ADVERTISEMENT

ಸಂಪಾದಕೀಯ | ಶಾಸಕರ ವೇತನ ಹೆಚ್ಚಳ; ತಕರಾರಿಲ್ಲದ ಒಪ್ಪಿಗೆಯ ಅಪ್ಪುಗೆ

ಶಾಸಕರು–ಸಂಸದರ ಸಂಬಳ–ಭತ್ಯೆ ಹೆಚ್ಚಳಕ್ಕೆ ನಿರ್ದಿಷ್ಟ ಮಾನದಂಡ ಮತ್ತು ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಇಲ್ಲದ ಒಂದು ವ್ಯವಸ್ಥೆಯ ಅಗತ್ಯ ಇದೆ

ಸಂಪಾದಕೀಯ
Published 1 ಏಪ್ರಿಲ್ 2025, 0:41 IST
Last Updated 1 ಏಪ್ರಿಲ್ 2025, 0:41 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೇಂದ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಹಮತ ಮೂಡಿಸುವ ಒಂದು ವಿಷಯ ಇದ್ದರೆ, ಅದು ಶಾಸನಸಭೆಗಳ ಸದಸ್ಯರ ವೇತನ, ಭತ್ಯೆಗಳು ಮತ್ತು ಇತರ ಸೌಲಭ್ಯಗಳನ್ನು ಹೆಚ್ಚಿಸುವ ವಿಷಯ! ಕರ್ನಾಟಕದ ಶಾಸಕರು ಮತ್ತು ಸಚಿವರು ತಮ್ಮ ವೇತನ ಹಾಗೂ ವಿವಿಧ ಭತ್ಯೆಗಳನ್ನು ತಾವೇ ಮುಂದಾಗಿ ಸರಿಸುಮಾರು ಶೇಕಡ 100ರಷ್ಟು ಹೆಚ್ಚು ಮಾಡಿಕೊಂಡರು! ರಾಜ್ಯ ಸರ್ಕಾರವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿರುವ ಸಂದರ್ಭದಲ್ಲಿ ಆಗಿರುವ ಈ ಹೆಚ್ಚಳದ ಪರಿಣಾಮವಾಗಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹62 ಕೋಟಿ ಹೊರೆಬೀಳಲಿದೆ. ಕೇಂದ್ರ ಸರ್ಕಾರವು ಸಂಸದರ ವೇತನ ಮತ್ತು ಮಾಜಿ ಸಂಸದರ ಪಿಂಚಣಿಯನ್ನು ಶೇ 24ರಷ್ಟು ಹೆಚ್ಚು ಮಾಡುವ ಘೋಷಣೆಯನ್ನು ಈಚೆಗೆ ಹೊರಡಿಸಿದೆ. ಅವರಿಗೆ ನೀಡುವ ಭತ್ಯೆಗಳನ್ನು ಕೂಡ ಹೆಚ್ಚು ಮಾಡಲಾಗಿದೆ. ಶಾಸಕರ ವೇತನ ಹಾಗೂ ಭತ್ಯೆಗಳಲ್ಲಿ ಎಷ್ಟು ಹೆಚ್ಚಳ ಆಗಬೇಕು ಎಂಬುದನ್ನು ತೀರ್ಮಾನಿಸಲು ದೆಹಲಿ ವಿಧಾನಸಭೆಯು ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಇಲ್ಲಿ ವೇತನ ಹೆಚ್ಚಳ ಆಗಬೇಕು ಎಂಬ ವಿಚಾರದಲ್ಲಿ ಬಿಜೆಪಿ ಹಾಗೂ ಎಎಪಿ ಶಾಸಕರ ನಡುವೆ ಸಹಮತ ಇದೆ. ಎಷ್ಟು ಹೆಚ್ಚಳ ಎಂಬುದು ಮಾತ್ರ ನಿರ್ಧಾರ ಆಗಬೇಕಿದೆ.

ಶಾಸಕರು ಮತ್ತು ಸಂಸದರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಸೌಲಭ್ಯಗಳು, ಹಣಕಾಸಿನ ಶಕ್ತಿ ಇರಬಾರದು ಎಂದು ಯಾರೂ ಹೇಳುವುದಿಲ್ಲ. ಆದರೆ ಶಾಸಕರು ಮತ್ತು ಸಂಸದರಲ್ಲಿ ಬಹುತೇಕರು ಪಡೆಯುತ್ತಿರುವ ವೇತನದ ಪ್ರಮಾಣವು ನ್ಯಾಯಸಮ್ಮತವಾಗಿ ಇಲ್ಲ; ತಾವು ಪಡೆಯುವ ವೇತನ ಹಾಗೂ ಭತ್ಯೆಗಳನ್ನು ಸಮರ್ಥಿಸುವ ರೀತಿಯಲ್ಲಿ, ತಮಗೆ ಕಾಲಕಾಲಕ್ಕೆ ಸಿಗುವ ವೇತನ–ಭತ್ಯೆ ಹೆಚ್ಚಳವನ್ನು ಸಮರ್ಥಿಸುವ ಬಗೆಯಲ್ಲಿ ಅವರು ತಮ್ಮ ಕೆಲಸ ನಿರ್ವಹಿಸುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಸರ್ಕಾರದ ಯಾವ ನೌಕರರಿಗೂ ಇಷ್ಟು ಕಡಿಮೆ ಅವಧಿಯಲ್ಲಿ ವೇತನ ಶೇ 100ರಷ್ಟು ಅಥವಾ ಶೇ 24ರಷ್ಟು ಹೆಚ್ಚಳ ಆಗುವುದಿಲ್ಲ. ಹಲವು ಶಾಸಕರು, ಸಂಸದರು ಶಾಸನಸಭೆಗಳಲ್ಲಿ ಉತ್ತಮ ಸಾಧನೆ ತೋರುತ್ತಿಲ್ಲ, ಹಲವರು ಕಲಾಪಗಳಿಗೆ ಅಡ್ಡಿ ಉಂಟುಮಾಡುತ್ತಿರುತ್ತಾರೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಶಾಸಕರು, ಸಂಸದರ ವೇತನ–ಭತ್ಯೆಗಳ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳಬೇಕು. ವಿಧಾನ ಮಂಡಲದ ಅಧಿವೇಶನಗಳ ಅವಧಿ ಕಿರಿದಾಗುತ್ತಿದೆ, ಅಧಿವೇಶನ ನಡೆದಾಗ ಅಲ್ಲಿ ಗಂಭೀರ ಸ್ವರೂಪದ ಚರ್ಚೆಗಳು ನಡೆಯುತ್ತಿಲ್ಲ. ಶಾಸಕರ ವೇತನ ಹೆಚ್ಚಳದ ತೀರ್ಮಾನವನ್ನು ಕರ್ನಾಟಕದ ವಿಧಾನಸಭೆಯು ಯಾವ ಚರ್ಚೆಯೂ ಇಲ್ಲದೆ ಕೈಗೊಂಡಿದೆ.

ADVERTISEMENT

ಸರ್ಕಾರಿ ಹಾಗೂ ಖಾಸಗಿ ವಲಯಗಳ ನೌಕರರು ತಮ್ಮ ಸಂಬಳ–ಭತ್ಯೆ ಎಷ್ಟಿರಬೇಕು ಎಂಬುದನ್ನು ತಾವೇ ತೀರ್ಮಾನಿಸಲು ಅವಕಾಶ ಇಲ್ಲ. ಆದರೆ ಶಾಸಕರ ವಿಚಾರ ಹೀಗಿಲ್ಲ. ಶಾಸಕರು ತಮ್ಮ ವೇತನಕ್ಕೆ ಸಂಬಂಧಿಸಿದ ತೀರ್ಮಾನವನ್ನು ತಾವೇ ತೆಗೆದುಕೊಳ್ಳುತ್ತಾರೆ. ಆದರೆ ಜನರು ಒಂದಿಷ್ಟು ಕಟುವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಎಲ್ಲ ಶಾಸಕರು ಹೇಳುವುದು ತಮಗೆ ಜನರ ಸೇವೆ ಬಹುಮುಖ್ಯ; ಹಣ ಸಂಪಾದನೆ ತಮಗೆ ಮುಖ್ಯ ಅಲ್ಲವೇ ಅಲ್ಲ ಎಂದು. ಕರ್ನಾಟಕದಲ್ಲಿನ ಶಾಸಕರ ಪೈಕಿ ಶೇ 10ರಷ್ಟು ಮಂದಿ ಕೋಟ್ಯಧೀಶರು, ಶಾಸಕರಲ್ಲಿ 30ಕ್ಕೂ ಹೆಚ್ಚು ಮಂದಿಯ ಘೋಷಿತ ಆಸ್ತಿಯ ಮೌಲ್ಯ ₹100 ಕೋಟಿಗಿಂತ ಹೆಚ್ಚಿದೆ. ಹಲವರು ಜನಪ್ರತಿನಿಧಿ ಆಗಿರುವ ಅವಧಿಯಲ್ಲಿ ಆಸ್ತಿಯಲ್ಲಿ ಭಾರಿ ಪ್ರಮಾಣದ ಹೆಚ್ಚಳ ಆಗಿರುವುದನ್ನು ಘೋಷಿಸಿಕೊಳ್ಳುತ್ತಾರೆ, ಈ ಹೆಚ್ಚಳ ಹೇಗೆ ಸಾಧ್ಯವಾಯಿತು ಎಂಬುದನ್ನು ಕೆಲವು ಬಾರಿ ವಿವರಿಸುವುದೇ ಕಷ್ಟವಾಗುತ್ತದೆ. ಅಗತ್ಯ ಸೇವೆಗಳು ಹಾಗೂ ಉತ್ಪನ್ನಗಳ ಬೆಲೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಾಗ ಜನಪ್ರತಿನಿಧಿಗಳ ಸಂಬಳ–ಭತ್ಯೆ ಹೆಚ್ಚಾಗಬೇಕಿರುವುದು ಅಪೇಕ್ಷಣೀಯ. ಆದರೆ, ತಮ್ಮ ಸಂಬಳ ಎಷ್ಟು ಹೆಚ್ಚಾಗಬೇಕು ಎಂಬುದನ್ನು ಶಾಸಕರು ಯಾವ ಚರ್ಚೆಯೂ ಇಲ್ಲದೆ ತಾವೇ ತೀರ್ಮಾನಿಸುವುದು ನೈತಿಕವಾಗಿ ಎಷ್ಟು ಸರಿ? ಜನಪ್ರತಿನಿಧಿಗಳ ಸಂಬಳ–ಭತ್ಯೆ ಹೆಚ್ಚಳಕ್ಕೆ ನಿರ್ದಿಷ್ಟ ಮಾನದಂಡ ಮತ್ತು ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಇಲ್ಲದ ಒಂದು ವ್ಯವಸ್ಥೆಯ ಅಗತ್ಯ ಖಂಡಿತ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.