
ಗಿಗ್ ಕಾರ್ಮಿಕರ ಸುರಕ್ಷತೆಗೆ ಒತ್ತು: ಕಾರ್ಮಿಕ ನೀತಿ ಪರಿಷ್ಕಾರ ಅಗತ್ಯ
ಬೇಡಿಕೆ ಸಲ್ಲಿಸಿದ ಹತ್ತು ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನವನ್ನು ತಲಪಿಸುತ್ತೇವೆ ಎನ್ನುವ ಬದ್ಧತೆಯಿಂದ ಹೊರಬರುವ ಕ್ವಿಕ್–ಕಾಮರ್ಸ್ ವಲಯದ ನಿರ್ಧಾರ, ಗಿಗ್ ಕಾರ್ಮಿಕರ ಮೇಲೆ ಉಂಟಾಗುತ್ತಿದ್ದ ಅತೀವ ಒತ್ತಡವನ್ನು ಕಡಿಮೆ ಮಾಡಬೇಕೆಂದು ನಡೆಯುತ್ತಿದ್ದ ಅಭಿಯಾನಕ್ಕೆ ಸಂದಿರುವ ಗಮನಾರ್ಹ ಯಶಸ್ಸು. ಕಳೆದ ತಿಂಗಳು ಗಿಗ್ ಕಾರ್ಮಿಕರು ನಡೆಸಿದ್ದ ಮುಷ್ಕರ, ಅವರು ಕೆಲಸ ಮಾಡುತ್ತಿರುವ ಕ್ಷೇತ್ರದ ಅಪಾಯಗಳ ಬಗ್ಗೆ ಗಮನಸೆಳೆದಿತ್ತು. ಇದರ ಪರಿಣಾಮವಾಗಿ, ಗ್ರಾಹಕರಿಗೆ ಅಗತ್ಯ ಉತ್ಪನ್ನಗಳನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲಪಿಸುವಲ್ಲಿ ಹೆಸರಾಗಿರುವ ಕಂಪನಿಗಳ ಜೊತೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಮಾತುಕತೆ ನಡೆಸಿದ್ದರು. ಕಡಿಮೆ ಸಮಯದಲ್ಲಿ ಸೇವೆ ಒದಗಿಸುವ ಬದ್ಧತೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಸಚಿವರು, ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಅಭಿಯಾನಗಳಿಂದ ‘ನಿಗದಿತ ಸಮಯ’ದ ಬದ್ಧತೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ಕಾಲಮಿತಿ ಬದ್ಧತೆಯ ಪರಿಣಾಮ ಉತ್ಪನ್ನಗಳನ್ನು ಪೂರೈಸುವ ಕಾರ್ಮಿಕರ ಮೇಲೆ ಆಗುವುದರ ಬಗ್ಗೆಯೂ ವ್ಯಾಪಕ ಕಳವಳ ವ್ಯಕ್ತವಾಗಿತ್ತು. ಸಂಚಾರ ದಟ್ಟಣೆಯ ನಡುವೆ ನಿರ್ದಿಷ್ಟ ಸಮಯದೊಳಗೆ ಉತ್ಪನ್ನಗಳನ್ನು ತಲಪಿಸುವ ಒತ್ತಡ ಹಾಗೂ ವಿಳಂಬದ ಸೇವೆಯಿಂದ ಎದುರಿಸಬೇಕಾದ ಪರಿಣಾಮಗಳು ಕಾರ್ಮಿಕರನ್ನು ಒತ್ತಡಕ್ಕೆ ದೂಡುತ್ತವೆ. ಈ ಒತ್ತಡ ಕಾರ್ಮಿಕರಿಗೆ ಮಾತ್ರವಲ್ಲದೆ, ರಸ್ತೆಗಳಲ್ಲಿ ಸಂಚರಿಸುವ ಇತರರಿಗೂ ಅಪಾಯ ಉಂಟುಮಾಡುವ ಸಾಧ್ಯತೆಗೆ ನಿದರ್ಶನಗಳಾಗಿ, ಅಪಘಾತಗಳು ಸಂಭವಿಸಿರುವುದನ್ನು ಗಮನಿಸಬಹುದು.
ತ್ವರಿತ ಸೇವೆಯ ಬದ್ಧತೆಯಿಂದ ಹೊರಬರುವುದಾಗಿ ಪ್ರಮುಖ ಕ್ವಿಕ್–ಕಾಮರ್ಸ್ ಸಂಸ್ಥೆಗಳು ಹೇಳಿದ್ದರೂ, ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಆಗಿದೆಯೆಂದು ಭಾವಿಸಲಾಗದು. ಕಾಲಮಿತಿಯೊಳಗೆ ಉತ್ಪನ್ನ ಪೂರೈಸುವ ಘೋಷಣೆಯನ್ನು ತಮ್ಮ ಪ್ರಚಾರ ವೇದಿಕೆಗಳಲ್ಲಿ ಸಂಸ್ಥೆಗಳು ನಿಲ್ಲಿಸಬಹುದು. ಬ್ರಾಂಡಿಂಗ್ ಸಂಪರ್ಕ, ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಅಭಿಯಾನಗಳಲ್ಲಿ ಗಟ್ಟಿ ಧ್ವನಿಯಲ್ಲಿ ಬಿತ್ತರಗೊಳ್ಳುತ್ತಿದ್ದ ‘ಶೀಘ್ರ ಡೆಲಿವರಿ’ ಎನ್ನುವ ಘೋಷಣೆ ಪ್ರಸ್ತುತ ಬದಲಾಗಿದೆಯಷ್ಟೇ. ಆದರೆ, ಈ ಕಂಪನಿಗಳು ಇದುವರೆಗೂ ತಾವು ಗೊತ್ತುಪಡಿಸುತ್ತಿದ್ದ ಅವಾಸ್ತವಿಕ ಕಾಲಮಿತಿಯು ಗಿಗ್ ಕಾರ್ಮಿಕರ ಮೇಲೆ ಅಪಾರ ಒತ್ತಡ ಉಂಟುಮಾಡುತ್ತದೆ ಹಾಗೂ ನಗರ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎನ್ನುವುದನ್ನು ಒಪ್ಪಿಕೊಂಡಿಲ್ಲ. ಇದಕ್ಕೆ ಬದಲಾಗಿ, ತಮ್ಮ ವಾಣಿಜ್ಯ ಮಾದರಿಯು ಡೆಲಿವರಿ ಸಹವರ್ತಿಗಳ ಚಾಲನೆಯ ವೇಗವನ್ನು ಅವಲಂಬಿಸದೆ, ಆನ್‌ಲೈನ್ ಶಾಪಿಂಗ್ ವ್ಯವಸ್ಥೆಗೆ ಪೂರಕವಾದ ಉಗ್ರಾಣಗಳು (ಡಾರ್ಕ್ ಸ್ಟೋರ್) ಇರುವ ಸ್ಥಳವನ್ನು ಅವಲಂಬಿಸಿದೆ ಎಂದು ಹೇಳಲಾಗುತ್ತಿದೆ. ಡಾರ್ಕ್ ಸ್ಟೋರ್‌ಗಳ ಸಂಖ್ಯೆ, ಡೆಲಿವರಿ ಪಾಲುದಾರರ ಲಭ್ಯತೆ, ತಂತ್ರಜ್ಞಾನ ಮತ್ತು ಆರ್ಡರ್ ಬ್ಯಾಚಿಂಗ್‌ಗಳು ಡೆಲಿವರಿ ಸಮಯದ ಮೇಲೆ ಪ್ರಭಾವ ಬೀರುವ ಪ್ರಮುಖ ಸಂಗತಿಗಳಾಗಿವೆ ಎಂದೂ ವಾದಿಸಲಾಗುತ್ತಿದೆ. ಆದರೆ, ಈ ಎಲ್ಲ ಸಂಗತಿಗಳೂ ಮಿಳಿತಗೊಂಡು ಡೆಲಿವರಿ ಏಜೆಂಟರಿಗೆ ಅತ್ಯಂತ ಒತ್ತಡದ ಕಾಲಮಿತಿಯ ವೇಳಾಪಟ್ಟಿಯನ್ನು ಗೊತ್ತುಪಡಿಸುತ್ತವೆ.
ಇಡೀ ಸಮಸ್ಯೆಯ ಕೇಂದ್ರದಲ್ಲಿ ಬೇಡಿಕೆ ಮತ್ತು ಪೂರೈಕೆಯ ಸಮೀಕರಣವಿದೆ. ತ್ವರಿತವಾಗಿ ಉತ್ಪನ್ನಗಳನ್ನು ಪಡೆಯುವ ಗ್ರಾಹಕರ ನಿರೀಕ್ಷೆಗಳು ಹಾಗೂ ಅಂಥ ಅಪೇಕ್ಷೆಗಳನ್ನು ಪೂರೈಸಲು ಸಿದ್ಧವಾಗಿರುವ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ಕಾರ್ಮಿಕರಿಂದಾಗಿ ಈ ತ್ವರಿತ ಡೆಲಿವರಿ ವಹಿವಾಟು ಜೀವಂತವಾಗಿದೆ. ಯುರೋಪ್‌ನ ಕೆಲವು ದೇಶಗಳಲ್ಲಿ ಇರುವಂತೆ ಡಾರ್ಕ್ ಸ್ಟೋರ್‌ಗಳನ್ನು ವಸತಿ ಪ್ರದೇಶಗಳಿಂದ ದೂರ ಇರಿಸುವುದನ್ನು ಕಡ್ಡಾಯಗೊಳಿಸಿದರೆ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬಹುದು ಎನ್ನುವ ವಿಶ್ಲೇಷಣೆಯೂ ಇದೆ. ಆದರೆ, ಇಂಥ ಬೆಳವಣಿಗೆಗಳಿಂದ ಗಿಗ್ ಕಾರ್ಮಿಕರ ಜೀವನ ಸುಧಾರಿಸಬಹುದು ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ಇನ್ನುಮುಂದೆ, ತ್ವರಿತ ಪೂರೈಕೆಯ ಘೋಷಣೆಗಳು ಸಾರ್ವಜನಿಕವಾಗಿ ಪ್ರಕಟಗೊಳ್ಳದಿರಬಹುದಾದರೂ, ಉತ್ಪನ್ನಗಳನ್ನು ಕ್ಷಿಪ್ರವಾಗಿ ತಲಪಿಸುವ ವಿಧಾನದಲ್ಲಿ ಬದಲಾವಣೆ ಆಗುತ್ತದೆಂದು ಹೇಳಲಾಗದು. ಈ ಎಲ್ಲ ಬೆಳವಣಿಗೆಗಳ ಒಟ್ಟಾರೆ ಪರಿಣಾಮ, ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಅಧಿಕೃತವಾಗಿ ಗುರ್ತಿಸಿ ಒಪ್ಪಿಕೊಂಡಿರುವುದು. ಪ್ರಸಕ್ತ ವಿದ್ಯಮಾನ, ಕಾರ್ಮಿಕರ ಕಲ್ಯಾಣವನ್ನು ಗಮನದಲ್ಲಿ ಇರಿಸಿಕೊಂಡ ಸಮಗ್ರ ನೀತಿ ರೂಪುಗೊಳ್ಳಲು ಕಾರಣವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.