ADVERTISEMENT

ಸಂಪಾದಕೀಯ: ನಾಗಾಲ್ಯಾಂಡ್‌ನ ನಾಗರಿಕರ ಹತ್ಯೆ‘ಆಫ್‌ಸ್ಪ’ ಹಿಂದಕ್ಕೆ ಪಡೆಯಲು ಸಕಾಲ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 19:45 IST
Last Updated 6 ಡಿಸೆಂಬರ್ 2021, 19:45 IST
ನಾಗಲ್ಯಾಂಡ್ ಚಿತ್ರ
ನಾಗಲ್ಯಾಂಡ್ ಚಿತ್ರ   

ನಾಗಾಲ್ಯಾಂಡ್‌ನ ಮೊನ್‌ ಜಿಲ್ಲೆಯ ಒಟಿಂಗ್‌ ಮತ್ತು ಟಿರು ಗ್ರಾಮಗಳ 14 ನಾಗರಿಕರನ್ನು ಅಸ್ಸಾಂ ರೈಫಲ್ಸ್‌ನ 21 ಪ್ಯಾರಾ ಸ್ಪೆಷಲ್‌ ಫೋರ್ಸ್‌ನ ಸೈನಿಕರು ಗುಂಡು ಹಾರಿಸಿ ಕೊಂದಿರುವುದು ಹೃದಯ ವಿದ್ರಾವಕ. ಮ್ಯಾನ್ಮಾರ್‌ನಿಂದ ಭಾರತದ ಗಡಿಯೊಳಕ್ಕೆ ನುಸುಳಿದ ನ್ಯಾಷನಲ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್‌ ನಾಗಾಲ್ಯಾಂಡ್‌–ಕೆ (ಎನ್‌ಎಸ್‌ಸಿಎನ್‌–ಕೆ) ಬಣದ ಬಂಡುಕೋರರು ಎಂಬ ತಪ್ಪುಗ್ರಹಿಕೆಯಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಸಮಜಾಯಿಷಿಯನ್ನು ಅಸ್ಸಾಂ ರೈಫಲ್ಸ್‌ ನೀಡಿದೆ. ಗಣಿ ಕಾರ್ಮಿಕರು ಪಿಕ್ಅಪ್‌ ವಾಹನದಲ್ಲಿ ತಮ್ಮ ಹಳ್ಳಿಗಳಿಗೆ ತೆರಳುತ್ತಿದ್ದಾಗ ಸೈನಿಕರು ‘ತಪ್ಪುಗ್ರಹಿಕೆ’ಯಲ್ಲಿ ಗುಂಡು ಹಾರಿಸಿದ್ದಾರೆ. ಹೀಗೆ ಗುಂಡು ಹಾರಿಸಿದಾಗ ಆರು ಮಂದಿ ಕಾರ್ಮಿಕರು ಸತ್ತಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಮನೆ ಸೇರದ ಕಾರ್ಮಿಕರನ್ನು ಹುಡುಕಿಕೊಂಡು ಹಳ್ಳಿಯ ಜನರು ಬಂದಾಗ, ಸೈನಿಕರ ಜತೆಗೆ ಸಂಘರ್ಷವಾಗಿದೆ. ಈ ಸಂಘರ್ಷದಲ್ಲಿ ಮತ್ತೆ ಏಳು ನಾಗರಿಕರು ಗುಂಡಿಗೆ ಬಲಿಯಾಗಿದ್ದಾರೆ. ಅಸ್ಸಾಂ ರೈಫಲ್ಸ್‌ನ ಕಚೇರಿಗೆ ಜನರು ಭಾನುವಾರ ಮುತ್ತಿಗೆ ಹಾಕಿದಾಗ ಸೈನಿಕರು ಹಾರಿಸಿದ ಗುಂಡಿಗೆ ಮತ್ತೆ ಒಬ್ಬ ನಾಗರಿಕ ಬಲಿಯಾಗಿದ್ದಾನೆ. ಸ್ಥಳೀಯರ ಆಕ್ರೋಶಕ್ಕೆ ಒಬ್ಬ ಸೈನಿಕನೂ ಬಲಿಯಾಗಿದ್ದಾನೆ. ಇದನ್ನೆಲ್ಲ ಗಮನಿಸಿದರೆ ‘ತಪ್ಪು ಗ್ರಹಿಕೆ’ಯ ವಾದವು ಮೊದಲ ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ ಎಂಬುದು ವೇದ್ಯವಾಗುತ್ತದೆ. ಉಳಿದ ಎರಡು ಪ್ರಕರಣಗಳಲ್ಲಿ ಸೈನಿಕರು ಸಂಯಮ ಕಳೆದುಕೊಳ್ಳದೇ ಇದ್ದಿದ್ದರೆ ಎಂಟು ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು.

ಹತ್ಯಾ ಪ್ರಕರಣದ ಬಗ್ಗೆ ನಾಗಾಲ್ಯಾಂಡ್‌ ಪೊಲೀಸರು ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ ಇರುವ ವಿವರಗಳು ಕಳವಳ ಮೂಡಿಸುವಂತಿವೆ. ‘ಸೈನಿಕರು ವಿವೇಚನೆ ಇಲ್ಲದೆ ಗುಂಡು ಹಾರಿಸಿದ್ದಾರೆ’, ‘ಸೈನಿಕರ ಉದ್ದೇಶವು ನಾಗರಿಕರನ್ನು ಹತ್ಯೆ ಮಾಡುವುದು ಮತ್ತು ಗಾಯಗೊಳಿಸುವುದೇ ಆಗಿತ್ತು’ ಎಂಬ ಮಾಹಿತಿ ಎಫ್‌ಐಆರ್‌ನಲ್ಲಿ ಇದೆ. ‘ಪ್ರಕರಣ ನಡೆದಾಗ ಸೈನಿಕರ ಜತೆಗೆ ಪೊಲೀಸ್‌ ಮಾರ್ಗದರ್ಶಕರು
ಇರಲಿಲ್ಲ. ಉದ್ದೇಶಿತ ಕಾರ್ಯಾಚರಣೆಗೆ ಪೊಲೀಸ್‌ ಮಾರ್ಗದರ್ಶಕರು ಬೇಕು ಎಂಬ ವಿನಂತಿಯೂ ಸೇನೆಯಿಂದ ಬಂದಿರಲಿಲ್ಲ. ಇದನ್ನೆಲ್ಲ ಗಮನಿಸಿದರೆ ನಾಗರಿಕರ ಹತ್ಯೆಯೇ ಭದ್ರತಾ ಪಡೆಯ ಉದ್ದೇಶವಾಗಿತ್ತು ಅನ್ನಿಸುತ್ತದೆ’ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಎನ್‌ಎಸ್‌ಸಿಎನ್‌–ಕೆ ಬಂಡುಕೋರರು ಈ ಪ್ರದೇಶಕ್ಕೆ ನುಸುಳಿದ್ದಾರೆ ಎಂಬ ‘ಗುಪ್ತಚರ ಮಾಹಿತಿ’ಯ ಆಧಾರದಲ್ಲಿ ಕಾರ್ಯಾಚರಣೆ ಯೋಜಿಸಲಾಗಿತ್ತು ಎಂದು ಸೇನೆಯು ಹೇಳಿದೆ. ಅತ್ಯಂತ ಸೂಕ್ಷ್ಮವಾದ ಗಡಿ ರಾಜ್ಯದಲ್ಲಿ ಗುಪ್ತಚರ ಮಾಹಿತಿ ಕಲೆ ಹಾಕುವಿಕೆಯು ಎಷ್ಟೊಂದು‍ ಅಧ್ವಾನವಾಗಿದೆ ಎಂಬುದರತ್ತ ಟಿರು ಮತ್ತು ಒಟಿಂಗ್‌ ಗ್ರಾಮಗಳಲ್ಲಿ ನಡೆದ ಕಾರ್ಯಾಚರಣೆಯು ಬೊಟ್ಟು ಮಾಡುತ್ತದೆ. ಬಂಡುಕೋರರು ನುಸುಳಿರುವ ಗುಪ್ತಚರ ಮಾಹಿತಿ ಸಿಕ್ಕ ಬಳಿಕವೇ ಕಾರ್ಯಾಚರಣೆ ಯೋಜಿಸಲಾಗಿದೆ. ಹೀಗಿರುವಾಗ ಸ್ಥಳೀಯ ಪೊಲೀಸ್‌ ಠಾಣೆಯಿಂದ ಪೊಲೀಸ್‌ ಮಾರ್ಗದರ್ಶಕರನ್ನು ಪಡೆದುಕೊಂಡಿಲ್ಲ ಏಕೆ ಎಂಬ ಪ್ರಶ್ನೆಗೆ ಸೇನೆಯು ಉತ್ತರ ಹೇಳ
ಬೇಕಾಗುತ್ತದೆ. ಅಸ್ಸಾಂ ರೈಫಲ್ಸ್‌ನ ಕರ್ನಲ್‌ ವಿಪ್ಲವ್‌ ತ್ರಿಪಾಠಿ, ಅವರ ಹೆಂಡತಿ, ಮಗ ಮತ್ತು ನಾಲ್ವರು ಯೋಧರನ್ನು ಮಣಿಪುರದಲ್ಲಿ ಕೆಲವು ವಾರಗಳ ಹಿಂದೆ ಬಂಡುಕೋರರು ಹತ್ಯೆ ಮಾಡಿದ್ದರು. ನಿಷೇಧಿತ ಸಂಘಟನೆಗಳಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಮತ್ತು ನಾಗಾ ಪೀಪಲ್ಸ್ ಫ್ರಂಟ್‌ ಜಂಟಿ ಹೇಳಿಕೆ ನೀಡಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದವು. ಈ ಹತ್ಯೆಗೆ ತಕ್ಕ ತಿರುಗೇಟು ನೀಡಲೇಬೇಕು ಎಂಬ ಕಾರಣಕ್ಕೆ ಅಸ್ಸಾಂ ರೈಫಲ್ಸ್‌ನ ಸೈನಿಕರು ಕಾರ್ಯಾಚರಣೆ ತೀವ್ರಗೊಳಿಸಿದ್ದರು ಎಂದು ಹೇಳಲಾಗುತ್ತಿದೆ. ಸೇಡಿನ ತವಕವೇ ಕಾರ್ಯಾಚರಣೆ ಸಂದರ್ಭದಲ್ಲಿ ವಿವೇಚನಾಶೂನ್ಯ ನಡವಳಿಕೆಗೆ ಕಾರಣವಾಗಿದ್ದರೆ ಅದು ಅಕ್ಷಮ್ಯ.

ನಾಗಾಲ್ಯಾಂಡ್‌ ಹತ್ಯೆ ಪ್ರಕರಣದ ಬಳಿಕ, ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯ (ಆಫ್‌ಸ್ಪ) ವ್ಯಾಪ್ತಿಯಿಂದ ತಮ್ಮ ರಾಜ್ಯಗಳನ್ನು ಕೈಬಿಡಿ ಎಂದು ನಾಗಾಲ್ಯಾಂಡ್‌ ಮತ್ತು ಮಣಿಪುರದ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರ ಚಟುವಟಿಕೆ ತೀವ್ರವಾಗಿದೆ ಎಂಬ ಕಾರಣಕ್ಕೆ 1958ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ವಾರಂಟ್‌ ಇಲ್ಲದೆ ಜನರನ್ನು ಬಂಧಿಸುವ, ಸ್ಥಳಗಳಲ್ಲಿ ಶೋಧ ನಡೆಸುವ ಮತ್ತು ಅನುಮಾನ ಬಂದಾಗ ನಾಗರಿಕರತ್ತಲೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆಯು ಸೇನೆಗೆ ನೀಡುತ್ತದೆ. ಹೀಗೆ ಗುಂಡು ಹಾರಿಸಿ ನಾಗರಿಕರು ಸತ್ತರೂ ಗುಂಡು ಹಾರಿಸಿದವರಿಗೆ ಕಾಯ್ದೆಯು ರಕ್ಷಣೆ ಒದಗಿಸುತ್ತದೆ. ‘ಈ ಕಾಯ್ದೆಯು ಭಾರತದ ವರ್ಚಸ್ಸಿಗೆ ಜಾಗತಿಕ ಮಟ್ಟದಲ್ಲಿ ಮಸಿ ಬಳಿದಿದೆ’ ಎಂದು ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೈಪಿಯು ರಿಯೊ ಹೇಳಿದ್ದಾರೆ. ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆ ಬಹಳ ಕಾಲದಿಂದಲೂ ಇದೆ. ಈ ಬಗ್ಗೆ ಸರ್ಕಾರ ಸಂವೇದನಾ
ಶೀಲವಾದ ನಿರ್ಧಾರವನ್ನು ಬಹಳ ಹಿಂದೆಯೇ ಕೈಗೊಳ್ಳಬೇಕಿತ್ತು. ಈಗಲಾದರೂ ಆ ಕೆಲಸವನ್ನು ಸರ್ಕಾರ ಮಾಡಬೇಕು. ಸೂಕ್ಷ್ಮವಾದ ಗಡಿ ರಾಜ್ಯಗಳಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೇ ವಿನಾ ಅವರೊಂದಿಗೆ ಸಂಘರ್ಷಕ್ಕೆ ಇಳಿಯುವುದು ಸರಿಯಾದ ನಡೆ ಅಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.