ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಬದಲಿಗೆ ಮತಪತ್ರಗಳನ್ನು ಬಳಕೆ ಮಾಡಬೇಕು ಎಂದು ರಾಜ್ಯ ಸಚಿವ ಸಂಪುಟವು ಶಿಫಾರಸು ಮಾಡಿದೆ. ಇದು ರಾಜಕೀಯವಾಗಿ ಬಹಳ ಮಹತ್ವದ ಕ್ರಮ. ಇವಿಎಂ ಬಳಕೆ ಮಾಡಿದಾಗ, ಅವುಗಳಲ್ಲಿ ದಾಖಲಾಗುವ ವಿವರಗಳನ್ನು ಬದಲಾಯಿಸಬಹುದು, ಅದು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ ನಂತರದಲ್ಲಿ ರಾಜ್ಯ ಸರ್ಕಾರವು ಈ ಶಿಫಾರಸು ಮಾಡಿದೆ. ಆದರೆ, ನಿಜವಾದ ಪರೀಕ್ಷೆಯು ಮುಂದಿನ ದಿನಗಳಲ್ಲಿ ಆಗಬೇಕಿದೆ: ಮತಪತ್ರಗಳನ್ನು ಬಳಸಿ ನಡೆಸುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿದ್ದರೆ ಆ ಫಲಿತಾಂಶವನ್ನು ಪಕ್ಷವು ಒಪ್ಪಿಕೊಳ್ಳುತ್ತದೆಯೇ? ಅಥವಾ ಪಕ್ಷವು ಕಟ್ಟುವ ಸಂಕಥನವು ಬದಲಾವಣೆ ಕಾಣುತ್ತದೆಯೇ? ಚುನಾವಣಾ ಪ್ರಕ್ರಿಯೆಯ ಮೇಲೆ ಜನರು ಇರಿಸಿರುವ ವಿಶ್ವಾಸವು ಚುನಾವಣಾ ಫಲಿತಾಂಶ ವನ್ನಷ್ಟೇ ಆಧರಿಸಿ ಇರಲಾರದು; ಚುನಾವಣಾ ಪ್ರಕ್ರಿಯೆಯನ್ನು ನಡೆಸುವ ಸಂಸ್ಥೆಗಳ ಸಾಮರ್ಥ್ಯ ಹಾಗೂ ಇಡೀ ಚುನಾವಣಾ ಪ್ರಕ್ರಿಯೆಯು ಎಷ್ಟು ಪ್ರಾಮಾಣಿಕವಾಗಿ ನಡೆದಿದೆ ಎಂಬುದನ್ನು ಆಧರಿಸಿ ಆ ವಿಶ್ವಾಸವು ರೂಪುಗೊಳ್ಳುತ್ತದೆ.
ಮತಪತ್ರಗಳು ಮತದಾನ ನಡೆದಿರುವುದಕ್ಕೆ ಕಣ್ಣಿಗೆ ಕಾಣುವಂತಹ ಸಾಕ್ಷ್ಯವೊಂದನ್ನು ಒದಗಿಸುತ್ತವೆ, ಆ ಮೂಲಕ ಮತದಾರರ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಅವುಗಳ ಪರವಾಗಿ ಇರುವವರು ವಾದಿಸುತ್ತಾರೆ. ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಿದಾಗ, ಮತಪೆಟ್ಟಿಗೆಗಳಲ್ಲಿ ದಾಖಲಾದ ವಿವರಗಳನ್ನು ಎಲ್ಲೋ ಕುಳಿತು ಬದಲಾಯಿಸಲು ಆಗುವುದಿಲ್ಲ, ತಂತ್ರಾಂಶದ ಸಮಸ್ಯೆಯು ಇವುಗಳನ್ನು ಕಾಡುವುದಿಲ್ಲ, ಅಗೋಚರವಾಗಿ ವಿವರಗಳನ್ನು ತಿರುಚಿದ ಅನುಮಾನಕ್ಕೆ ಆಸ್ಪದ ಇರುವುದಿಲ್ಲ. ವಿವಾದ ಸೃಷ್ಟಿಯಾದಲ್ಲಿ, ಮತಪತ್ರಗಳನ್ನು ಮತ್ತೆ ಎಣಿಕೆ ಮಾಡಬಹುದು. ಇವಿಎಂಗಳ ಜೊತೆ ಮತದಾನ ದೃಢೀಕರಣ ರಶೀದಿ ಯಂತ್ರಗಳ (ವಿವಿಪ್ಯಾಟ್) ಬಳಕೆ ಕೂಡ ಆಗಿರುತ್ತದೆಯಾದರೂ, ಸಾಂಪ್ರದಾಯಿಕ ಮತಪತ್ರಗಳು ಮೂಡಿಸುವ ವಿಶ್ವಾಸವನ್ನು ಈ ಯಂತ್ರಗಳು ಮೂಡಿಸುವುದಿಲ್ಲ ಎಂಬುದು ಟೀಕಾಕಾರರ ವಾದ. ಆದರೆ, ಮತಪತ್ರಗಳು ಕೂಡ ದೋಷರಹಿತ ಅಲ್ಲ. ಮತಪತ್ರಗಳನ್ನು ಬಳಸಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದಾಗ ಚುನಾವಣಾ ಮತಗಟ್ಟೆಗಳನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದ ನಿದರ್ಶನಗಳು ಇವೆ, ಮತ ಪೆಟ್ಟಿಗೆಗಳಲ್ಲಿ ಅರ್ಹ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತಪತ್ರಗಳು ಬೀಳಬಹುದಾದ ಸಾಧ್ಯತೆಯೂ ಇರುತ್ತದೆ. ಇವಿಎಂ ಬಳಕೆ ಶುರುವಾದ ನಂತರದಲ್ಲಿ ಈ ಬಗೆಯ ಅಕ್ರಮಗಳು ಗಣನೀಯವಾಗಿ ಕಡಿಮೆ ಆಗಿವೆ. ಮತಪತ್ರಗಳನ್ನು ಎಣಿಕೆ ಮಾಡುವ ಪ್ರಕ್ರಿಯೆ ನಿಧಾನದ್ದು ಹಾಗೂ ಅದಕ್ಕೆ ಹೆಚ್ಚು ಹಣ ವೆಚ್ಚವಾಗುತ್ತದೆ ಮತ್ತು ಅದರಲ್ಲಿ ಲೋಪಗಳು ನುಸುಳುವ ಸಾಧ್ಯತೆ ಇರುತ್ತದೆ. ಕೋಟಿಗಳ ಸಂಖ್ಯೆಯಲ್ಲಿ ಮತಪತ್ರಗಳನ್ನು ಮುದ್ರಿಸುವುದರಿಂದ ಪರಿಸರದ ಮೇಲೆ ಆಗುವ ಪರಿಣಾಮ ಕೂಡ ಗಣನೀಯ. ಮತ ಚಲಾವಣೆ ಸಂದರ್ಭದಲ್ಲಿ ಮತದಾರರು ಸರಿಯಾಗಿ ಗುರುತು ಮಾಡದೆ ಇದ್ದರೆ, ಅನರ್ಹ ಮತಗಳ ಸಂಖ್ಯೆ ಹೆಚ್ಚಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಮತಪತ್ರಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಅಮೆರಿಕ, ಕೆನಡಾ, ಬ್ರಿಟನ್, ಜರ್ಮನಿ, ಜಪಾನ್ ಇಂದಿಗೂ ಮತಪತ್ರಗಳನ್ನು ಬಳಸುತ್ತವೆ. ಆದರೆ, ಅದರ ಜೊತೆ ಬೇರೆ ಬೇರೆ ಪ್ರಮಾಣದಲ್ಲಿ ತಾಂತ್ರಿಕ ನೆರವನ್ನು ಪಡೆದುಕೊಳ್ಳುತ್ತವೆ. ಮತಪತ್ರಗಳ ಬಳಕೆಯಲ್ಲಿ ಎದುರಾದ ಸವಾಲುಗಳನ್ನು ನಿಭಾಯಿಸಲು ಭಾರತವು ಇವಿಎಂಗಳನ್ನು ಭಾರೀ ಪ್ರಮಾಣದಲ್ಲಿ ಬಳಸಲು ಆರಂಭಿಸಿತು. ಆದರೆ, ಮತಪತ್ರಗಳ ಬಳಕೆಗೆ ಕರ್ನಾಟಕ ಮತ್ತೆ ಒಲವು ತೋರಿರುವುದು, ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದ ಸುಧಾರಣೆಯೊಂದನ್ನು ಕೈಬಿಡುವ ಕೆಲಸಕ್ಕೆ ಕೈಹಾಕಿದಂತಿದೆ. ಚುನಾವಣಾ ಪ್ರಕ್ರಿಯೆಗೆ ವಿಶ್ವಾಸಾರ್ಹತೆ ಸಿಗುವುದು ಅಲ್ಲಿ ಮತಪತ್ರವನ್ನು ಬಳಕೆ ಮಾಡಲಾಗಿದೆಯೋ, ಮತಯಂತ್ರಗಳನ್ನು ಬಳಕೆ ಮಾಡಲಾಗಿದೆಯೋ ಎಂಬುದನ್ನು ಆಧರಿಸಿ ಇರುವುದಿಲ್ಲ. ಬದಲಿಗೆ, ಇಡೀ ಪ್ರಕ್ರಿಯೆಯು ಎಷ್ಟು ಪಾರದರ್ಶಕವಾಗಿ ಇತ್ತು, ರಾಜಕೀಯ ಪಕ್ಷಗಳು ಜನರ ತೀರ್ಮಾನವನ್ನು ಹೇಗೆ ಒಪ್ಪಿಕೊಂಡವು ಎಂಬುದನ್ನು ಅದು ಆಧರಿಸಿರುತ್ತದೆ. ಲೋಪಗಳನ್ನು ಕಡಿಮೆ ಮಾಡಲು ತಂತ್ರಜ್ಞಾನವು ನೆರವು ನೀಡಬಹುದು, ಮತಪತ್ರವು ಕಣ್ಣಿಗೆ ಕಾಣುವಂತಹ ವಿಶ್ವಾಸಾರ್ಹ ಸಾಕ್ಷ್ಯವೊಂದನ್ನು ಒದಗಿಸುತ್ತದೆ. ಹೀಗಿದ್ದರೂ, ರಾಜಕೀಯ ಪಕ್ಷಗಳು ನ್ಯಾಯಸಮ್ಮತವಾಗಿ ನಡೆದುಕೊಳ್ಳದೆ ಇದ್ದರೆ ಇವೆರಡೂ ಲೋಪರಹಿತವಾಗಿ ಉಳಿಯುವುದಿಲ್ಲ. ಯಾರೇ ಗೆಲ್ಲಲಿ, ಯಾರೇ ಸೋಲಲಿ ವಿಶ್ವಾಸವನ್ನು ಹೆಚ್ಚಿಸುವಂತಹ ಸಂಸ್ಥೆಗಳನ್ನು ಕಟ್ಟುವುದು ಹೆಚ್ಚು ಮಹತ್ವದ್ದಾಗುತ್ತದೆ. ಮತಪತ್ರಗಳನ್ನು ರಾಜ್ಯದಲ್ಲಿ ಬಳಕೆ ಮಾಡುವುದರಿಂದ ವಿಶ್ವಾಸ ಹೆಚ್ಚಾಗುತ್ತದೆ ಎಂದಾದರೆ, ಹಾಗೇ ಆಗಲಿ. ಆದರೆ ವಿಶ್ವಾಸ ಹೆಚ್ಚಾಗದೆ ಇದ್ದರೆ ಇವಿಎಂಗಳಿಗೆ ಬೇಡಿಕೆಯು ಮತ್ತೆ ಮುನ್ನೆಲೆಗೆ ಬರುತ್ತದೆ. ಪ್ರಜಾತಂತ್ರ ವ್ಯವಸ್ಥೆಯು ಅನುಮಾನದ ಒತ್ತೆಯಾಳಿನಂತೆ ಆಗಬಾರದು. ವಿಶ್ವಾಸ, ಪಾರದರ್ಶಕತೆ ಮತ್ತು ಜನರ ತೀರ್ಪನ್ನು ಗೌರವಿಸುವ ಕ್ರಮಗಳಿಂದ ಮಾತ್ರ ಪ್ರಜಾತಂತ್ರ ಉಳಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.