ಸಂಪಾದಕೀಯ
ಬಿಹಾರ ರಾಜ್ಯದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಕ್ರಿಯೆಯು ಕೊನೆಗೊಂಡಿದೆ. ಈ ಪ್ರಕ್ರಿಯೆಯ ಮೂಲಕ ಕಂಡುಕೊಂಡ ಅಂಶಗಳ ಬಗ್ಗೆ, ಅವುಗಳ ಪರಿಣಾಮದ ಬಗ್ಗೆ ಚರ್ಚೆಗಳು ಮುಂದೆಯೂ ನಡೆಯುತ್ತವೆ. ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಹೇಗೆ ಮಾಡಬಾರದು ಎಂಬ ಪಾಠದ ಬಗ್ಗೆಯೂ ಚರ್ಚೆಗಳು ನಡೆಯಲಿವೆ. ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಅಂತಿಮ ಪಟ್ಟಿಯಲ್ಲಿ ಒಟ್ಟು 7.42 ಕೋಟಿ ಹೆಸರುಗಳು ಇವೆ. ಇದು ಜೂನ್‌ನಲ್ಲಿ ಪ್ರಕಟಿಸಿದ್ದ ಪಟ್ಟಿಯಲ್ಲಿ ಇದ್ದ ಸಂಖ್ಯೆಗೆ ಹೋಲಿಸಿದರೆ ಶೇಕಡ 6ರಷ್ಟು ಕಡಿಮೆ. ಆಗ ಪ್ರಕಟಿಸಿದ್ದ ಪಟ್ಟಿಯಲ್ಲಿ 7.89 ಕೋಟಿ ಹೆಸರುಗಳು ಇದ್ದವು. ಕರಡು ಪಟ್ಟಿಯಲ್ಲಿ ಇದ್ದ ಸರಿಸುಮಾರು 65 ಲಕ್ಷ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ. ಆ ಹೆಸರಿನ ವ್ಯಕ್ತಿಗಳು ಬೇರೊಂದು ಸ್ಥಳಕ್ಕೆ ವಲಸೆ ಹೋಗಿರಬಹುದು ಅಥವಾ ಮೃತಪಟ್ಟಿರಬಹುದು ಅಥವಾ ಅವರು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಇದ್ದಿರಬಹುದು ಎನ್ನಲಾಗಿದೆ. ಆಗಸ್ಟ್ 1ರಂದು ಪ್ರಕಟವಾದ ಪಟ್ಟಿಯಲ್ಲಿ ಒಟ್ಟು 7.24 ಕೋಟಿ ಮತದಾರರ ಹೆಸರುಗಳು ಇದ್ದವು. ಈ ಪೈಕಿ 3.66 ಲಕ್ಷ ಹೆಸರುಗಳು ಅನರ್ಹವಾಗಿವೆ ಎಂದು ಅವುಗಳನ್ನು ಕೈಬಿಡಲಾಗಿದೆ. 21.53 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಆರಂಭದಲ್ಲಿ ಭೀತಿ, ಕಳವಳ ವ್ಯಕ್ತವಾಗಿತ್ತಾದರೂ, ಅಂತಿಮವಾಗಿ ಪ್ರಕಟವಾಗಿರುವ ಪಟ್ಟಿಯು ಅಂತಹ ಆತಂಕಗಳ ಅಗತ್ಯ ಇರಲಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ವಾದಿಸಬಹುದು. ಆದರೆ, ಬೇರೆ ಬೇರೆ ರೀತಿಗಳಲ್ಲಿ ಚುನಾವಣಾ ಆಯೋಗದ ಮೇಲೆ ತಂದ ಒತ್ತಡವು ಈ ಪ್ರಕ್ರಿಯೆಯು ಸರಿಯಾಗಿ ಆಗುವಂತೆ ಮಾಡಿತು, ಪ್ರಕ್ರಿಯೆಯ ಫಲವು ಕೆಡದಂತೆ ಆಯಿತು ಎಂದು ಹೇಳುವುದು ಹೆಚ್ಚು ಸೂಕ್ತವಾಗುತ್ತದೆ.
ವಿರೋಧ ಪಕ್ಷಗಳು ಆರಂಭಿಸಿದ ಅಭಿಯಾನ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಮಾಜದ ವಿವಿಧ ಸಂಘಟನೆಗಳು ಪಾಲ್ಗೊಂಡ ಬಗೆ, ಈ ಪ್ರಕ್ರಿಯೆಯ ಮೇಲೆ ಹಲವು ಮಾಧ್ಯಮಗಳು ಹದ್ದಿನ ಕಣ್ಣು ಇರಿಸಿದ್ದುದು, ಇವೆಲ್ಲಕ್ಕಿಂತ ಮಿಗಿಲಾಗಿ ಸುಪ್ರೀಂಕೋರ್ಟ್ ಮಹತ್ವದ ಸಂದರ್ಭದಲ್ಲಿ ಮಾಡಿದ ಮಧ್ಯಪ್ರವೇಶ, ಈ ಪ್ರಕ್ರಿಯೆಯಿಂದಾಗಿ ಆಗಬಹುದಾಗಿದ್ದ ಸಮಸ್ಯೆಯನ್ನು ಕಡಿಮೆ ಮಾಡಿದವು. ಎಸ್‌ಐಆರ್ ನಡೆಸಲು ಆಯೋಗವು ನಿಗದಿ ಮಾಡಿದ ಸಮಯವೇ ಪ್ರಶ್ನಾರ್ಹವಾಗಿತ್ತು. ವಿಧಾನಸಭಾ ಚುನಾವಣೆಯು ಬಹಳ ಹತ್ತಿರವಾಗಿದ್ದ ಹೊತ್ತಿನಲ್ಲಿ ಇದನ್ನು ನಡೆಸಲು ತೀರ್ಮಾನಿಸಲಾಯಿತು. ಅಂದರೆ, ಪ್ರಕ್ರಿಯೆಯನ್ನು ಸರಿಯಾಗಿ ನಡೆಸಲು ಹಾಗೂ ಲೋಪಗಳನ್ನು ತಿದ್ದಿಕೊಳ್ಳಲು ಹೆಚ್ಚಿನ ಸಮಯವೇ ಉಳಿಯುತ್ತಿರಲಿಲ್ಲ. ಕೋರ್ಟ್‌ನ ಮಧ್ಯಪ್ರವೇಶದ ಕಾರಣದಿಂದಾಗಿ ಕೆಲವು ಮಹತ್ವದ ತತ್ತ್ವಗಳು ಮುನ್ನೆಲೆಗೆ ಬಂದವು. ಇವನ್ನು ಮುಂದಿನ ದಿನಗಳಲ್ಲಿ ಮಾರ್ಗದರ್ಶಿಯಾಗಿ ಪರಿಗಣಿಸಬೇಕು. ಎಸ್‌ಐಆರ್ ನಡೆಸಲು ಚುನಾವಣಾ ಆಯೋಗ ಹೊಂದಿರುವ ಅಧಿಕಾರವನ್ನು ಯಾರೂ ಪ್ರಶ್ನಿಸಲಿಲ್ಲ. ಆದರೆ ಅದನ್ನು ಸರಿಯಾಗಿ, ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದರು. ಅರ್ಹರನ್ನು ಮತದಾರರ ಪಟ್ಟಿಗೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವುದು ಪರಿಷ್ಕರಣೆಯ ಉದ್ದೇಶವಾಗಿರಬೇಕೇ ವಿನಾ ಎಸ್‌ಐಆರ್‌ನ ಮೂಲ ಯೋಜನೆಯಲ್ಲಿ ಇದ್ದಂತೆ ಹೆಸರನ್ನು ತೆಗೆದುಹಾಕುವುದು ಉದ್ದೇಶ ಆಗಿರಬಾರದು ಎಂಬ ಅಂಶವು ಮುನ್ನೆಲೆಗೆ ಬಂತು. ಪೌರತ್ವವನ್ನು ಸಾಬೀತು ಮಾಡಬೇಕಾದ ಹೊಣೆಯನ್ನು ಮತದಾರರ ಮೇಲೆ ಹೊರಿಸಬಾರದು. ಪೌರನೊಬ್ಬ ಮತದಾರ ಎಂಬುದನ್ನು ಸಾಬೀತು ಮಾಡಬೇಕಿರುವುದು ಪ್ರಭುತ್ವದ ಹೊಣೆಯಾಗುತ್ತದೆ, ಆ ಹೊಣೆಯನ್ನು ಪ್ರಜೆಯ ಮೇಲೆ ಹೊರಿಸಬಾರದು. ಆಧಾರ್ ಸಂಖ್ಯೆಯನ್ನು ಸೂಕ್ತ ದಾಖಲೆ ಎಂದು ಪರಿಗಣಿಸುವಂತೆ ಕೋರ್ಟ್ ಹೇಳಿದ್ದೂ ಬಹಳ ದೊಡ್ಡ ಪರಿಣಾಮ ಉಂಟುಮಾಡಿತು. ಏಕೆಂದರೆ ಚುನಾವಣಾ ಆಯೋಗ ಹೇಳಿದ್ದ ಬಹುತೇಕ ದಾಖಲೆಗಳನ್ನು ಒದಗಿಸುವುದು ಬಿಹಾರದ ಜನರಿಗೆ ಕಷ್ಟದ ಕೆಲಸವಾಗುತ್ತಿತ್ತು.
ಅಂತಿಮ ಪಟ್ಟಿಯಲ್ಲಿ ಕಂಡಿರುವಂತೆ, ಹೆಸರುಗಳನ್ನು ತೆಗೆದುಹಾಕಿರುವುದಕ್ಕೆ ಮುಖ್ಯ ಕಾರಣಗಳು ಸಾವು, ವಲಸೆ ಹಾಗೂ ಹೆಸರುಗಳ ಪುನರಾವರ್ತನೆ. ಲಭ್ಯವಿರುವ ದತ್ತಾಂಶಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳ ಹೆಸರು, ನುಸುಳುಕೋರರ ಹೆಸರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ದೇಶದ ಚುನಾವಣೆಗಳಲ್ಲಿ ವಿದೇಶಿಯರು, ನುಸುಳುಕೋರರು ಪ್ರಭಾವ ಬೀರುತ್ತಿದ್ದಾರೆ ಎಂಬ ವಾದವನ್ನು ಇದು ಸುಳ್ಳುಮಾಡುವಂತಿದೆ. ಪ್ರಜೆಗಳ ಹಕ್ಕುಗಳ ಮೇಲೆ ಆಕ್ರಮಣ ನಡೆಯದಂತೆ ನೋಡಿಕೊಳ್ಳುವಲ್ಲಿ ಪ್ರಜಾತಾಂತ್ರಿಕ ಕಣ್ಗಾವಲಿನ ಮಹತ್ವ ಏನು ಎಂಬುದನ್ನು ಬಿಹಾರದ ಎಸ್‌ಐಆರ್ ಪ್ರಕ್ರಿಯೆಯು ಹೇಳಿದೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಕೂಡ ತಪ್ಪು ಹೆಜ್ಜೆಯನ್ನು ಇರಿಸಬಹುದು ಎಂಬುದನ್ನು ಇದು ಹೇಳಿದೆ. ಎಸ್‌ಐಆರ್‌ನಂತಹ ಪ್ರಕ್ರಿಯೆಯನ್ನು ದೇಶದ ಇತರೆಡೆಗಳಲ್ಲಿಯೂ ನಡೆಸುವ ಉದ್ದೇಶವು ಆಯೋಗಕ್ಕೆ ಇದ್ದರೆ, ಬಿಹಾರದಲ್ಲಿನ ಅನುಭವದಿಂದ ಅದು ಪಾಠ ಕಲಿತುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.