ADVERTISEMENT

ಸಂಪಾದಕೀಯ: ಮುಂಗಡ ಪತ್ರದಲ್ಲಿ ನದಿಜೋಡಣೆ - ಹುಸಿಜೀವ ಪಡೆದ ಹಳೇ ಯೋಜನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 1:13 IST
Last Updated 4 ಫೆಬ್ರುವರಿ 2022, 1:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದೀಗ ಮಂಡಿಸಿದ ಬಜೆಟ್‌ನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ, ನಿಜ. ಅದರ ಭಾಗವಾಗಿ ನದಿ ಜೋಡಣೆಯನ್ನೂ ಪ್ರಸ್ತಾಪಿಸಿದ್ದಾರೆ.
ನದಿ ಜೋಡಣೆ ಮಾಡಿದರೆ ಅದರಿಂದ ನೆರೆ-ಬರಗಳು ನೀಗಲಿವೆ; ಜಲಸಾರಿಗೆ, ಮೀನುಗಾರಿಕೆ, ಪ್ರವಾಸೋದ್ಯಮ ವಿಜೃಂಭಿಸಲಿವೆ ಎಂಬೆಲ್ಲ ಕಲ್ಪನೆಗಳಿವೆ ಹೌದು. ಆದರೆ ಅದಕ್ಕೆ ಬೇಕಾದ ಭಾರಿ ಹೂಡಿಕೆ, ಮುಳುಗಡೆ– ಮರುವಸತಿ ಸಮಸ್ಯೆ, ಪರಿಸರ ಸಮಸ್ಯೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನದಿನೀರಿನ ಹಂಚಿಕೆಯ ಕುರಿತ ಅನಂತ ವಿವಾದಗಳು ಈ ಯೋಜನೆಗಳ ಜಾರಿಗೆ ಅಡ್ಡಿಯಾಗಿವೆ. ದಕ್ಷಿಣ ಭಾರತದಲ್ಲಿ ನದಿಜೋಡಣೆಯ ಐದು ಪ್ರಸ್ತಾವಗಳು ಮೊನ್ನೆ ಮಂಡನೆಯಾಗಿದ್ದೇ ತಡ, ಕರ್ನಾಟಕ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಆಗಲೇ ಅಪಸ್ವರ ಎತ್ತಿದ್ದಾರೆ. ಈ ಯಾವುವೂ ಹೊಸ ಯೋಜನೆಗಳೇನಲ್ಲ. ಮುಂಬೈಗೆ ನೀರೊದಗಿಸಬೇಕಿದ್ದ ದಮನ್‌ಗಂಗಾ- ಪಿಂಜಾಲ್‌ ಜೋಡಣೆಗೆ ಗುಜರಾತ್‌ ಇಪ್ಪತ್ತು ವರ್ಷಗಳ ಹಿಂದೆಯೇ ಆಕ್ಷೇಪ ಎತ್ತಿದೆ. ಬ್ರಿಟಿಷ್‌ ಎಂಜಿನಿಯರ್‌ ಸರ್‌ ಆರ್ಥರ್‌ ಕಾಟನ್‌ 1860ರಲ್ಲೇ ರೂಪಿಸಿದ್ದ ನದಿಜೋಡಣೆಯ ಕನಸಿಗೆ ಕಾಲಕಾಲಕ್ಕೆ ಹೊಸ ರೆಕ್ಕೆಪುಕ್ಕಗಳು ಮೊಳೆಯುತ್ತ ಉದುರುತ್ತಲೇ ಇವೆ. ನೀರಾವರಿ ತಜ್ಞ ಕೆ.ಎಲ್‌. ರಾವ್ ಅವರ ಗಂಗಾ-ಕಾವೇರಿ ಜೋಡಣೆ, ಆಮೇಲೆ ಕ್ಯಾಪ್ಟನ್‌ ದಸ್ತೂರ ಅವರ ‘ಗಾರ್ಲಾಂಡ್‌’ ಯೋಜನೆ, ನಂತರ 1980ರಲ್ಲಿ ಬಂದ ರಾಷ್ಟ್ರೀಯ ಸಮದರ್ಶಿ ಯೋಜನೆ ಎಲ್ಲವೂ ಭಾರತದ ಭೂಪಟದ ಮೇಲೆ ಗೆರೆಗಳಾದುವೇ ವಿನಾ ಒಂದೂ ಜಾರಿಗೆ ಬರಲಿಲ್ಲ.

ಅಟಲ್‌ ಬಿಹಾರಿ ವಾಜಪೇಯಿಯವರ ಭವ್ಯಕನಸಿನ ಮೊದಲ ನದಿ ಜೋಡಣೆ ಎಂಬ ಹೆಗ್ಗಳಿಕೆ
ಯಿಂದ 2002ರಲ್ಲೇ ಆರಂಭಗೊಂಡಿದ್ದ ಕೆನ್‌-ಬೆಟ್ವಾ ನದಿಗಳ ಜೋಡಣೆಯನ್ನು ಈಗ ನೋಡಿದರೆ ಅದು ಹೇಗಿರಬಾರದು ಎಂಬುದಕ್ಕೆ ಮಾದರಿಯಾದಂತಿದೆ. ಮಧ್ಯಪ್ರದೇಶದಲ್ಲಿ ಉಗಮವಾಗಿ ಯಮುನಾ ನದಿಗೆ ಸೇರುವ ಈ ಎರಡು ಕಿರುನದಿಗಳಲ್ಲಿ ಕೆನ್‌ ನದಿಯ ಹೆಚ್ಚುವರಿ ನೀರನ್ನು 222 ಕಿ.ಮೀ. ಕಾಲುವೆಯ ಮೂಲಕ ಬೆಟ್ವಾಕ್ಕೆ ಸೇರಿಸಿ ಉತ್ತರಪ್ರದೇಶಕ್ಕೆ ನೀರು ಹರಿಸಲೆಂದು ಪನ್ನಾ ಹುಲಿಧಾಮದ ಮೂಲಕವೇ ಎಂಜಿನಿಯರ್‌ಗಳು ಗೆರೆ ಎಳೆದರು. ನೀರಿನ ಲಭ್ಯತೆಯನ್ನೂ ಫಲಾನುಭವಿ ಕ್ಷೇತ್ರವನ್ನೂ ಉತ್ಪ್ರೇಕ್ಷೆ ಮಾಡಿ ತೋರಿಸಿದರು. ಇಂಥ ಅವೈಜ್ಞಾನಿಕ ಸಮೀಕ್ಷೆಯನ್ನು ಆಧರಿಸಿದ ನದಿಜೋಡಣೆ ಕೂಡದೆಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ತಜ್ಞರ ಸಮಿತಿಯೇ ಶಿಫಾರಸು ಮಾಡಿದೆ. ಇಪ್ಪತ್ತು ಲಕ್ಷ ಮರಗಳನ್ನು ಮುಳುಗಿಸಲು ಹಸಿರು ಪೀಠ ಅನುಮತಿಯನ್ನೂ ಕೊಟ್ಟಿಲ್ಲ. ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿದ ಹಸಿರು ನಿಶಾನೆಯೂ ಅಸಿಂಧುವೆಂದುಸುಪ್ರೀಂ ಕೋರ್ಟ್‌ನಲ್ಲಿ ಬೇರೊಂದು ಪ್ರಕರಣ ದಾಖಲಾಗಿದೆ. ಇಂಥ ಸ್ಥಿತಿಯಲ್ಲಿ ಈ ಯೋಜನೆಗೆ ಸದ್ಯಕ್ಕೆ ಹಣ ಹೂಡಲು ಸಾಧ್ಯವೇ ಇಲ್ಲ ಎಂಬುದು ಗೊತ್ತಿದ್ದೂ ಸರ್ಕಾರ ಅದಕ್ಕೆಂದು ₹ 44 ಸಾವಿರ ಕೋಟಿಗಳ ಬೃಹತ್‌ ಹೂಡಿಕೆಯ ಕನಸನ್ನು ಝಳಪಿಸಿ, ಕಳೆದ ವರ್ಷದ ಪರಿಷ್ಕೃತ ಅಂದಾಜು ಮೊತ್ತ ₹ 4,300 ಕೋಟಿ ಜತೆ ಈ ವರ್ಷ ₹ 1,400 ಕೋಟಿ ತೆಗೆದಿಟ್ಟಿದ್ದೇವೆಂದು ಹೇಳಿರುವುದು, ಉತ್ತರಪ್ರದೇಶದ ಮತದಾರರ ಓಲೈಕೆಗಷ್ಟೇ ವಿನಾ ಮತ್ತೇನಿಲ್ಲ.

ನಮ್ಮ ದೇಶ ಪ್ರತಿವರ್ಷವೂ ಎದುರಿಸುತ್ತಿರುವ ಮಹಾಪೂರ-ಬರಗಾಲಗಳನ್ನು ನಿಭಾಯಿಸಲೆಂದೇ ಬೃಹತ್‌ ಎಂಜಿನಿಯರಿಂಗ್‌ ಯೋಜನೆಗಳು ರೂಪುಗೊಳ್ಳುತ್ತಿವೆ. ಭಾರಿ ಹೂಡಿಕೆ ಮತ್ತು ಭಾರಿ ಸಮಯವನ್ನು ಬೇಡುವ ಇಂಥ ದೊಡ್ಡ ಯೋಜನೆಗಳು ಪರಿಸರದ ಮೇಲೆ ಭಾರಿ ದುಷ್ಪರಿಣಾಮವನ್ನೂ ಬೀರುತ್ತವೆ. ಇದುವರೆಗೆ ನದಿಗಳಿಗೆ ಕಟ್ಟಲಾದ ಎಲ್ಲ ದೊಡ್ಡ ಅಣೆಕಟ್ಟೆಗಳೂ ಅತಿ ಹೂಳಿನಿಂದಾಗಿ ಇನ್ನು 50-100 ವರ್ಷಗಳಲ್ಲಿ ಬೆತ್ತಲೆ ಮೈದಾನಗಳಾಗಲಿವೆ. ಅಲ್ಲಿ ಹೊಸದನ್ನು ನಿರ್ಮಿಸುವ ಹಾಗಿಲ್ಲ; ಹಳತನ್ನು ವಿಸರ್ಜಿಸುವ ಹಾಗೂ ಇಲ್ಲ. ಮುಂದಿನ ಪೀಳಿಗೆಗೆ ಅಂಥ ದುರಂತಗಳನ್ನು ಬಿಟ್ಟು ಹೋಗುವ ಬದಲು, ಬದಲೀ ಸುಸ್ಥಿರ ವ್ಯವಸ್ಥೆಗೆ ಆದ್ಯತೆ ನೀಡಬೇಕಾಗಿದೆ. ಮಳೆ ಬೀಳುವಲ್ಲೇ ನೀರನ್ನು ಹಿಡಿದಿಡುವ ಚಿಕ್ಕ ಚಿಕ್ಕ ಕೆರೆಕಟ್ಟೆಗಳನ್ನು, ಬಾಂದಾರಗಳನ್ನು ನಿರ್ಮಿಸಿಕಾಲಕಾಲಕ್ಕೆ ಹೂಳೆತ್ತಿ ಅವನ್ನು ಬಳಸುತ್ತಿದ್ದರೆ ನೀರಿನ ಬರ ನೀಗಬಹುದು, ಮಹಾಪೂರದ ಸಮಸ್ಯೆಯೂ ಇರುವುದಿಲ್ಲ. ನಿರಾಶ್ರಿತರ ಸಮಸ್ಯೆ ಇಲ್ಲ. ವನ್ಯಜೀವಿಗಳಿಗೆ ತೊಂದರೆಯಿಲ್ಲ. ಅಂಥ ಲಕ್ಷೋಪಲಕ್ಷ ಕಿರುಯೋಜನೆಗಳು ಪಂಚಾಯತ್‌ ಮಟ್ಟದಲ್ಲಿ ಜಾರಿಗೆ ಬಂದರೆ ಅವು ಪ್ರವಾಹವನ್ನು ತಡೆದು, ಬರದ ಬವಣೆಯನ್ನು ನೀಗಿಸಿ, ಸ್ಥಳೀಯರಿಗೆ ಉದ್ಯೋಗವನ್ನೂ ನೀಡುತ್ತವೆ. ಹಸಿರುಕ್ಕಿಸುತ್ತವೆ.
ಇಂಥ ಸುಸ್ಥಿರ ಮಾದರಿಗಳನ್ನು ರಾಜಸ್ಥಾನದಲ್ಲಿ ರಾಜೇಂದ್ರ ಸಿಂಗ್‌, ರಾಳೇಗಣಸಿದ್ಧಿಯಲ್ಲಿ ಅಣ್ಣಾ ಹಜಾರೆ, ಕಾಕಡ್‌ಧಾರಾದಲ್ಲಿ ಅಮೀರ್‌ ಖಾನ್‌ ರೂಪಿಸಿ ತೋರಿಸಿದ್ದಾರೆ. ಇಲ್ಲಿ ಬೇಕಾಗಿರುವುದು ಜನ
ಜೋಡಣೆಯ ಸಾಮಾಜಿಕ ಎಂಜಿನಿಯರಿಂಗ್‌ ಕೌಶಲವೇ ಹೊರತು ಗುತ್ತಿಗೆದಾರರ ಬಕ್ಕಣ ತುಂಬಿಸುವ ನದಿಜೋಡಣೆಯ ಬೃಹತ್‌ ಎಂಜಿನಿಯರಿಂಗ್‌ ಅಲ್ಲ. ಆದರೂ ಅದೇ ಹಳೇ ಮಾದರಿಗೆ ಹಣವನ್ನು ಮೀಸಲಿಟ್ಟರೆ ಅದು ಕೋರ್ಟಿನ ಕಟ್ಟೆಯಲ್ಲಿರುವ ವಕೀಲರ ಬಾಯಲ್ಲಿ ನೀರೂರಿಸೀತೇ ವಿನಾ ಬಾಯಾರಿದವರ ಕಣ್ಣೀರನ್ನು ಖಂಡಿತ ಒರೆಸಲಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.