ADVERTISEMENT

ಸಂಪಾದಕೀಯ | ಅರಣ್ಯ ಭೂಮಿ ಪರಭಾರೆ ಸಲ್ಲ; ಹೊಣೆ ಮರೆಯದಿರಲಿ ಸರ್ಕಾರ

ಪ್ರಜಾವಾಣಿ ವಿಶೇಷ
Published 2 ಜನವರಿ 2026, 22:48 IST
Last Updated 2 ಜನವರಿ 2026, 22:48 IST
ಸಂಪಾದಕೀಯ
ಸಂಪಾದಕೀಯ   

ಜಾತಿ ಆಧಾರಿತ ಸಂಘಟನೆಗಳಿಗಲ್ಲದೆ ಸರ್ಕಾರಿ ಸಂಸ್ಥೆಗಳಿಗೂ ಬೆಂಗಳೂರಿನ ಹೊರವಲಯದಲ್ಲಿರುವ ಮಾಚೋಹಳ್ಳಿಯ 78 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿದ ರಾಜ್ಯ ಸರ್ಕಾರದ ಕ್ರಮವು ವಿವೇಚನಾರಹಿತವಾದುದು. ಅರಣ್ಯ ಭೂಮಿಯನ್ನು ಪರಭಾರೆ ಮಾಡದಂತೆ ಸುಪ್ರೀಂ ಕೋರ್ಟ್‌ನ ಸ್ಪಷ್ಟ ಸೂಚನೆ ಇದ್ದರೂ ಗುತ್ತಿಗೆ ಆದೇಶ ಹಿಂಪಡೆಯಲು ಸರ್ಕಾರ ಮೀನಮೇಷ ಎಣಿಸುತ್ತಿರುವುದನ್ನು ಗಮನಿಸಿದರೆ, ಅರಣ್ಯ ಸಂರಕ್ಷಣೆಯಲ್ಲಿ ಅದಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದೇ ಭಾವಿಸಬೇಕಾಗುತ್ತದೆ. ಅರಣ್ಯ ಭೂಮಿಯ ಬಳಕೆ ಮತ್ತು ಹಂಚಿಕೆಯ ವಿಷಯದಲ್ಲಿ ಗೋದಾವರ್ಮನ್‌ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಅರಣ್ಯ ಭೂಮಿಯನ್ನು ಪರಭಾರೆ ಮಾಡದಂತೆ ಘಂಟಾಘೋಷವಾಗಿ ಹೇಳಿದೆ. ಹೀಗಿದ್ದೂ, 2017ರಲ್ಲಿ ಆಗ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ, ಕೋರ್ಟ್‌ ಆದೇಶಗಳಿಗೆ ವಿರುದ್ಧವಾಗಿ ವಿವಿಧ ಜಾತಿ ಸಂಘಟನೆಗಳಿಗೆ ಅರಣ್ಯ ಭೂಮಿಯನ್ನು 30 ವರ್ಷಗಳಿಗೆ ಗುತ್ತಿಗೆ ನೀಡಿದೆ. ಹಂಚಿಕೆ ಮಾಡಲಾಗಿರುವ ಭೂಮಿಯನ್ನು ಈಗ ವಾಪಸ್ ಪಡೆಯಲು ಸರ್ಕಾರಕ್ಕೆ ಕಸಿವಿಸಿ ಆಗುತ್ತಿರುವಂತಿದೆ. ಸಮುದಾಯಗಳಿಗೆ ತಾನೇ ಹಂಚಿಕೆ ಮಾಡಿರುವ ಭೂಮಿಯನ್ನು ವಾಪಸ್‌ ಪಡೆದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಭೀತಿ ಅದನ್ನು ಕಾಡುತ್ತಿರುವಂತಿದೆ. ಹೀಗಾಗಿ ಸಚಿವ ಸಂಪುಟದ ಮುಂದೆ ಈ ವಿಷಯ ಹಲವು ಬಾರಿ ಬಂದರೂ ನಿರ್ಣಯ ಕೈಗೊಳ್ಳದೆ ಮುಂದೂಡಲಾಗುತ್ತಿದೆ.

ಬೆಂಗಳೂರಿಗೆ ಹೊಂದಿಕೊಂಡಿರುವ ಮಾಚೋಹಳ್ಳಿಯ ಅರಣ್ಯ ಭೂಮಿಗೆ ಭಾರೀ ಬೆಲೆ ಇದೆ. ಅಲ್ಲಿಂದ ಹತ್ತು ಕಿ.ಮೀ. ದೂರದಲ್ಲಿರುವ ಕೃಷಿ ಭೂಮಿ ಎಕರೆಗೆ ₹5 ಕೋಟಿಯಿಂದ ₹15 ಕೋಟಿ ದರಕ್ಕೆ ಮಾರಾಟವಾಗುತ್ತಿರುವ ಮಾಹಿತಿ ಇದೆ. ಮಾಗಡಿ ರಸ್ತೆಗೆ ನೇರವಾಗಿ ಹೊಂದಿಕೊಂಡಿರುವ ಅರಣ್ಯ ಭೂಮಿಯ ಸುತ್ತಲೂ ವಸತಿ ನಿವೇಶನಗಳಿಗೆ ಸಾಕಷ್ಟು ಬೇಡಿಕೆ ಇದೆ. ನೈಸ್‌ ರಸ್ತೆಯ ವೃತ್ತದಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಈ ಭೂಮಿಯ ಮೌಲ್ಯ ₹2,500 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಎಲ್ಲರ ಕಣ್ಣೂ ಈ ಭೂಮಿಯ ಮೇಲೆ ಬಿದ್ದಿದೆ. ಅದು, ರಿಯಲ್‌ ಎಸ್ಟೇಟ್‌ನ ವಿಷವರ್ತುಲದ ಪಾಲಾಗುವ ಭೀತಿ ಇದೆ. ಜಾತಿ ಆಧಾರಿತ ಸಂಘಟನೆಗಳು, ಮಠ ಸೇರಿ 36 ಸಂಸ್ಥೆಗಳಿಗೆ ತಲಾ ಎರಡೂವರೆ ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂಮಿ ಹಂಚಿಕೆ ಮಾಡಿದ ಕ್ರಮವನ್ನು ಕೋರ್ಟ್‌ನಲ್ಲೂ ಪ್ರಶ್ನಿಸಲಾಗಿದೆ. ಹೀಗಾಗಿ ಹಂಚಿಕೆಯಾಗಿದ್ದ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಯಾವ ಸಂಸ್ಥೆಗೂ ಸಾಧ್ಯವಾಗಿಲ್ಲ. ಈ ಭೂಮಿ, ಇನ್ನೂ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ ಎಂಬುದೊಂದೇ ಸದ್ಯದ ಸಮಾಧಾನದ ಸಂಗತಿ.

ದೇಶದಲ್ಲಿ ಅರಣ್ಯ ನಾಶ ಹೆಚ್ಚುತ್ತಿದೆ ಎನ್ನುವ ಆತಂಕದ ಮಾತುಗಳು ಆಗಾಗ ಕೇಳಿಬರುತ್ತಲೇ ಇವೆ. ಅದಕ್ಕೆ ಸಮರ್ಥನೆ ಎನ್ನುವಂತೆ ಪರಿಸರದಲ್ಲಿ ಭಾರೀ ಏರುಪೇರು ಕಾಣುತ್ತಿದ್ದೇವೆ. ವಾತಾವರಣ ಬಿಸಿಯಾಗುತ್ತಿದೆ, ಮಳೆ ಋತುಗಳಲ್ಲೂ ವ್ಯತ್ಯಾಸಗಳಾಗುತ್ತಿವೆ. ಇದ್ದ ಅರಣ್ಯವನ್ನು ಸಂರಕ್ಷಿಸಿಕೊಳ್ಳುವುದರ ಜತೆಗೆ ಮರ ಬೆಳೆಸುವುದಕ್ಕೆ, ಅರಣ್ಯೀಕರಣಕ್ಕೆ ಒತ್ತು ನೀಡುವ ಗುರುತರ ಹೊಣೆ ಸರ್ಕಾರದ ಮೇಲಿದೆ. ಆದರೆ, ತನ್ನ ಹೊಣೆಗಾರಿಕೆಯನ್ನು ಮರೆತು ಸರ್ಕಾರವು ಈ ರೀತಿ ಅರಣ್ಯ ಭೂಮಿಯನ್ನು ಪರಭಾರೆ ಮಾಡುತ್ತಾ ಹೋದರೆ ನಾಳಿನ ಪ್ರಜೆಗಳಿಗೆ ನಾವು ಎಂತಹ ಪರಿಸರವನ್ನು ಉಳಿಸಲು ಸಾಧ್ಯ? ಆಡಳಿತದ ಹೊಣೆ ಹೊತ್ತವರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಅರಣ್ಯಗಳ ಸ್ಥಿತಿಗತಿ ವರದಿಗಳ ಪ್ರಕಾರ, ಬೆಂಗಳೂರು ಸುತ್ತಲಿನ ಅರಣ್ಯದ ಪ್ರಮಾಣ ತೀವ್ರಗತಿಯಲ್ಲಿ ಕುಗ್ಗುತ್ತಿದೆ. ‘ಹಸಿರೇ ಉಸಿರು, ಅರಣ್ಯವೇ ನಮ್ಮ ಜೀವಾಳ’ ಎಂಬ ಆಕರ್ಷಕ ಘೋಷಣೆಗಳಿಂದ ಅರಣ್ಯ ಉಳಿಯುವುದಿಲ್ಲ, ಬೆಳೆಯುವುದಿಲ್ಲ. ಅದಕ್ಕೆ ಸರ್ಕಾರದ ಮನೋಭಾವ ಬದಲಾಗಬೇಕು. ಅರಣ್ಯ ರಕ್ಷಕನ ಸ್ಥಾನದಲ್ಲಿರುವ ಸರ್ಕಾರವೇ ಮುಂದೆ ನಿಂತು ಭಕ್ಷಕರಿಗೆ ಅನುಕೂಲ ಮಾಡಿಕೊಡುವ ಪ್ರವೃತ್ತಿ ಕೊನೆ ಆಗಬೇಕು. ಇರುವ ಅರಣ್ಯವನ್ನು ಜೋಪಾನವಾಗಿ ಉಳಿಸುವುದು– ಮತ್ತಷ್ಟು ಬೆಳೆಸುವುದು ಎಲ್ಲರ ಸಾಮಾಜಿಕ ಹೊಣೆಗಾರಿಕೆಯೂ, ನಿರ್ವಹಿಸಲೇಬೇಕಾದ ನಾಗರಿಕ ಕರ್ತವ್ಯವೂ ಆಗಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.