ADVERTISEMENT

ಸಂಪಾದಕೀಯ: ಬೆಂಗಳೂರು ಅಭಿವೃದ್ಧಿಗೆ ಎಸ್‌ಪಿವಿ ರಚನೆ; ನಗರಾಡಳಿತ ಮತ್ತಷ್ಟು ಜಟಿಲ?

ಸಂಪಾದಕೀಯ
Published 25 ಫೆಬ್ರುವರಿ 2025, 21:44 IST
Last Updated 25 ಫೆಬ್ರುವರಿ 2025, 21:44 IST
   

ಬೆಂಗಳೂರಿನ ಬೃಹತ್‌ ಮೂಲಸೌಕರ್ಯ ಯೋಜನೆಗಳ ಅನುಷ್ಠಾನ ಮತ್ತು ಮೇಲುಸ್ತುವಾರಿಗಾಗಿ ವಿಶೇಷ ಉದ್ದೇಶ ಘಟಕ (ಎಸ್‌ಪಿವಿ) ಒಂದನ್ನು ಅಸ್ತಿತ್ವಕ್ಕೆ ತರುವ ರಾಜ್ಯ ಸರ್ಕಾರದ ಪ್ರಸ್ತಾವವು ರಾಜಧಾನಿಯ ವ್ಯಾಪ್ತಿಯಲ್ಲಿನ ನಗರಾಭಿವೃದ್ಧಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಸದುದ್ದೇಶದಿಂದ ಕೂಡಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ, ಇದು ಅಧಿಕಾರ ವಿಭಜನೆಯಿಂದಾಗಿ ಹೊಣೆಗಾರಿಕೆಯನ್ನು ದುರ್ಬಲಗೊಳಿಸುವ ಅಪಾಯವನ್ನೂ ಹೊಂದಿದೆ. ಎಸ್‌ಪಿವಿ ರಚನೆಯ ಕುರಿತು ಚರ್ಚೆಗಳು ಮುಂದುವರಿದಿರುವಂತೆಯೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳಿ ಇನ್ನು ಯಾವ ಅಧಿಕಾರ ಉಳಿಯುತ್ತದೆ ಮತ್ತು ನಗರಾಡಳಿತದ ನಿರ್ವಹಣೆಯ ವಿಚಾರದಲ್ಲಿ ಬಿಬಿಎಂಪಿಯ ಪಾತ್ರವೇನು ಎಂಬ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ.

ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಎಂಎಂಆರ್‌ಡಿಎ) ಮಾದರಿಯಲ್ಲಿ ರಚಿಸಲು ಉದ್ದೇಶಿಸಿರುವ ಎಸ್‌ಪಿವಿ ಸ್ಥಾಪನೆಯ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಎಸ್‌ಪಿವಿಯು ಸುರಂಗ ರಸ್ತೆ, ಎಲಿವೇಟೆಡ್‌ ಕಾರಿಡಾರ್‌ಗಳು, ಡಬಲ್‌ ಡೆಕರ್‌ ಮಾರ್ಗಗಳ ನಿರ್ಮಾಣ, ರಸ್ತೆಗಳ ವೈಟ್‌ ಟಾಪಿಂಗ್‌ನಂತಹ ಬೃಹತ್‌ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ಮೇಲುಸ್ತುವಾರಿಯನ್ನು ನಿರ್ವಹಿಸಲಿದೆ.

ರಾಜಕೀಯ ಉದ್ದೇಶಗಳಿಗಾಗಿ ಸೃಷ್ಟಿಸಲಾದ ವಿವಿಧ ಸಂಸ್ಥೆಗಳು ಬೆಂಗಳೂರಿನ ನಗರ ಯೋಜನೆ, ನೀರು ಪೂರೈಕೆ, ಸ್ಥಳೀಯ ಸಾರಿಗೆಯಂತಹ ಹೊಣೆಗಾರಿಕೆ ನಿರ್ವಹಣೆಯ ಜವಾಬ್ದಾರಿಗಳನ್ನು ತೆಗೆದುಕೊಂಡಿವೆ. ಪರಿಣಾಮವಾಗಿ, ಬಿಬಿಎಂಪಿಯ ಅಧಿಕಾರ ವ್ಯಾಪ್ತಿ ಮತ್ತು ಜವಾಬ್ದಾರಿಗಳನ್ನು ಹಂತ ಹಂತವಾಗಿ ಕುಗ್ಗಿಸಲಾಗುತ್ತಿದೆ. 2020ರಲ್ಲಿ ಬೆಂಗಳೂರು ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ ಅಸ್ತಿತ್ವಕ್ಕೆ ತರುವ ಮೂಲಕ ಬಿಬಿಎಂಪಿಯ ಅಧಿಕಾರ ವ್ಯಾಪ್ತಿಯನ್ನು ಇನ್ನಷ್ಟು ಕಡಿತಗೊಳಿಸಲಾಗಿತ್ತು. ಈಗ ಬಿಬಿಎಂಪಿಯ ಜವಾಬ್ದಾರಿಯು ಬೆಂಗಳೂರಿನ ರಸ್ತೆಗಳ ನಿರ್ವಹಣೆಯನ್ನಷ್ಟೇ ಕೇಂದ್ರೀಕರಿಸಿದಂತಿದೆ.

ADVERTISEMENT

ಹೊಸದಾಗಿ ರಚನೆಯಾಗಲಿರುವ ಎಸ್‌ಪಿವಿಗೆ ವಹಿಸಲು ಉದ್ದೇಶಿಸಿರುವ ಜವಾಬ್ದಾರಿಗಳು ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಳಿ ಇವೆ. ಅತ್ಯುತ್ತಮ ಗುಣಮಟ್ಟದ ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ಬೆಂಗಳೂರು ನಗರವನ್ನು ಜಾಗತಿಕ ಮಟ್ಟದ ತಾಣವನ್ನಾಗಿ ಪರಿವರ್ತಿಸುವ ಗುರಿಯನ್ನು ಬಿಡಿಎ ಹೊಂದಿದೆ ಎಂಬುದು ಪ್ರಾಧಿಕಾರದ ಧ್ಯೇಯೋದ್ದೇಶಕ್ಕೆ ಸಂಬಂಧಿಸಿದ ಘೋಷಣೆಯಲ್ಲೇ ಇದೆ. ಸಮಗ್ರ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಉದ್ದೇಶವನ್ನೇ ಮರೆತಂತಿರುವ ಬಿಡಿಎ, ಇತ್ತೀಚಿನ ಕೆಲವು ವರ್ಷಗಳಿಂದ ಬಡಾವಣೆಗಳ ನಿರ್ಮಾಣ ಮತ್ತು ನಿವೇಶನಗಳ ಹಂಚಿಕೆಗೆ ಸೀಮಿತವಾಗಿ ಕೆಲಸ ಮಾಡುತ್ತಿದೆ. ಆ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಿಯಲ್‌ ಎಸ್ಟೇಟ್‌ ಸಂಸ್ಥೆಯಂತಾಗಿ ಬದಲಾಗಿದೆ. ಉದ್ದೇಶಿತ ಎಸ್‌ಪಿವಿ ರಚನೆಯು ಬೆಂಗಳೂರು ನಗರಾಡಳಿತವನ್ನು ಮತ್ತಷ್ಟು ಜಟಿಲಗೊಳಿಸುವ ಸಾಧ್ಯತೆಯೂ ಇದೆ.

ಇದು ಮತ್ತೊಂದು ಸ್ತರದ ಅಧಿಕಾರಿಶಾಹಿಯ ಸೃಷ್ಟಿಗೆ ಕಾರಣವಾಗಲಿದ್ದು, ಜವಾಬ್ದಾರಿಗಳ ಪುನರಾವರ್ತನೆ, ಸ್ಪಷ್ಟತೆಯ ಕೊರತೆ ಮತ್ತು ಕಡತ ವಿಲೇವಾರಿಯಲ್ಲಿನ ವಿಳಂಬಕ್ಕೆ ಎಡೆಮಾಡುವ ಸಾಧ್ಯತೆ ಇದೆ. ಇರುವ ವ್ಯವಸ್ಥೆಯನ್ನು ವಿಭಜಿಸಿ ಹೊಸ ಹೊಸ ಸಂಸ್ಥೆಗಳನ್ನು ಸೃಷ್ಟಿಸುವುದರಿಂದ ಬೆಂಗಳೂರಿನ ಭವಿಷ್ಯ ಉತ್ತಮವಾಗುವುದಿಲ್ಲ. ಆಧುನಿಕ ಮಹಾನಗರವೊಂದರ ಸಮಸ್ಯೆ, ಸವಾಲುಗಳನ್ನು ಪರಿಹರಿಸಬಲ್ಲ ಸಾಮರ್ಥ್ಯವುಳ್ಳ ಸದೃಢ ಹಾಗೂ ವ್ಯವಸ್ಥಿತವಾದ ನಗರಾಡಳಿತ ವ್ಯವಸ್ಥೆಯು ಬೆಂಗಳೂರಿಗೆ ತುರ್ತಾಗಿ ಬೇಕಿದೆ.

ಎಸ್‌ಪಿವಿ ರಚನೆಯು ತಾತ್ಕಾಲಿಕ ಪರಿಹಾರವಾಗಿ ಕಾಣಿಸಬಹುದು. ಆದರೆ, ಬಿಬಿಎಂಪಿಯ ಪಾತ್ರವನ್ನು ಗೌಣಗೊಳಿಸುವ ಪ್ರಯತ್ನವು ಭವಿಷ್ಯದ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫಲವಾಗಿರುವುದು ಹಾಗೂ ಜನರ ವಿಶ್ವಾಸ ಕಳೆದುಕೊಂಡಿರುವುದರಿಂದ ರಾಜ್ಯ ಸರ್ಕಾರವು ಈ ರೀತಿ ಪರ್ಯಾಯ ಹೊಸ ಸಂಸ್ಥೆಗಳ ರಚನೆಗೆ ಮುಂದಾಗುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಸಂಸ್ಥೆಗಳ ವಿಭಜನೆ ಮತ್ತು ಬಹುಹಂತದ ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸುವುದೇ ಈ ಸಮಸ್ಯೆಗೆ ಪರಿಹಾರವಲ್ಲ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಈಗಾಗಲೇ ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಕೊರತೆ ಇದೆ. ಹೀಗೆ ಬಿಬಿಎಂಪಿಯ ಕೆಲಸಗಳನ್ನು ನಿರ್ವಹಿಸಲು ಎಸ್‌ಪಿವಿ ರಚಿಸುವಂತಹ ಕ್ರಮಗಳು ಹೊಣೆಗಾರಿಕೆ ಮತ್ತು ಪಾರದರ್ಶಕತೆ ಮತ್ತಷ್ಟು ಕುಸಿಯಲು ಕಾರಣವಾಗಬಹುದು. ಅಧಿಕಾರಿಶಾಹಿಯಲ್ಲಿ ಮತ್ತಷ್ಟು ಸ್ತರಗಳನ್ನು ಸೃಷ್ಟಿಸುವ ಬದಲಿಗೆ ಬಿಬಿಎಂಪಿಯಲ್ಲಿ ಸುಧಾರಣೆಗಳನ್ನು ತಂದು, ನಗರಾಡಳಿತವನ್ನು ಬಲಪಡಿಸುವುದಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಪಾಲಿಕೆಯ ಅಧಿಕಾರಿಶಾಹಿಯ ಮೇಲೆ ಹಿಡಿತ ಸಾಧಿಸಿ, ಬಿಬಿಎಂಪಿಯ ಕಾರ್ಯನಿರ್ವಹಣೆಯನ್ನು ಸರಿದಾರಿಗೆ ತರಬೇಕು. ನಗರಕ್ಕೆ ಅಗತ್ಯವಿರುವ ಸೇವೆಗಳನ್ನು ಸಮರ್ಪಕವಾಗಿ ಒದಗಿಸಲು ಅನುವಾಗುವಂತೆ ಬಿಬಿಎಂಪಿಯನ್ನು ಸಶಕ್ತಗೊಳಿಸಬೇಕು. ಆಗ ಮಾತ್ರ ಬೆಂಗಳೂರಿನ ನಿಜವಾದ ಸಾಮರ್ಥ್ಯದ ಅರಿವಾಗುತ್ತದೆ ಮತ್ತು ಇದು ಒಂದು ಜಾಗತಿಕ ನಗರವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.