ADVERTISEMENT

ಶಿಶುಮರಣ ತಡೆಗೆ ಇನ್ನಷ್ಟುಗಂಭೀರ ಪ್ರಯತ್ನ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 20:00 IST
Last Updated 7 ಜನವರಿ 2020, 20:00 IST
Edit- 08012020
Edit- 08012020   

ಶಿಶುಮರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಗುಜರಾತ್‌ ಸ್ಪರ್ಧೆಗೆ ಬಿದ್ದಂತಿವೆ. ಈ ರಾಜ್ಯಗಳ ಆರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ 900ಕ್ಕೂ ಹೆಚ್ಚು ಮಕ್ಕಳು ಈ ಮೂರು ತಿಂಗಳಲ್ಲಿ ಮರಣ ಹೊಂದಿರುವುದು, ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಮೂಲಸೌಕರ್ಯ ಹಾಗೂ ಚಿಕಿತ್ಸೆಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಗುಜರಾತ್‌ನ ಅಹಮದಾಬಾದ್‌ ಮತ್ತು ರಾಜ್‌ಕೋಟ್‌ನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ 522 ಶಿಶುಗಳು ಮೃತಪಟ್ಟಿದ್ದರೆ, ರಾಜಸ್ಥಾನದಲ್ಲಿನ ಜೋಧ್‌ಪುರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಸೆಂಬರ್‌ ತಿಂಗಳೊಂದರಲ್ಲೇ 146 ಶಿಶುಗಳು ಸಾವಿಗೀಡಾಗಿವೆ.

ಪರಿಸ್ಥಿತಿ ಇಷ್ಟು ದಾರುಣವಾಗಿದ್ದರೂ ನಮ್ಮ ರಾಜಕಾರಣಿಗಳು ಕಂಗೆಟ್ಟಂತೆ ಕಾಣಿಸುತ್ತಿಲ್ಲ. ಅವರ ಉಡಾಫೆಯ ಮಾತು ಹಾಗೂ ಪರಸ್ಪರ ಕೆಸರೆರಚಾಟ ಮುಂದುವರಿದಿದೆ. ಗುಜರಾತ್‌ ಆರೋಗ್ಯ ಸಚಿವ ನಿತಿನ್ ಪಟೇಲ್‌, ‘ಸಾವಿನ ಅಂಕಿಅಂಶಗಳಿಂದ ಆತಂಕಪಡಬೇಕಿಲ್ಲ. ಶಿಶುಮರಣ ಪ್ರಮಾಣ ಸರಾಸರಿ ಪ್ರಮಾಣಕ್ಕಿಂತ ಕಡಿಮೆಯೇ ಇದೆ’ ಎಂದು ಹೇಳಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಈ ಹಿಂದಿನ ಸರ್ಕಾರದಲ್ಲಿ ಇದ್ದುದಕ್ಕಿಂತ ಪರಿಸ್ಥಿತಿಈಗ ಸುಧಾರಿಸಿದೆ ಎನ್ನುವ ಸಮಾಧಾನ. ರಾಜಸ್ಥಾನದ ಕೋಟದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್‌ ತಿಂಗಳೊಂದರಲ್ಲೇ 100ಕ್ಕೂ ಹೆಚ್ಚು ಕಂದಮ್ಮಗಳು ಸಾವಿಗೀಡಾದ ವರದಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನಸೆಳೆದಿದೆ. ರಾಜ್ಯ ಸರ್ಕಾರಕ್ಕೆ ಆಯೋಗವು ನೋಟಿಸ್‌ ಸಹ ನೀಡಿದೆ. ಆ ಆಸ್ಪತ್ರೆಯಲ್ಲಿ ಶೇಕಡ 50ಕ್ಕೂ ಹೆಚ್ಚು ಉಪಕರಣಗಳು ಬಳಸಲಾರದ ಸ್ಥಿತಿಯಲ್ಲಿವೆ ಎನ್ನಲಾಗಿದೆ. ಬಿಕಾನೇರ್‌ನಲ್ಲಿನ ಆಸ್ಪತ್ರೆಯಲ್ಲೂ ಡಿಸೆಂಬರ್‌ ತಿಂಗಳಲ್ಲಿ 162 ಶಿಶುಗಳು ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ADVERTISEMENT

ರಾಜಸ್ಥಾನ ಮತ್ತು ಗುಜರಾತ್‌ ಮಾತ್ರವಲ್ಲ, ದೇಶದ ಉಳಿದ ರಾಜ್ಯಗಳಲ್ಲೂ ಎಳೆಯ ಮಕ್ಕಳ ಸಾವನ್ನು ತಡೆಯುವ ನಿಟ್ಟಿನಲ್ಲಿನ ಪ್ರಗತಿ ಸಮಾಧಾನಕರವಾಗಿಲ್ಲ. ಮಕ್ಕಳ ಸಾವಿನ ಕುರಿತು ಅಧ್ಯಯನ ಮಾಡಿರುವ ವಿಶ್ವಸಂಸ್ಥೆಯ ಸಮಿತಿಯೊಂದರ (ಯುಎನ್‌ಐಜಿಎಂಇ) ಪ್ರಕಾರ, ವಿಶ್ವದಲ್ಲೇ ಅತಿಹೆಚ್ಚು ಶಿಶುಮರಣಗಳು ಭಾರತದಲ್ಲಿ ಸಂಭವಿಸುತ್ತಿವೆ. ಪ್ರತಿ ಎರಡು ನಿಮಿಷಕ್ಕೆ ಮೂರು ನವಜಾತ ಶಿಶುಗಳು ಭಾರತದಲ್ಲಿ ಸಾವಿಗೆ ಈಡಾಗುತ್ತಿವೆ ಎಂದು ಈ ಸಮಿತಿಯ 2018ರ ವರದಿ ತಿಳಿಸಿತ್ತು.

2017ರಲ್ಲಿ 8.02 ಲಕ್ಷ ಮಕ್ಕಳು ಮರಣ ಹೊಂದಿದ್ದು, ಈ ಪೈಕಿ 6.05 ಲಕ್ಷ ನವಜಾತ ಶಿಶುಗಳು. ಇನ್ನುಳಿದವರು 5ರಿಂದ 14ರ ವಯಸ್ಸಿನ ಮಕ್ಕಳು. ಅಪೌಷ್ಟಿಕತೆ, ಆರೋಗ್ಯ ಸೇವೆಯಲ್ಲಿನ ಮೂಲಸೌಕರ್ಯಗಳ ಅಲಭ್ಯತೆಯ ಜೊತೆಗೆ ಶುದ್ಧ ನೀರು ಹಾಗೂ ನೈರ್ಮಲ್ಯದ ಕೊರತೆ ಈ ಶಿಶುಗಳ ಸಾವಿಗೆ ಪ್ರಮುಖ ಕಾರಣಗಳು. ಅವಧಿಪೂರ್ವ ಜನನ, ಸೋಂಕು ಹಾಗೂ ಕಡಿಮೆ ತೂಕವನ್ನು ಎಳೆಯರ ಸಾವಿಗೆ ಕಾರಣಗಳನ್ನಾಗಿ ವೈದ್ಯರು ಗುರುತಿಸಿದ್ದಾರೆ.

ಐದು ವರ್ಷದೊಳಗಿನ ಬಹುಪಾಲು ಮಕ್ಕಳು ಜನನ ಸಂದರ್ಭ ದಲ್ಲಿನ ತೊಂದರೆಗಳು, ನ್ಯುಮೋನಿಯಾ, ಮಲೇರಿಯಾ, ಅತಿಸಾರದಂತಹ ಚಿಕಿತ್ಸೆ ಹಾಗೂ ನಿಯಂತ್ರಣ ಸಾಧ್ಯವಿರುವ ಆರೋಗ್ಯ ಸಮಸ್ಯೆಗಳಿಂದಲೇ ಸಾವಿಗೀಡಾಗುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಇಂತಹ ಮಕ್ಕಳ ಜೀವ ಉಳಿಸಬಹುದಿತ್ತು. ಇತ್ತೀಚಿನ ವರ್ಷಗಳಲ್ಲಿ ಲಸಿಕೆ ಅಭಿಯಾನ, ನವಜಾತ ಶಿಶುಗಳಿಗಾಗಿ ಪ್ರತ್ಯೇಕ ವಿಭಾಗಗಳ ರಚನೆ, ಜಾಗೃತಿ ಆಂದೋಲನಗಳು ಸೇರಿದಂತೆ ಹಲವಾರು ಸರ್ಕಾರಿ ಕಾರ್ಯಕ್ರಮಗಳು ದೇಶದಲ್ಲಿ ವ್ಯಾಪಕವಾಗಿ ನಡೆದಿವೆ. ಇವುಗಳ ಮೂಲಕ ಶಿಶುಮರಣ ತಡೆಯುವ ದಿಸೆಯಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿಯೂ ಸಾಧ್ಯವಾಗಿದೆ. ಆದರೂ, ಹಸುಗೂಸುಗಳು ಹುಟ್ಟಿದ ನಾಲ್ಕೈದು ವಾರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಈಗಲೂ ಅಸುನೀಗುತ್ತಿವೆ ಎನ್ನುವುದು ನೋವಿನ ಸಂಗತಿ. ಈ ಸಾವುಗಳ ಹಿನ್ನೆಲೆಯಲ್ಲಿ, ಆರೋಗ್ಯದ ಸವಲತ್ತುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಈವರೆಗಿನ ಪ್ರಯತ್ನಗಳನ್ನು ವಿಮರ್ಶಿಸಿಕೊಂಡು ಸಕ್ರಿಯವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.