾಯಮೂರ್ತಿ ವರ್ಮಾ ಅವರು ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದವರು. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ವರ್ಮಾ, ಇಡೀ ಪ್ರಕರಣವು ತಮ್ಮ ಹೆಸರಿಗೆ ಕಳಂಕ ಅಂಟಿಸುವ ಯತ್ನ ಎಂದು ನ್ಯಾಯಮೂರ್ತಿ ಉಪಾಧ್ಯಾಯ ಅವರಿಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಸಿಜೆಐ ರಚಿಸಿರುವ ಮೂವರು ನ್ಯಾಯಮೂರ್ತಿಗಳ ಸಮಿತಿಗೆ ತನ್ನ ಕೆಲಸ ಪೂರ್ಣಗೊಳಿಸಲು ಕಾಲಮಿತಿ ನಿಗದಿ ಮಾಡಿಲ್ಲವಾದರೂ ಅದು ವಿಚಾರಣಾ ವರದಿಯನ್ನು ತ್ವರಿತವಾಗಿ ಸಲ್ಲಿಸಿದರೆ ಚೆನ್ನ.
ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಪತ್ತೆಯಾಗಿದೆ ಎನ್ನಲಾದ, ಅರ್ಧ ಸುಟ್ಟ ನೋಟುಗಳ ಕಂತೆಗಳು ಭ್ರಷ್ಟ ಮಾರ್ಗದ ಮೂಲಕ ಗಳಿಸಿದ್ದು ಎಂದಾದರೆ ತಪ್ಪು ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಸಾಧ್ಯವಿರುವ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕು. ಏಕೆಂದರೆ, ಈ ಪ್ರಕರಣದಲ್ಲಿ ಇರುವುದು ಒಬ್ಬ ನ್ಯಾಯಮೂರ್ತಿಯ ವೈಯಕ್ತಿಕ ಪ್ರಾಮಾಣಿಕತೆಯ ಪ್ರಶ್ನೆ ಮಾತ್ರವೇ ಅಲ್ಲ; ಇಲ್ಲಿ ನ್ಯಾಯಾಂಗದ ಮೇಲೆ ಜನರು ಇರಿಸಿರುವ ವಿಶ್ವಾಸಕ್ಕೆ ಸಂಬಂಧಿಸಿದ ಪ್ರಶ್ನೆ ಇದೆ.
ನ್ಯಾಯಾಂಗವನ್ನು ಸಂಬಂಧಪಟ್ಟ ಎಲ್ಲ ವಿಷಯಗಳಲ್ಲಿಯೂ ಸಂಪೂರ್ಣವಾಗಿ ಉತ್ತರದಾಯಿ ಆಗಿಸುವ ಕೆಲಸ ನಡೆದಿಲ್ಲ ಎಂಬ ವಾದವೊಂದು ಇದೆ. ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ
ಕೆಲವು ಪ್ರಕರಣಗಳಲ್ಲಿ, ನ್ಯಾಯಮೂರ್ತಿಗಳ ವಿರುದ್ಧ ಆರೋಪ ಬಂದ ಕೆಲವು ಸಂದರ್ಭಗಳನ್ನು
ನಿಭಾಯಿಸಿದ ಕ್ರಮದಲ್ಲಿ ‘ಲೋಪ’ಗಳು ಆಗಿವೆ ಎನ್ನುವ ಭಾವನೆ ಇದೆ. ನ್ಯಾಯಮೂರ್ತಿಯ
ಹುದ್ದೆ ಬಹಳ ದೊಡ್ಡದು. ಆ ಹುದ್ದೆಯಲ್ಲಿ ಇರುವವರಿಗೆ ಕಾನೂನಿನ ಬಲವಾದ ರಕ್ಷಣೆ ಇರಬೇಕು. ದುರುದ್ದೇಶದಿಂದ ಅವರ ವಿರುದ್ಧ ಆರೋಪಗಳನ್ನು ಹೊರಿಸುವವರಿಗೆ ಶಿಕ್ಷೆಯಾಗಬೇಕು,
ನ್ಯಾಯಮೂರ್ತಿಗಳು ಯಾವುದೇ ಬೆದರಿಕೆಗಳಿಗೆ ಗುರಿಯಾಗದೆ ಕರ್ತವ್ಯ ನಿರ್ವಹಿಸುವ ವಾತಾವರಣ ಇರಬೇಕು. ಆಗ ಮಾತ್ರವೇ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅರ್ಥ ಇರುತ್ತದೆ. ಹಾಗೆಯೇ, ನ್ಯಾಯಮೂರ್ತಿ ಸ್ಥಾನದಲ್ಲಿ ಇರುವವರು ತಪ್ಪು ಮಾಡಿದಾಗ, ಅವರು ಕಾನೂನು ಉಲ್ಲಂಘಿಸಿದಾಗ ಅವರಿಗೆ ಕಾನೂನಿಗೆ ಅನುಗುಣವಾಗಿ ಶಿಕ್ಷೆ ಆಗಬೇಕು.
ನ್ಯಾಯಮೂರ್ತಿಗಳ ವಿರುದ್ಧ ಗುರುತರ ಆರೋಪಗಳು ಬಂದಾಗ, ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆಯು ಬಲವಾಗಿ ಇದೆ ಎಂಬುದು ಎಲ್ಲರಿಗೂ ಗೊತ್ತಾಗುವಂತೆ ಮಾಡುವ ಹೊಣೆಯು ನ್ಯಾಯಾಂಗದ ಮೇಲೆಯೇ ಇದೆ. 1991ರಲ್ಲಿ ಕೆ. ವೀರಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿರುವ ಕೆಲವು ಸಾಲುಗಳು ಇಲ್ಲಿ ಮನನಯೋಗ್ಯ. ‘ನ್ಯಾಯಾಂಗದ ಬಳಿ ಹಣಬಲವೂ ಇಲ್ಲ, ಬಾಹುಬಲವೂ ಇಲ್ಲ. ನ್ಯಾಯಾಂಗ ಉಳಿದುಕೊಳ್ಳುವುದು ಸಾರ್ವಜನಿಕರು ಇರಿಸಿರುವ ವಿಶ್ವಾಸದ ಆಧಾರದ ಮೇಲೆ ಮಾತ್ರ. ಸಾರ್ವಜನಿಕರು ಇರಿಸಿರುವ ಈ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಮಾಜದ ಸ್ಥಿರತೆಯ ದೃಷ್ಟಿಯಿಂದ ಮಹತ್ವದ್ದು...’ ಎಂಬುವು ವೀರಸ್ವಾಮಿ ಪ್ರಕರಣದಲ್ಲಿ ಕೋರ್ಟ್ ಹೇಳಿದ್ದ ಮಾತುಗಳು. ಉನ್ನತ ಹುದ್ದೆಗಳಲ್ಲಿ ಇರುವವರ ವಿರುದ್ಧ ಬಹಳ ಗಂಭೀರವಾದ ಆರೋಪಗಳು ಬಂದಾಗ ಅದನ್ನು ನ್ಯಾಯಸಮ್ಮತವಾಗಿ ನಿಭಾಯಿಸಬೇಕಿರುವುದು ಎಷ್ಟು ಮುಖ್ಯ ಎಂಬುದನ್ನು ಈ ಮಾತುಗಳು ಬಹಳ ಸ್ಪಷ್ಟವಾಗಿ ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.