ADVERTISEMENT

ಕನ್ನಡಕ್ಕೆ ಒತ್ತಾಸೆ: ಸಮಕಾಲೀನ ತಲ್ಲಣಗಳಿಗೆ ಸಿಗದ ಸ್ಪಂದನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 6:52 IST
Last Updated 5 ಜನವರಿ 2019, 6:52 IST
   

ಧಾರವಾಡದಲ್ಲಿ ನಡೆಯುತ್ತಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಚಂದ್ರಶೇಖರ ಕಂಬಾರರ ಅಧ್ಯಕ್ಷ ಭಾಷಣದ ಮಾತುಗಳು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿವೆ. ಕನ್ನಡ ಮಾಧ್ಯಮವನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಅವರು ಕಟುವಾಗಿ ಟೀಕಿಸಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಪ್ರಾಥಮಿಕ ಶಿಕ್ಷಣವು ರಾಜಕಾರಣಿಗಳ ಹಿಡಿತಕ್ಕೆ ಸಿಲುಕಿ ಸಂಪೂರ್ಣವಾಗಿ ವ್ಯಾಪಾರೀಕರಣಗೊಂಡಿರುವುದನ್ನು ಸರಿಯಾಗಿ ಗುರುತಿಸಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬ ಅವರ ಸಲಹೆ ಸ್ವಾಗತಾರ್ಹ. ಕನ್ನಡ ಉಳಿಯುವ ಬಗ್ಗೆಯೇ ಅನುಮಾನ ಬರುವಷ್ಟರ ಮಟ್ಟಿಗೆ ಇಂಗ್ಲಿಷ್‌ನ ವ್ಯಾಪ್ತಿ ಹೆಚ್ಚಿದೆ ಎಂದೂ ಆತಂಕಪಟ್ಟಿದ್ದಾರೆ. 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸಲು ಹೊರಟಿರುವ ಸರ್ಕಾರದ ನಿರ್ಣಯ ಚರ್ಚೆಗೊಳಗಾಗಿರುವ ಹಿನ್ನೆಲೆಯಲ್ಲಿ ಕಂಬಾರರ ಮಾತುಗಳು ಮತ್ತು ಆತಂಕ ನಿರೀಕ್ಷಿತವಾದುವೇ ಆಗಿವೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಗಳನ್ನು ನಾಡು ಕುತೂಹಲದಿಂದ ಗಮನಿಸುತ್ತದೆ ಎನ್ನುವ ಕಾರಣಕ್ಕಾಗಿ ಕಂಬಾರರ ಮಾತುಗಳಿಗೆ ಮಹತ್ವವಿದೆ. ಈವರೆಗಿನ ಸಮ್ಮೇಳನಗಳ ಅಧ್ಯಕ್ಷರು ತಂತಮ್ಮ ಕಾಲದ ತವಕ–ತಲ್ಲಣಗಳಿಗೆ ಪ್ರತಿಕ್ರಿಯಿಸಿರುವುದನ್ನು ನೋಡಿದರೆ, ಅವರ ಭಾಷಣಗಳು ಆಯಾ ಕಾಲಘಟ್ಟದ ಚಾರಿತ್ರಿಕ ದಾಖಲೆಗಳೂ ಆಗಿವೆ. ಆ ಮಾತುಗಳನ್ನು ಪ್ರಜಾಸಮೂಹದ ಧ್ವನಿಯ ರೂಪದಲ್ಲಿ ಸರ್ಕಾರ ಗಮನಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಮ್ಮೇಳನದ ಅಧ್ಯಕ್ಷರ ಭಾಷಣವನ್ನು ಗಮನಿಸಿದರೆ, ಇಂಗ್ಲಿಷ್‌ ಮಾಧ್ಯಮ ಗುಮ್ಮದ ಹೊರತಾಗಿ ಕಂಬಾರರು ಸಮಕಾಲೀನ ಸಂಗತಿಗಳಿಗೆ ಗಮನ ನೀಡದಿರುವುದು ಅಚ್ಚರಿ ಹುಟ್ಟಿಸುವಂತಿದೆ.

ADVERTISEMENT

ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಒಂದು ಸಾವಿರ ಸುಮಂಗಲಿಯರಿಂದ ಕಲಶಗಳನ್ನು ಹೊರಿಸುವ ಪ್ರಸ್ತಾವ ವಿವಾದಕ್ಕೆ ಕಾರಣವಾಗಿತ್ತು. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿಷಯ ಕೂಡ ಚರ್ಚೆಗೊಳಗಾಗಿದೆ. ಸಿನಿಮಾರಂಗದಲ್ಲಿ ನಾಯಕಿಯರನ್ನು ಲೈಂಗಿಕವಾಗಿ ಶೋಷಿಸುವ ‘ಮೀ ಟೂ’ ಪ್ರಕರಣದ ಬಿಸಿ ಕೂಡ ಇನ್ನೂ ತಣ್ಣಗಾಗಿಲ್ಲ. ಹೆಣ್ಣುಮಕ್ಕಳ ಘನತೆಗೆ ಸಂಬಂಧಿಸಿದ ಇಂಥ ಸಂಗತಿಗಳು ಅಧ್ಯಕ್ಷರ ಗಮನವನ್ನೇ ಸೆಳೆದಿಲ್ಲ.

ಕನ್ನಡ ನುಡಿಗೆ ಪೂರಕವಾದ ತಂತ್ರಾಂಶದ ಅಗತ್ಯದ ಕುರಿತು ಮಾತನಾಡಿದ್ದರೂ, ಆ ಮಾತು ಈಗಾಗಲೇ ಅವರು ಮಂಡಿಸಿರುವ ವಿಚಾರಗಳ ಪುನರಾವರ್ತನೆಯೇ ಆಗಿದೆ. ಜಾತೀಯತೆ, ಕೋಮುವಾದ, ಕೃಷಿ, ಆಹಾರ ರಾಜಕಾರಣದಂಥ ಸಂಗತಿಗಳೂ ಹಿನ್ನೆಲೆಗೆ ಸರಿದಿವೆ. ಇಂಗ್ಲಿಷ್‌ ಮಾಧ್ಯಮದ ಬಗ್ಗೆ ಕಂಬಾರರು ಪ್ರಸ್ತಾಪಿಸಿರುವ ವಿಚಾರಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಕಷ್ಟ. ಇಂಗ್ಲಿಷ್‌ ಶಿಕ್ಷಣ ಮಾಧ್ಯಮದಿಂದ ಉಂಟಾಗುವ ಅನಾಹುತಗಳ ಬಗ್ಗೆ ವಿವರವಾಗಿ ಮಾತನಾಡಿರುವ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್‌ ನಮ್ಮಿಂದ ತೊಲಗಿಲ್ಲ. ದಿನೇ ದಿನೇ ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ’ ಎಂದಿದ್ದಾರೆ.

ಇಂಥ ಮಾತುಗಳಲ್ಲಿ ವೈಚಾರಿಕ ಎಚ್ಚರಕ್ಕಿಂತ ಭಾವುಕತೆಯೇ ಹೆಚ್ಚಾಗಿರುತ್ತದೆ. ‘ಇಂಗ್ಲಿಷ್‌ ಭಾಷೆ ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ... ನಮ್ಮಲ್ಲಿರುವ ತರತಮ ಭಾವನೆಗಳಿಗೆ, ಮೌಲ್ಯಗಳಿಗೆ, ಕೀಳರಿಮೆಗೆ, ಸರಿತಪ್ಪುಗಳ ಕಲ್ಪನೆಗೆ ಈ ಭಾಷೆಯೇ ಕಾರಣವೆಂದರೂ ತಪ್ಪಿಲ್ಲ’ ಎನ್ನುವ ಹೇಳಿಕೆಯನ್ನೂ ಒಪ್ಪುವುದು ಕಷ್ಟ. ಇಂಗ್ಲಿಷ್‌ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಆಧುನಿಕ ಭಾರತ ಪಡೆದ ಎಚ್ಚರವನ್ನು ಇದು ಮರೆಮಾಚುತ್ತದೆ.

ಕನ್ನಡದಂತಹ ದೇಸಿಭಾಷೆಗಳ ಮೇಲೆ ಇಂಗ್ಲಿಷ್‌ ಮಾಡುತ್ತಿರುವ ಆಕ್ರಮಣದ ಬಗ್ಗೆ ಆತಂಕಪಡುವ ಕಂಬಾರರು, ಹಿಂದಿ ಹೇರಿಕೆಯ ಬಗ್ಗೆ ಏನನ್ನೂ ಮಾತನಾಡಿಲ್ಲ. ಸಾಹಿತ್ಯ ಸಮ್ಮೇಳನ ಎನ್ನುವುದು ಸುಖ ದುಃಖಗಳನ್ನು ಹಂಚಿಕೊಳ್ಳುವ, ವಿಚಾರ ವಿನಿಮಯ ಮಾಡಿಕೊಳ್ಳುವ ಒಂದು ಜಾತ್ರೆ ಎನ್ನುವುದನ್ನು ಒಪ್ಪಿಕೊಳ್ಳುವ ಕಂಬಾರರು, ಆ ಜಾತ್ರೆಗೆ ಅಗತ್ಯವಾದ ಪ್ರವೇಶಿಕೆಯನ್ನು ಒದಗಿಸಿಲ್ಲ. ಪ್ರಜ್ಞಾವಂತ ಕನ್ನಡಿಗರ ನಿರೀಕ್ಷೆಗಳಿಗೆ ಅವರ ಭಾಷಣದಲ್ಲಿ ಅಂತಹ ಸ್ಪಂದನ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.