ADVERTISEMENT

ಸಂಪಾದಕೀಯ: ಗಾರ್ಮೆಂಟ್ಸ್‌ ಕಾರ್ಮಿಕರಿಗೆ ತುಟ್ಟಿಭತ್ಯೆ- ವಿಳಂಬ ನೀತಿ ಸಲ್ಲದು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 18:44 IST
Last Updated 7 ಅಕ್ಟೋಬರ್ 2021, 18:44 IST
ಸಂಪಾದಕೀಯ
ಸಂಪಾದಕೀಯ   

ಸಿದ್ಧ ಉಡುಪು ತಯಾರಿಕಾ ಘಟಕಗಳ ನೌಕರರಿಗೆಹೈಕೋರ್ಟ್‌ ನಿರ್ದೇಶನದ ನಂತರವೂ ತುಟ್ಟಿಭತ್ಯೆ ಹೆಚ್ಚಳದ ಅನುಕೂಲ ದೊರಕಿಸಿಕೊಡುವಲ್ಲಿ ರಾಜ್ಯ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯ ದುರದೃಷ್ಟಕರ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚು ತೊಂದರೆ ಅನುಭವಿಸಿದವರಲ್ಲಿ ಗಾರ್ಮೆಂಟ್ಸ್‌ ಕಾರ್ಮಿಕರೂ ಸೇರಿದ್ದಾರೆ. ಕನಿಷ್ಠ ವೇತನ ಪಡೆಯುವ ಈ ನೌಕರರು, ಗಾರ್ಮೆಂಟ್ಸ್‌ ಘಟಕಗಳು ಬಾಗಿಲು ಮುಚ್ಚಿದ ಸಮಯದಲ್ಲಿ ದುಡಿಮೆಯಿಲ್ಲದೆ ಜೀವನೋಪಾಯಕ್ಕಾಗಿ ಪರಿತಪಿಸಿದ್ದರು. ಈಗ ಗಾರ್ಮೆಂಟ್ಸ್‌ ಉದ್ಯಮದ ಚಟುವಟಿಕೆಗಳು ಮತ್ತೆ ಶುರುವಾಗಿದ್ದರೂ, ಒಂದೂವರೆ ವರ್ಷದಿಂದ ಮರೀಚಿಕೆಯಾಗಿರುವ ತುಟ್ಟಿಭತ್ಯೆ ಹೆಚ್ಚಳ ಇನ್ನೂ ಜಾರಿಗೊಂಡಿಲ್ಲ. 2020–21ರ ಗ್ರಾಹಕ ಸೂಚ್ಯಂಕ ದರ ಪರಿಷ್ಕರಣೆ ಪ್ರಕಾರ, ಗಾರ್ಮೆಂಟ್ಸ್‌ ಕಾರ್ಮಿಕರ ತುಟ್ಟಿಭತ್ಯೆಯು 2020ರ ಏಪ್ರಿಲ್‌ನಿಂದಲೇ ದಿನಕ್ಕೆ ₹16.06ರಂತೆ ಏರಿಕೆ ಆಗಬೇಕಾಗಿತ್ತು. ಆದರೆ, ಕೋವಿಡ್‌ ಲಾಕ್‌ಡೌನ್‌ ಕಾರಣ ನೀಡಿ ತುಟ್ಟಿಭತ್ಯೆ ಏರಿಕೆ ಪ್ರಕ್ರಿಯೆಯನ್ನು ಮುಂದೂಡುವಂತೆ ಗಾರ್ಮೆಂಟ್ಸ್‌ ಘಟಕಗಳ ಮಾಲೀಕರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆ ಕೋರಿಕೆಯನ್ನು ಪುರಸ್ಕರಿಸಿದ್ದ ಸರ್ಕಾರ, 2021ರ ಮಾರ್ಚ್‌ 31ರವರೆಗೆ ತುಟ್ಟಿಭತ್ಯೆ ಏರಿಕೆ ಪ್ರಕ್ರಿಯೆಯನ್ನು ಮುಂದೂಡಿತ್ತು. ಇದನ್ನು ಪ್ರಶ್ನಿಸಿ ಕಾರ್ಮಿಕ ಸಂಘಟನೆಗಳು ಹೈಕೋರ್ಟ್‌ ಮೊರೆ ಹೋಗಿದ್ದವು. ಕಾರ್ಮಿಕರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಸರ್ಕಾರದ ಆದೇಶಕ್ಕೆ 2020ರ ಸೆಪ್ಟೆಂಬರ್ 11ರಂದು ತಡೆಯಾಜ್ಞೆ ನೀಡಿ, ಆದೇಶ ವಾಪಸ್‌ ಪಡೆದು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುವಂತೆ ತಿಳಿಸಿತ್ತು. ಹೈಕೋರ್ಟ್‌ ನಿರ್ದೇಶನ ನೀಡಿ ವರ್ಷ ಕಳೆದರೂ ಕಾರ್ಮಿಕರಿಗೆ ಹೆಚ್ಚುವರಿ ತುಟ್ಟಿಭತ್ಯೆ ಪಾವತಿಯಾಗಿಲ್ಲ. ತುಟ್ಟಿಭತ್ಯೆ ನೀಡುವುದರಿಂದಾಗಿ ಕಾರ್ಮಿಕರಿಗೆ ತಿಂಗಳಿಗೆ ₹417.56 ದೊರೆಯಲಿದೆ. ₹7,098 ಹಿಂಬಾಕಿ ಕೂಡ ಅವರಿಗೆ ಬರಬೇಕಾಗಿದೆ. ಗಾರ್ಮೆಂಟ್ಸ್‌ ವಲಯದಲ್ಲಿ ಸುಮಾರು 4 ಲಕ್ಷ ಕಾರ್ಮಿಕರು ದುಡಿಯುತ್ತಿದ್ದು, ಒಟ್ಟು ₹283 ಕೋಟಿಗೂ ಹೆಚ್ಚಿನ ಮೊತ್ತವನ್ನು ಘಟಕಗಳು ಉಳಿಸಿಕೊಂಡಿವೆ. ‘ಗಾರ್ಮೆಂಟ್ಸ್‌ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ; ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಹೇಳಿದ್ದಾರೆ. ಕಾರ್ಮಿಕರ ಬದುಕಿಗೆ ಸಂಬಂಧಿಸಿದ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳಲು ಇನ್ನೆಷ್ಟು ಸಮಯ ಬೇಕು?

ಕನಿಷ್ಠ ವೇತನ ಪಡೆಯುತ್ತಿರುವ ಗಾರ್ಮೆಂಟ್ಸ್‌ ಉದ್ಯಮದ ಕಾರ್ಮಿಕರಿಗೆ ತುಟ್ಟಿಭತ್ಯೆಯ ಪ್ರತಿಯೊಂದು ರೂಪಾಯಿ ಕೂಡ ಮುಖ್ಯವಾದುದು. ಕಾರ್ಮಿಕರ ಕನಿಷ್ಠ ವೇತನದ ಭಾಗವಾದ ತುಟ್ಟಿಭತ್ಯೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿರುವುದು ‘ಕನಿಷ್ಠ ವೇತನ ಕಾಯ್ದೆ’ಯ ಉಲ್ಲಂಘನೆಯೂ ಹೌದು. ಕೊರೊನಾ ಉಂಟು ಮಾಡಿದ ಬಿಕ್ಕಟ್ಟಿನಿಂದಾಗಿ ಒಂದೂವರೆ ವರ್ಷದಿಂದ ಗಾರ್ಮೆಂಟ್ಸ್‌ ಉದ್ಯಮ ದೊಡ್ಡ ಹೊಡೆತ ಅನುಭವಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಕೂಡ ಕಾರ್ಮಿಕರ ಜೀವನವನ್ನು ದುಸ್ತರಗೊಳಿಸಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ, ಕಾರ್ಮಿಕರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ತುಟ್ಟಿಭತ್ಯೆ ನೀಡಿಕೆಯನ್ನು ಮುಂದೂಡುತ್ತಾ ಹೋಗುವುದು ಸರಿಯಲ್ಲ. ಗಾರ್ಮೆಂಟ್ಸ್‌ ಘಟಕಗಳ ಮಾಲೀಕರು ನೌಕರರ ಹಿತಾಸಕ್ತಿಯನ್ನು ರಕ್ಷಿಸದೇ ಹೋದಾಗ, ಸರ್ಕಾರ ಮಧ್ಯಪ್ರವೇಶಿಸುವುದು ಅಗತ್ಯ. ಆದರೆ, ಪ್ರಸಕ್ತ ಪ್ರಕರಣದಲ್ಲಿ ಹೈಕೋರ್ಟ್‌ ಮಾತನ್ನು ಕೂಡ ಕೇಳಿಸಿಕೊಳ್ಳದಷ್ಟು ಕಿವುಡುತನವನ್ನು ಸರ್ಕಾರ ಪ್ರದರ್ಶಿಸುತ್ತಿದೆ. ಲಾಕ್‌ಡೌನ್‌ ಕಾರಣದಿಂದಾಗಿ ಗಾರ್ಮೆಂಟ್ಸ್‌ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ. ಬಟ್ಟೆ ಅಂಗಡಿಗಳು ಮುಚ್ಚಿದ್ದ ಪರಿಣಾಮವಾಗಿ, ಉದ್ಯಮದಲ್ಲಿ ನಗದು ಹರಿವು ತಗ್ಗಿದೆ. ಜನರ ಕೊಳ್ಳುವ ಶಕ್ತಿ ಕುಗ್ಗಿರುವ ಕಾರಣದಿಂದಾಗಿ ಉದ್ಯಮದ ಉತ್ಪನ್ನಗಳು ಮೊದಲಿನ ರೀತಿಯಲ್ಲಿ ಮಾರಾಟ ಆಗುತ್ತಿಲ್ಲ ಎಂಬ ವರದಿಗಳಿವೆ. ಆದರೆ, ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರ ತುಟ್ಟಿಭತ್ಯೆ ವಿಚಾರವಾಗಿ ತ್ವರಿತವಾಗಿ ತೀರ್ಮಾನ ಕೈಗೊಳ್ಳಬೇಕಿರುವುದು ಸರ್ಕಾರದ ಕರ್ತವ್ಯ.

ತುಟ್ಟಿಭತ್ಯೆ ಏರಿಕೆ ಪ್ರಕ್ರಿಯೆಯನ್ನು ಮುಂದೂಡಿದ್ದ ಆದೇಶವನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯುವ ಮೂಲಕ ಗಾರ್ಮೆಂಟ್ಸ್‌ ನೌಕರರ ನೆರವಿಗೆ ಧಾವಿಸಬೇಕಾಗಿದೆ. ಬಾಕಿ ಉಳಿದಿರುವ ಮೊತ್ತವನ್ನೂ ಕಾರ್ಮಿಕರಿಗೆ ಆದಷ್ಟು ಬೇಗ ದೊರಕಿಸಿಕೊಡುವ ಬದ್ಧತೆ ಪ್ರದರ್ಶಿಸಬೇಕಾಗಿದೆ. ಜೊತೆಯಲ್ಲೇ, ಉದ್ಯಮಕ್ಕೆ ಅಗತ್ಯ ನೆರವು ನೀಡುವ ಬಗ್ಗೆಯೂ ಆಲೋಚಿಸಬೇಕು.ತುಟ್ಟಿಭತ್ಯೆ ಬಾಕಿ ಮಾತ್ರವಲ್ಲದೆ, ಗಾರ್ಮೆಂಟ್ಸ್‌ ಕಾರ್ಮಿಕರನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಜವಳಿ ಉದ್ಯಮದ ನೂರಾರು ಘಟಕಗಳು ಮುಚ್ಚುವುದರೊಂದಿಗೆ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲೂ ಮಹಿಳಾ ನೌಕರರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಉಳಿದಿರುವ ಕಾರ್ಮಿಕರಿಗೆ ಕೂಡ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಕೆಲವು ಗಾರ್ಮೆಂಟ್ಸ್‌ ಘಟಕಗಳು ಕಾರ್ಮಿಕರಿಗೆ ಒದಗಿಸುತ್ತಿದ್ದ ಸಾರಿಗೆ ಸೌಲಭ್ಯವನ್ನು ನಿಲ್ಲಿಸಿದ್ದರೆ, ಮತ್ತೆ ಕೆಲವು ಘಟಕಗಳು ಕಾರ್ಮಿಕರ ಸಂಬಳವನ್ನು ಕಡಿತಗೊಳಿಸಿವೆ. ತಿಂಗಳಿಗೊಂದು ಸಾಂದರ್ಭಿಕ ರಜೆ, ವೈದ್ಯಕೀಯ ರಜೆ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, 8 ಗಂಟೆಗೂ ಹೆಚ್ಚಿನ ಅವಧಿಯ ದುಡಿಮೆಗೆ ಹೆಚ್ಚುವರಿ ವೇತನ ಸೇರಿದಂತೆ ಕಾರ್ಮಿಕರಿಗೆ ದೊರೆಯಬೇಕಾದ ಅನೇಕ ಸವಲತ್ತುಗಳು ಬಹುತೇಕ ಘಟಕಗಳಲ್ಲಿ ಕಾಗದದ ಮೇಲಷ್ಟೇ ಉಳಿದಿವೆ. ಕನಿಷ್ಠ ವೇತನವನ್ನೇ ನೆಚ್ಚಿಕೊಂಡಿರುವ ಗಾರ್ಮೆಂಟ್ಸ್‌ ಕಾರ್ಮಿಕರ ಸಂಕಷ್ಟಗಳಿಗೆ ಸರ್ಕಾರ ವಿಳಂಬವಿಲ್ಲದೆ ಸ್ಪಂದಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.