ADVERTISEMENT

ಸಂಪಾದಕೀಯ: ತಗ್ಗುತ್ತಿರುವ ಹಣದುಬ್ಬರ ಪ್ರಮಾಣ–ಬೆಳವಣಿಗೆಗೆ ವೇಗ ನೀಡಲು ಸಕಾಲ

ಸಂಪಾದಕೀಯ
Published 17 ಆಗಸ್ಟ್ 2025, 19:29 IST
Last Updated 17 ಆಗಸ್ಟ್ 2025, 19:29 IST
   

ವರ್ಷಗಳಿಂದ ಏರುಗತಿಯಲ್ಲಿ ಇದ್ದ ‘ಗ್ರಾಹಕ ಬೆಲೆ ಸೂಚ್ಯಂಕ’ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ದರವು ಈಗ ಕೆಲವು ತಿಂಗಳುಗಳಿಂದ ಇಳಿಮುಖವಾಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಜುಲೈ ತಿಂಗಳಲ್ಲಿ ಎಂಟು ವರ್ಷಗಳ ಕನಿಷ್ಠ ಮಟ್ಟವಾದ ಶೇ 1.55ಕ್ಕೆ ತಗ್ಗಿದೆ. ತರಕಾರಿ ಹಾಗೂ ಧಾನ್ಯಗಳು ಸೇರಿದಂತೆ ವಿವಿಧ ಬಗೆಯ ಆಹಾರ ಉತ್ಪನ್ನಗಳ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರ ಪ್ರಮಾಣ ತಗ್ಗಲು ಕಾರಣವಾಗಿದೆ. ಹಿಂದಿನ ವರ್ಷದ ಜುಲೈನಲ್ಲಿ ಹಣದುಬ್ಬರ ಪ್ರಮಾಣವು ಶೇ 3.6ರಷ್ಟು ಇತ್ತು. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಆಹಾರ ವಸ್ತುಗಳ ಬೆಲೆಯು ಇಳಿಕೆ ಕಂಡಿದೆ. ಮುಂಗಾರು ಮಳೆಯು ಚೆನ್ನಾಗಿ ಆಗುತ್ತಿರುವ ಕಾರಣಕ್ಕೆ ಹಾಗೂ ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆದಿರುವ ಪರಿಣಾಮವಾಗಿ ಆಹಾರ ವಸ್ತುಗಳ ಬೆಲೆಯು ಮುಂದಿನ ದಿನಗಳಲ್ಲಿಯೂ ತೀರಾ ಹೆಚ್ಚಾಗುವ ಸಾಧ್ಯತೆ ಇಲ್ಲ. ಜಲಾಶಯಗಳಲ್ಲಿ ನೀರಿನ ಸಂಗ್ರಹವು ಚೆನ್ನಾಗಿ ಇದೆ. ಮುಂಗಾರು ಬೆಳೆಯು ಚೆನ್ನಾಗಿ ಆಗುವ ಅಂದಾಜು ಇದೆ. ಇವೆಲ್ಲವೂ ಬೆಲೆಯ ಸ್ಥಿರತೆಗೆ ನೆರವಾಗಲಿವೆ.

ಆಹಾರ ವಸ್ತುಗಳು ಹಾಗೂ ಇಂಧನವನ್ನು ಹೊರತುಪಡಿಸಿ ಇತರ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇ 4.1ರಷ್ಟು ಆಗಿದೆ. ಇದು ಜೂನ್‌ನಲ್ಲಿ ಶೇ 4.4ರಷ್ಟಾಗಿತ್ತು. ಗ್ರಾಹಕ ಬಳಕೆಯ ಇತರ ಕೆಲವು ವರ್ಗಗಳಲ್ಲಿನ ಉತ್ಪನ್ನಗಳ ಬೆಲೆ ಏರಿಕೆಯು ಜೂನ್‌ನಲ್ಲಿದ್ದ ಪ್ರಮಾಣದಲ್ಲೇ ಉಳಿದಿದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬೆಲೆ ಏರಿಕೆಯು ಶೇ 2.4ರಷ್ಟು ಆಗಿದೆ. ಬಟ್ಟೆ ಹಾಗೂ ಪಾದರಕ್ಷೆಗಳ ಬೆಲೆ ಏರಿಕೆ ಪ್ರಮಾಣವು ಜೂನ್‌ನಲ್ಲಿ ಇದ್ದ ಮಟ್ಟದಲ್ಲೇ ಮುಂದುವರಿದಿದೆ. ಇಂಧನ ಮತ್ತು ವಿದ್ಯುತ್‌ ಬೆಲೆ ಏರಿಕೆಯು ಶೇ 2.5ರಷ್ಟು ಇದ್ದಿದ್ದು ಶೇ 2.7ಕ್ಕೆ ಹೆಚ್ಚಾಗಿದೆ. ಆದರೂ ಒಟ್ಟಾರೆ ಚಿತ್ರಣವು ಬೆಲೆ ಸ್ಥಿರತೆಯನ್ನು ಹೇಳುತ್ತಿದೆ. ದಿನಬಳಕೆಯ ಯಾವುದೇ ಉತ್ಪನ್ನದ ಬೆಲೆಯು ತಕ್ಷಣಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇಲ್ಲ. ಹೀಗಿದ್ದರೂ ಪರಿಸ್ಥಿತಿಯು ಮಧ್ಯಮಾವಧಿಯಲ್ಲಿ ಇದೇ ರೀತಿ ಉಳಿದುಕೊಳ್ಳುವುದಿಲ್ಲ. 2026ರ ಜನವರಿಯಿಂದ ಹಣದುಬ್ಬರ ಪ್ರಮಾಣವು ಹೆಚ್ಚಳ ಕಾಣಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜು ಮಾಡಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಭಾರತವು ರಷ್ಯಾ
ದಿಂದ ಕಚ್ಚಾ ತೈಲ ಖರೀದಿ ಕೈಬಿಟ್ಟರೆ, ಅದು ಕೂಡ ಹಣದುಬ್ಬರ ಹೆಚ್ಚಿಸುವ ಸಾಧ್ಯತೆ ಇದೆ.

ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಕಳವಳ ಮೂಡಿಸುವಂತೆ ಇಲ್ಲ. ಆದರೆ ಅರ್ಥ ವ್ಯವಸ್ಥೆಯ ಬೆಳವಣಿಗೆ ಕುರಿತ ಅಂದಾಜುಗಳು ತೀರಾ ಸಮಾಧಾನಕರವಾಗಿ ಇಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 6.5ರಷ್ಟು ಇರುತ್ತದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಜಾಗತಿಕ ಅನಿಶ್ಚಿತತೆಗಳು ಜಿಡಿಪಿ ಬೆಳವಣಿಗೆ ದರದ ಮೇಲೆ ಪ‍ರಿಣಾಮ ಬೀರಬಹುದು ಎಂದು ಕೂಡ ಅದು ಹೇಳಿದೆ. ಅಮೆರಿಕವು ಆರಂಭಿಸಿರುವ ಸುಂಕ ಸಮರವು ದೇಶದ ಕೆಲವು ವಲಯಗಳ ಮೇಲೆ ಪರಿಣಾಮ ಉಂಟುಮಾಡುವುದು ಖಚಿತ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಜುಲೈನಲ್ಲಿ 10 ತಿಂಗಳ ಕನಿಷ್ಠ ಮಟ್ಟದಲ್ಲಿತ್ತು. ಅರ್ಥ ವ್ಯವಸ್ಥೆಯ ಆರೋಗ್ಯವನ್ನು ಸೂಚಿಸುವ ತೆರಿಗೆ ಸಂಗ್ರಹವು ಬಹಳ ಧನಾತ್ಮಕವಾಗಿ ಇಲ್ಲ. ಹಣದುಬ್ಬರ ಪ್ರಮಾಣವು ತೀರಾ ಕಡಿಮೆ ಆಗಿರುವುದು, ಆರ್ಥಿಕ ಬೆಳವಣಿಗೆಗೆ ಇಂಬು ನೀಡಲು ಸರ್ಕಾರವು ಮುಂದಡಿ ಇರಿಸಬಹುದಾದ ಸಂದರ್ಭವೊಂದನ್ನು ಸೃಷ್ಟಿಸಿಕೊಟ್ಟಿದೆ. ಸರ್ಕಾರದ ಕಡೆಯಿಂದ ಆಗುವ ವೆಚ್ಚ, ಹೂಡಿಕೆಗಳನ್ನು ಮಾತ್ರ ಆಧರಿಸಿ ಭಾರತ ಬೆಳವಣಿಗೆ ಕಾಣಲು ಸಾಧ್ಯವಿಲ್ಲ. ಖಾಸಗಿ ವಲಯದಿಂದ ಹೂಡಿಕೆ ಹೆಚ್ಚಬೇಕು. ಬೇಡಿಕೆಯು ಚುರುಕುಗೊಳ್ಳಬೇಕು. ಬೆಳವಣಿಗೆಗೆ ವೇಗ ನೀಡಲು ಅಥವಾ ವಿಷಮ ಸನ್ನಿವೇಶ ಎದುರಾದರೆ ಈಗಿನ ಬೆಳವಣಿಗೆ ಪ್ರಮಾಣವನ್ನು ಉಳಿಸಿಕೊಳ್ಳಲು ಈ ವಿಚಾರಗಳ ಬಗ್ಗೆ ಸರ್ಕಾರವು ಗಮನಹರಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.