ADVERTISEMENT

ಸಂಪಾದಕೀಯ: ಚುನಾವಣೆ ಪೂರ್ಣಗೊಂಡಿದೆ ಗ್ರಾಮಗಳ ಅಭಿವೃದ್ಧಿಯೇ ಗುರಿಯಾಗಲಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST
   

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುತ್ತಿರುವ 5,728 ಗ್ರಾಮ ಪಂಚಾಯಿತಿಗಳ ಆಡಳಿತವು ಐದು ತಿಂಗಳುಗಳಿಂದ ಆಡಳಿತಾಧಿಕಾರಿಗಳ ಹಿಡಿತದಲ್ಲಿ ಇತ್ತು. ಕೊರೊನಾ ವೈರಸ್‌ ಹರಡುವ ಭೀತಿಯ ನಡುವೆಯೂ ರಾಜ್ಯ ಚುನಾವಣಾ ಆಯೋಗವು ಜಿಲ್ಲಾಡಳಿತಗಳ ಮೂಲಕ ಗ್ರಾಮ ಪಂಚಾಯಿತಿಗಳ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ 2020ರ ಜುಲೈನಲ್ಲೇ ಅಂತ್ಯಗೊಂಡಿತ್ತು. ರಾಜ್ಯ ಸರ್ಕಾರ ಚುನಾವಣೆಗೆ ಹಿಂದೇಟು ಹಾಕಿದರೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯ ಮೂಲಕ ಹೈಕೋರ್ಟ್‌ ಮಧ್ಯಪ್ರವೇಶಿಸಿದ್ದು ಮತ್ತು ಸ್ವತಃ ರಾಜ್ಯ ಚುನಾವಣಾ ಆಯೋಗವೇ ಆಸಕ್ತಿ ವಹಿಸಿದ್ದು ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುವುದು ಇನ್ನಷ್ಟು ವಿಳಂಬವಾಗುವುದನ್ನು ತಡೆಯಿತು.

ಒಂದು ತಿಂಗಳಿನಿಂದ ಎಲ್ಲ ಗ್ರಾಮಗಳೂ ಪಂಚಾಯಿತಿ ಚುನಾವಣೆಯ ಅಖಾಡಗಳಾಗಿ ಪರಿವರ್ತನೆ ಆಗಿದ್ದವು. ಕಾನೂನಿನ ಪ್ರಕಾರ ಗ್ರಾಮ ಪಂಚಾಯಿತಿ ಚುನಾವಣೆಯು ‘ಪಕ್ಷಾತೀತ’. ಆದರೆ, ವಾಸ್ತವಿಕವಾಗಿ ಎಲ್ಲ ಕಡೆಗಳಲ್ಲೂ ಪಕ್ಷಗಳ ನೆಲೆಗಟ್ಟಿನಲ್ಲೇ ಸ್ಪರ್ಧೆ ನಡೆದಿದೆ. ಮತ ಎಣಿಕೆಯ ಬಳಿಕ ಎಲ್ಲ ರಾಜಕೀಯ ಪಕ್ಷಗಳೂ ಬಹಿರಂಗವಾಗಿಯೇ ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವನ್ನು ಘೋಷಿಸಿಕೊಳ್ಳುತ್ತಿವೆ. ಚುನಾವಣೆಯ ಕಾರಣದಿಂದಾಗಿಯೇ ಕೆಲವೆಡೆ ಗ್ರಾಮಗಳು ಒಡೆದ ಮನೆಗಳಂತಾಗಿವೆ. ಆದರೂ, ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಜನತಂತ್ರದ ಈ ಹಬ್ಬವನ್ನು ಯಶಸ್ವಿಗೊಳಿಸಿದ್ದಾರೆ.

ADVERTISEMENT

ಕೋವಿಡ್‌ ಸಂಕಷ್ಟ ಮತ್ತು ಐದು ತಿಂಗಳಿನಿಂದ ಚುನಾಯಿತ ಆಡಳಿತದ ಅನುಪಸ್ಥಿತಿಯಿಂದಾಗಿ ಗ್ರಾಮ ಪಂಚಾಯಿತಿಗಳ ಮುಂದೆ ಈಗ ಬೆಟ್ಟದಷ್ಟು ಸವಾಲುಗಳಿವೆ. ಕೋವಿಡ್‌ ಕಾರಣದಿಂದ ಹಳ್ಳಿಗಳ ಕಡೆಗೆ ಆರಂಭವಾಗಿರುವ ಮರು ವಲಸೆಯು ಗ್ರಾಮ ಪಂಚಾಯಿತಿಗಳ ಮುಂದೆ ಬರುವ ಬೇಡಿಕೆಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದೆ. ಈಗ ಎಲ್ಲರೊಂದಿಗೆ ಕೈಜೋಡಿಸಿ ಗ್ರಾಮಗಳ ಅಭಿವೃದ್ಧಿಯ ರಥವನ್ನು ಮುಂದಕ್ಕೆ ಎಳೆಯಬೇಕಾದ ಗುರುತರವಾದ ಹೊಣೆಗಾರಿಕೆಯು ಚುನಾವಣೆಯಲ್ಲಿ ಗೆದ್ದವರ ಮೇಲಿದೆ. ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಯಾವುದೇ ವಿವಾದಕ್ಕೆ ಆಸ್ಪದ ನೀಡದಂತೆ, ಸಕಾಲಕ್ಕೆ ನಿಗದಿಗೊಳಿಸಿ ಸ್ಥಳೀಯ ಸರ್ಕಾರಗಳಿಗೆ ಬಲ ತುಂಬುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ.

ಮರು ವಲಸೆಯ ಕಾರಣದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆಗಳ ಸುಧಾರಣೆ, ವಸತಿ ಯೋಜನೆಗಳ ಅನುಷ್ಠಾನದಂತಹ ಪ್ರಮುಖವಾದ ಕರ್ತವ್ಯಗಳನ್ನು ಗ್ರಾಮ ಪಂಚಾಯಿತಿಗಳು ನಿಭಾಯಿಸಬೇಕಿದೆ. 15ನೇ ಹಣಕಾಸು ಆಯೋಗದ ಅನುದಾನದಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳು ಹಲವು ತಿಂಗಳುಗಳ ಹಿಂದೆ ಸಲ್ಲಿಸಿರುವ ಕ್ರಿಯಾ ಯೋಜನೆಗಳಿಗೆ ಇನ್ನೂ ಜಿಲ್ಲಾ ಪಂಚಾಯಿತಿಗಳ ಅನುಮೋದನೆ ದೊರಕಿಲ್ಲ. ವಸತಿ ಯೋಜನೆಗಳ ಅನುಷ್ಠಾನದಲ್ಲಿ ಒಂದು ವರ್ಷದಿಂದ ಯಾವುದೇ ಪ್ರಗತಿಯೂ ಆಗಿಲ್ಲ. ಈ ಎಲ್ಲವೂ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮಗಳ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿವೆ.

ಗ್ರಾಮ ಪಂಚಾಯಿತಿಗಳಿಗೆ ಬಾಕಿ ಇರುವ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವ ಹಾಗೂ ಕ್ರಿಯಾ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ವೇಗ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಕೋವಿಡ್‌ ಪೂರ್ವದಲ್ಲಿ ಇದ್ದ ಗ್ರಾಮಗಳ ಪರಿಸ್ಥಿತಿ ಈಗ ಬದಲಾಗಿದೆ. ಜನಸಂಖ್ಯೆ, ಬೇಡಿಕೆ, ಸಮಸ್ಯೆಗಳು ಎಲ್ಲವೂ ಹೆಚ್ಚಿವೆ. ಅವುಗಳನ್ನು ಆಧರಿಸಿಯೇ ಗ್ರಾಮ ಪಂಚಾಯಿತಿಗಳ ಆಡಳಿತ ವ್ಯವಸ್ಥೆಯೂ ಕೆಲಸ ಮಾಡಬೇಕಾಗಿದೆ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ನೈಜ ಅರ್ಥದಲ್ಲಿ ಸಾಕಾರಗೊಳಿಸಲು ಮತ್ತು ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಪ್ರದೇಶದ ದೊಡ್ಡ ಸಂಖ್ಯೆಯ ಜನರ ನೆರವಿಗೆ ನಿಲ್ಲುವುದಕ್ಕಾಗಿ ಕಿಂಚಿತ್ತೂ ವಿಳಂಬ ಮಾಡದೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಜತೆಯಲ್ಲೇ ಈಗಿನ ಅಗತ್ಯ, ಅನಿವಾರ್ಯವನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಮ ಪಂಚಾಯಿತಿಗಳಿಗೆ ಹಿಂದಿಗಿಂತಲೂ ಹೆಚ್ಚು ಆರ್ಥಿಕ ಬಲವನ್ನು ತುಂಬುವ ಕೆಲಸ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.