ADVERTISEMENT

ಸಂಪಾದಕೀಯ | ಇಸ್ರೇಲ್–ಇರಾನ್ ಸಮರಾಂಗಣ; ಅಮೆರಿಕದ ಮಧ್ಯಪ್ರವೇಶ ಅನಪೇಕ್ಷಿತ

ಸಂಪಾದಕೀಯ
Published 24 ಜೂನ್ 2025, 0:53 IST
Last Updated 24 ಜೂನ್ 2025, 0:53 IST
   

ಇರಾನ್‌ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸುವ ಮೂಲಕ ಇಸ್ರೇಲ್–ಇರಾನ್‌ ಯುದ್ಧರಂಗವನ್ನು ಅಮೆರಿಕ ಕೂಡ ಪ್ರವೇಶಿಸಿದೆ. ಈ ದಾಳಿಯ ಮೂಲಕ ಅಮೆರಿಕವು ಜಾಗತಿಕ ಮಟ್ಟದಲ್ಲಿ ಪರಿಣಾಮ ಉಂಟುಮಾಡುವ ಪ್ರಾದೇಶಿಕ ಅಸ್ಥಿರತೆಗೆ ಪಶ್ಚಿಮ ಏಷ್ಯಾವನ್ನು ನೂಕಿದೆ. ಇರಾನ್‌ ಮೇಲಿನ ದಾಳಿಗೆ ಅಮೆರಿಕವು ‘ಆಪರೇಷನ್ ಮಿಡ್‌ನೈಟ್‌ ಹ್ಯಾಮರ್’ ಎಂಬ ಹೆಸರು ಇತ್ತಿದೆ. ಈ ಕಾರ್ಯಾಚರಣೆಯ ಭಾಗವಾಗಿ ಅಮೆರಿಕವು ಇರಾನ್‌ನ ಫೋರ್ಡೊ ಮತ್ತು ನಟಾನ್ಜ್‌ ಪರಮಾಣು ಘಟಕಗಳ ಮೇಲೆ ತನ್ನ ಬಿ–2 ಯುದ್ಧವಿಮಾನ ಬಳಸಿ ಬಾಂಬ್ ದಾಳಿ ನಡೆಸಿದೆ. ಇರಾನ್‌ನ ಎಸ್‌ಫಹಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕವು ಜಲಾಂತರ್ಗಾಮಿಯೊಂದರಿಂದ ಟಾಮಹಾಕ್‌ ಕ್ಷಿಪಣಿ ಬಳಸಿ ದಾಳಿ ಮಾಡಿದೆ. ಈ ದಾಳಿಗಳು ಇರಾನ್‌ನ ಮೂರೂ ಘಟಕಗಳ ಮೇಲೆ ತೀವ್ರ ಪ್ರಮಾಣದ ಹಾನಿಯನ್ನು ಉಂಟುಮಾಡಿವೆ ಎಂದು ಅಮೆರಿಕದ ಹಿರಿಯ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಇರಾನ್‌ ದೇಶವು ಅಣು ಬಾಂಬ್‌ ಸಿದ್ಧಪಡಿಸಲು ಬೇಕಿರುವ ಯುರೇನಿಯಂ ಸಂಗ್ರಹಿಸಿ ಇಟ್ಟುಕೊಂಡಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಅಮೆರಿಕ ಮತ್ತು ಇಸ್ರೇಲ್‌ ಈ ದಾಳಿಯನ್ನು ‘ಮುನ್ನೆಚ್ಚರಿಕೆಯ ಕ್ರಮ’ ಎಂದು ಬಣ್ಣಿಸಿವೆ. ಆದರೆ, ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬಾರ್ಡ್ ಅವರು, ಇರಾನ್ ದೇಶವು ಅಣ್ವಸ್ತ್ರ ಯೋಜನೆಯಲ್ಲಿ ತೊಡಗಿಲ್ಲ ಎಂದು ಹೇಳಿದ ಮೂರು ತಿಂಗಳ ನಂತರ ಅಮೆರಿಕವು ಈ ದಾಳಿ ನಡೆಸಿದೆ ಎಂಬುದು ಗಮನಾರ್ಹ.

ಇರಾನ್‌ ಮೇಲೆ ನಡೆದಿರುವ ದಾಳಿಯನ್ನು ಕೆಲವು ದೇಶಗಳು ಖಂಡಿಸಿ ರುವುದನ್ನು ಹೊರತುಪಡಿಸಿದರೆ, ಆ ದೇಶಕ್ಕೆ ಬೇರೆ ಯಾವುದೇ ಬಗೆಯ ಬೆಂಬಲ ಸಿಕ್ಕಿಲ್ಲ. ಆದರೆ ಇರಾನ್‌ ಮಿಲಿಟರಿಯು ಇಸ್ರೇಲ್‌ ಮೇಲೆ ಪ್ರತಿದಾಳಿ ನಡೆಸುತ್ತಿದೆ, ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಹೇಳಿದೆ ಎಂದು ವರದಿಯಾಗಿದೆ. ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳು ಇರಾನ್‌ನ ಪ್ರಾದೇಶಿಕ ಪಾಲುದಾರರಾದ ಹಿಜ್ಬುಲ್ಲಾದಂತಹ ಸಂಘಟನೆಗಳನ್ನು ದುರ್ಬಲಗೊಳಿಸಿವೆ. ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಇರಾನ್ ಹೇಳಿದೆ. ಅದನ್ನು ಕಾರ್ಯರೂಪಕ್ಕೆ ತಂದರೆ, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ ಪೂರೈಕೆಗೆ ಅಡ್ಡಿ ಸೃಷ್ಟಿಸಿದರೆ ಇರಾನ್‌ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳಲಿದೆ. ತನ್ನ ಮೇಲಿನ ದಾಳಿಗಳಿಗೆ ಪ್ರತಿದಾಳಿ ನಡೆಸುವ ಬಗ್ಗೆ ಇರಾನ್‌ ಆಲೋಚನೆ ನಡೆಸಿರುವ ಹೊತ್ತಿನಲ್ಲಿ ಇಸ್ರೇಲ್ ದೇಶವು ಹೊಸ ಸಂಕಥನವೊಂದನ್ನು ಹುಟ್ಟುಹಾಕುತ್ತಿದೆ, ಇರಾನ್‌ನ ಆಡಳಿತದ ಚುಕ್ಕಾಣಿ ಹಿಡಿದವರು ಬದಲಾಗಬೇಕು ಎಂದು ಅದು ಹೇಳುತ್ತಿದೆ. ಇಸ್ರೇಲ್‌ ದೇಶವು ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಯಕತ್ವದಲ್ಲಿ ನಡೆಸುತ್ತಿರುವ ಅಪಾಯಕಾರಿ ದಾಳಿಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲ ಇದೆ. ಈ ಹಿಂದೆ ಆಗಿರುವಂತೆಯೇ, ಪಶ್ಚಿಮ ಏಷ್ಯಾ ಪ್ರದೇಶವು ದೀರ್ಘಾವಧಿಗೆ ಅಶಾಂತಿಗೆ ಸಿಲುಕುವ ಅಪಾಯ ಎದುರಾಗಿದೆ. ಇರಾಕ್‌ ದೇಶವು ಸಮೂಹನಾಶಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕವು ಆ ದೇಶದ ಮೇಲೆ ದಾಳಿ ನಡೆಸಿತ್ತು, ಸಂಘರ್ಷಕ್ಕೆ ಸಿಲುಕಿದ ಕೆಲವು ದೇಶಗಳಲ್ಲಿ ಪ್ರಜಾತಂತ್ರ ಮರುಸ್ಥಾಪಿಸುವುದಾಗಿ ಹೇಳಿಕೊಂಡು ಅಮೆರಿಕವು ಅಲ್ಲಿ ಬಂಡುಕೋರರ ಜೊತೆ ಕೈಜೋಡಿಸಿದ ನಿದರ್ಶನ ಕೂಡ ಇದೆ.

ಇರಾನ್‌ನ ಪರಮಾಣು ಘಟಕಗಳನ್ನು ಪೂರ್ತಿಯಾಗಿ ನಾಶಪಡಿಸಲಾಗಿದೆ ಎಂದು ಟ್ರಂಪ್ ಅವರು ಪುನರುಚ್ಚರಿಸಿದ್ದಾರೆ. ಮುಂದೆಯೂ ವೈಮಾನಿಕ ದಾಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದರೆ, ಇರಾನ್‌ ದೇಶಕ್ಕೆ ಅಣ್ವಸ್ತ್ರಗಳನ್ನು ಹೊಂದುವ ಮಹತ್ವಾಕಾಂಕ್ಷೆ ಇದೆ ಎನ್ನಲು ಗಟ್ಟಿಯಾದ ಸಾಕ್ಷ್ಯಗಳು ಇಲ್ಲದಿರುವಾಗ ಈ ಬಗೆಯಲ್ಲಿ ಆಕ್ರಮಣ ನಡೆಸುವುದು ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾದ ನಡೆ ಅಲ್ಲ. ವಿಶ್ವಸಂಸ್ಥೆಯ ಸನ್ನದಿನ 51ನೇ ವಿಧಿಯ ಪ್ರಕಾರ, ಸಶಸ್ತ್ರ ದಾಳಿ ನಡೆದಲ್ಲಿ ಅದಕ್ಕೆ ಪ್ರತಿಯಾಗಿ ರಕ್ಷಣೆಯ ಉದ್ದೇಶದಿಂದ ದಾಳಿ ನಡೆಸುವ ಹಕ್ಕು ಇರುತ್ತದೆ. ಆದರೆ ಇರಾನ್‌ ಮೇಲಿನ ದಾಳಿಯನ್ನು ‘ಮುಂದೆ ಆಗಬಹುದಾದ ದಾಳಿ’ಯನ್ನು ತಡೆಯುವ ಉದ್ದೇಶದಿಂದ ನಡೆಸಲಾಗಿದೆ. ಅಂತರ ರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (ಐಎಇಎ) ಮಹಾನಿರ್ದೇಶಕ ರಫೇಲ್ ಗ್ರಾಸ್ಸಿ ಅವರು ಈಚೆಗೆ ನೀಡಿರುವ ಹೇಳಿಕೆ ಪ್ರಕಾರ, ಇರಾನ್‌ನಲ್ಲಿ ಯುರೇನಿಯಂ ಶಕ್ತಿವರ್ಧನೆಯು ಕಳವಳಕಾರಿ ಹೌದಾದರೂ ಅಲ್ಲಿ ಅಣ್ವಸ್ತ್ರ ಸಾಧನವೊಂದನ್ನು ಅಭಿವೃದ್ಧಿಪಡಿಸುವ ವ್ಯವಸ್ಥಿತ ಯೋಜನೆ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. ಮಿಲಿಟರಿ ಬಲಪ್ರಯೋಗದ ಮೂಲಕ ಪರಿಸ್ಥಿತಿಯು ಬಿಗಡಾಯಿಸುವಂತೆ ಮಾಡುವ ಕ್ರಮಗಳ ವಿರುದ್ಧ ಎಚ್ಚರಿಕೆ ನೀಡಿರುವ ಈ ಸಂಸ್ಥೆಯು ಇಂತಹ ಪ್ರಯತ್ನಗಳು ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಕೆಲಸಗಳಿಗೆ ಅಡ್ಡಿಯಾಗಬಹುದು ಎಂದು ಹೇಳಿದೆ. ಆದರೆ ನೆತನ್ಯಾಹು ಮತ್ತು ಟ್ರಂಪ್‌ ಅವರ ಹೇಳಿಕೆ ಗಳನ್ನು ಗಮನಿಸಿದರೆ, ಸಂಯಮಕ್ಕಿಂತ ಆರ್ಭಟವೇ ಹೆಚ್ಚು ಬಲ ಪಡೆದಿರುವಂತೆ ಕಾಣುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.