ADVERTISEMENT

ಸಂಪಾದಕೀಯ | ಮಧ್ಯಾಹ್ನದ ಬಿಸಿಯೂಟ ಯೋಜನೆ; ಸರ್ಕಾರದ ನಿರ್ಲಕ್ಷ್ಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 0:59 IST
Last Updated 14 ನವೆಂಬರ್ 2020, 0:59 IST
ಮಧ್ಯಾಹ್ನದ ಬಿಸಿಯೂಟ
ಮಧ್ಯಾಹ್ನದ ಬಿಸಿಯೂಟ   

ಶಾಲಾಮಕ್ಕಳ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಸ್ಥಗಿತಗೊಂಡಿರುವುದರ ಬಗ್ಗೆ ಹೈಕೋರ್ಟ್‌ ವ್ಯಕ್ತಪಡಿಸಿರುವ ಕಳವಳವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಂಟನೇ ತರಗತಿಯವರೆಗಿನ ಶಾಲಾಮಕ್ಕಳಿಗೆ ಬಿಸಿಯೂಟ ಪೂರೈಸುವ ಯೋಜನೆಯು ಕೋವಿಡ್‌–19 ಕಾರಣದಿಂದಾಗಿ ಸ್ಥಗಿತಗೊಂಡಿದೆ. ಶಾಲೆಗಳು ಮುಚ್ಚಿರುವ ಕಾರಣದಿಂದಾಗಿ ಮೇ 31ರಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿದೆ. ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌ ವಿಭಾಗೀಯ ಪೀಠ, ‘ಬಿಸಿಯೂಟ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿನ ರಾಜ್ಯ ಸರ್ಕಾರದ ವೈಫಲ್ಯ ಸಂವಿಧಾನದ 21ನೇ ವಿಧಿ ಕಲ್ಪಿಸಿರುವ ಜೀವಿಸುವ ಹಕ್ಕು ಮತ್ತು ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆಯಾಗಿದೆ’ ಎಂದು ಹೇಳಿದೆ. ಬಿಸಿಯೂಟ ಯೋಜನೆ ಜಾರಿಗೊಳಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಫಲವಾಗಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ
ಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಯೋಜನೆಯ ಅನುಷ್ಠಾನಕ್ಕೆ ಕೈಗೊಳ್ಳುವ ಕ್ರಮಗಳು ಮತ್ತು ಸ್ಥಗಿತಗೊಂಡ ಅವಧಿಗೆ ಸಂಬಂಧಿಸಿದಂತೆ ಮಕ್ಕಳಿಗೆ ನೀಡುವ ಪರಿಹಾರದ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಇಲಾಖೆಗೆ ಸೂಚಿಸಿದೆ. ಕೊರೊನಾ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಸಕಾಲದಲ್ಲಿ ಕೈಗೊಂಡಿತು. ಆದರೆ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮುಂದುವರಿಸುವ ದಿಸೆಯಲ್ಲಿ ಪರ್ಯಾಯ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ನಿರ್ಲಕ್ಷ್ಯ ವಹಿಸಿತು. ಪ್ರಸ್ತುತ, ಹೈಕೋರ್ಟ್‌ ತರಾಟೆಯ ನಂತರವಾದರೂ ಸರ್ಕಾರ ಎಚ್ಚೆತ್ತುಕೊಂಡು, ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸಲು ಸೂಕ್ತ ಪ್ರಯತ್ನಗಳನ್ನು ಮಾಡಬೇಕು.

ಮಧ್ಯಾಹ್ನದ ಬಿಸಿಯೂಟದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡ ಕುಟುಂಬಗಳ ಮಕ್ಕಳ ಪಾಲಿಗೆ ಸರ್ಕಾರದ ತೀರ್ಮಾನ ಹೊಡೆತವೇ ಸರಿ. ಬಿಸಿಯೂಟ ಸ್ಥಗಿತಗೊಳಿಸಿರುವುದಕ್ಕೆ ಪರ್ಯಾಯವಾಗಿ ಫಲಾನುಭವಿ ಮಕ್ಕಳ ಕುಟುಂಬಗಳಿಗೆ ಶಾಲೆಗಳಲ್ಲಿ ಪಡಿತರ ವಿತರಿಸಲಾಗಿದ್ದರೂ ಆ ಹಂಚಿಕೆ ವ್ಯವಸ್ಥಿತವಾಗಿ ನಡೆದಿಲ್ಲ. ಮಕ್ಕಳ ಹೊಟ್ಟೆ ತುಂಬಿಸಬೇಕಿದ್ದ ಪಡಿತರವು ಅಧಿಕಾರಿಗಳ ನಡುವಣ ಸಂವಹನದ ಕೊರತೆಯಿಂದಾಗಿ ಗೋದಾಮುಗಳಲ್ಲಿ ಕೊಳೆತಿರುವುದೂ ಇದೆ. ಶಾಲಾಮಕ್ಕಳಿಗೆ ವಿತರಿಸಲು ಸಂಗ್ರಹಿಸಲಾಗಿದ್ದ ಸಾವಿರಾರು ಟನ್‌ ಅಕ್ಕಿ, ಗೋಧಿ, ತೊಗರಿಬೇಳೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಲ್ಲಿ ಕೊಳೆತಿರುವ ಸುದ್ದಿ ಇತ್ತೀಚೆಗೆ ವರದಿಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಇಂಥ ಮಕ್ಕಳ ಹಸಿವೆಯನ್ನು ನೀಗಿಸುವ ದಿಸೆಯಲ್ಲಿ ಶಾಲೆಗಳಲ್ಲಿನ ಮಧ್ಯಾಹ್ನದ ಊಟದ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದನ್ನು ಸರ್ಕಾರ ಗಮನಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವ ದಿಸೆಯಲ್ಲಿ ಶಿಕ್ಷಣ ಇಲಾಖೆಯು ತೋರಿಸಿದ ಸಂಕಲ್ಪಶಕ್ತಿ ದೇಶದ ಗಮನಸೆಳೆದಿತ್ತು. ಶಾಲೆಗಳನ್ನು ಮತ್ತೆ ಯಾವಾಗ ಪ್ರಾರಂಭಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆಯೂ ಇಲಾಖೆ ಉತ್ಸಾಹದಿಂದ ಚರ್ಚೆಗಳನ್ನು ನಡೆಸುತ್ತಿದೆ. ಇಂತಹುದೇ ಹುಮ್ಮಸ್ಸು ಮತ್ತು ಇಚ್ಛಾಶಕ್ತಿಯನ್ನು ಮಕ್ಕಳಿಗೆ ಬಿಸಿಯೂಟ ನೀಡುವ ಬಗ್ಗೆಯೂ ಸರ್ಕಾರ ತೋರಿಸಬೇಕು. ವಿದ್ಯೆಯನ್ನು ಮಕ್ಕಳಿರುವಲ್ಲಿಗೇ ಕೊಂಡೊಯ್ಯುವ ಉದ್ದೇಶದ ‘ವಿದ್ಯಾಗಮ’ ಯೋಜನೆಯಂತೆ, ಊಟ ಅಥವಾ ಪಡಿತರವನ್ನು ಎಳೆಯರಿಗೆ ನೇರವಾಗಿ ತಲುಪಿಸುವ ಯೋಜನೆಯನ್ನು ರೂ‍ಪಿಸುವ ಬಗ್ಗೆ ಯೋಚಿಸಬೇಕು. ಬಹುತೇಕ ಶಾಲಾ ಶಿಕ್ಷಕರು ‘ಕೋವಿಡ್‌ ಕರ್ತವ್ಯ’ಕ್ಕೆ ನಿಯೋಜನೆಗೊಂಡಿರುವುದರಿಂದ, ಬಿಸಿಯೂಟ ಕಾರ್ಯಕ್ರಮದ ಅನುಷ್ಠಾನಕ್ಕೆ ಸ್ಥಳೀಯ ಆಡಳಿತದ ನೆರವನ್ನು ಪಡೆಯಬಹುದು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ವಿತರಣೆಯು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಬೇಕು. ಕೋವಿಡ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಬಗೆಗಿನ ನಿರ್ಲಕ್ಷ್ಯವು ಯಾವ ಕಾರಣದಿಂದಲೂ ಸಮರ್ಥನೀಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT