ADVERTISEMENT

ಸಂಪಾದಕೀಯ | ದೇಶದಲ್ಲಿ ಲಿಂಗತ್ವ ಅಂತರ; ಪ್ರಗತಿಯ ಗುರಿ ಸಾಧನೆಗೆ ಅಡ್ಡಿ

ಸಂಪಾದಕೀಯ
Published 23 ಜೂನ್ 2025, 0:23 IST
Last Updated 23 ಜೂನ್ 2025, 0:23 IST
   

ವಿಶ್ವ ಆರ್ಥಿಕ ವೇದಿಕೆಯು ಕಳೆದ ವಾರ ಬಿಡುಗಡೆ ಮಾಡಿದ ಜಾಗತಿಕ ಲಿಂಗತ್ವ ಅಂತರ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನ ಕೆಳಕ್ಕೆ ಕುಸಿದಿದೆ. ಕಳೆದ ವರ್ಷವೂ ಭಾರತವು ಎರಡು ಸ್ಥಾನ ಹಿಂದಕ್ಕೆ ಹೋಗಿತ್ತು. 148 ದೇಶಗಳ ಈ ಪಟ್ಟಿಯಲ್ಲಿ ನಮ್ಮ ದೇಶವು 131ನೇ ಸ್ಥಾನ ಪಡೆದಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಳಗೆ ಇರುವ ದೇಶ ಭಾರತ. ಬಾಂಗ್ಲಾದೇಶವು 24ನೇ ಸ್ಥಾನ ಪಡೆದಿದೆ. ಭೂತಾನ್‌, ನೇಪಾಳ ಮತ್ತು ಶ್ರೀಲಂಕಾಕ್ಕಿಂತಲೂ ಭಾರತ ಹಿಂದೆ ಇದೆ. ಜಾಗತಿಕ ಮಟ್ಟದಲ್ಲಿ ಲಿಂಗತ್ವ ಸಮತೆ ಸಾಧನೆ ಪ್ರಮಾಣವು ಉತ್ತಮವಾಗಿದ್ದರೂ ನಮ್ಮಲ್ಲಿ ಕಳಪೆಯಾಗಿಯೇ ಇದೆ. ಸೂಚ್ಯಂಕವು ಮಾನದಂಡವಾಗಿ ಇರಿಸಿಕೊಂಡಿರುವ ಎಲ್ಲ ಅಂಶಗಳಲ್ಲಿಯೂ ಜಾಗತಿಕ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ. ಜಾಗತಿಕ ಮಟ್ಟದಲ್ಲಿ ಲಿಂಗತ್ವ ಸಮಾನತೆ ಸಾಧಿಸಲು 123 ವರ್ಷಗಳು ಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷ 143 ವರ್ಷ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಕಡಿಮೆ ಆದಾಯದ ಕೆಲವು ದೇಶಗಳೇ ಹೆಚ್ಚು ಆದಾಯದ ದೇಶಗಳಿಗಿಂತ ಲಿಂಗತ್ವ ಅಂತರ ಕಡಿಮೆ ಮಾಡುವಲ್ಲಿ ಹೆಚ್ಚು ಯಶಸ್ಸು ಕಂಡಿವೆ. ಲಿಂಗತ್ವ ಸಮಾನತೆಯು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಇದೊಂದು ಸ್ವಾಗತಾರ್ಹ ವಿಚಾರ. 

ಸೂಚ್ಯಂಕವು ನಾಲ್ಕು ಮಾನದಂಡಗಳನ್ನು  ಬಳಸಿಕೊಂಡು ಲಿಂಗತ್ವ ಸಮತೆಯನ್ನು ಮೌಲ್ಯಮಾಪನ ಮಾಡುತ್ತದೆ: ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ, ಶೈಕ್ಷಣಿಕ ಸಾಧನೆ, ಆರೋಗ್ಯ ಮತ್ತು ಬದುಕುಳಿಯುವಿಕೆ ಹಾಗೂ ರಾಜಕೀಯ ಸಶಕ್ತತೆ. ಭಾರತದ ಸಾಧನೆಯು ಮೂರು ಮಾನದಂಡಗಳಲ್ಲಿ ಸ್ಥಿರವಾಗಿದೆ ಅಥವಾ ಉತ್ತಮಗೊಂಡಿದೆ. ರಾಜಕೀಯ ಸಶಕ್ತೀಕರಣದಲ್ಲಿ ಭಾರತವು ಹಿಂದೆ ಬಿದ್ದಿದೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳಲ್ಲಿ ಶೇ 0.9ರಷ್ಟು ಸುಧಾರಣೆ ಕಂಡಿದೆ. ಕಾರ್ಮಿಕ ಭಾಗವಹಿಸುವಿಕೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಯಾವುದೇ ವ್ಯತ್ಯಾಸ ಆಗಿಲ್ಲ. ಲಿಂಗತ್ವ ಆಧಾರದಲ್ಲಿ ಪ್ರತ್ಯೇಕಿಸುವಿಕೆ ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಆರೋಗ್ಯ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಕಡಿಮೆ ವೇತನದ ಕೆಲಸಗಳನ್ನು ಮಾತ್ರ ನೀಡಲಾಗುತ್ತಿದೆ. ಪುರುಷ ಮತ್ತು ಮಹಿಳಾ ಕಾರ್ಮಿಕರ ನಡುವೆ ವೇತನದಲ್ಲಿ ಗಣನೀಯವಾದ ಅಂತರ ಇದೆ. ಮಹಿಳೆಯರ ದೊಡ್ಡ ವರ್ಗವು ವೇತನರಹಿತವಾಗಿ ಕೆಲಸ ಮಾಡಬೇಕಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಬದುಕುಳಿಯುವಿಕೆ ವರ್ಗಗಳಲ್ಲಿ ಸುಧಾರಣೆ ಆಗಿದ್ದರೂ ಅದು ಇನ್ನಷ್ಟು ವೇಗ ಪಡೆಯಬೇಕಿದೆ. 

ರಾಜಕೀಯ ಸಶಕ್ತೀಕರಣ ವರ್ಗದಲ್ಲಿ ಕಳೆದ ವರ್ಷದಿಂದ ಭಾರಿ ಹಿನ್ನಡೆ ಆಗಿದೆ. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು ಶೇ 14.7ರಿಂದ ಶೇ 13.8ಕ್ಕೆ ಇಳಿದಿದೆ. ಪರಿಣಾಮವಾಗಿ ಸತತ ಎರಡನೇ ವರ್ಷವೂ ಈ ವರ್ಗದಲ್ಲಿ ಹಿನ್ನಡೆ ಆಗಿದೆ. ಸಚಿವ ಸ್ಥಾನದಲ್ಲಿ ಇರುವ ಮಹಿಳೆಯರ ಪ್ರಮಾಣವು ಶೇ 6.5ರಿಂದ ಶೇ 5.6ಕ್ಕೆ ಕುಸಿದಿದೆ. ಇವೆಲ್ಲವೂ ದೇಶದ ಒಟ್ಟಾರೆ ಸ್ಥಾನ ಗಳಿಕೆಯಲ್ಲಿ ಹಿಂದೆ ಬೀಳಲು ಕಾರಣವಾಗಿವೆ. 2023ರಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲು ಕಾಯ್ದೆಯು ಜಾರಿಗೆ ಬಂದರೆ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಲೋಕಸಭೆಗೆ 2029ರಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಈ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇಲ್ಲ. ಮಹಿಳೆಯರ ಭಾಗೀದಾರಿಕೆಯು ಎಲ್ಲ ಕ್ಷೇತ್ರಗಳಲ್ಲಿಯೂ ಹೆಚ್ಚಳ ಆಗಬೇಕಿದೆ. ವಿಶೇಷವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಅವರ ಭಾಗೀದಾರಿಕೆಯು ಉತ್ತಮಗೊಳ್ಳಬೇಕು. ಸಣ್ಣ ಪ್ರಮಾಣದ ಹೆಚ್ಚಳ ಕೂಡ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದೊಡ್ಡ ಬದಲಾವಣೆ ತರಬಹುದು. ನಿರ್ಣಾಯಕ ಕ್ಷೇತ್ರಗಳಲ್ಲಿ ಇರುವ ಲಿಂಗತ್ವ ಅಂತರವನ್ನು ಸರಿಪಡಿಸದೇ ಇದ್ದರೆ ಅಭಿವೃದ್ಧಿ ಹೊಂದಿದ ದೇಶವಾಗುವ ಕನಸು ದೂರವೇ ಉಳಿಯಬಹುದು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.