ಶಿಕ್ಷಣ ಕ್ಷೇತ್ರವನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ಈ ವರ್ಷದ ಆರಂಭದಲ್ಲಿ ನಡೆಸಿದ ಸಮಗ್ರ ಸಮೀಕ್ಷೆಯೊಂದು (ಸಿಎಂಎಸ್) ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿನ ಒಂದಿಷ್ಟು ಅನಾರೋಗ್ಯಕರ ಬೆಳವಣಿಗೆಗಳನ್ನು ದಾಖಲಿಸಿದೆ. ದೇಶದಲ್ಲಿ ಶಾಲೆಗೆ ಹೋಗುವ ಮಕ್ಕಳ ಪೈಕಿ ಶೇ 27ರಷ್ಟು ಮಂದಿ ಶೈಕ್ಷಣಿಕ ವರ್ಷದಲ್ಲಿ ಖಾಸಗಿಯಾಗಿ ಮನೆಪಾಠ ಹೇಳಿಸಿಕೊಂಡಿದ್ದಾರೆ. ಹೀಗೆ ಮನೆಪಾಠ ಹೇಳಿಸಿಕೊಂಡ ಮಕ್ಕಳ ಪ್ರಮಾಣವು ಗ್ರಾಮೀಣ ಪ್ರದೇಶಗಳಲ್ಲಿ ಶೇ 25.5ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ 30.7ರಷ್ಟು ಇದೆ. 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಪೈಕಿ ಶೇ 37ರಷ್ಟು ಮಂದಿ ಖಾಸಗಿಯಾಗಿ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ನಗರ ಪ್ರದೇಶಗಳ ಕುಟುಂಬಗಳು ಮನೆಪಾಠಕ್ಕಾಗಿ ವಾರ್ಷಿಕ ಸರಾಸರಿ ₹4,000 ವೆಚ್ಚ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ವೆಚ್ಚವು ಕಡಿಮೆ ಇದ್ದರೂ ಗಮನಾರ್ಹವಾಗಿ ಇದೆ. ಇವೆಲ್ಲವೂ ಹೇಳುತ್ತಿರುವುದು ಪರ್ಯಾಯ ಶಿಕ್ಷಣ ವ್ಯವಸ್ಥೆಯೊಂದು ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು. ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರು ಹೊಂದಿರುವ ಕಳಕಳಿ, ಆತಂಕಗಳನ್ನು ಕೂಡ ಇವೆಲ್ಲ ಪ್ರತಿಬಿಂಬಿಸುತ್ತವೆಯಾದರೂ, ಮುಖ್ಯವಾಹಿನಿಯ ಶಾಲಾ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಬಗ್ಗೆ ವಿಶ್ವಾಸ ಇಲ್ಲದಿರುವುದನ್ನೂ ಇವು ಹೇಳುತ್ತಿವೆ. ಸ್ಪರ್ಧಾತ್ಮಕತೆ, ಜೊತೆಗಾರರು ತರುವ ಒತ್ತಡ ಕೂಡ ವಿದ್ಯಾರ್ಥಿಗಳು ಮನೆಪಾಠದ ಕೇಂದ್ರಗಳಿಗೆ ಹೋಗುವುದಕ್ಕೆ ಪ್ರಮುಖ ಕಾರಣ. ಶೈಕ್ಷಣಿಕವಾಗಿ ಮಕ್ಕಳು ಎದುರಿಸಬಹುದಾದ ಸವಾಲುಗಳನ್ನು ನಿಭಾಯಿಸಲು ನೆರವಾಗುವ ಉದ್ದೇಶವು ಮನೆಪಾಠದ ವ್ಯವಸ್ಥೆಗೆ ಇದೆಯಾದರೂ, ಇದು ಮಕ್ಕಳ ಮೇಲೆ ಬಹಳಷ್ಟು ಒತ್ತಡ ಸೃಷ್ಟಿಸುತ್ತಿದೆ. ಶಾಲಾ ಅವಧಿಯ ನಂತರ ಮನೆಪಾಠ ಹೇಳಿಸಿಕೊಳ್ಳುವುದು, ನಂತರ ಹೋಂವರ್ಕ್ ಮಾಡುವುದು ಮಕ್ಕಳಿಗೆ ಶಿಕ್ಷೆಯಂತೆ ಭಾಸವಾಗಬಹುದು. ಮಕ್ಕಳಿಗೆ ಆಟವಾಡಲು ಹಾಗೂ ವಿರಮಿಸಿಕೊಳ್ಳಲು ಸಾಕಷ್ಟು ಸಮಯವೇ ಸಿಗದೆ ಇರಬಹುದು. ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಹೆಚ್ಚು ಮಾಡುವ ಮೂಲಕ, ಬಾಹ್ಯ ಮನೆಪಾಠದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಸಮತೋಲನವೊಂದನ್ನು ಸಾಧಿಸಬಹುದು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪ್ರಮಾಣ ಕಡಿಮೆ ಆಗುತ್ತಿರುವುದನ್ನು ಸಮೀಕ್ಷೆಯು ತೋರಿಸಿದೆ. 1970ರ ದಶಕದಲ್ಲಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಶೇ 74ರಷ್ಟು ಇದ್ದಿದ್ದು, ಈಗ ಶೇ 51–56ಕ್ಕೆ ಕುಸಿದಿದೆ. ಆದರೆ, ಇಲ್ಲಿ ಸರ್ಕಾರಿ ಶಾಲೆಗಳ ಮಹತ್ವ ಏನು ಎಂಬುದನ್ನೂ ಸಿಎಂಎಸ್ ತೋರಿಸಿಕೊಟ್ಟಿದೆ. ಖಾಸಗಿ ಶಾಲೆಗಳಲ್ಲಿ ಮಗುವೊಂದಕ್ಕೆ ಶಿಕ್ಷಣ ಕೊಡಿಸಲು ಬೇಕಾಗುವ ವಾರ್ಷಿಕ ಸರಾಸರಿ ಮೊತ್ತ ₹25 ಸಾವಿರ, ಸರ್ಕಾರಿ ಶಾಲೆಯಲ್ಲಿ ಈ ಮೊತ್ತ ₹2,863 ಎಂಬುದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಎದುರು ಸೋತಿವೆ. ಆದರೆ ಕೇರಳ ರಾಜ್ಯ ಹಾಗೂ ದೆಹಲಿಯಂತಹ ಕೇಂದ್ರಾಡಳಿತ ಪ್ರದೇಶ ಈ ಮಾತಿಗೆ ಅಪವಾದವಾಗಿ ನಿಂತಿವೆ. ಕೇರಳ ಹಾಗೂ ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಈಚೆಗೆ ಕೆಲವು ವರ್ಷಗಳಲ್ಲಿ ವಿಶೇಷ ಪ್ರಯತ್ನಗಳು ನಡೆದಿವೆ. ವಿರೋಧಾಭಾಸವೆಂದರೆ, ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಪಾವತಿಸಿದ ನಂತರವೂ ಪಾಲಕರು ತಮ್ಮ ಮಕ್ಕಳನ್ನು ಮನೆಪಾಠಕ್ಕೆ ಕಳುಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪ್ರಮಾಣ ಕಡಿಮೆ ಆಗುತ್ತಿರುವುದು ಕಳವಳಕಾರಿ. ಇದನ್ನು ಸರಿಪಡಿಸಲು ಅಗತ್ಯ ಕ್ರಮಗಳು ಆಗಬೇಕು.
ದೇಶದ ಎಲ್ಲೆಡೆ ತಲೆ ಎತ್ತಿರುವ ಟ್ಯೂಷನ್ ಕೇಂದ್ರಗಳು ಹಾಗೂ ಖಾಸಗಿಯಾಗಿ ಮನೆಪಾಠ ಹೇಳುವವರಷ್ಟೇ ಅಲ್ಲದೆ, ದೊಡ್ಡ ಶಿಕ್ಷಣ ಸಂಸ್ಥೆಗಳು ಕೂಡ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸುವವರನ್ನು ಗುರಿಯಾಗಿಸಿಕೊಂಡು ಕೋಚಿಂಗ್ ಕೇಂದ್ರಗಳನ್ನು ನಡೆಸುತ್ತಿವೆ. ರಾಜಸ್ಥಾನದ ಕೋಟ ಪ್ರದೇಶವು ಇಂತಹ ಕೇಂದ್ರಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವಂತೆ ಬೆಳೆದುನಿಂತಿದೆ. ಇಂತಹ ಕೆಲವು ಕೇಂದ್ರಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸೃಷ್ಟಿಸುವ ಒತ್ತಡದ ಕಾರಣಕ್ಕಾಗಿ ಅವುಗಳ ಚಟುವಟಿಕೆಗಳು ದೇಶದ ಗಮನ ಸೆಳೆದಿವೆ. ಇಂತಹ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳೂ ಇವೆ. ಇವುಗಳ ಮೇಲೆ ಕಾನೂನಿನ ನಿಗಾ ಸಮರ್ಪಕವಾಗಿ ಇಲ್ಲ. ಶಾಲಾ ಶಿಕ್ಷಣವನ್ನು ಇನ್ನಷ್ಟು ಬಲಪಡಿಸಿ, ಸಮಗ್ರ ಆಯಾಮದ ಕಲಿಕೆಯತ್ತ ಗುರಿಯನ್ನು ತಿರುಗಿಸುವ ಮೂಲಕ ಇವುಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.