ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ನಲುಗದಿರಲಿ: ಸಂವಾದ–ಭಿನ್ನಮತಕ್ಕೆ ವಿರೋಧ ಸಲ್ಲ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 19:30 IST
Last Updated 30 ನವೆಂಬರ್ 2021, 19:30 IST
ಅಭಿವ್ಯಕ್ತಿ ಸ್ವಾತಂತ್ರ್ಯ ನಲುಗದಿರಲಿ
ಅಭಿವ್ಯಕ್ತಿ ಸ್ವಾತಂತ್ರ್ಯ ನಲುಗದಿರಲಿ   

ಆರೋಗ್ಯಕರ ಸಮಾಜದಲ್ಲಿ ವಿಮರ್ಶೆ, ಟೀಕೆ, ಭಿನ್ನಾಭಿಪ್ರಾಯಕ್ಕೆ ಮುಕ್ತ ಅವಕಾಶ ಇರಬೇಕು. ವಿನೋದಪ್ರಜ್ಞೆ, ಸಂವಾದಗಳಿಗೆ ಅವಕಾಶವಿಲ್ಲದ ಸಮಾಜ ಕೊಳೆಯತೊಡಗುತ್ತದೆ

ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆನ್ನುವ ಬೆಂಗಳೂರು ಪೊಲೀಸರ ಊಹೆಯ ಆಧಾರದ ಮೇಲೆ ಮುನವ್ವರ್‌ ಫಾರೂಕಿ ಅವರ ಸ್ಟ್ಯಾಂಡ್‌ ಅಪ್‌ ಕಾಮಿಡಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಉದ್ದೇಶಿತ ಈ ಕಾರ್ಯಕ್ರಮ ರದ್ದಾಗಲು ಕಾರಣವಾಗಿರುವ ಪೊಲೀಸರ ನಡವಳಿಕೆಯೇ ಒಂದು ಪ್ರಹಸನದಂತಿದೆ. ಶಾಂತಿ–ಸೌಹಾರ್ದಕ್ಕೆ ಧಕ್ಕೆಯುಂಟಾಗುವ ಆತಂಕ ಎದುರಾದಾಗ ರಕ್ಷಣೆ ನೀಡಬೇಕಾದ ಪೊಲೀಸರು, ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವುದರ ಹಿಂದೆ ಹೊಣೆಗೇಡಿತನ ಹಾಗೂ ರಾಜಕೀಯ ಪೂರ್ವಗ್ರಹ ಸ್ಪಷ್ಟವಾಗಿದೆ. ಸಾರ್ವಜನಿಕ ಸೌಹಾರ್ದಕ್ಕೆ ಯಾರಿಂದಲಾದರೂ ಭಂಗ ಉಂಟಾಗಬಹುದು ಎನ್ನುವ ಅನುಮಾನ ಉಂಟಾದಾಗ, ಆತಂಕಕ್ಕೆ ಕಾರಣ ಆಗುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವ ಬದಲು, ಸಂವಿಧಾನವೇ ಕಲ್ಪಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಪರೋಕ್ಷವಾಗಿ ಮಾಡಲು ಪೊಲೀಸ್‌ ಇಲಾಖೆಗೆ ಹೆಚ್ಚು ಉತ್ಸಾಹ ಇದ್ದಂತೆ ತೋರುತ್ತದೆ. ಬೆಂಗಳೂರು ಕಾರ್ಯಕ್ರಮ ರದ್ದಾಗಿರುವುದರ ಬಗ್ಗೆ, ‘ದ್ವೇಷ ಗೆದ್ದಿದೆ. ಕಲಾವಿದ ಸೋತಿದ್ದಾನೆ’ ಎಂದು ಮುನವ್ವರ್‌ ಟ್ವೀಟ್‌ ಮಾಡಿದ್ದಾರೆ. ಅವರ ಮಾತಿನ ಜೊತೆಗೆ, ಬೆಂಗಳೂರು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಮಾತನ್ನೂ ವಿಷಾದದಿಂದ ಸೇರಿಸಬೇಕಾಗಿದೆ. ನಿರ್ದಿಷ್ಟ ವ್ಯಕ್ತಿ ಅಥವಾ ಕಾರ್ಯಕ್ರಮದಿಂದ ಧಾರ್ಮಿಕ ಭಾವನೆಗಳಿಗೆ ಗಾಸಿಯಾಗುತ್ತದೆ ಎನ್ನುವುದನ್ನು ನಿರ್ಧರಿಸುವುದು ಯಾವುದೋ ಸಂಘಟನೆ ಅಥವಾ ಪೊಲೀಸರಿಗೆ ಸೇರಿದ ಕೆಲಸವಲ್ಲ. ನ್ಯಾಯಾಲಯಗಳಿಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ಇತರರು ಮಾಡಲು ಹೊರಡುವುದು ಕಾನೂನು ಉಲ್ಲಂಘನೆಯೇ ಆಗುತ್ತದೆ.

‘ಡೊಂಗ್ರಿ ಟು ನೋವೇರ್‌’ ಹೆಸರಿನಲ್ಲಿ ನಡೆಯ ಬೇಕಾಗಿದ್ದ ಮುನವ್ವರ್‌ ಅವರ ಕಾರ್ಯಕ್ರಮದ ಟಿಕೆಟ್‌ ಗಳನ್ನು 600 ಮಂದಿ ಕಾಯ್ದಿರಿಸಿದ್ದರು. ‘ಮುನವ್ವರ್‌ ಅವರು ಹಿಂದೂ ವಿರೋಧಿ ಆಗಿದ್ದಾರೆ. ಅವರ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಆ ದೂರಿನ ಅನ್ವಯ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್‌ ನೀಡಿದ್ದ ಪೊಲೀಸರು, ಉದ್ದೇಶಿತ ಈ ಕಾರ್ಯಕ್ರಮದಿಂದ ಕಾನೂನು, ಸುವ್ಯವಸ್ಥೆಗೆ ಧಕ್ಕೆ ಆಗಬಹುದು ಎಂಬ ಕಾರಣ ಮುಂದೊಡ್ಡಿ ರದ್ದುಪಡಿಸುವಂತೆ ‘ಸಲಹೆ’ ಮಾಡಿ ದ್ದರು. ಈ ಸಲಹೆಯನ್ನು ನಿರ್ಲಕ್ಷಿಸುವ ಧೈರ್ಯ ತೋರಲಾರದೆ ಆಯೋಜಕರುಕಾರ್ಯಕ್ರಮವನ್ನು ರದ್ದುಪಡಿಸಿದರು. ‘ನಿಯಮಾನುಸಾರ ಅನುಮತಿ ಪಡೆದು ಕಾರ್ಯಕ್ರಮ ಆಯೋಜಿಸಿದ್ದರೂ ಪೊಲೀಸರು ಏಕಾಏಕಿ ನೋಟಿಸ್‌ ನೀಡಿದ್ದಾರೆ. ಅನಗತ್ಯ ಗೊಂದಲ ಬೇಡವೆಂದು ಕಾರ್ಯಕ್ರಮ ರದ್ದುಪಡಿಸಿದ್ದೇವೆ’ ಎಂದು ಆಯೋಜಕರು ಹೇಳಿದ್ದಾರೆ. ‘ಕಾರ್ಯಕ್ರಮವನ್ನು ರದ್ದುಪಡಿಸಿರುವುದು ನ್ಯಾಯಸಮ್ಮತವಲ್ಲ. ದಿಢೀರ್‌ ರದ್ದುಪಡಿಸಿರುವುದರ ಹಿಂದೆ ಯಾರದೋ ಬೆದರಿಕೆ ಇರುವಂತಿದೆ’ ಎಂದು ಮುನವ್ವರ್‌ ಪ್ರತಿಕ್ರಿಯಿಸಿದ್ದಾರೆ. ಬಲಪಂಥೀಯ ಸಂಘಟನೆಗಳ ವಿರೋಧವನ್ನು ಮುನವ್ವರ್‌ ಒಂದು ವರ್ಷದಿಂದ ನಿರಂತರವಾಗಿ ಎದುರಿಸುತ್ತಿದ್ದಾರೆ. ಹಿಂದೂ ದೇವರುಗಳಿಗೆ ಅವಹೇಳನ ಮಾಡಿದ ಆರೋಪದ ಮೇರೆಗೆ ಮಧ್ಯಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿ, 37 ದಿನಗಳ ಕಾಲ ಜೈಲಿನಲ್ಲಿದ್ದರು. ಹಿಂದುತ್ವ ಸಂಘಟನೆಗಳ ದೂರಿನ ಆಧಾರದ ಮೇಲೆ ಬಂಧನಕ್ಕೊಳಗಾಗಿದ್ದ ಮುನವ್ವರ್‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ. ಮಧ್ಯಪ್ರದೇಶದ ಘಟನೆಯ ನಂತರ ಅವರು ದೇಶದಲ್ಲಿ ಮತ್ತೆಲ್ಲೂ ಪ್ರದರ್ಶನ ನೀಡದಂತೆ ಮಾಡುವ ಪ್ರಯತ್ನಗಳು ನಡೆದಿವೆ. ಕೆಲವರ ಬೆದರಿಕೆಗಳಿಂದಾಗಿ ಎರಡು ತಿಂಗಳ ಅವಧಿಯಲ್ಲಿ ಹನ್ನೆರಡು ಕಾರ್ಯಕ್ರಮಗಳು ರದ್ದಾಗಿವೆ ಎಂದು ಮುನವ್ವರ್‌ ಹೇಳಿದ್ದಾರೆ. ಇವೆಲ್ಲ ಬೆಳವಣಿಗೆಗಳು, ಭಿನ್ನಾಭಿಪ್ರಾಯಗಳನ್ನು ಹೊಂದಿರುವವರು ಹಾಗೂ ವಿಮರ್ಶಕರನ್ನು ಹತ್ತಿಕ್ಕುವ ಪ್ರಯತ್ನಗಳು ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವುದಕ್ಕೆ ಉದಾಹರಣೆಯಾಗಿವೆ. ಭಿನ್ನಮತ ಹೊಂದಿರುವವರು ಮುಸ್ಲಿಂ ಆಗಿದ್ದರಂತೂ ಅವರನ್ನು ಕುಗ್ಗಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಆರೋಗ್ಯಕರ ಸಮಾಜದಲ್ಲಿ ವಿಮರ್ಶೆಗೆ, ಟೀಕೆಗೆ, ಭಿನ್ನಾಭಿಪ್ರಾಯಕ್ಕೆ ಮುಕ್ತ ಅವಕಾಶ ಇರಬೇಕು. ವಿನೋದಪ್ರಜ್ಞೆ, ಸಂವಾದಗಳಿಗೆ ಅವಕಾಶವಿಲ್ಲದ ಸಮಾಜ ಕೊಳೆಯತೊಡಗುತ್ತದೆ.

ADVERTISEMENT

ಪ್ರಸಿದ್ಧ ಸ್ಟ್ಯಾಂಡ್‌ ಅಪ್‌ ಕಮಿಡಿಯನ್‌ ವೀರ್‌ ದಾಸ್‌ ಅವರು ಕೂಡ ಇತ್ತೀಚೆಗೆ ಹಿಂದುತ್ವವಾದಿಗಳ ವಿರೋಧ ಎದುರಿಸಿದ್ದರು. ಅವರು ಅಮೆರಿಕದಲ್ಲಿ ನೀಡಿದ ಕಾರ್ಯಕ್ರಮದಲ್ಲಿ ‘ಎರಡು ರೀತಿಯ ಭಾರತ’ಗಳ ಅಸ್ತಿತ್ವದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ರೈತರ ಹೋರಾಟ, ಅತ್ಯಾಚಾರ ಪ್ರಕರಣಗಳು, ಕೊರೊನಾ ವಿರುದ್ಧದ ಹೋರಾಟ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಭಾರತದಲ್ಲಿ ವಿರೋಧಾಭಾಸದ ಮನಃಸ್ಥಿತಿ ಇದೆ ಎಂದು ವಿಡಂಬಿಸಿದ್ದರು. ಇಂಥ ಕಲಾವಿದರಿಗೆ ಎದುರಾಗುವ ವಿರೋಧಗಳು ಸಮಾಜದಲ್ಲಿ ಬೆಳೆಯುತ್ತಿರುವ ಅಸಹನೆಯನ್ನು ವಿಶ್ವದ ಎದುರು ಅನಾವರಣಗೊಳಿಸುತ್ತವೆಯೇ ಹೊರತು, ರಚನಾತ್ಮಕ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. ಸಮಾಜವನ್ನು ಒಡೆಯುವ ಹಾಗೂ ಭಾರತದ ಬಹುತ್ವಕ್ಕೆ ಧಕ್ಕೆಯುಂಟು ಮಾಡುವ ಕೊಳಕು ಮಾತುಗಳನ್ನು ರಾಜಕಾರಣಿಗಳು ನಿರಂತರವಾಗಿ ಆಡುತ್ತಲೇ ಇದ್ದಾರೆ. ಸರ್ಕಾರದ ಭಾಗವಾಗಿ ಇರುವವರೇ ತಮ್ಮನ್ನು ನಿರ್ದಿಷ್ಟ ಕೋಮಿನೊಂದಿಗೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿಲ್ಲ. ಅಧಿಕಾರದಲ್ಲಿ ಇರುವವರ ಒಡಕು ಮಾತು–ನಡವಳಿಕೆಗಳ ಬಗ್ಗೆ ಮೂಕಪ್ರೇಕ್ಷಕನಂತಿರುವ ವ್ಯವಸ್ಥೆ, ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸುವವರು ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿಯುಳ್ಳವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ‍ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಯಾವುದೇ ಮಾತು–ಕೃತಿಯ ವಿರುದ್ಧ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಮುನವ್ವರ್‌ ಅವರ ಕಾರ್ಯಕ್ರಮದ ಬಗ್ಗೆ ಪೂರ್ವಗ್ರಹದಿಂದ ನಡೆದುಕೊಂಡಿರುವ ಪೊಲೀಸ್‌ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.