
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮುಖಕ್ಕೆ ಧರಿಸಿದ್ದ ನಖಾಬ್ (ಮುಸುಕು) ಅನ್ನು ಎಳೆದಿರುವುದು ಅಸೂಕ್ಷ್ಮ ಹಾಗೂ ಅವರ ಹುದ್ದೆ, ವಯಸ್ಸಿಗೆ ತಕ್ಕುದಲ್ಲದ ನಡವಳಿಕೆಯಾಗಿದೆ. ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವಾಗ ಈ ಘಟನೆ ನಡೆದಿದೆ. ನಖಾಬ್ ಧರಿಸಿದ್ದ ವೈದ್ಯೆಗೆ ನೇಮಕಾತಿ ಪತ್ರ ವಿತರಿಸುವ ಸಂದರ್ಭದಲ್ಲಿ, ‘ಇದು ಏನು?’ ಎಂದು ಪ್ರಶ್ನಿಸಿರುವ ನಿತೀಶ್, ಆಕೆ ಉತ್ತರಿಸುವ ಮೊದಲೇ ನಖಾಬ್ ಎಳೆದಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಬಿಹಾರದ ಮುಖ್ಯಮಂತ್ರಿ ಮಹಿಳೆಯ ವೈಯಕ್ತಿಕ ಘನತೆಗೆ ಧಕ್ಕೆ ತಂದಿದ್ದಾರೆ ಹಾಗೂ ನೈತಿಕ ಚೌಕಟ್ಟನ್ನು ಮೀರಿದ್ದಾರೆ ಎನ್ನುವ ಟೀಕೆಗಳ ಜೊತೆಗೆ, ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ನಖಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ವೈಯಕ್ತಿಕ ಆಯ್ಕೆ, ನಂಬಿಕೆ ಹಾಗೂ ಗೌರವದ ಸಂಕೇತವಾಗಿದೆ. ಧಾರ್ಮಿಕ ನಂಬಿಕೆಯ ಹೊರತಾಗಿಯೂ, ಮಹಿಳೆಯರ ಮುಖವಸ್ತ್ರಕ್ಕೆ ಕೈಹಾಕುವುದು ಸಭ್ಯತೆಯ ನಡವಳಿಕೆಯಲ್ಲ ಎನ್ನುವ ಎಚ್ಚರವಾದರೂ ನಿತೀಶ್ ಅವರಿಗೆ ಇರಬೇಕಾಗಿತ್ತು. ಯಾವುದೇ ಧರ್ಮದ ಮಹಿಳೆಯರಾದರೂ, ಅವರ ವೈಯಕ್ತಿಕ ನಂಬಿಕೆಗಳನ್ನು ಗಾಸಿಗೊಳಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಮುಸ್ಲಿಂ ಸಮುದಾಯದ ನಂಬಿಕೆ, ಆಚಾರಗಳನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ವರ್ತಿಸುವ ವಿಧಾನವೂ ಇದಲ್ಲ. ಗುರುತರ ಅಧಿಕಾರ ಸ್ಥಾನದಲ್ಲಿ ಇರುವವರು ಮತ್ತೊಬ್ಬರ ನಂಬಿಕೆ ಹಾಗೂ ಆತ್ಮಘನತೆಯನ್ನು ಗೌರವಿಸಬೇಕೇ ಹೊರತು, ಅದನ್ನು ಉಲ್ಲಂಘಿಸುವ ಕೆಲಸ ಮಾಡಬಾರದು.
ನಿತೀಶ್ ಅವರು ವೈದ್ಯೆಯ ನಖಾಬ್ ತೆಗೆದದ್ದನ್ನು ಸಹಾನುಭೂತಿಯಿಂದ ಹಾಗೂ ಕಿಡಿಗೇಡಿತನದಿಂದ ನೋಡುವ ಪ್ರತಿಕ್ರಿಯೆಗಳು, ರಾಜಕೀಯಪ್ರೇರಿತ ವಿಶ್ಲೇಷಣೆಗಳು ವ್ಯಕ್ತವಾಗಿವೆ. ತಂದೆ ಮತ್ತು ಮಗಳ ಮಧ್ಯೆ ವಿವಾದ ಇರಲು ಸಾಧ್ಯವೇ? ಮುಖ್ಯಮಂತ್ರಿಯವರು ಮಹಿಳೆಯರನ್ನು ತಮ್ಮ ಹೆಣ್ಣುಮಕ್ಕಳಂತೆ ಕಾಣುತ್ತಾರೆ ಎಂದು ಬಿಹಾರದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಘಟನೆಯನ್ನು ವಿವಾದದ ರೀತಿ ನೋಡುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಸಚಿವ ಸಂಜಯ್ ನಿಷಾದ್ ಅವರ ಪ್ರತಿಕ್ರಿಯೆ ಪ್ರಚೋದನಕಾರಿಯಾಗಿದೆ. ಮುಸುಕು ಎಳೆದದ್ದರಿಂದ ಏನಾಯಿತು? ಅವರು ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು? ಎನ್ನುವ ಅರ್ಥದ ಅವರ ಮಾತುಗಳಲ್ಲಿ ಪುರುಷಾಹಂಕಾರದ ಜೊತೆಗೆ ಅಧಿಕಾರದ ದರ್ಪವೂ ಇದೆ. ಧಾರ್ಮಿಕ ಅಸಹನೆಯ ಅವರ ಮಾತಿನಲ್ಲಿ, ಲಿಂಗಸೂಕ್ಷ್ಮ ಸಂವೇದನೆಯ ಕೊರತೆಯೂ ಇದೆ. ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ತಮ್ಮ ಮಾತುಗಳಿಗೆ ಅಪಾರ್ಥ ಕಲ್ಪಿಸಲಾಗಿದೆ ಎಂದವರು ಹೇಳಿದ್ದಾರೆ. ಬಿಹಾರದ ರಾಜ್ಯಪಾಲರ ಮಾತನ್ನೂ ಒಪ್ಪುವುದು ಸಾಧ್ಯವಿಲ್ಲ. ನಿತೀಶ್ ಅವರು ಎಲ್ಲ ಹೆಣ್ಣುಮಕ್ಕಳಿಗೂ ತಂದೆಯ ರೂಪದಲ್ಲಿ ಯಾರಿಗಾದರೂ ಕಾಣಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಮಗಳ ಮುಖವಸ್ತ್ರವನ್ನು ತಂದೆಯೊಬ್ಬ ಸಾರ್ವಜನಿಕವಾಗಿ ಎಳೆದರೆ, ಆ ತಪ್ಪನ್ನು ಸರಿಯೆಂದು ಹೇಳಲಾಗುವುದಿಲ್ಲ. ತಂದೆಯ ವರ್ತನೆ ಹೆಣ್ಣುಮಕ್ಕಳ ಆತ್ಮಗೌರವ ಹೆಚ್ಚಿಸುವಂತೆ ಇರಬೇಕೇ ಹೊರತು, ಮುಜುಗರಕ್ಕೆ ಸಿಲುಕಿಸುವಂತೆ ಇರಬಾರದು.
ಬಿಹಾರದ ಮಹಿಳೆಯರ ಸಬಲೀಕರಣಕ್ಕೆ ನಿತೀಶ್ ಕುಮಾರ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಸಕ್ತ ಘಟನೆ ಮಹಿಳೆಯರನ್ನು ಕುಗ್ಗಿಸುವಂತಹದ್ದು. ಧಾರ್ಮಿಕ ಸ್ವಾತಂತ್ರ್ಯವನ್ನು ಅಗೌರವದಿಂದ ಕಾಣುವ ಯಾವುದೇ ಹಕ್ಕು ನಿತೀಶ್ ಅವರಿಗಿಲ್ಲ. ಅವರ ನಡವಳಿಕೆ, ಸಂವಿಧಾನದ 25ನೇ ವಿಧಿಯು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ನಖಾಬ್ ಸೆಳೆತಕ್ಕೆ ಒಳಗಾದ ವೈದ್ಯೆ, ನೇಮಕಾತಿ ಪತ್ರ ಪಡೆದ ನಂತರ, ಕೊನೆಯ ದಿನ ಮುಗಿದರೂ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ ಎನ್ನುವುದು ಆತಂಕ ಮೂಡಿಸುವ ಸಂಗತಿ. ಕ್ಷಮೆ ಯಾಚಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸಕ್ಕೆ ನಿತೀಶ್ ಮುಂದಾಗಬೇಕು. ಇಲ್ಲದೆಹೋದರೆ, ಮಹಿಳಾ ಸಬಲೀಕರಣದ ಅವರ ವರ್ಚಸ್ಸಿಗೆ ಕಳಂಕದ ಕಪ್ಪುಚುಕ್ಕೆಯೊಂದು ಸೇರ್ಪಡೆಯಾದಂತಾಗುತ್ತದೆ. ಸಮತೋಲ ತಪ್ಪದ ವ್ಯಕ್ತಿತ್ವ ಎಂದು ರಾಜಕಾರಣದಲ್ಲಿ ಗುರ್ತಿಸಿಕೊಂಡಿರುವ ಅವರು, ಸಮತೋಲ ಕಳೆದುಕೊಂಡಿರುವುದಕ್ಕೆ ಸಾಕ್ಷ್ಯ ಒದಗಿಸುವಂತೆ ನಡೆದುಕೊಳ್ಳಬಾರದು. ಮುಖ್ಯಮಂತ್ರಿ ನಖಾಬ್ ಎಳೆಯುವುದು ಸಹನೀಯ ಎನ್ನುವುದಾದರೆ, ಅದು ಕಿಡಿಗೇಡಿಗಳ ಕೃತ್ಯಗಳಿಗೆ ಮಾದರಿಯಾಗಿ ಒದಗಿಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.