
ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಣ ಬಹುನಿರೀಕ್ಷಿತ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ಟಿಎ) ಅಂತಿಮಗೊಂಡಿದೆ. ಇದರಿಂದಾಗಿ, ವಿಶ್ವದ ಎರಡು ಬಹುದೊಡ್ಡ ಆರ್ಥಿಕ ಶಕ್ತಿಗಳು ಒಟ್ಟುಗೂಡಲು ಸಾಧ್ಯವಾಗಿದೆ. ನವದೆಹಲಿಯಲ್ಲಿ ನಡೆದ ಭಾರತ–ಇಯು ಶೃಂಗಸಭೆಯಲ್ಲಿ ಎಫ್‌ಟಿಎಗೆ ಸಂಬಂಧಿಸಿದ ಮಾತುಕತೆ ಮಂಗಳವಾರ ಪೂರ್ಣಗೊಂಡಿದೆ. ಈ ಚಾರಿತ್ರಿಕ ಒಪ್ಪಂದದ ಮೂಲಕ, ಇನ್ನೂರು ಕೋಟಿ ಜನರನ್ನು ಒಳಗೊಂಡಿರುವ ವಾಣಿಜ್ಯ ವಲಯಗಳ ನಡುವೆ ಮುಕ್ತ ವ್ಯಾಪಾರಕ್ಕೆ ಬಹುದೊಡ್ಡ ಅವಕಾಶವೊಂದು ರೂಪುಗೊಂಡಿದೆ. ಅಮೆರಿಕದೊಂದಿಗೆ ಭಾರತ ಮತ್ತು ಇಯು ಹೊಂದಿರುವ ವಾಣಿಜ್ಯ ವ್ಯಾಪಾರ ಸಂಬಂಧಕ್ಕೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರಿರುವ ಸುಂಕ ಸಮರವು ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು, ಸುಮಾರು ಎರಡು ದಶಕಗಳ ಹಿಂದೆಯೇ ಆರಂಭಗೊಂಡಿದ್ದ ಎಫ್‌ಟಿಎ ಒಪ್ಪಂದ ಅಂತಿಮಗೊಳ್ಳಲು ವೇಗವರ್ಧಕವಾಗಿ ಕೆಲಸ ಮಾಡಿರುವಂತಿದೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಟ್ರಂಪ್ ಅವರಿಗೆ ಸಂದೇಶ ರವಾನಿಸುವ ಸಂಕೇತದ ರೂಪದಲ್ಲಿಯೂ ಪ್ರಸಕ್ತ ಒಪ್ಪಂದವನ್ನು ನೋಡಬಹುದಾಗಿದೆ. ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ಫಾಂಡರ್ ಲೇಯನ್ ಅವರು, ವಿಶ್ವದಲ್ಲಿ ವ್ಯಾಪಾರವನ್ನು ಆಯುಧದಂತೆ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಹೇಳಿರುವುದನ್ನೂ ಟ್ರಂಪ್ ಅವರ ವ್ಯಾಪಾರ ನೀತಿಯಿಂದ ಉಂಟಾದ ಅಸ್ತವ್ಯಸ್ತ ಪರಿಸ್ಥಿತಿಗೆ ಪ್ರತಿಕ್ರಿಯೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಸಕ್ತ ಒಪ್ಪಂದವು ಉಭಯತ್ರರಿಗೂ ಲಾಭದಾಯಕವಾಗಿದೆ, ಎರಡೂ ಬಣಗಳು ನಷ್ಟವನ್ನು ಕನಿಷ್ಠಗೊಳಿಸಿ ಲಾಭವನ್ನು ಗರಿಷ್ಠಗೊಳಿಸುವ ತಂತ್ರ ಅನುಸರಿಸಿವೆ.
ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಇಯುನಿಂದ ಭಾರತಕ್ಕೆ ರಫ್ತಾಗುವ ಸರಕುಗಳ ಒಟ್ಟು ಮೌಲ್ಯ ದ್ವಿಗುಣ
ಗೊಳ್ಳುವ ನಿರೀಕ್ಷೆಯಿದೆ. ಭಾರತದಿಂದ ಇಯುಗೆ ಆಗುತ್ತಿರುವ ರಫ್ತು ವಹಿವಾಟಿನ ಪ್ರಮಾಣ 3ರಿಂದ 4 ಶತ
ಕೋಟಿ ಡಾಲರ್‌ಗಳಷ್ಟು ಹೆಚ್ಚಾಗಲಿದೆ. 2024–25ರಲ್ಲಿ 137 ಶತಕೋಟಿ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರ ನಡೆದಿದೆ. ಭಾರತ 75.85 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದು, 60.68 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಎರಡೂ ಬಣಗಳು ಬೃಹತ್ ಆರ್ಥಿಕತೆಯನ್ನು ಹೊಂದಿದ್ದು, ವಿಶ್ವದ ಒಟ್ಟು ಜಿಡಿಪಿಯಲ್ಲಿ ಶೇ 25ರಷ್ಟು ಪಾಲು ಹೊಂದಿವೆ; ಇದು ಒಟ್ಟು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವಾಗಿದೆ. ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಇಯು ಶೇ 99.5ರಷ್ಟು ಸುಂಕ ತಗ್ಗಿಸಲಿದೆ ಹಾಗೂ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ತೆರಿಗೆಯನ್ನು ಭಾರತ ಶೇ 92ರಷ್ಟು ಕಡಿಮೆ ಮಾಡಲಿದೆ. ಮೌಲ್ಯದ ಆಧಾರದ ಮೇಲೆ ಶೇ 30ರಷ್ಟು ವ್ಯಾಪಾರದ ಸುಂಕವನ್ನು ಸೊನ್ನೆಗಿಳಿಸಲು ಭಾರತ ಸಮ್ಮತಿಸಿದೆ. ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಔಷಧಗಳ ಮೇಲಿನ ಭಾರತದ ಬಹುತೇಕ ತೆರಿಗೆಗಳು ರದ್ದಾಗಲಿವೆ. ಯುರೋಪಿಯನ್ ಕಾರುಗಳು, ವೈನ್, ವೈದ್ಯಕೀಯ ಸಲಕರಣೆ ಮತ್ತು ಯಂತ್ರೋಪಕರಣಗಳು ಭಾರತದಲ್ಲಿ ಅಗ್ಗವಾಗಲಿವೆ. ಭಾರತದ ಸಿದ್ಧಉಡುಪುಗಳ ರಫ್ತಿಗೆ ಉತ್ತೇಜನ ದೊರೆಯಲಿದೆ. ಹೈನು ಉತ್ಪನ್ನಗಳು ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ರಿಯಾಯಿತಿ ನೀಡದಿರುವ ಎಚ್ಚರವನ್ನೂ ಭಾರತ ಪ್ರದರ್ಶಿಸಿದೆ. ಉಭಯ ಬಣಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಶಾಸನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ಸುಮಾರು ಒಂದು ವರ್ಷದೊಳಗೆ ಈ ಒಪ್ಪಂದ ಜಾರಿಗೆ ಬರಲಿದೆ.
ಭಾರತ–ಇಯು ಶೃಂಗಸಭೆಯ ಫಲಶ್ರುತಿಯಾಗಿ ಮಹತ್ವದ ವ್ಯಾಪಾರ ಒಪ್ಪಂದ ಹೊರಹೊಮ್ಮಿದ್ದರೂ, ಈ ಶೃಂಗಸಭೆಗೆ ಮತ್ತೂ ಹೆಚ್ಚಿನ ಮಹತ್ವವಿದೆ. ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಸಹಕಾರವನ್ನು ಬಲಪಡಿಸುವ ರಚನಾತ್ಮಕ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆಯೂ ಒಪ್ಪಂದ ನಡೆದಿದೆ. ರಕ್ಷಣೆ, ಸಾಗರ ಭದ್ರತೆ, ಶುದ್ಧ ಇಂಧನ, ಡಿಜಿಟಲ್ ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಹವಾಮಾನಕ್ಕೆ ಸಂಬಂಧಿಸಿದ ಹೊಣೆಗಾರಿಕೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಈಗಾಗಲೇ ಇರುವ ಸಹಕಾರದ ಮೇಲೆಯೂ ಒಪ್ಪಂದಗಳು ರೂಪುಗೊಂಡಿವೆ. ವ್ಯಾಪಾರ, ಭದ್ರತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಪರಸ್ಪರ ಗಾಢ ಸಂಬಂಧ ಹೊಂದಿರುವ ಸಂದೇಶವನ್ನೂ ಈ ಒಪ್ಪಂದ ಸ್ಪಷ್ಟವಾಗಿ ಸಾರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.