ADVERTISEMENT

ಸಂಪಾದಕೀಯ | ಎತ್ತಿನಹೊಳೆ ಯೋಜನೆಗೆ ಅನುದಾನ ಬಿಡುಗಡೆಗೆ ವಿಳಂಬ ಸಲ್ಲದು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 20:15 IST
Last Updated 14 ಫೆಬ್ರುವರಿ 2022, 20:15 IST
   

ನೀರಿನ ಕೊರತೆಯ ಸಮಸ್ಯೆ ಅತಿಯಾಗಿರುವ ರಾಜ್ಯದ ಪೂರ್ವ ಭಾಗದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿಯೇ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೋಲಾರ, ಚಿಕ್ಕ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಈ ಯೋಜನೆಯಿಂದ ನೀರು ಪೂರೈಸುವ ಗುರಿ ಇದೆ.

ಪಶ್ಚಿಮಘಟ್ಟ ಶ್ರೇಣಿ ಯಿಂದ ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ನೀರನ್ನು ತಿರುಗಿಸಿ ಪೂರ್ವದ ಜಿಲ್ಲೆಗಳತ್ತ ಹರಿಸಿ, ಕುಡಿಯುವ ನೀರು ಪೂರೈಕೆಗೆ ಬಳಸುವುದು ಈ ಯೋಜನೆಯ ಉದ್ದೇಶ. ಯೋಜನಾ ಪ್ರದೇಶದ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ಮತ್ತು ಕೆರೆಗಳನ್ನು ತುಂಬಿಸುವುದಕ್ಕಾಗಿ 24.01 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಿಕೊಳ್ಳುವ ಪ್ರಸ್ತಾವವಿದೆ. ನೀರಿನ ಲಭ್ಯತೆಯ ಕುರಿತು ಪರ– ವಿರೋಧದ ಚರ್ಚೆಯ ನಡುವೆಯೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಏಳು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶ ಮತ್ತು 6,657 ಗ್ರಾಮಗಳ 75.59 ಲಕ್ಷ ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. 2012ರಲ್ಲಿ ₹ 8,323.50 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚವನ್ನು ₹ 12,912.36 ಕೋಟಿಗೆ ಹೆಚ್ಚಿಸಲಾಯಿತು. 2014ರಲ್ಲೇ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ, ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ಯೋಜನಾ ವೆಚ್ಚದಲ್ಲಿ ಹೆಚ್ಚಳ ಆಗುತ್ತಲೇ ಇದೆ.

ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಅಂದಾಜನ್ನು ಅನುಮೋದಿಸಿ, ₹ 25,125 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಬೇಕೆಂದು ಕೋರಿ ವಿಶ್ವೇಶ್ವರಯ್ಯ ಜಲ ನಿಗಮ ಸಲ್ಲಿಸಿರುವ ಪ್ರಸ್ತಾವ ಸರ್ಕಾರದ ಮುಂದಿದೆ. 2014ರಲ್ಲಿ ಅನುಮೋದಿಸಲಾದ ಪರಿಷ್ಕೃತ ಅಂದಾಜು ವರದಿಯಂತೆಯೇ ಈಗ ಕಾಮಗಾರಿ ನಡೆಯುತ್ತಿದೆ. ಎರಡು ಪ್ಯಾಕೇಜ್‌ಗಳಲ್ಲಿ 43 ಸ್ಥಳಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 42 ಸ್ಥಳಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. 2020ರ ಮಾರ್ಚ್‌ ನಂತರ ಎತ್ತಿನಹೊಳೆ ಕಾಮಗಾರಿಗಳಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಬಾಕಿ ಬಿಲ್‌ ಮೊತ್ತ ₹ 3,600 ಕೋಟಿ ದಾಟಿದೆ. ಸರ್ಕಾರ ಒಂಬತ್ತು ತಿಂಗಳಿನಿಂದಲೂ ಈ ಯೋಜನೆಗೆ ಕಿಂಚಿತ್ತೂ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸಾಧ್ಯವಾಗಿಲ್ಲ. ಆರ್ಥಿಕ ಹೊರೆ ಹೆಚ್ಚಿದ ಕಾರಣದಿಂದ ಗುತ್ತಿಗೆದಾರರು ಬಹುತೇಕ ಸ್ಥಳಗಳಲ್ಲಿ ಕಾಮಗಾರಿ ನಿಲ್ಲಿಸಿದ್ದಾರೆ. ಹಣ ಬಿಡುಗಡೆಯ ವಿಷಯದಲ್ಲಿ ಸರ್ಕಾರ ತೋರುತ್ತಿರುವ ಅನಾದರದಿಂದಾಗಿಯೇ ಈ ಸ್ಥಿತಿ ನಿರ್ಮಾಣವಾಗಿದೆ.

ಇದರಿಂದಾಗಿ ಎತ್ತಿನಹೊಳೆ ಯೋಜನೆ ಕಾಮಗಾರಿಗಳು ಸಕಾಲದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂಬ ಅನುಮಾನಕ್ಕೆ ಎಡೆಮಾಡಿದೆ. ಎತ್ತಿನಹೊಳೆ ಯೋಜನೆಯ ಎಲ್ಲ ಕಾಮಗಾರಿಗಳನ್ನು 2022ರ ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ ಇತ್ತೀಚೆಗೆ ಗಡುವು ನೀಡಿದ್ದರು. ಆದರೆ, ಈ ಯೋಜನೆಗೆ ಒಂಬತ್ತು ತಿಂಗಳಿನಿಂದ ಬಿಡಿಗಾಸೂ ಬಿಡುಗಡೆ ಆಗಿಲ್ಲ ಎಂಬುದು ಸ್ವತಃ ಹಣಕಾಸು ಖಾತೆಯನ್ನೂ ಹೊಂದಿರುವ ಅವರಿಗೆ ತಿಳಿದಿರಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಎತ್ತಿನಹೊಳೆ ಯೋಜನೆಯ ಕಾಮಗಾರಿ ಅರಂಭವಾಗಿ ಈಗಾಗಲೇ ಏಳು ವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಯೋಜನಾ ವೆಚ್ಚ ಮೂರು ಪಟ್ಟಿನಷ್ಟು ಹೆಚ್ಚಾಗಿದೆ. ಸಕಾಲಕ್ಕೆ ಯೋಜನಾ ವರದಿ ಅನುಮೋದಿಸದೆ ಇರುವುದು ಮತ್ತು ಕಾಮಗಾರಿಗಳನ್ನು ವೇಗವಾಗಿ ನಡೆಸದೇ ಇರುವುದೇ ಇದಕ್ಕೆ ಕಾರಣ. ಈಗ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಬಿಲ್‌ ಸಲ್ಲಿಸಿ ಆರೇಳು ತಿಂಗಳು ಕಳೆದರೂ ಅನು ಮೋದಿಸಿ, ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡಿರುವುದು ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಳವಾಗಲು ಕಾರಣವಾಗುವ ಅಪಾಯವಿದೆ. ರಾಜ್ಯದ ಹಲವು ನೀರಾವರಿ ಯೋಜನೆಗಳು ವಿಳಂಬ ಧೋರಣೆಯಿಂದಾಗಿಯೇ ಕುಂಟುತ್ತಾ ಸಾಗಿವೆ.

ಆರಂಭದ ಅಂದಾಜು ವೆಚ್ಚದ ಹತ್ತಾರು ಪಟ್ಟು ಹೆಚ್ಚು ಮೊತ್ತವನ್ನು ವೆಚ್ಚ ಮಾಡಬೇಕಾದ ಸ್ಥಿತಿ ಎದುರಾಗಿದ್ದು, ನೀರಾವರಿ ಯೋಜನೆಗಳ ಭಾರವನ್ನು ತಡೆದುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ. ಈಗ ಅವುಗಳ ಪಟ್ಟಿಗೆ ಎತ್ತಿನ ಹೊಳೆ ಯೋಜನೆಯೂ ಸೇರಿಕೊಳ್ಳಲು ಸರ್ಕಾರವೇ ಅವಕಾಶ ಕಲ್ಪಿಸುತ್ತಿರುವುದು ಸಮಂಜಸವಲ್ಲ. ಎತ್ತಿನ ಹೊಳೆ ಯೋಜನಾ ವ್ಯಾಪ್ತಿಯಲ್ಲಿರುವ ಬಹುತೇಕ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯಬೇಕಾದ ದುಃಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವುದಕ್ಕೆ ರೂಪಿಸಿರುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬಯಲುಸೀಮೆಯ ಜಿಲ್ಲೆಗಳ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಪೂರೈಸಬೇಕಾದ ಗುರುತರವಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಯೋಜನೆಯನ್ನು ಪೂರ್ಣಗೊಳಿಸುವುದರಲ್ಲಿನ ವಿಳಂಬವು ಬಯಲುಸೀಮೆಯ ಜಿಲ್ಲೆಗಳ ಜನರು ಗುಣಮಟ್ಟದ ಕುಡಿಯುವ ನೀರನ್ನು ಬಳಸುವ ಅವಕಾಶದಿಂದ ವಂಚಿತರಾಗಲು ಕಾರಣ ವಾಗುತ್ತದೆ.

ಈ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಅನಾದರ ಸಲ್ಲದು. ವಿಳಂಬ ಧೋರಣೆಯು ಭವಿಷ್ಯದ ದಿನಗಳಲ್ಲಿ ಬೊಕ್ಕಸದ ಮೇಲೆ ಬೃಹತ್‌ ಹೊರೆ ಬೀಳಲು ಕಾರಣವಾಗುತ್ತದೆ ಎಂಬ ಎಚ್ಚರಿಕೆಯಿಂದ ಸರ್ಕಾರ ಕೆಲಸ ಮಾಡಬೇಕು. ಕೆಲಸ ಮುಗಿಸಿದ ಗುತ್ತಿಗೆದಾರರಿಗೆ ತಿಂಗಳುಗಟ್ಟಲೆ ಬಿಲ್‌ ಪಾವತಿಸದೆ ಸತಾಯಿಸುವ ಧೋರಣೆಗೆ ವಿದಾಯ ಹೇಳಬೇಕು. ಎತ್ತಿನಹೊಳೆ ಯೋಜನೆಗೆ ಸಕಾಲದಲ್ಲಿ ಅನುದಾನ ಒದಗಿಸಿ, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಈಗ ಬಾಕಿ ಇರುವ ₹ 3,600 ಕೋಟಿ ಮೊತ್ತದ ಬಿಲ್‌ಗಳ ಪಾವತಿಗೆ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಬಿಲ್‌ ಪಾವತಿಸುವುದರ ಜತೆಗೆ ತ್ವರಿತವಾಗಿ ಎಲ್ಲ ಸ್ಥಳಗಳಲ್ಲೂ ಕೆಲಸ ಪುನಾರರಂಭಿಸಲು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿಯೂ ಸರ್ಕಾರದ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT