ADVERTISEMENT

ಸಂಪಾದಕೀಯ | ಆಡಳಿತ ಬಿಗಿಯಾಗಲಿ: ಜನರ ಸಂಕಷ್ಟಕ್ಕೆ ಸಿಗಲಿ ತ್ವರಿತ ಸ್ಪಂದನ

ಸಂಪಾದಕೀಯ
Published 29 ನವೆಂಬರ್ 2023, 0:29 IST
Last Updated 29 ನವೆಂಬರ್ 2023, 0:29 IST
   

ಜನರ ಸಮಸ್ಯೆಗಳನ್ನು ಆಲಿಸಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋಮವಾರ ಇಡೀ ದಿನ ‘ಜನಸ್ಪಂದನ’ ನಡೆಸಿದ್ದಾರೆ. ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಂದೆಡೆ ಸೇರಿಸಿಕೊಂಡು, ಜಿಲ್ಲಾಡಳಿತದ ಅಧಿಕಾರಿಗಳನ್ನು ಕೇಂದ್ರ ಕಚೇರಿಗಳಲ್ಲೇ ಇರುವಂತೆ ಸೂಚಿಸಿ ಜನರ ಸಂಕಷ್ಟಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ.

ಜನರ ನೋವಿಗೆ ಕಿವಿಯಾಗುವ ಯತ್ನ ಒಳ್ಳೆಯದೇ. ಪರಿಹಾರ ವಾಗದೆ ಉಳಿದುಕೊಂಡು ಬರುತ್ತಲೇ ಇರುವ ಸಮಸ್ಯೆಗಳು ಯಾವುವು? ಆಡಳಿತದ ಯಾವ ಹಂತದಲ್ಲಿ ನಿಜವಾದ ‘ಸ್ಪಂದನ’ ಆಗಬೇಕಿದೆ? ಆಡಳಿತ ಎಲ್ಲಿ ಹಳಿ ತಪ್ಪಿದೆ ಎಂಬುದರ ಅರಿವು ಮುಖ್ಯಮಂತ್ರಿಗೆ ಹಾಗೂ ವಿವಿಧ ಇಲಾಖೆಗಳ ಶಿಖರದಲ್ಲಿ ಕುಳಿತಿರುವ ಐಎಎಸ್ ಅಧಿಕಾರಿಗಳಿಗೆ ಆಗಬೇಕಾದರೆ ಇಂತಹ ಕಾರ್ಯಕ್ರಮ ಅಪರೂಪಕ್ಕೊಮ್ಮೆ ನಡೆಯಲೇಬೇಕು.

ದಶದಿಕ್ಕುಗಳಿಂದ ಬೆಂಗಳೂರಿಗೆ ದೌಡಾಯಿಸಿದ ಜನ, ಸರ್ಕಾರದ ಮುಖ್ಯಸ್ಥರ ಮುಂದೆ ತಮ್ಮ ಸಮಸ್ಯೆಗಳ ಮೂಟೆಯನ್ನೇ ಸುರಿದರು. ಅಹವಾಲು ಸಲ್ಲಿಸಿದವರ ಪೈಕಿ ಹಿರಿಯ ನಾಗರಿಕರು, ಅಂಗವಿಕಲರು, ಕಾನೂನಿನ ತೊಡಕುಗಳಿಂದ ತೊಂದರೆಗೆ ಒಳಗಾದವರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಲುಕಿ ಪರದಾಡುತ್ತಿರುವ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮುಖ್ಯಮಂತ್ರಿ ಮುಂದೆ ಮಂಡನೆಯಾದ ಅಹವಾಲುಗಳ ಕೆಲ ಮಾದರಿಗಳನ್ನು ಗಮನಿಸಿದರೆ, ಜಡ್ಡುಗಟ್ಟಿದ್ದ ಆಡಳಿತಯಂತ್ರವು ಸರ್ಕಾರದ ಚುಕ್ಕಾಣಿ ಹಿಡಿದ ಪಕ್ಷ ಬದಲಾಗಿ ಆರು ತಿಂಗಳು ಕಳೆದರೂ ಚುರುಕು ಪಡೆದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ADVERTISEMENT

ಜನಸ್ಪಂದನದ ಹೆಸರಿನಲ್ಲಿ ನಡೆಸಿದ ಕಾರ್ಯಕ್ರಮವು ತಳಹಂತದಲ್ಲಿ ಆಡಳಿತ ನಿಷ್ಕ್ರಿಯ ಗೊಂಡಿರುವುದನ್ನು ಮುಖ್ಯಮಂತ್ರಿ ಮುಂದೆ ತೆರೆದಿಟ್ಟಿದ್ದಂತೂ ನಿಜ. ಸಲ್ಲಿಕೆಯಾದ ಬಹುತೇಕ ದೂರುಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯವಿದೆ. ಅಂತಹ ಅಹವಾಲುಗಳನ್ನು ಕಂಡು ರೇಗಿದ ಮುಖ್ಯಮಂತ್ರಿ, ‘ಸ್ಥಳೀಯ ಮಟ್ಟದಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬಂದರೆ ಅದು ನಿಮ್ಮ ವೈಫಲ್ಯ. ಅದನ್ನು ಸಹಿಸುವುದಿಲ್ಲ’ ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಹೀಗೆ ಅಧಿಕಾರಿಗಳನ್ನು ಗದರುವುದು, ಅವರು ಕೆಲವು ದಿನ ಚುರುಕಾಗುವುದು, ಮತ್ತೆ ಮೈಮರೆವಿಗೆ ಜಾರುವುದು ಹೊಸತೇನಲ್ಲ.

‘ಜಿಲ್ಲೆಗಳಲ್ಲಿ ಜನಸ್ಪಂದನ ನಡೆಸಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದೆ. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಇದನ್ನು ಸಹಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದೂ ವರದಿಯಾಗಿದೆ. ಮುಖ್ಯಮಂತ್ರಿ ಬರೆದ ಪತ್ರವನ್ನೇ ಸಚಿವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ, ಅದನ್ನು ಪಾಲಿಸುವುದಿಲ್ಲ ಎಂದಾದರೆ ಅಂತಹ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸುವುದು ವ್ಯರ್ಥ.

ಎಲ್ಲ ಇಲಾಖೆಗಳಲ್ಲೂ ತಾಲ್ಲೂಕು, ಜಿಲ್ಲೆ, ರಾಜ್ಯ ಹೀಗೆ ಮೂರು ಹಂತದ ವ್ಯವಸ್ಥೆಗಳಿವೆ. ಆಯಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಮುಖ್ಯಮಂತ್ರಿಯವರೇ ಇಡೀ ದಿನ ಅಹವಾಲು ಸ್ವೀಕರಿಸುವ ಪ್ರಮೇಯ ಇರುತ್ತಿರಲಿಲ್ಲ. ಒಂದೇ ದಿನ 3,812 ಅರ್ಜಿಗಳು ಸಲ್ಲಿಕೆಯಾಗಿವೆ. ಕಂದಾಯ, ಪೊಲೀಸ್, ಸಾಮಾಜಿಕ ಭದ್ರತೆ, ಪಿಂಚಣಿ, ವಸತಿ, ಉದ್ಯೋಗಕ್ಕೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆಯೇ ಹೆಚ್ಚಿದೆ.

ಜಮೀನಿನ ಪಕ್ಕಾ ಪೋಡಿ, ಖಾತೆ ಬದಲಾವಣೆಯಂತಹ ಅಹವಾಲುಗಳನ್ನು ಇತ್ಯರ್ಥಪಡಿಸಲೂ ಮುಖ್ಯಮಂತ್ರಿಯವರೇ ಮಧ್ಯ‍ಪ್ರವೇಶ ಮಾಡಬೇಕಾದ ಸ್ಥಿತಿ ಉದ್ಭವಿಸಿದೆ ಎಂದಾದರೆ ಕಂದಾಯ ಇಲಾಖೆಯು ಕುಂಭಕರ್ಣ ನಿದ್ದೆಗೆ ಜಾರಿದೆ ಎಂದೇ ಅರ್ಥ. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ, ಪ್ರತಿ ತಿಂಗಳ ಎರಡನೇ ಶನಿವಾರ ತಾವೂ ಗ್ರಾಮವಾಸ್ತವ್ಯ ಮಾಡುವುದರ ಜತೆಗೆ, ಎಲ್ಲ ಜಿಲ್ಲಾಧಿಕಾರಿಗಳೂ ಗ್ರಾಮವಾಸ್ತವ್ಯ ಮಾಡಬೇಕೆಂದು ಸೂಚಿಸಿದ್ದರು. ಈ ಕಾರ್ಯಕ್ರಮ ಬಹಳಷ್ಟು ಪ್ರಚಾರವನ್ನೂ ಪಡೆದಿತ್ತು. ಹಾಗಿದ್ದರೂ ಪೋಡಿ, ಖಾತೆ ಬದಲಾವಣೆಯಂತಹ ಪ್ರಕರಣಗಳು ಮುಖ್ಯಮಂತ್ರಿಯವರೆಗೆ ಬರುತ್ತವೆ ಎಂದರೆ, ತಳಹಂತದ ಕಂದಾಯ ನಿರೀಕ್ಷಕರು, ಭೂಮಾಪಕರು, ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದಕ್ಕೆ ಬೇರೆ ಪುರಾವೆಯೇ ಬೇಡ. ಪಡಿತರಚೀಟಿ, ಮಾಸಾಶನದಂತಹ ಸಮಸ್ಯೆಗಳು ಕಾಲಮಿತಿಯಲ್ಲಿ ತಾಲ್ಲೂಕು ಹಂತದ ಆಡಳಿತದಲ್ಲೇ ಇತ್ಯರ್ಥವಾಗಬೇಕು.

ಆಡಳಿತ ಚುರುಕಾಗಿದ್ದರೆ ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೂ ಜನರು ಎಡತಾಕುವ ಅಗತ್ಯ ಇರುವುದಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದವರು ಬದಲಾದರೂ ಅಧಿಕಾರಿಗಳ ಕಾರ್ಯವೈಖರಿ ಬದಲಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಟ್ಟು, ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರೆ, ಸಮಸ್ಯೆಗಳ ಬಾಹುಳ್ಯ ಕುಸಿಯುತ್ತಿತ್ತು. ಈ ದಿಸೆಯಲ್ಲಿ ಸಚಿವರು ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ಹೊಣೆ ಮುಖ್ಯಮಂತ್ರಿ ಅವರದು. ಅಧಿಕಾರಿಗಳಿಗೆ ಬರೀ ಎಚ್ಚರಿಕೆ ನೀಡಿದರೆ ಸಾಲದು. ಜನರ ಸಂಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸದ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಎಷ್ಟು ‘ಜನಸ್ಪಂದನ’ ಕಾರ್ಯಕ್ರಮಗಳನ್ನು ನಡೆಸಿದರೂ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅಧಿಕಾರಿಗಳನ್ನು ಜನ ಶಪಿಸುವುದೂ ನಿಲ್ಲುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.