ADVERTISEMENT

ಸಂಪಾದಕೀಯ: ಮಾಹಿತಿ ಆಯುಕ್ತರ ನೇಮಕ ಆದೇಶ ಹಿಂಪಡೆದು ತಪ್ಪು ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:30 IST
Last Updated 2 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರ್ನಾಟಕ ರಾಜ್ಯ ಮಾಹಿತಿ ಆಯೋಗದಲ್ಲಿ ಖಾಲಿ ಇದ್ದ ರಾಜ್ಯ ಮಾಹಿತಿ ಆಯುಕ್ತರಮೂರು ಹುದ್ದೆಗಳಿಗೆ ನೇಮಕಾತಿ ಮಾಡಿ ಏಪ್ರಿಲ್‌ 20ರಂದು ಆದೇಶ ಹೊರಡಿಸಲಾಗಿದೆ. ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ಉದ್ಯಮಿ ರವೀಂದ್ರ ಗುರುನಾಥ ಢಾಕಪ್ಪ ಮತ್ತು ಸಾರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಎಚ್‌.ಸಿ.ಸತ್ಯನ್‌ ಅವರನ್ನು ರಾಜ್ಯ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಸತ್ಯನ್‌ ಅವರು ಸರ್ಕಾರಿ ಅಧಿಕಾರಿಯಾಗಿದ್ದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪ ಎದುರಿಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಇವರ ವಿರುದ್ಧ ದಾಖಲಿಸಿರುವ ಪ್ರಕರಣ ಮೈಸೂರಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ ಇನ್ನೂ ವಿಚಾರಣಾ ಹಂತದಲ್ಲಿದೆ. ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ–2005 ಅನ್ನು 16 ವರ್ಷಗಳ ಹಿಂದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಅಸ್ತಿತ್ವಕ್ಕೆ ತಂದಿರುವ ಸ್ವಾಯತ್ತ ಸಂಸ್ಥೆಯಾಗಿರುವ ರಾಜ್ಯ ಮಾಹಿತಿ ಆಯೋಗವು ಸರ್ಕಾರದ ವಿವಿಧ ಇಲಾಖೆಗಳು, ಪ್ರಾಧಿಕಾರಗಳು ಮತ್ತು ಸಂಸ್ಥೆಗಳ ಮಾಹಿತಿಯನ್ನು ಸಾರ್ವಜನಿಕರು ಪಡೆಯುವುದಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ವಿಚಾರಣೆ ನಡೆಸಿ, ಇತ್ಯರ್ಥಪಡಿಸುವ ಅಧಿಕಾರವನ್ನು ಹೊಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರದ ವಿವಿಧ ಹಂತಗಳಲ್ಲಿ ನಡೆಯುವ ತಪ್ಪುಗಳು, ಅಕ್ರಮಗಳು, ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಗೆ ಸಂಬಂಧಿಸಿ ಮಾಹಿತಿ ಕೋರಿದ ಪ್ರಕರಣಗಳೇ ಮಾಹಿತಿ ಆಯೋಗದ ಮುಂದೆ ಬರುತ್ತವೆ. ಇಂತಹ ಅರ್ಜಿಗಳ ಕುರಿತು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿ ತೀರ್ಮಾನ ನೀಡಬೇಕಾದ ಹೊಣೆಗಾರಿಕೆ ಮಾಹಿತಿ ಆಯುಕ್ತರ ಮೇಲಿರುತ್ತದೆ. ಆದರೆ, ಸೇವೆಯಲ್ಲಿರುವಾಗ ಭ್ರಷ್ಟಾಚಾರದ ಮೂಲಕ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರದ ನಡೆಯು ಮಾಹಿತಿ ಹಕ್ಕು ಕಾಯ್ದೆಯ ಮೂಲ ಆಶಯಕ್ಕೆ ತದ್ವಿರುದ್ಧವಾಗಿದೆ.ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಅತಿಯಾದ ಭ್ರಷ್ಟಾಚಾರ ಮತ್ತು ನೇಮಕಾತಿ ಅಕ್ರಮಗಳು ಸರಣಿಯೋಪಾದಿಯಲ್ಲಿ ಹೊರಬರುತ್ತಿರುವಾಗಲೇ ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್‌ 15ರ ಪ್ರಕಾರ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ವ್ಯವಸ್ಥಾಪನೆ, ಪತ್ರಿಕೋದ್ಯಮ, ಸಮೂಹ ಮಾಧ್ಯಮ ಅಥವಾ ನಿರ್ವಹಣೆ ಮತ್ತು ಆಡಳಿತದಲ್ಲಿ ಆಳವಾದ ಜ್ಞಾನ ಮತ್ತು ಅನುಭವ ಹೊಂದಿರುವುದರೊಂದಿಗೆ ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನ ಗಳಿಸಿರುವಂಥ ವ್ಯಕ್ತಿಗಳನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಮತ್ತು ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ನೇಮಿಸಲು ಅವಕಾಶವಿದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ನೇಮಕಾತಿ ಸಮಿತಿಯು ಮಾಡುವ ಶಿಫಾರಸುಗಳ ಆಧಾರದಲ್ಲಿ ಇವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯವರಿಂದ ನಾಮನಿರ್ದೇಶಿತರಾಗುವ ಒಬ್ಬ ಸಚಿವರೂ ಈ ಸಮಿತಿಯಲ್ಲಿ ಇರುತ್ತಾರೆ. ಈ ಬಾರಿ ರಾಜ್ಯ ಮಾಹಿತಿ ಆಯುಕ್ತರ ಮೂರು ಹುದ್ದೆಗಳಿಗೆ 186 ಮಂದಿ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲರು, ಹಾಲಿ ಮತ್ತು ನಿವೃತ್ತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು, ಇತರ ಶ್ರೇಣಿಯ ಅಧಿಕಾರಿಗಳು ಮತ್ತು ಪತ್ರಕರ್ತರು ಅರ್ಜಿದಾರರಲ್ಲಿ ಸೇರಿದ್ದರು. ಅರ್ಜಿದಾರರ ಪೈಕಿ ಕೆಲವರು ಮಾಹಿತಿ ಹಕ್ಕು ಕಾಯ್ದೆಯ ವಿಷಯದಲ್ಲಿ ಆಳವಾದ ಜ್ಞಾನ ಮತ್ತು ಪರಿಣತಿ ಹೊಂದಿದ್ದರು. ಈ ಎಲ್ಲರನ್ನೂ ಕಡೆಗಣಿಸಿ, ಭ್ರಷ್ಟಾಚಾರದ ಆರೋಪದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ನಿವೃತ್ತ ಅಧಿಕಾರಿಗೆ ಮಣೆ ಹಾಕಿರುವುದು ಆಯ್ಕೆ ಪ್ರಕ್ರಿಯೆಯ ಕುರಿತು ಅನುಮಾನಗಳು ಏಳುವಂತೆ ಮಾಡಿದೆ. ನೇಮಕಾತಿಗೂ ಮೊದಲು ಅಭ್ಯರ್ಥಿಗಳ ಪೂರ್ವಾಪರ ಕುರಿತು ತನ್ನದೇ ಸಂಸ್ಥೆಗಳಿಂದ ಸರ್ಕಾರವು ಸರಿಯಾದ ಮಾಹಿತಿ ಪಡೆದಿಲ್ಲವೇ? ಈ ವಿಚಾರದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ತಮ್ಮ ವಿರೋಧವನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ದಾಖಲಿಸಿದ್ದರೇ ಎಂಬುದು ಇನ್ನೂ ಖಚಿತವಾಗಿಲ್ಲ.

ಹಿಂದೆ ನಡೆದ ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿಯನ್ನು ಪ್ರಶ್ನಿಸಿರುವ ಅರ್ಜಿಗಳು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ವಿಚಾರಣೆಗೆ ಬಾಕಿ ಇವೆ. ಮಾಹಿತಿ ಆಯುಕ್ತರ ಹುದ್ದೆ ನೇಮಕಾತಿಯಲ್ಲೂ ಭ್ರಷ್ಟಾ ಚಾರ ನಡೆಯುತ್ತಿದೆ ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈಗ ಕಳಂಕಿತರನ್ನೇ ಮಾಹಿತಿ ಆಯುಕ್ತರ ಹುದ್ದೆಯಲ್ಲಿ ಮುಂದುವರಿಸುವುದರಿಂದ ಆಯೋಗದ ಗೌರವಕ್ಕೆ ಧಕ್ಕೆಯಾಗುತ್ತದೆ. ರಾಜ್ಯ ಸರ್ಕಾರವು ಸತ್ಯನ್‌ ಅವರ ನೇಮಕಾತಿಯನ್ನು ರದ್ದುಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನದಂತೆ, ರಾಜ್ಯ ಸರ್ಕಾರವು ಮಾಹಿತಿ ಆಯುಕ್ತರ ಹುದ್ದೆ ಭರ್ತಿಗೆ ನಡೆಸಿದ ಪ್ರಕ್ರಿಯೆಯ ಎಲ್ಲ ದಾಖಲೆಗಳನ್ನೂ ಬಹಿರಂಗಪಡಿಸ ಬೇಕು. ಅಭ್ಯರ್ಥಿಗಳ ವಿವರ, ಆಯ್ಕೆಪಟ್ಟಿ ಸಿದ್ಧಪಡಿಸಲು ನಿಗದಿಪಡಿಸಿದ್ದ ಅರ್ಹತಾ ಮಾನದಂಡ, ಆಯ್ಕೆ ಸಮಿತಿಯ ನಡಾವಳಿ ಹಾಗೂ ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾರಣ ಸೇರಿದಂತೆ ಎಲ್ಲ ದಾಖಲೆಗಳನ್ನೂ ಸಾರ್ವಜನಿಕರ ಎದುರು ತೆರೆದಿಡಬೇಕು. ಮಾಹಿತಿ ಆಯುಕ್ತರ ಹುದ್ದೆಗಳ ಭರ್ತಿಗೆ ನೇಮಕಾತಿ ಮಾಡುವಾಗ ಅರ್ಹತೆಯ ಜತೆಯಲ್ಲಿ ಅಭ್ಯರ್ಥಿಯ ಪೂರ್ವಾಪರವನ್ನೂ ಪರಿಗಣಿಸಬೇಕು. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಬದ್ಧತೆಯನ್ನು ಉತ್ತೇಜಿಸಬಲ್ಲ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೇ ಅವಕಾಶ ನೀಡಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.