ADVERTISEMENT

ಜಾಗತಿಕ ಹಸಿವಿನ ಸೂಚ್ಯಂಕ: ಭಾರತಕ್ಕೆ ಸ್ವವಿಮರ್ಶೆಗೆ ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 3:29 IST
Last Updated 20 ಅಕ್ಟೋಬರ್ 2021, 3:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಜಾಗತಿಕ ಹಸಿವಿನ ಸೂಚ್ಯಂಕ– 2021’ರಲ್ಲಿ ಭಾರತ ತೀರಾ ಕೆಳಗಿನ ರ್‍ಯಾಂಕ್‌ ಪಡೆದಿರುವುದು ದೇಶದಲ್ಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಪರಿಕಲ್ಪನೆಗಳ ಟೊಳ್ಳುತನವನ್ನು ಸೂಚಿಸುವಂತಿದೆ. 2020ರ ‘ಹಸಿವಿನ ಸೂಚ್ಯಂಕ’ದಲ್ಲಿ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 116 ದೇಶಗಳ ಪೈಕಿ 101ನೇ ಸ್ಥಾನ ಪಡೆದಿದೆ. ನೆರೆದೇಶಗಳಾದ ಬಾಂಗ್ಲಾದೇಶ (76), ಪಾಕಿಸ್ತಾನ (92), ನೇಪಾಳ (76) ಹಾಗೂ ಮ್ಯಾನ್ಮಾರ್‌ (71) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ.

ದಕ್ಷಿಣ ಏಷ್ಯಾದಲ್ಲಿ ಯುದ್ಧ ಮತ್ತು ಆಂತರಿಕ ಸಂಘರ್ಷದ ದಳ್ಳುರಿಗೆ ಸಿಲುಕಿರುವ ಅಫ್ಗಾನಿಸ್ತಾನ ಮಾತ್ರ ಭಾರತಕ್ಕಿಂತ ಕಳಪೆ ಸ್ಥಿತಿಯಲ್ಲಿದೆ. ಐರ್ಲೆಂಡ್‌ನ ‘ಕನ್ಸರ್ನ್‌ ವರ್ಲ್ಡ್‌ವೈಡ್‌’ ಮತ್ತು ಜರ್ಮನಿಯ ‘ವೆಲ್ತ್‌ ಹಂಗರ್‌ ಹಿಲ್ಫ್‌’ ಸಂಸ್ಥೆಗಳು, ವಿಶ್ವದ 116 ದೇಶಗಳಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ‘ಹಸಿವಿನ ಸೂಚ್ಯಂಕ’ (ಜಿಎಚ್‌ಐ) ಸಿದ್ಧಪಡಿಸಿವೆ.

ಅಪೌಷ್ಟಿಕತೆ, ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ, ಎತ್ತರ ಮತ್ತು ತೂಕ ಕಡಿಮೆ ಇರುವುದನ್ನು ಪರಿಗಣಿಸಿ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ‘ಭಾರತದಲ್ಲಿನ ಹಸಿವಿನ ಪರಿಸ್ಥಿತಿಯು ಅಪಾಯಕಾರಿ’ ಎಂದು ಜಿಎಚ್‌ಐ ವರದಿ ಆತಂಕ ವ್ಯಕ್ತಪಡಿಸಿದೆ. ಯೆಮನ್‌ ಮತ್ತು ಸೊಮಾಲಿಯಾದಂತಹ ಹದಿನೈದು ಕಡು ಬಡ ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ.

ADVERTISEMENT

ಈ ದುಃಸ್ಥಿತಿ ನಮಗೆ ಕಳವಳ ಹುಟ್ಟಿಸಬೇಕು, ಅವಮಾನ ಉಂಟು ಮಾಡಬೇಕು. ಹಸಿವಿನ ಸೂಚ್ಯಂಕದಲ್ಲಿ ಪಡೆದಿರುವ ಕಳಪೆ ಸ್ಥಾನ ದೇಶದ ಅಭಿವೃದ್ಧಿ ಕಾರ್ಯಕ್ರಮಗಳ ವೈಫಲ್ಯವನ್ನು ಸೂಚಿಸುತ್ತಿದೆ. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದೆ. ಕೊರೊನಾ ವೈರಾಣುವನ್ನು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ ಜನರ ಮೇಲೆ ತೀವ್ರ ಪರಿಣಾಮ ಬೀರಿರುವುದು ಭಾರತದ ಕಳಪೆ ಸಾಧನೆಗೆ ಕಾರಣ
ಗಳಲ್ಲೊಂದಾಗಿದೆ.

ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆಯೊಂದಿಗೆ, ಬಡತನ, ಹಸಿವು ಹಾಗೂ ಅಪೌಷ್ಟಿಕತೆಯ ನೆಲೆಯೂ ಆಗಿರುವುದು ವಿಪರ್ಯಾಸ. ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ 2015ರಲ್ಲಿ 93 ಹಾಗೂ 2000ದಲ್ಲಿ 83ನೇ ಸ್ಥಾನ ಪಡೆದಿತ್ತು. ಈಗಿನ 101ನೇ ಸ್ಥಾನವನ್ನು ಗಮನಿಸಿದರೆ, ಕಳೆದ ಎರಡು ದಶಕಗಳ ಅವಧಿಯಲ್ಲಿ ಆಹಾರದ ಸಮಸ್ಯೆಯನ್ನು ಪರಿಹರಿಸುವ ಸವಾಲಿನಲ್ಲಿ ನಾವು ಇನ್ನಷ್ಟು ಹಿಂದುಳಿದಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನಡೆಯನ್ನು ಪ್ರಾಂಜಲ ಮನಸ್ಸಿನಿಂದ ನೋಡುವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಸಿವಿನ ಸೂಚ್ಯಂಕದ ವರದಿಗೆ ಸರ್ಕಾರದ ಕಡೆಯಿಂದ ಸ್ವವಿಮರ್ಶೆಯ ಪ್ರತಿಕ್ರಿಯೆ ವ್ಯಕ್ತವಾಗುವ ಬದಲು, ಭಾರತದ ವರ್ಚಸ್ಸನ್ನು ಕುಂದಿಸುವ ಪಿತೂರಿಯ ರೂಪದಲ್ಲಿ ವರದಿಯನ್ನು ನೋಡಲಾಗುತ್ತಿದೆ. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯು ವಾಸ್ತವವನ್ನು ಒಪ್ಪಿಕೊಳ್ಳುವುದೇ ಆಗಿದೆ. ಸತ್ಯವನ್ನು ಒಪ್ಪಿಕೊಳ್ಳಲು ಹಿಂದೆಮುಂದೆ ನೋಡುವುದು ಹಾಗೂ ಸಮಾಜದಲ್ಲಿ ಎಲ್ಲವೂ ಸರಿ ಇದೆ ಎನ್ನುವ ಭ್ರಮೆಯನ್ನು ಹುಟ್ಟಿಸುವುದರಿಂದ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಗೋಡೆಗಳನ್ನು ಕಟ್ಟುವ ಮೂಲಕ ಕೊಳೆಗೇರಿಗಳನ್ನು ಮರೆಮಾಚಬಹುದೇ ಹೊರತು ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯಾನಂತರದ ಏಳೂವರೆ ದಶಕಗಳ ನಂತರವೂ ಪಡಿತರ ವಿತರಣೆಯಲ್ಲಿನ ಅವ್ಯವಸ್ಥೆ ಹೋಗಲಾಡಿಸಲು ಸಾಧ್ಯವಾಗಿಲ್ಲ; ತಾಯಂದಿರು ಮತ್ತು ಹಸುಗೂಸುಗಳ ಪೋಷಣೆ ಗಂಭೀರ ಸಮಸ್ಯೆಯಾಗಿಯೇ ಉಳಿದಿದೆ. ಈ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಸರ್ಕಾರ ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕೇ ವಿನಾ ಸಮಸ್ಯೆಯನ್ನೇ ನಿರಾಕರಿಸುವುದು ವಿವೇಕದ ನಡವಳಿಕೆಯಲ್ಲ.

ಹಸಿವಿನ ಸಮಸ್ಯೆಯ ಜೊತೆಗೆ ಆಹಾರವನ್ನು ಪೋಲು ಮಾಡುವ ಹಾಗೂ ಗೋದಾಮುಗಳಲ್ಲಿ ಕೊಳೆಯಿಸುವ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಬೇಕು. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಂಡು, ಲಕ್ಷಾಂತರ ವಲಸೆ ಕಾರ್ಮಿಕರು ಹಸಿವಿನಿಂದ ಒದ್ದಾಡುತ್ತಿದ್ದ ಸಮಯದಲ್ಲೇ ಸುಮಾರು 8 ಕೋಟಿ ಟನ್‌ ಆಹಾರಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುವ ಸ್ಥಿತಿಯಲ್ಲಿದ್ದವು ಹಾಗೂ ಮುಗ್ಗಲು ಅಕ್ಕಿಯಿಂದ ಸ್ಯಾನಿಟೈಸರ್‌ ತಯಾರಿಸಬೇಕೆನ್ನುವ ಚಿಂತನೆ ವ್ಯಕ್ತವಾಗಿತ್ತು. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಪ್ರತಿವರ್ಷ ಮೂರು ಸಾವಿರ ಟನ್‌ಗೂ ಹೆಚ್ಚಿನ ಆಹಾರಧಾನ್ಯಗಳು ಹಾಳಾಗುತ್ತಿರುವುದರ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಸಾವಿರಾರು ಟನ್‌ ಆಹಾರ ಧಾನ್ಯಗಳು ಅಧಿಕಾರಿಗಳ ನಡುವಿನ ಸಂವಹನದ ಕೊರತೆಯಿಂದಾಗಿ ಕೊಳೆತುಹೋಗಿದ್ದ ಘಟನೆ ಕಳೆದ ವರ್ಷ ವರದಿಯಾಗಿತ್ತು. ಶ್ರೀಮಂತವರ್ಗ ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಐದನೇ ಒಂದು ಪಾಲು ಪೋಲಾಗುತ್ತಿದೆ ಎನ್ನುವ ವರದಿಯೂ ಇದೆ. ಬಡತನ ಮತ್ತು ಹಸಿವು ನಿರ್ಮೂಲನೆಗೆ ‘ಗರೀಬಿ ಹಠಾವೊ’ದಿಂದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ದೇಶದಲ್ಲಿ ಜಾರಿಗೊಂಡಿವೆ. ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುವ ಯೋಜನೆಗಳು ಎಲ್ಲ ರಾಜ್ಯಗಳಲ್ಲೂ ಇವೆ. ಇಷ್ಟೆಲ್ಲ ಯೋಜನೆಗಳ ನಂತರವೂ ಹಸಿವಿನ ಸಮಸ್ಯೆ ಬಗೆಹರಿದಿಲ್ಲ. ‘ಹಸಿವುಮುಕ್ತ ಭಾರತ’ದ ಘೋಷಣೆ ಮಾತಿನ ರೂಪದಿಂದ ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ, ಆಹಾರಧಾನ್ಯಗಳ ವೈಜ್ಞಾನಿಕ ಸಂಗ್ರಹ ಮತ್ತು ವಿತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.