ADVERTISEMENT

ಸಂಪಾದಕೀಯ | ನ್ಯಾಯಮೂರ್ತಿಗಳ ಆಸ್ತಿ ಘೋಷಣೆ: ಸಕಾಲದಲ್ಲಿ ಕೈಗೊಂಡ ಸೂಕ್ತ ನಿರ್ಣಯ

ಸಂಪಾದಕೀಯ
Published 7 ಏಪ್ರಿಲ್ 2025, 23:30 IST
Last Updated 7 ಏಪ್ರಿಲ್ 2025, 23:30 IST
   

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರವನ್ನು ಬಹಿರಂಗಪಡಿಸಬೇಕು ಎಂಬ ತೀರ್ಮಾನವನ್ನು ಕೋರ್ಟ್‌ನ ಪೂರ್ಣಪೀಠವು ತೆಗೆದುಕೊಂಡಿರುವುದು ಸ್ವಾಗತಾರ್ಹ. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದಾಗ ಅವರ ಅಧಿಕೃತ ನಿವಾಸದಲ್ಲಿ ನೋಟಿನ ಕಂತೆಗಳು ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವರದಿಯಾದ ನಂತರದಲ್ಲಿ ಪೂರ್ಣಪೀಠವು ಈ ತೀರ್ಮಾನ ಕೈಗೊಂಡಿದೆ. ನ್ಯಾಯಮೂರ್ತಿ ವರ್ಮಾ ಅವರನ್ನು ಈಗ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಅವರ ಅಧಿಕೃತ ನಿವಾಸದಲ್ಲಿ ನೋಟುಗಳ ಕಂತೆಗಳು ದೊರೆತ ವರದಿಗಳು ಹಲವು ಪ್ರಶ್ನೆಗಳನ್ನು ಮೂಡಿಸಿವೆ. ಪೂರ್ಣಪೀಠ ಈಗ ಕೈಗೊಂಡಿರುವ ತೀರ್ಮಾನದ ಪ್ರಕಾರ, ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ (ಸಿಜೆಐ) ಸಲ್ಲಿಸಬೇಕಿದೆ. ನ್ಯಾಯಮೂರ್ತಿಗಳು ಗಣನೀಯ ಮೌಲ್ಯದ ಯಾವುದೇ ಆಸ್ತಿಯನ್ನು ಖರೀದಿಸಿದರೆ ಅದರ ಬಗ್ಗೆಯೂ ವರದಿ ನೀಡಬೇಕಾಗುತ್ತದೆ. ಪೂರ್ಣಪೀಠದ ತೀರ್ಮಾನವು ಸಿಜೆಐ ಅವರಿಗೂ ಅನ್ವಯವಾಗುತ್ತದೆ. ಆದರೆ, ನ್ಯಾಯಮೂರ್ತಿಗಳ ಆಸ್ತಿ–ಹೊಣೆಯ ವಿವರಗಳನ್ನು ಸುಪ‍್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಕಡ್ಡಾಯವಲ್ಲ; ಅದು ಐಚ್ಛಿಕವಾಗಿರುತ್ತದೆ. ವರದಿಗಳ ಪ್ರಕಾರ, ಸಿಜೆಐ ಸಂಜೀವ್ ಖನ್ನಾ ಸೇರಿದಂತೆ ಮೂವತ್ತು ಮಂದಿ ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರಗಳನ್ನು ಈಗಾಗಲೇ ಘೋಷಿಸಿದ್ದಾರೆ.

ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರವನ್ನು ಘೋಷಿಸಬೇಕು ಎಂಬ ವಿಚಾರವು ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. 1997ರಲ್ಲಿ ಒಂದು ನಿರ್ಣಯ ಕೈಗೊಂಡಿದ್ದ ಸುಪ್ರೀಂ ಕೋರ್ಟ್‌, ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರವನ್ನು ಸಿಜೆಐ ಅವರಿಗೆ ಸಲ್ಲಿಸಬೇಕು ಎಂದು ಶಿಫಾರಸು ಮಾಡಿತ್ತು. ಹೈಕೋರ್ಟ್‌ನ ನ್ಯಾಯಮೂರ್ತಿಗಳು ಈ ವಿವರವನ್ನು ತಾವು ಕರ್ತವ್ಯ ನಿರ್ವಹಿಸುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಬೇಕಿತ್ತು. ಆದರೆ ಇದು ನ್ಯಾಯಾಂಗದ ‍ಪರಿಶೀಲನೆಗೆ ಮಾತ್ರ ಲಭ್ಯವಾಗಿರುತ್ತಿತ್ತು, ವಿವರಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಪ್ರಸ್ತಾವ ಆ ಶಿಫಾರಸಿನಲ್ಲಿ ಇರಲಿಲ್ಲ. ಆ ಶಿಫಾರಸು ಕೂಡ, ವಿವರ ಸಲ್ಲಿಸುವುದು ಐಚ್ಛಿಕವಾಗಿರುತ್ತದೆ, ವಿವರಗಳನ್ನು ಗೋಪ್ಯವಾಗಿ ಇರಿಸಲಾಗುತ್ತದೆ ಎಂದು ಹೇಳಿತ್ತು. 2005ರ ಮಾಹಿತಿ ಹಕ್ಕು ಕಾಯ್ದೆಯು ‘ಸಾರ್ವಜನಿಕ ಹಿತಾಸಕ್ತಿ ಇಲ್ಲದಿದ್ದರೆ’ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು ಅಗತ್ಯವಿಲ್ಲ ಎನ್ನುತ್ತದೆ. ಹೀಗಾಗಿ, ಆಸ್ತಿ ಘೋಷಣೆಯು ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆಸ್ತಿ ವಿವರವನ್ನು ಬಹಿರಂಗಪಡಿಸುವ ಅಗತ್ಯ ಇಲ್ಲದಿದ್ದಾಗ, ಅದನ್ನು ಗೋಪ್ಯವಾಗಿಯೇ ಇರಿಸಿಕೊಳ್ಳಬಹುದು ಎಂದು ಕೂಡ ಕೋರ್ಟ್ ಹೇಳಿತ್ತು. ಈಗ ಪೂರ್ಣಪೀಠ ಕೈಗೊಂಡಿರುವ ತೀರ್ಮಾನವು ಈ ನಿಲುವಿಗಿಂತ ಭಿನ್ನವಾಗಿದೆ.

ನ್ಯಾಯಮೂರ್ತಿಗಳು ಆಸ್ತಿ ಘೋಷಣೆ ಮಾಡುವುದು ಕಡ್ಡಾಯವಾಗಬೇಕು ಎಂದು ಕಾನೂನು ಕುರಿತ ಸಂಸದೀಯ ಸಮಿತಿಯೊಂದು 2023ರಲ್ಲಿ ಶಿಫಾರಸು ಮಾಡಿತ್ತು. ಆದರೆ, ಆ ಶಿಫಾರಸು ಆಧರಿಸಿ ಯಾವುದೇ ಕ್ರಮ ಜರುಗಿಸಿರಲಿಲ್ಲ. ಚುನಾವಣಾ ಕಣಕ್ಕೆ ಇಳಿಯುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಕೊಳ್ಳುವುದು ಕಡ್ಡಾಯ. ಚುನಾಯಿತ ಪ್ರತಿನಿಧಿಗಳು ಕೂಡ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಬೇಕು. ಅವರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದಾಗ, ಆ ಬಗ್ಗೆ ಒಂದಿಷ್ಟು ಚರ್ಚೆಗಳು ನಡೆದಿರುವ ನಿದರ್ಶನಗಳು ಹಲವು ಇವೆ. ಸಾರ್ವಜನಿಕ ಜೀವನದಲ್ಲಿ ಇರುವವರ ಜೀವನದ ಬಗ್ಗೆ ಪರಿಶೀಲನೆ ನಡೆಯುವುದು ಒಳ್ಳೆಯದು ಎಂಬ ದೃಷ್ಟಿಕೋನದಿಂದ ಗಮನಿಸಿದಾಗ, ಇಂತಹ ‍ಪ್ರಶ್ನೆಗಳು ಮೂಡಬೇಕಿರುವುದು ಸೂಕ್ತ ಎಂಬುದು ಗೊತ್ತಾಗುತ್ತದೆ. ಆಸ್ತಿಯನ್ನು ಘೋಷಿಸಿಕೊಳ್ಳುವ ಅಗತ್ಯ ಇಲ್ಲ ಎಂಬುದು ಇನ್ನಷ್ಟು ಪ್ರಶ್ನೆಗಳು ಮೂಡಲು ಕಾರಣವಾಗಬಹುದು. ಅದರಲ್ಲೂ ಮುಖ್ಯವಾಗಿ, ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯ ಮೇಲೆ ಆರೋಪಗಳು ಎದುರಾದಾಗ, ಪ್ರಶ್ನೆಗಳು ಹೆಚ್ಚು ತೀವ್ರವಾಗಿ ಇರಬಹುದು. ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಜರುಗಿಸುವುದು ಕಠಿಣ. ಅವರ ವರ್ಗಾವಣೆಗೆ ಕಾರಣ ಏನು ಎಂಬುದು ಕೂಡ ಬಹಿರಂಗವಾಗುವುದಿಲ್ಲ. ನ್ಯಾಯಾಂಗದಲ್ಲಿ ಇನ್ನಷ್ಟು ಹೆಚ್ಚು ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ. ನ್ಯಾಯಾಂಗದ ಮೇಲೆ ಸಾರ್ವಜನಿಕರು ಇರಿಸಿರುವ ವಿಶ್ವಾಸ ಕುಗ್ಗಲು ಅವಕಾಶ ಮಾಡಿಕೊಡಬಾರದು. ನ್ಯಾಯಾಂಗದಲ್ಲಿ ಉನ್ನತ ಹುದ್ದೆಯಲ್ಲಿ ಇರುವ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಘೋಷಿಸಬೇಕು ಎಂಬುದು ಉತ್ತಮ ಕ್ರಮ, ಆಸ್ತಿ ವಿವರವು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.