ADVERTISEMENT

ಸಂಪಾದಕೀಯ: ಮಾಲೇಗಾಂವ್‌ ಸ್ಫೋಟ ಪ್ರಕರಣ; ಹಳಿ ತಪ್ಪಿತೆ ನ್ಯಾಯದಾನ ವ್ಯವಸ್ಥೆ?

ಸಂಪಾದಕೀಯ
Published 4 ಆಗಸ್ಟ್ 2025, 20:38 IST
Last Updated 4 ಆಗಸ್ಟ್ 2025, 20:38 IST
ಸಂಪಾದಕೀಯ
ಸಂಪಾದಕೀಯ   

2008ರಲ್ಲಿ ಮಾಲೇಗಾಂವ್‌ನಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿದ್ದ ಏಳೂ ಮಂದಿಯನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಮಾಲೇಗಾಂವ್‌ನಲ್ಲಿ ನಡೆದ ಸ್ಫೋಟವು ಆರು ಮಂದಿಯ ಜೀವ ತೆಗೆದಿತ್ತು. 2006ರಲ್ಲಿ ಮುಂಬೈನಲ್ಲಿ ನಡೆದ ರೈಲು ಸ್ಫೋಟದ ಎಲ್ಲ ಆರೋಪಿಗಳನ್ನು ನ್ಯಾಯಾಲಯವೊಂದು ದೋಷಮುಕ್ತಗೊಳಿಸಿದ ಕೆಲವೇ ದಿನಗಳ ನಂತರದಲ್ಲಿ, ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿಗಳು ದೋಷಮುಕ್ತರಾಗಿದ್ದಾರೆ. ಇದು ಪ್ರಮುಖ ಪ್ರಕರಣಗಳಲ್ಲಿ ನ್ಯಾಯ ಕೊಡಿಸುವಲ್ಲಿ ತನಿಖಾಧಿಕಾರಿಗಳು ಹಾಗೂ ಪ್ರಾಸಿಕ್ಯೂಷನ್‌ ವಿಫಲವಾಗುತ್ತಿರುವುದಕ್ಕೆ ಇನ್ನೊಂದು ನಿದರ್ಶನದಂತೆ ಇದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ದೋಷಮುಕ್ತಗೊಳಿಸುತ್ತಿರುವುದಕ್ಕೆ ಸಾಕ್ಷ್ಯಾಧಾರಗಳ ಕೊರತೆ ಹಾಗೂ ಅಸಮರ್ಪಕ ತನಿಖೆಯನ್ನು ನ್ಯಾಯಾಲಯಗಳು ಕಾರಣವನ್ನಾಗಿ ಉಲ್ಲೇಖಿಸಿವೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಳ್ಳಲಾಗಿತ್ತು, ಸಾಕ್ಷಿಗಳಿಗೆ ಏನು ಹೇಳಬೇಕು ಎಂಬುದನ್ನು ಹೇಳಿಕೊಡಲಾಗಿತ್ತು ಎಂಬ ಗಂಭೀರ ಲೋಪಗಳನ್ನು ನ್ಯಾಯಾಲಯವು ಗುರುತಿಸಿದೆ. ಮಾಲೇಗಾಂವ್ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ‘ತೀವ್ರ ಪ್ರಮಾಣದಲ್ಲಿ ಅನುಮಾನವನ್ನು ಸಾಬೀತು ಮಾಡಲಾಗಿದೆಯಾದರೂ, ಆರೋಪಿಗಳು ದೋಷಿಗಳು ಎಂದು ಹೇಳಲು ಸಾಕಾಗುವಷ್ಟು ಆಧಾರ ಇರಲಿಲ್ಲ’ ಎಂದು ಹೇಳಿದೆ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಲಯವು ಸಂದೇಹದ ಲಾಭವನ್ನು ಆರೋಪಿಗಳಿಗೆ ನೀಡಿದೆ.

ಮಾಲೇಗಾಂವ್ ಪ್ರಕರಣವು ಹಲವು ಬಗೆಯ ತಿರುವುಗಳನ್ನು ಪಡೆದುಕೊಂಡಿತ್ತು. ಆ ತಿರುವುಗಳು ರಾಜಕೀಯ ಸ್ಥಿತ್ಯಂತರಗಳು, ಸರ್ಕಾರದ ಚುಕ್ಕಾಣಿ ಹಿಡಿದವರಲ್ಲಿ ಆದ ಬದಲಾವಣೆಗಳಿಗೆ ಅನುಗುಣವಾಗಿ ಇದ್ದವು. ಹೇಮಂತ ಕರ್ಕರೆ ನೇತೃತ್ವದ ‘ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ’ವು (ಎಟಿಎಸ್‌) ಬಲಪಂಥೀಯ ಹಿಂದೂ ಸಂಘಟನೆ ‘ಅಭಿನವ ಭಾರತ’ದ ಜೊತೆ ನಂಟು ಹೊಂದಿದ್ದ ವ್ಯಕ್ತಿಗಳನ್ನು ಬಂಧಿಸಿತ್ತು. ಅವರಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರೂ ಒಬ್ಬರು. ಪ್ರಜ್ಞಾ ಅವರು ನಂತರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರೂ ಆಗಿದ್ದರು. ಸ್ಫೋಟ ನಡೆದಾಗ ಮಹಾರಾಷ್ಟ್ರದಲ್ಲಿ ಹಾಗೂ ಕೇಂದ್ರದಲ್ಲಿ ಸರ್ಕಾರದ ನೇತೃತ್ವವನ್ನು ಕಾಂಗ್ರೆಸ್ ವಹಿಸಿತ್ತು. ಆಗ ‘ಕೇಸರಿ ಭಯೋತ್ಪಾದನೆ’ ಎಂಬ ಪದವು ಚಾಲ್ತಿಗೆ ಬಂದಿತ್ತು. ಪ್ರಕರಣದ ತನಿಖೆಯನ್ನು ನಂತರದಲ್ಲಿ ಎನ್‌ಐಎಗೆ ವಹಿಸಲಾಯಿತು. ಇದಾದ ನಂತರದಲ್ಲಿ, ಎನ್‌ಐಎ ಅಧಿಕಾರಿಗಳು ಕೆಲವರ ವಿರುದ್ಧದ ಆರೋಪಗಳನ್ನು ಕೈಬಿಟ್ಟರು. ಸಾಕ್ಷ್ಯಗಳ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ವಿಚಾರಣೆಯ ಸಂದರ್ಭದಲ್ಲಿ 37 ಜನ ಪ್ರತಿಕೂಲ ಸಾಕ್ಷಿಗಳಾದರು. ಆರೋಪಿಗಳ ವಿಚಾರದಲ್ಲಿ ‘ಮೃದು ಧೋರಣೆ’ ತಳೆಯುವಂತೆ ಎನ್‌ಐಎ ಸೂಚಿಸಿದೆ ಎಂದು ಆಗ ಪ್ರಕರಣದ ವಿಶೇಷ ಸರ್ಕಾರಿ ಪ್ರಾಸಿಕ್ಯೂಟರ್ ಆಗಿದ್ದ ರೋಹಿಣಿ ಸಾಲಿಯಾನ್ ಬಹಿರಂಗವಾಗಿ ಆರೋಪಿಸಿದ್ದರು. ನಂತರ ರೋಹಿಣಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಪ್ರಕರಣಗಳು ಈ ಹಿಂದೆಯೂ ತಾರ್ಕಿಕ ಅಂತ್ಯ ಕಂಡಿಲ್ಲ. 2006ರಲ್ಲಿ ನಡೆದ ಮಾಲೇಗಾಂವ್ ಸ್ಫೋಟ ಪ್ರಕರಣವು 37 ಜನರನ್ನು ಬಲಿ ಪಡೆದಿತ್ತು. ಆ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ. 2007ರಲ್ಲಿ 68 ಜನರ ಸಾವಿಗೆ ಕಾರಣವಾದ ಸಂಝೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣ, ಹೈದರಾಬಾದ್‌ ಮೆಕ್ಕಾ ಮಸೀದಿಯಲ್ಲಿ 2007ರಲ್ಲಿ ಒಂಬತ್ತು ಜನರ ಸಾವಿಗೆ ಕಾರಣವಾದ ಸ್ಫೋಟ, ಅಜ್ಮೇರ್ ದರ್ಗಾ ಷರೀಫ್‌ನಲ್ಲಿ ಮೂವರ ಸಾವಿಗೆ ಕಾರಣವಾದ ಸ್ಫೋಟ ಪ್ರಕರಣ ಕೂಡ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಎಲ್ಲ ಪ್ರಕರಣಗಳ ಪೂರ್ಣ ಸತ್ಯ ಏನು ಎಂಬುದು ದೇಶಕ್ಕೆ ಗೊತ್ತಾಗುವ ಸಾಧ್ಯತೆಯೂ ಕಾಣುತ್ತಿಲ್ಲ. ಮುಂಬೈ ರೈಲು ಸ್ಫೋಟ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಆದೇಶ ಪ್ರಶ್ನಿಸಿ ದೇವೇಂದ್ರ ಫಡಣವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ ಮಾಲೇಗಾಂವ್ ಪ್ರಕರಣದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದೇ ಎಂಬ ಬಗ್ಗೆ ಎನ್‌ಐಎ ಏನೂ ಹೇಳಿಲ್ಲ. ಆರೋಪಿಗಳು ದೋಷಮುಕ್ತರಾಗಿರುವುದಕ್ಕೆ ಕಾರಣ ಅಸಮರ್ಥ ತನಿಖೆಯೇ, ತನಿಖಾ ಸಂಸ್ಥೆಗಳ ಪಕ್ಷಪಾತಿ ಧೋರಣೆಯೇ, ಅವುಗಳಲ್ಲಿ ಇರುವ ಪೂರ್ವಗ್ರಹಗಳೇ ಅಥವಾ ತನಿಖೆಯಲ್ಲಿ ಇದ್ದಿರಬಹುದಾದ ರಾಜಕೀಯ ಹಸ್ತಕ್ಷೇಪವೇ? ಇವುಗಳಲ್ಲಿ ಯಾವುದು ಕಾರಣ ಆಗಿದ್ದರೂ, ಪ್ರಮುಖ ಪ್ರಕರಣಗಳಲ್ಲಿ ನ್ಯಾಯದಾನ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡದೆ ಇರುವುದನ್ನು ಅದು ತೋರಿಸುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.